ಎಂ.ಎಫ್. ಹುಸೇನ್ : ಕೆಲವು ಪ್ರಶ್ನೆಗಳು
ಎಂ.ಎಫ್. ಹುಸೇನ್ ಅವರು ಹಿಂದು ಧರ್ಮದ ದೇವತೆಗಳನ್ನು ಮತ್ತು ವ್ಯಕ್ತಿಗಳನ್ನು ನಗ್ನರನ್ನಾಗಿ ಚಿತ್ರಿಸಿರುವುದರಿಂದ ಹಿಂದು ಧರ್ಮಕ್ಕಾಗಲೀ ಹಿಂದುಗಳ ಧಾರ್ಮಿಕ ಒಲವಿಗಾಗಲೀ ಚ್ಯುತಿಯೇನೂ ಉಂಟಾಗಿಲ್ಲ. ಹಿಂದು ಧರ್ಮ ಅಷ್ಟು ದುರ್ಬಲವೇನಲ್ಲ, ಹಿಂದುಗಳು ಮತಾಂಧರೂ ಅಲ್ಲ, ಸಹಿಷ್ಣುತಾ ರಹಿತರೂ ಅಲ್ಲ. ಆದರೆ, ಹುಸೇನರ ಔಚಿತ್ಯಪ್ರಜ್ಞೆ, ಕಲ್ಪನೆಯಲ್ಲಿನ ಪಕ್ಷಪಾತ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಳಕೆಯ ಪರಿ ಇವು ಇಲ್ಲಿ ಪ್ರಶ್ನಾರ್ಹ. ಹುಸೇನರ ಈ ಕೆಳಗಿನ ಚಿತ್ರಕಲಾಕೃತಿಗಳತ್ತ ಒಮ್ಮೆ ಗಮನಹರಿಸೋಣ.
* ದೇವತೆ ಲಕ್ಷ್ಮಿಯು ನಗ್ನಳಾಗಿ ಆನೆಯ ತಲೆಯಮೇಲೆ ಕುಳಿತಿದ್ದಾಳೆ.
* ಸರಸ್ವತಿದೇವಿ ನಗ್ನಳಾಗಿದ್ದಾಳೆ.
* ಗಣಪತಿಯೊಂದಿಗಿರುವ ಪಾರ್ವತಿ ನಗ್ನಳಾಗಿದ್ದಾಳೆ.
* ಹುಲಿಯೊಡನಿರುವ ದುರ್ಗಾದೇವಿ ನಗ್ನಳಾಗಿದ್ದಾಳೆ.
* ನಗ್ನ ಆಂಜನೇಯನೊಡನೆ ಯುದ್ಧಮಾಡುತ್ತಿರುವ ರಾವಣನ ತೊಡೆಯಮೇಲೆ ಸೀತೆಯು ನಗ್ನಳಾಗಿ ಕುಳಿತಿದ್ದಾಳೆ.
* ದ್ರೌಪದಿ ನಗ್ನಳಾಗಿದ್ದಾಳೆ.
* ಭಾರತದ ಭೂಪಟದೊಳಗೆ ಭಾರತಮಾತೆ ನಗ್ನರೂಪದಲ್ಲಿದ್ದಾಳೆ.
* ರಾಜಪೋಷಾಕು ಧರಿಸಿದ ಮುಸ್ಲಿಂ ದೊರೆಯ ಸನ್ನಿಧಾನದಲ್ಲಿ ಬ್ರಾಹ್ಮಣನೊಬ್ಬ ನಗ್ನನಾಗಿ ನಿಂತಿದ್ದಾನೆ.
ಈ ಎಲ್ಲ ಚಿತ್ರಗಳನ್ನು ಬರೆದಿರುವ ಇದೇ ಹುಸೇನರಿಂದ ರಚಿತವಾಗಿರುವ ಈ ಕೆಳಗಿನ ಚಿತ್ರಗಳನ್ನು ಗಮನಿಸೋಣ.
* ಪ್ರತ್ಯೇಕ ಚಿತ್ರಗಳಲ್ಲಿ, ಪೈಗಂಬರರ ಪುತ್ರಿ ಫಾತಿಮಾ, ಹುಸೇನರ ತಾಯಿ, ಹುಸೇನರ ಮಗಳು, ಮದರ್ ಥೆರೇಸಾ, ಓರ್ವ ಮುಸ್ಲಿಂ ಮಹಿಳೆ, ಮುಸ್ಲಿಂ ಕವಿಗಳಾದ ಘಾಲಿಬ್ ಮತ್ತು ಫಯಾಜ್ ಇವರೆಲ್ಲರೂ ಸಂಪೂರ್ಣ ವಸ್ತ್ರಧಾರಿಗಳಾಗಿದ್ದಾರೆ.
ನಿರ್ದಿಷ್ಟ ಧರ್ಮದ ಜನ ಸಹಿಸಿಕೊಳ್ಳುತ್ತಾರೆಂದು ಆ ಧರ್ಮದವರನ್ನು ಮಾತ್ರ ನಗ್ನರನ್ನಾಗಿ ಚಿತ್ರಿಸುತ್ತಹೋಗುವುದು ಔಚಿತ್ಯವೇ? ಹಿಟ್ಲರೊಬ್ಬನನ್ನು ನಗ್ನನನ್ನಾಗಿ ಚಿತ್ರಿಸಿರುವ ಹುಸೇನರು ಹಿಂದು ಧರ್ಮದವರನ್ನು ಮಾತ್ರ ಪದೇ ಪದೇ ನಗ್ನರನ್ನಾಗಿ ಕಲ್ಪಿಸಿಕೊಳ್ಳುವಂಥ ಪಕ್ಷಪಾತಿಯೋ ವಿಕೃತ ಮನೋಭಾವದ ವ್ಯಕ್ತಿಯೋ ಆಗಿರಬಹುದೆಂದೇಕೆ (ಪುರಾತನ ನಗ್ನಶಿಲ್ಪಗಳ ನಿದರ್ಶನ ನೀಡುವ) ಹುಸೇನ್ ಸಮರ್ಥಕರು ಯೋಚಿಸುವುದಿಲ್ಲ? ಅಥವಾ, ಕಲಾವಿದನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಹಿಂದು ಧರ್ಮದ ಮಟ್ಟಿಗೆ ಮಾತ್ರ ಇರತಕ್ಕದ್ದು, ಅನ್ಯ ಧರ್ಮಗಳ ವಿಷಯದಲ್ಲಿ ಇರಬಾರದಾದಂಥದೇ?
ಅನ್ಯ ಧರ್ಮಗಳ ವಿಷಯದಲ್ಲಿ ಹೆದರಿ, ಹಿಂದು ಧರ್ಮದ ಬಗ್ಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛೆಯಿಂದ ಚಿತ್ರ ಗೀಚಿ, ಹಿಂದುಗಳು ಕೆರಳಿದಾಗ ಹಿಂದುಗಳಿಗೂ ಹೆದರಿ ದೇಶವನ್ನೇ ತೊರೆದು ಅನ್ಯದೇಶದಲ್ಲಿ ನೆಲಸಿರುವ ಕಲಾವಿದನಮೇಲೆ ಈ ದೇಶದ ಜನರಿಗೆ ಅಭಿಮಾನ ಹುಟ್ಟುವುದಾದರೂ ಹೇಗೆ?