ಅಪರೂಪದ ಸಂಕ್ರಮಣದಲ್ಲಿ ‘ಅಲ್ಬಿನೋ’ ಆದ ಕೆಮ್ಮೀಸೆ ಪಿಕಳಾರ.
ಮನುಷ್ಯ ನಾಗಾಲೋಟದಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದಾನೆ. ಆತುರಾತುರವಾಗಿ ಅನುಭವಿಸುತ್ತ ಬದುಕಬೇಕು ಎಂಬ ದಿಸೆಯಲ್ಲಿ ‘ಬದಲಾವಣೆ’ ಯ ಚಕ್ರಕ್ಕೆ ತನ್ನನ್ನು ಕೀಲಾಗಿ ಒಡ್ಡಿಕೊಂಡಿದ್ದಾನೆ. ಪರಿಸರದ ಭಾಗವಾಗಿರುವ ಆತ ಮಾತ್ರ ಬದಲಾದರೆ ಸಾಕೇ? ಅದಕ್ಕೆ ತಕ್ಕಂತೆ ಪೂರಕ ಜೀವಿ ವೈವಿಧ್ಯ ಸ್ಪಂದಿಸಬೇಡವೇ?
ಚಿತ್ರ ನೋಡಿ. ಸಾಧಾರಣ ಕೆಮ್ಮೀಸೆ ಪಿಕಳಾರ ‘ರೆಡ್ ವಿಸ್ಕರ್ಡ್ ಬುಲ್ ಬುಲ್’ ಮಹಾನುಭಾವ ಅಪರೂಪದ ‘ಅಲ್ಬಿನೋ’ ಆಗಿ ಪರಿವರ್ತನೆ ಹೊಂದುವ ಸಂಕ್ರಮಣ ಕಾಲದಲ್ಲಿದ್ದಾನೆ. ತಾನೂ ‘ಬದಲಾವಣೆ’ ಎಂಬ ಅಭಿವೃದ್ಧಿ ರಥದ ಕಾಲನ ಚಕ್ರದ ಉರುಳಿವಿಕ್ಕೆಯಲ್ಲಿ ಭಾಗಿ ಎಂದು ಸೂಚ್ಯವಾಗಿ ಸಾರುತ್ತಿದ್ದಾನೆ. ‘ಅಲ್ಬಿನೋ -ಬುಲ್ ಬುಲ್’ ಹಾಗೆಂದರೇನು? ಇದು ಅಲ್ವೇ ನಿಮ್ಮ ಪ್ರಶ್ನೆ. ಪ್ರೊ. ಗಂಗಾಧರ ಕಲ್ಲೂರ ಅವರಿಗೆ ನಾನೂ ಸಹ ಇದೇ ಪ್ರಶ್ನೆ ಕೇಳ್ದೆ. ಕಳೆದ ನಾಲ್ಕಾರು ದಿನಗಳಿಂದ ಅವರು ಬೆಳಿಗ್ಗೆ ‘ವಾಕಿಂಗ್-ಜಾಗಿಂಗ್’ ಹೋದಾಗಲೊಮ್ಮೆ ಈ ಪಕ್ಷಿ ಬೆನ್ನಟ್ಟಿದ್ದರು. ಅವರಿಗೆ ಮಾತ್ರ ಅದು ಕಾಣುತ್ತಿತ್ತು.. ಅವರ ಬೆನ್ನುಹತ್ತಿದ್ದ ನಮಗ್ಯಾರಿಗೂ ದರ್ಶನ ಭಾಗ್ಯ ನೀಡುವ ಉಮೇದು ಕೆಮ್ಮೀಸೆ ಪಿಕಳಾರ ತೋರ್ಪಡಿಸಿರಲಿಲ್ಲ! ಅಂದಹಾಗೆ ಈ ಪಕ್ಷಿಯನ್ನು ಮೊದಲು ನೋಡಿದ್ದು ಮಾಜಿ ಸೈನಿಕ ಬಿಂದು ಅಮ್ಮಿನಬಾವಿ ಅವರು.
ಛಾಯಾಪತ್ರಕರ್ತ ಕೇದಾರ ಅಣ್ಣ ನಮ್ಮನ್ನು ಬಿಡಬೇಕಲ್ಲ. ಜೊತೆಗೆ ಹವ್ಯಾಸಿ ಛಾಯಾಗ್ರಾಹಕ ಅಶೋಕ್ ಮನ್ಸೂರ್ ಅವರ ದೈತ್ಯ ಗಾತ್ರದ ಲೆನ್ಸ್ ಗಳು ಬೇರೆ ಈ ಅಪರೂಪದ ಪಕ್ಷಿ ಕ್ಲಿಕ್ಕಿಸಲು ಹಪಹಪಿಸಿದ್ದವು. ಪ್ರೊ. ಕಲ್ಲೂರ ಅವರು, ‘ಇವರಿಗೆಲ್ಲ ಅಲ್ಬಿನೋ ಬುಲ್ ಬುಲ್ ತೋರಿಸಲೇಬೇಕು’ ಎಂದು ಛಲ ಹಿಡಿದಂತಿತ್ತು. ಅದು ನಾವು ಸಾಕಿದ ಅಥವಾ ಪಳಗಿಸಿದ ಪಕ್ಷಿಯಂತೂ ಅಲ್ಲ; ಹಾಗಾಗಿ, ಕಣ್ಣು ತುಂಬಿಕೊಳ್ಳಲು ಮರ್ಜಿ ಕಾಯುವ ಅನಿವಾರ್ಯತೆ ಇತ್ತು. ಸಾಲದ್ದಕ್ಕೆ ಛಾಯಾ ಪತ್ರಕರ್ತರು ಅಲ್ಬಿನೋ ಪಕ್ಷಿಯ ಭಾವನೆಗಳ ಸಮೇತ ಚಿತ್ರ ಸೆರೆ ಹಿಡಿಯುವ ಮಾತನಾಡಿದ್ದರು.
ಈ ಮಧ್ಯೆ ಪ್ರೊ. ಕಲ್ಲೂರ ಹೇಳಿದರು.."ಮನುಷ್ಯರೊಳಗ ಈ ಬಿಳುಪು ರೋಗ ಅಂತ ಬರ್ತದಲ್ಲ...ತೊನ್ನು ಅಂತನೂ ಅದನ್ನ ಕರೀತಾರ. ‘ಮೆಲಾನಿನ್’ ಕೊರತೆಯಿಂದ ಚರ್ಮ ತನ್ನ ಸರ್ವೇ ಸಾಧಾರಣ ಕಾಂತಿ ಮತ್ತು ಬಣ್ಣ ಕಳಕೊಂಡು ಹಂಗ ಕ್ರಮೇಣ ಪರಿವರ್ತನೆ ಆಗಿ, ಅತಿ ಬಿಳುಪು ಬಣ್ಣ ಮೈ ಆವರಿಸಿ ಬಿಡ್ತದ. ಇದು ಲಕ್ಷಕ್ಕೊಬ್ಬರಿಗೆ ಕಂಡು ಬರೋ ‘ರೋಗ’. ಇದು ಆನುವಂಶಿಕ ಸಹ ಆಗಿರಬಹುದು. ಕೆಲವೊಮ್ಮೆ ಏಕಾಏಕಿ ಕುಟುಂಬದೊಳಗ ಒಬ್ಬರಿಗೆ ಕಾಣಿಸಿಕೊಳ್ಳಬಹುದು. ಮುಂದ ಎರಡು-ಮೂರು ಪೀಳಿಗಿ ಬಿಟ್ಟು ಮತ್ತ ಕಾಣಿಸಬಹುದು. ನಮ್ಮ ಆಹಾರ ಪದ್ಧತಿ, ಕೆಲಸಾ ಮಾಡೋ ವಾತಾವರಣ, ದೈನಂದಿನ ಒತ್ತಡದ ಬದುಕು, ವಿಪರೀತ ರಾಸಾಯನಿಕಗಳ ಬಳಕೆಯಿಂದ ಹಾರ್ಮೋನ್ ಏರುಪೇರು, ಇವೆಲ್ಲ ಕಾರಣ ಆಗಬಹುದು. ಆದ್ರ ಒಂದ ಕಾರಣಾ ಅಂತ ಇಲ್ಲ. ಬಿಳಿ ಇಲಿ, ಬಿಳಿ ಹುಲಿ, ಬಿಳಿ ಚಿರತೆ, ಬಿಳಿ ಆನೆ, ಬಿಳಿ ಜಿಂಕೆ, ಬಿಳಿ ನವಿಲು ನೀವು ಕೇಳಿರಬಹುದು..ಹಂಗ ಅವೆಲ್ಲಾ ಸರ್ವೇ ಸಾಧಾರಣವಾಗಿ ‘ಅಲ್ಬಿನೋ’ ಆಗಿ ಪರಿವರ್ತನೆಹೊಂದಿ, ಬಿಳುಪು ರೋಗದ ವಿಲಕ್ಷಣತೆಯನ್ನ ಮೈಗೂಡಿಸಿಕೊಂಡು ನಮಗ ‘ಅಪರೂಪದ’ ಪ್ರಾಣಿಗಳು ಅನಸ್ತಾವ" ಅಂತ ವಿವರಿಸಿದರು.
ನಿಸರ್ಗಕ್ಕೆ ಹೊಂದಿಕೊಳ್ಳದ, ಪ್ರತ್ಯೇಕಿಸಿದಂತೆ ತೋರುವ ‘ಅಲ್ಬಿನೋ’ - ಬಿಳಿ ಬಣ್ಣದ ಈ ಹಕ್ಕಿಯನ್ನು ಗುರುತಿಸುವುದು ಅತಿ ಸುಲಭ. ಹಾಗೆಯೇ ವೈರಿಗೂ ಕೂಡ ಇದು ಸುಲಭ ತುತ್ತು. ಮೇಲಾಗಿ ಒಂದಾದರೂ ಮರಿ ಮತ್ತೆ ಅಲ್ಬಿನೋ ಆಗಿ ಹುಟ್ಟುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ತುಸು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದಂತೆ, ಕೂಟದಿಂದ ಹೊರಗಿದ್ದಂತೆ, ನೀರಸವಾದ ನಡಾವಳಿ ಅದು ಮೈಗೂಡಿಸಿಕೊಂಡಿರುತ್ತದೆ.
ಹೀಗೇಕೆ? ಎಂಬ ಪ್ರಶ್ನೆ ಉದ್ಭವಿಸಿದರೆ ನಮ್ಮ ಅನುಭವ ಸಮೀಕರಿಸಿ ಹೀಗೆ ಅಂದುಕೊಳ್ಳಬಹುದು.....ನಮ್ಮ ಹಳ್ಳಿಗಾಡಿನಲ್ಲಿ ಬಿಳುಪು ಅಥವಾ ತೊನ್ನು ರೋಗಕ್ಕೆ ಒಳಗಾದ ವ್ಯಕ್ತಿ ಯಾರಾದರೂ ಮೃತ ಪಟ್ಟರೆ, ಯಾವುದೇ ಜಾತಿಗೆ, ಧರ್ಮಕ್ಕೆ ಸೇರಿದ್ದರೂ ದೇಹ ದಫನ್ ಮಾಡದೇ, ಸುಟ್ಟು ಹಾಕುತ್ತಿದ್ದರು. ಕಾರಣ ಆ ದೇಹ ಬಹು ವರ್ಷಗಳ ಕಾಲ ಕೊಳೆಯಲಾರದು ಎಂಬ ಅನುಭವದ ಅರಿಕೆ. ಕೆಲವು ಕಡೆ ಸುಣ್ಣ ಲೇಪಿಸಿ ಅಥವಾ ಕುಣಿಯಲ್ಲಿ ತುಂಬಿ ಶವ ಸಂಸ್ಕಾರ ಮಾಡುತ್ತಿದ್ದರು. ಆಗ ಕಾಲ ಕಾಲಕ್ಕೆ ಮಳೆ ಬಾರದೇ ಬರ ಆವರಿಸಿದರೆ, ಊರ ಮುಂದಿನ ಸ್ಮಶಾನಕ್ಕೆ ಹೋಗಿ, ತೊನ್ನು ರೋಗಿಯನ್ನು ಹೂಳಲಾದ ಜಾಗೆ ಗುರುತಿಸಿ, ಶವ ಮೇಲಕ್ಕೆತ್ತಿ ಅದನ್ನು ಸುಟ್ಟು ಹಾಕಲಾಗುತ್ತಿತ್ತು. ಋತುಮಾನದ ಏರುಪೇರಿಗೆ ಈ ರೀತಿಯ ಶವ ಸಂಸ್ಕಾರ ಕಾರಣ ಎಂದು ಇಂದಿಗೂ ಬಲವಾದ ನಂಬಿಕೆಗಳು ಉಂಟು.
ನಿಸರ್ಗ ಅನೇಕ ನಿಗೂಢಗಳ ಖಣಿ. ನಮ್ಮ ತಿಳಿವಳಿಕೆಗೆ ಮೀರಿದ ಪುಸ್ತಕ. ಆಚರಣೆಗಳು ನಮ್ಮ ಅನುಭವದ ಮುಂದುವರೆದ ಭಾಗಗಳು. ಒಟ್ಟಾರೆ..ನಮ್ಮ ಧಾರವಾಡದ ಎಮ್ಮಿಕೇರಿ ಬಳಿಯ ಉಳವಿ ಚನ್ನಬಸವೇಶ್ವರ ದೇವಸ್ಥಾನ ರಸ್ತೆಯ ಬದಿಯಲ್ಲಿ ಕಾದು ಕುಳಿತ ನಮಗೆ ಇದೊಂದು ನಿಗೂಢ ಕಥೆಯಾಗಿ ಪರಿಣಮಿಸಿತ್ತು. ಆಗತಾನೇ ಅಲ್ಬಿನೋ ಆಗಿ ಪರಿವರ್ತನೆ ಹೊಂದುತ್ತಿದ್ದ ಕೆಮ್ಮೀಸೆ ಪಿಕಳಾರ ವನ್ನು ಅನುಕರಿಸಿ ಪ್ರೊ. ಗಂಗಾಧರ ಕಲ್ಲೂರ ಧ್ವನಿ ಹೊರಡಿಸುತ್ತಿದ್ದರು. ನಾವೆಲ್ಲ ಗಟಾರು ದಂಡೆಯ ಮೇಲೆ ತುಟಿ ಪಿಟಕ್ ಎನ್ನಿಸದೇ ಗಂಭೀರವಾಗಿ ಕುಳಿತಿದ್ದೆವು. ಪ್ರೊ. ಕಲ್ಲೂರ ಅವರ ಕರೆಗೆ ಓಗೊಟ್ಟು ಪಿಕಳಾರ ಬಂದೇ ಬಿಟ್ಟಿತು! ನಮ್ಮ ಕಣ್ಣುಗಳನ್ನು ನಾವು ನಂಬದ ಸ್ಥಿತಿ. ಪ್ರೊ. ಕಲ್ಲೂರ ಅವರಿಗೆ ಅತಿಮಾನುಷವಾದ, ಪಕ್ಷಿಗಳೊಂದಿಗೆ ಸಂಭಾಷಿಸುವ ಕಲೆ ಏನಾದರೂ ಗೊತ್ತಿದೆಯೇ? ಪೇಚಾಟಕ್ಕೆ ಬಿದ್ದೆ. ಅದು ಕೂಡ ಅವರ ಕರೆಗೆ ಓಗೊಟ್ಟು ಸಂಭಾಷಿಸಿದಾಗ ನನಗೆ ಎಚ್ಚರ ತಪ್ಪುವುದೊಂದೇ ಬಾಕಿ!
ಇತ್ತ ಕ್ಯಾಮೆರಾಗಳು ಝಳಪಿಸಿದ ಸದ್ದೇ ನನಗೆ ಕೇಳಿಸಲಿಲ್ಲ. ನಿರ್ಭಯವಾಗಿ ಕಲ್ಲೂರ ಅವರೊಂದಿಗೆ ಸಂಭಾಷಿಸುತ್ತ, ಗೂಡು ಕಟ್ಟಲು ನಾರಿನ ಸಂಗ್ರಹಣೆಯಲ್ಲಿ ತೊಡಗಿದ್ದ ಅಲ್ಬಿನೋ ಪಿಕಳಾರ ನಮ್ಮೆಲ್ಲರಿಗೂ ಮನದಣಿಯೇ ಪೋಸು ನೀಡಿತ್ತು.
ತಲೆಯ ಮೇಲೆ ಕಪ್ಪು ಚೊಟ್ಟಿ ಇರುವ ಮೈನಾ ಗಾತ್ರದ ಹಕ್ಕಿ ಕೆಮ್ಮೀಸೆ ಪಿಕಳಾರ. ರೆಕ್ಕೆ, ಬೆನ್ನು ಕಂದು ಗೆಂಪು ಬಣ್ಣ. ಕುತ್ತಿಗೆ ಮತ್ತು ಎದೆ ಬಿಳಿ ಬಣ್ಣ. ಕಣ್ಣಿನ ಕೆಳಗೆ ಕೆಂಪು ಮೀಸೆಗಳು. ಎದೆಯ ಮೇಲೆ ಕತ್ತರಿಸಿದ ಹಾರದಂತೆ ಕಪ್ಪು ಪಟ್ಟಿ. ಗಂಡು ಹಾಗೂ ಹೆಣ್ಣು ಪಕ್ಷಿಗಳಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸಗಳೇನಿಲ್ಲ. ಜೋಡಿಯಾಗಿ ಅಥವಾ ಚದುರಿದ ಗುಂಪುಗಳಲ್ಲಿ ಕಾಡುಗಳಲ್ಲಿ, ಉದ್ಯಾನಗಳಲ್ಲಿ ಹೆಚ್ಚಾಗಿ ತೋಟಗಳಲ್ಲಿ ಇವು ಕಾಣಸಿಗುತ್ತವೆ. ಆದರೆ ‘ಅಲ್ಬಿನೋ’ ಆಗಿ ಪರಿವರ್ತನೆ ಹೊಂದುವ ಪಿಕಳಾರ ಸುಲಭವಾಗಿ ಬೇಟೆಯ ಕಣ್ಣಿಗೆ ತುತ್ತಾಗುತ್ತದೆ.
ಭಾರತ, ಭರ್ಮಾ ಹಾಗೂ ಬಾಂಗ್ಲಾದೇಶದಲ್ಲಿಯೂ ಕಂಡುಬರುವ ಈ ಹಕ್ಕಿ, ರಾಜಸ್ಥಾನದಲ್ಲಿ ಮಾತ್ರ ಇಲ್ಲ. ಪಿಕಳಾರಗಳು ಪುರಾಣ ಪ್ರಸಿದ್ಧವಾದ, ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಿರುವ ಪಕ್ಷಿಗಳು. ಅರೇಬಿಯಾ ಹಾಗೂ ಪರ್ಷಿಯಾ ದೇಶದ ಪ್ರಾಚೀನ ಸಾಹಿತ್ಯದಲ್ಲಿ ಬುಲ್ ಬುಲ್ ಎಂದು ಕರೆಯಲ್ಪಡುವ ಇವುಗಳ ಉಲ್ಲೇಖವಿದೆ.
ಈ ಹಕ್ಕಿಯ ವರ್ಣವ್ಯತ್ಯಾಸಗಳನ್ನು ಆಧರಿಸಿ ಪಕ್ಷಿಶಾಸ್ತ್ರಜ್ಞರು ಐದು ಉಪಜಾತಿಗಳನ್ನಾಗಿ ವಿಂಗಡಿಸಿದ್ದಾರೆ. ಮಲೆನಾಡಿನ ಕಾಡುಗಳಲ್ಲಿ ಇವು ನಮ್ಮ ಹಳ್ಳಿಗಾಡಿನ ಗುಬ್ಬಚ್ಚಿಗಳಂತೆ ಹೇರಳವಾಗಿ ಕಾಣಸಿಗುತ್ತವೆ. ಅತ್ಯಂತ ಗಲಾಟೆ ಮಾಡುವ ಹಕ್ಕಿಗಳಿವು. ಅಪಾಯಕಾರಿ ಪ್ರಾಣಿ ಅಥವಾ ಹಕ್ಕಿಗಳನ್ನು ಕಂಡಕೂಡಲೇ ಮೊದಲು ಕೂಗಿ ಎಚ್ಚರಿಕೆ ನೀಡುವ ಹಕ್ಕಿ ಪಿಕಳಾರ. ರಕ್ಷಣೆ ದೊರಕುವುದು ಖಚಿತವಾದರೆ ಮನೆಗಳ ಹತ್ತಿರ ಸುಳಿದಾಡುತ್ತ, ಗೂಡುಗಳನ್ನು ಸಹ ಹತ್ತಿರದಲ್ಲಿಯೇ ಕಟ್ಟುತ್ತವೆ. ಕೀಟ ಹಾಗೂ ಚಿಕ್ಕ ಹಣ್ಣುಗಳನ್ನು ಅವು ತಿನ್ನುತ್ತವೆ. ಫೆಬ್ರುವರಿ ತಿಂಗಳಿಂದ ಆಗಸ್ಟ್ ತಿಂಗಳ ವರೆಗೆ ಪೊದೆಗಳ ಕವಲುಗಳಲ್ಲಿ ನಾರು, ಹುಲ್ಲು, ಪಾಚಿ ಬಳಸಿ ಬಟ್ಟಲಾಕಾರಾದಲ್ಲಿ ಗೂಡುಗಳನ್ನು ಇವು ಕಟ್ಟುತ್ತವೆ.