ಖತಾರ್‌ಗೋ ಮತ್ತೆಲ್ಲಿಗೋ ಓಡಿಹೋಗಬೇಕಾಗುತ್ತದೆ

ಖತಾರ್‌ಗೋ ಮತ್ತೆಲ್ಲಿಗೋ ಓಡಿಹೋಗಬೇಕಾಗುತ್ತದೆ

ಬರಹ

  ಭರ್ಜರಿ ಅಶ್ವಶಕ್ತಿಯುಳ್ಳ ಎಂ.ಎಫ್. ಹುಸೇನ್ ಸಾಹೇಬರು ರಚಿಸಿದ ಬೆತ್ತಲೆ ಚಿತ್ರಗಳ ಬಗ್ಗೆ ಇದೇ ’ಸಂಪದ’ದಲ್ಲಿ ಇದೇ ದಿನಾಂಕ ನಾಲ್ಕರಂದು ನಾನು ಪ್ರಕಟಿಸಿರುವ ಕಿರುಬರಹಕ್ಕೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ಆ ಕಿರುಬರಹವು ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಧರ್ಮ ಮತ್ತು ಸ್ವಾತಂತ್ರ್ಯ ಇವು ಪರಸ್ಪರ ಘರ್ಷಣೆಗೊಳಗಾಗದಂತೆ ನೋಡಿಕೊಳ್ಳುವುದು ಹೇಗೆಂಬ ಜಿಜ್ಞಾಸೆಯೇ ಆ ಎಲ್ಲ ಪ್ರತಿಕ್ರಿಯೆಗಳ ಮತ್ತು ಚರ್ಚೆಯ ಉದ್ದೇಶವಾಗಿರುವುದು ಸ್ವಾಗತಾರ್ಹ.
  ಖತಾರ್‌ನಲ್ಲಿದ್ದುಕೊಂಡು ಹುಸೇನರು, ’ನಾನು ಭಾರತಸಂಜಾತ’ ಎಂದು ಖತಾರ್-ನಾಕ್-ರಹಿತ ಹೇಳಿಕೆ ನೀಡಿ ಭಾರತೀಯರನ್ನು ಗಲಿಬಿಲಿಗೊಳಿಸುವ ವ್ಯರ್ಥ ಪ್ರಯತ್ನ ಮಾಡಿದಾಗ, ಶೋಭಾ ಡೇ ಎಂಬ ’ಡೇ ಅಂಡ್ ನೈಟ್ ಶೋಭಾಯ-ಮಾನ’ ಮಹಿಳೆ ಹುಸೇನ್ ಸಾಹೇಬರೊಡನೆ ಅವರ ದುಬೈ ಬಂಗ್ಲೆಯ ಮುಂದೆ ನಿಂತ ಛಾಯಾಚಿತ್ರವು ಒಗ್ಗರಣೆ ಬರಹ ಸಮೇತ ಭಾರತದ ನಂಬರ್ ಒನ್ ಇಂಗ್ಲಿಷ್ ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದಾಗ, ಸಾಹೇಬರ ಪರವಾಗಿ ಕೆಲವು ವಿದ್ಯುನ್-ಮಾನ(ರಹಿತ) ಮುಖಗಳು ಇಂಗ್ಲಿಷಿನಲ್ಲಿ ಟಸ್ ಪುಸ್ (ಬುಸ್ ಬುಸ್) ಅಂದಾಗ, ಇಂಥ ಹಲವು ಸಂದರ್ಭಗಳಲ್ಲಿ ನಾನು ಮಖ್ಬೂಲ್ ಫಿದಾ ಉರುಫ್ ’ಮಹಾ ಫಕೀರ’ ಹುಸೇನರ ’ನಗ್ನಕಲೆ’ಯ ಪರಿಣಾಮದ ಬಗ್ಗೆ ಬರೆಯಬೇಕೆಂದುಕೊಂಡೆ. ಆದರೆ, ನನ್ನ ಬರಹ ಚರ್ವಿತಚರ್ವಣವಾದೀತೆಂದು ಸುಮ್ಮನಾದೆ. ಕಳೆದ ವಾರವಷ್ಟೇ ಶಿವಮೊಗ್ಗದಲ್ಲಿ ನನಗಾದ ಅನುಭವವೊಂದು ಬರಹ ಬರೆದೇಬಿಡುವಂತೆ ನನ್ನನ್ನು ಪ್ರೇರೇಪಿಸಿತು. ಅದರ ಪರಿಣಾಮವೇ ಏಪ್ರಿಲ್ ನಾಲ್ಕರ ಆ ಕಿರುಬರಹ ಮತ್ತು ಇದೀಗ ಬರೆಯುತ್ತಿರುವ ಈ ಲೇಖನ.
  ಶಿವಮೊಗ್ಗದಲ್ಲಿ ನಡೆದದ್ದು
  ಮಾರ್ಚ್ ೩೧ರ ಸಂಜೆ. ಶಿವಮೊಗ್ಗದಲ್ಲಿ ಸಮಾರಂಭವೊಂದನ್ನು ಮುಗಿಸಿಕೊಂಡು ಅಲ್ಲಿನ ನನ್ನ ಬಿಡಾರಕ್ಕೆ ವಾಪಸಾಗುತ್ತಿದ್ದೆ. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಗಲಾಟೆ ಶುರುವಾಯಿತು. ಜನರೆಲ್ಲ ಎರ್ರಾಬಿರ್ರಿ ಓಡತೊಡಗಿದರು. ಸಿಗ್ನಲ್‌ಗಳನ್ನು ಲೆಕ್ಕಿಸದೆ ವಾಹನಗಳು ಎಲ್ಲೆಂದರಲ್ಲಿ ನುಗ್ಗತೊಡಗಿದವು. ಕಲ್ಲುಗಳು ತೂರಾಡತೊಡಗಿದವು. ದಡಬಡನೆ ಅಂಗಡಿಗಳು ಬಾಗಿಲೆಳೆದುಕೊಳ್ಳತೊಡಗಿದವು. ಅನತಿ ಸಮಯದಲ್ಲೇ ಪೋಲೀಸರು ಪ್ರತ್ಯಕ್ಷರಾಗಿ ಜನರನ್ನು ಮನೆಗಟ್ಟತೊಡಗಿದರು.
  ಬಿಡಾರಕ್ಕೆ ಬಂದು ನಾನು ಟಿವಿ ಹಾಕಿದೆ. ’ಶಿವಮೊಗ್ಗದಲ್ಲಿ ಕಿಡಿಗೇಡಿಗಳಿಂದ ಕಲ್ಲು ತೂರಾಟ; ಅಂಗಡಿಗೆ ಮತ್ತು ಬಸ್ಸಿಗೆ ಬೆಂಕಿ’ ಎಂಬ ಅಕ್ಷರಪಟ್ಟಿ ವಾರ್ತಾವಾಹಿನಿಯೊಂದರಲ್ಲಿ ಓಡುತ್ತಿತ್ತು.
  ತಿಂಗಳೊಪ್ಪತ್ತಿನಿಂದ ಶಿವಮೊಗ್ಗದಲ್ಲಿ ಸಂಭವಿಸಿದ್ದ ಗಲಭೆ, ಜನರ ಮನದೊಳಗೆ ಕುದಿಯುತ್ತಿದ್ದ ಭಾವನೆಗಳು, ಶಾಂತಿಯ ಉದ್ದೇಶದಿಂದ ಪೋಲೀಸರು ವಿಧಿಸಿದ್ದ ಕಟ್ಟುಪಾಡುಗಳು ಇವುಗಳ ಅರಿವಿದ್ದ ನಾನು, ’ಚಂದವಾಗಿರೋದು ಬಿಟ್ಟು ಸುಮ್ಮನೆ ಹೊಡೆದಾಡಿಕೊಳ್ತಾ ಇದ್ದೀವಿ’, ಎಂದೊಂದು ಪುಟ್ಟ ಹೇಳಿಕೆ ಕೊಟ್ಟೆ ನೋಡಿ, ಶುರುವಾಯ್ತು ಅಲ್ಲಿದ್ದ ತಲೆಗಳ ’ತಲೆಗೊಂದು ಮಾತು.’
  ಎರಡು ಗಂಟೆ ಕಾಲ ನಡೆದ ವಾದ ವಿವಾದಗಳ ವಿವರವನ್ನು ನಾನಿಲ್ಲಿ ನೀಡುತ್ತಿಲ್ಲ. ಒಟ್ಟಾರೆ ಹೇಳಬೇಕೆಂದರೆ, ವಾದ ವಿವಾದಗಳ ಕೋರ್ಸಿನಲ್ಲಿ, ಬಹುತೇಕರ ಸಿಟ್ಟು ಹುಸೇನ್ ಸಾಹೇಬರಮೇಲೆ ಹರಿದಿತ್ತು. ಕರ್ನಾಟಕದ ಉದ್ದಗಲದಿಂದ ಮಾತ್ರವಲ್ಲ, ಹೊರ ರಾಜ್ಯಗಳಿಂದಲೂ ಸಮಾರಂಭಕ್ಕೆ ಬಂದವರು ಅಲ್ಲಿದ್ದರು. ಅವರಿಗೆಲ್ಲ, ಕಲೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇವೆರಡಕ್ಕಿಂತ ಮತಧರ್ಮವೇ ಮುಖ್ಯವಾಗಿತ್ತು. ಮತಧರ್ಮ ಅವರ ಬಾಳಿನ ಗುರುತಾಗಿತ್ತು; ಮತಧರ್ಮಾಚರಣೆ ಅವರಿಗೆ ಅಭಿಮಾನದ ಸಂಗತಿಯಾಗಿತ್ತು. ತಮ್ಮ ಬಾಳಿನ ಹೆಗ್ಗುರುತಿಗೆ ಧಕ್ಕೆ ಉಂಟುಮಾಡಲೆತ್ನಿಸುವವರನ್ನು ಮತ್ತು ತಮ್ಮ ಅಭಿಮಾನದ ಸಂಗತಿಗೆ ಅವಮಾನ ಉಂಟಾಗುವುದನ್ನು ಅವರು ಸಹಿಸುತ್ತಿರಲಿಲ್ಲ. ವಿರುದ್ಧ ವಿಚಾರಧಾರೆಯ ಒಂದಿಬ್ಬರು ’ಬುದ್ಧಿಜೀವಿ’ಗಳನ್ನು ಆ ಧರ್ಮಾಭಿಮಾನಿ ಸಮೂಹವು ವಾದದಲ್ಲಿ ಕೆಡವಿಹಾಕಿತು.
  ’ಧರ್ಮಾಚರಣೆ ತಪ್ಪೇ? ಮತಧರ್ಮಾಭಿಮಾನ ತಪ್ಪೇ? ಶ್ರೀಸಾಮಾನ್ಯರೆಲ್ಲರೂ, ’ತಮ್ಮ ಮತಧರ್ಮದ ಮರ್ಯಾದೆಯನ್ನು ಕಡೆಗಣಿಸಿ(ದ)’ ಚಿತ್ರವೊಂದನ್ನು ಒಪ್ಪಿಕೊಳ್ಳಬೇಕೆಂದು ನಿರೀಕ್ಷಿಸುವುದು ಸರಿಯೇ? ಮುಸ್ಲಿಮರ ವಿಷಯದಲ್ಲಿ ಸರಿಯಲ್ಲ, ಹಿಂದುಗಳ ವಿಷಯದಲ್ಲಿ ಸರಿ ಎನ್ನುವುದಾದರೆ ಇದೆಂಥ ನ್ಯಾಯ?’
  ಧರ್ಮಾಭಿಮಾನಿ ಸಮೂಹ ಒಡ್ಡಿದ ಈ ಪ್ರಶ್ನೆಗಳಿಗೆ ಬೆರಳೆಣಿಕೆಯ ಆ ’ಬುದ್ಧಿಜೀವಿ’ಗಳಲ್ಲಿ ಉತ್ತರವಿರಲಿಲ್ಲ.
  ಮತ್ತಷ್ಟು ಪ್ರಶ್ನೆಗಳು
  ಶಿವಮೊಗ್ಗದಿಂದ ಬೆಂಗಳೂರಿಗೆ ಹಿಂತಿರುಗಿದಮೇಲೆ ನಾನು ಹುಸೇನ್ ಕಾರುಬಾರಿನ ಬಗ್ಗೆ ಮತ್ತಷ್ಟು ಯೋಚಿಸಿದೆ.
  ಕಲೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ’ಬುದ್ಧಿಜೀವಿ’ಗಳು ಎಷ್ಟೇ ಬೊಬ್ಬೆಹೊಡೆಯಲಿ, ಕಲೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮ ಮತಧರ್ಮಕ್ಕೆ ಅವಮಾನವಾಗುವುದನ್ನು ಶ್ರೀಸಾಮಾನ್ಯರು ಸಹಿಸುವುದಿಲ್ಲ. ಪುರಾತನ ಶಿಲ್ಪಗಳು ಮತ್ತು ಪುರಾಣಕಥೆಗಳು ನಗ್ನತೆಯನ್ನು ಯಾವ ಪರಿಯಲ್ಲೇ ಬಿಂಬಿಸಿರಲಿ, ಇಂದು ವ್ಯಕ್ತಿಯೊಬ್ಬ ಅಂಥದೇ ಕೆಲಸ ಮಾಡುವುದನ್ನು ಇವರು ಸ್ವಾಗತಿಸುವುದಿಲ್ಲ. ಆ ವ್ಯಕ್ತಿ ಅನ್ಯಧರ್ಮೀಯನಾಗಿದ್ದು, ತನ್ನ ಧರ್ಮದ ವಿಷಯದಲ್ಲಿ ಮಡಿವಂತಿಕೆಯಿಂದಿದ್ದು, ಪರರ ಧರ್ಮದ ವಿಷಯದಲ್ಲಿ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮೈಲಿಗೆ ಕೆಲಸ ಮಾಡಿದರೆ ಸಹಜವಾಗಿಯೇ ಆ ಪರಧರ್ಮೀಯರಿಗೆ ಆತನ ವಿಷಯದಲ್ಲಿ ಹೆಚ್ಚು ಕೋಪ ಉಂಟಾಗುತ್ತದೆ. ಸಾಮಾನ್ಯಜನಸಮೂಹದ ಇಂಥ ಕೋಪವನ್ನು ಯಾವ ಉಪದೇಶ, ಉದಾಹರಣೆ, ತರ್ಕ, ಹೋಲಿಕೆ, ವಾದಗಳಿಂದಲೂ ತಣಿಸಲು ಸಾಧ್ಯವಿಲ್ಲ. ಏಕೆಂದರೆ, ಮತಧರ್ಮವೆಂಬುದು ಅವರ ಬಾಳಿನ ಮುಖ್ಯಸ್ರೋತವಾಗಿರುತ್ತದೆ. ಹೋಲಿಕೆಯಿದ್ದಾಗ್ಗ್ಯೂ ಇಂದು ವ್ಯಕ್ತಿಯೊಬ್ಬನ ಕೃತಿಯನ್ನು ಆಕ್ಷೇಪಿಸುತ್ತಲೇ ಪುರಾಣಕಥೆಗಳನ್ನು ಭಕ್ತಿಯಿಂದಲೂ ಮತ್ತು ಪುರಾತನ ಶಿಲ್ಪಗಳನ್ನು ಭಕ್ತಿಮೂಲ ಸಂಸ್ಕೃತಿಯೆಂತಲೂ ಸ್ವೀಕರಿಸುವ ಮುಗ್ಧರು ಅವರು. ಅವರ ಈ ಮುಗ್ಧಭಾವ ಅವರ ಅಪರಾಧವಲ್ಲ. ಬದಲಿಗೆ ಅದು ಅವರ ಪಾಲಿನ ಅಮೂಲ್ಯ ಆಸ್ತಿ.
  ಇಂಥ ಜನಸಮೂಹವನ್ನು ನಿರ್ಲಕ್ಷಿಸಿ, ಬೆರಳೆಣಿಕೆಯ ತಥಾಕಥಿತ ಬುದ್ಧಿಜೀವಿಗಳ ಅಭಿಪ್ರಾಯ-ಧೋರಣೆಗಳನ್ನು ಇಡೀ ಸಮಾಜದಮೇಲೆ ಹೇರುವುದು ಸಾಧುವೂ ಅಲ್ಲ, ಅದು ಸಾಧ್ಯವೂ ಇಲ್ಲ. ಬಹುಸಂಖ್ಯೆಯ ಶ್ರೀಸಾಮಾನ್ಯರನ್ನು ಹೊರತುಪಡಿಸಿ ಕೇವಲ ಬೆರಳೆಣಿಕೆಯ ’ಬುದ್ಧಿಜೀವಿ’ಗಳಿಗಾಗಿಯೇ ಈ ಜಗತ್ತು ಇರುವುದಲ್ಲ. ಎಲ್ಲರಿಗಾಗಿ ಇರುವುದು ಈ ಜಗತ್ತು. ಅಂದಮೇಲೆ, ಬೆರಳೆಣಿಕೆಯ ’ಬುದ್ಧಿಜೀವಿ’ಗಳು ಈ ಜಗತ್ತಿನ ಎಲ್ಲರಮೇಲೆ ತಮ್ಮ ಅಭಿಪ್ರಾಯವನ್ನು ಹೇರುವುದು ತರವಲ್ಲವೇ ಅಲ್ಲ.
  ಎಂ.ಎಫ್. ಹುಸೇನರ ವಿವಾದಿತ ಚಿತ್ರಗಳ ವಿಷಯದಲ್ಲಿ - ಅದು ಮುಗಿದ ಕಥೆ ಎಂದು - ಸುಮ್ಮನಿದ್ದರೆ, ಜನಮನದೊಳಗೆ ಕುದಿಯುತ್ತಿರುವ ಅಸಮಾಧಾನದ ಲಾವಾರಸವು ಮುಂದೊಮ್ಮೆ ಹೊರನುಗ್ಗಿ ಹರಿದು, ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲ ಭಸ್ಮಗೊಳಿಸುವ ಸಂಭವ ಇಲ್ಲದಿಲ್ಲ. ಹುಸೇನರಂತೆ ಮುಂದೆ ಇನ್ನ್ಯಾರೋ ಇನ್ನೇನೋ ದುಸ್ಸಾಹಸ ಮಾಡಿದಾಗ ಅಥವಾ ಮುಂದೊಮ್ಮೆ, ಇದೇ ಹುಸೇನರ ಸ್ವದೇಶಾಗಮನ ಮತ್ತು ಕೋರ್ಟ್ ಮೊಕದ್ದಮೆಗಳ ವಿಷಯ ಬಂದು ಆಗ ಈ ಹುಸೇನ್ ಸಾಹೇಬರ ಬಗ್ಗೆಯೇ ’ಬುದ್ಧಿಜೀವಿ’ಗಳು ಸಮರ್ಥನೆಯ ಮಾತಾಡತೊಡಗಿದಾಗ ಸಮಾಜದಲ್ಲಿ ಲಾವಾರಸವು ಉಕ್ಕಿಹರಿಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗದಷ್ಟೆ. ಹಾಗಾಗದಿರಲೆಂಬ ಉದ್ದೇಶದಿಂದ ನಾನು ಬಹುಸಂಖ್ಯಾತ ಶ್ರೀಸಾಮಾನ್ಯರ ಮುಖವಾಣಿಯಾಗಿ ಹುಸೇನರ ವಿವಾದಿತ ಚಿತ್ರಗಳ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನು ಎತ್ತುವ ನಿರ್ಧಾರ ಕೈಕೊಂಡೆ. ಅದರನುಸಾರ, ಏಪ್ರಿಲ್ ನಾಲ್ಕರ ಕಿರುಬರಹದಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಮಂಡಿಸಿದೆ.
  ’ನಿರ್ದಿಷ್ಟ ಧರ್ಮದ ಜನ ಸಹಿಸಿಕೊಳ್ಳುತ್ತಾರೆಂದು ಆ ಧರ್ಮದವರನ್ನು ಮಾತ್ರ ನಗ್ನರನ್ನಾಗಿ ಚಿತ್ರಿಸುತ್ತಹೋಗುವುದು ಔಚಿತ್ಯವೇ? ಹಿಟ್ಲರೊಬ್ಬನನ್ನು ನಗ್ನನನ್ನಾಗಿ ಚಿತ್ರಿಸಿರುವ ಹುಸೇನರು ಹಿಂದು ಧರ್ಮದವರನ್ನು ಮಾತ್ರ ಪದೇ ಪದೇ ನಗ್ನರನ್ನಾಗಿ ಕಲ್ಪಿಸಿಕೊಳ್ಳುವಂಥ ಪಕ್ಷಪಾತಿಯೋ ವಿಕೃತ ಮನೋಭಾವದ ವ್ಯಕ್ತಿಯೋ ಆಗಿರಬಹುದೆಂದೇಕೆ (ಪುರಾತನ ನಗ್ನಶಿಲ್ಪಗಳ ನಿದರ್ಶನ ನೀಡುವ) ಹುಸೇನ್ ಸಮರ್ಥಕರು ಯೋಚಿಸುವುದಿಲ್ಲ? ಅಥವಾ, ಕಲಾವಿದನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಹಿಂದು ಧರ್ಮದ ಮಟ್ಟಿಗೆ ಮಾತ್ರ ಇರತಕ್ಕದ್ದು, ಅನ್ಯ ಧರ್ಮಗಳ ವಿಷಯದಲ್ಲಿ ಇರಬಾರದಾದಂಥದೇ?
  ಅನ್ಯ ಧರ್ಮಗಳ ವಿಷಯದಲ್ಲಿ ಹೆದರಿ, ಹಿಂದು ಧರ್ಮದ ಬಗ್ಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛೆಯಿಂದ ಚಿತ್ರ ಗೀಚಿ, ಹಿಂದುಗಳು ಕೆರಳಿದಾಗ ಹಿಂದುಗಳಿಗೂ ಹೆದರಿ ದೇಶವನ್ನೇ ತೊರೆದು ಅನ್ಯದೇಶದಲ್ಲಿ ನೆಲಸಿರುವ ಕಲಾವಿದನಮೇಲೆ ಈ ದೇಶದ ಜನರಿಗೆ ಅಭಿಮಾನ ಹುಟ್ಟುವುದಾದರೂ ಹೇಗೆ?’
  ನೆನಪಿಡಿ
  ’ಬುದ್ಧಿಜೀವಿ’ಗಳು, ತರ್ಕಪ್ರವೀಣರು, ಅಭಿವ್ಯಕ್ತಿಸ್ವಾತಂತ್ರ್ಯಪ್ರತಿಪಾದಕರು, ಕಲೋಪಾಸಕರು ಇತ್ಯಾದಿ ವಿಶೇಷಗುಣಿಗಳೆಲ್ಲ ಒಂದು ಸತ್ಯವನ್ನು ಸದಾ ನೆನಪಿಟ್ಟುಕೊಳ್ಳಬೇಕು. ಸಮಾಜದ ಬಹುಸಂಖ್ಯಾತ ಶ್ರೀಸಾಮಾನ್ಯರು ತಮ್ಮ ಭಾವನೆಗಳನ್ನು, ಯಾವುದೇ ತರ್ಕ, ಬುದ್ಧಿವಂತಿಕೆಯ ವಾದ, ಅಭಿವ್ಯಕ್ತಿಸ್ವಾತಂತ್ರ್ಯಪ್ರತಿಪಾದನೆ, ಕಲೋಪಾಸನೆಯ ಉಪದೇಶ ಇವುಗಳ ಪ್ರಭಾವಕ್ಕೊಳಗಾಗಿ ಬದಲಾಯಿಸಿಕೊಳ್ಳುವವರಲ್ಲ. ಮತಧರ್ಮಾಚರಣೆಯ ವಿಷಯದಲ್ಲಂತೂ ಭಾವನೆಯ ಬದಲಾವಣೆ ಸಾಧ್ಯವೇ ಇಲ್ಲ. ಹೀಗಿರುವಾಗ, ಯಾರೇ ಆಗಲೀ, ಸಮುದಾಯದ ಭಾವನೆಗಳಿಗೆ ವ್ಯತಿರಿಕ್ತವಾಗಿ ಸಾಗುವ ದುಸ್ಸಾಹಸ ಮಾಡಬಾರದು. ಮಾಡಿದರೆ ಖತಾರ್‌ಗೋ ಮತ್ತೆಲ್ಲಿಗೋ ಓಡಿಹೋಗಬೇಕಾಗುತ್ತದೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್.... ಎಲ್ಲ ಮತಧರ್ಮೀಯರಿಗೂ ಈ ಮಾತು ಅನ್ವಯ.