ಅಸ್ತಮಿಸಿದ ಕನ್ನಡ ಅರುಣೋದಯದ ಕೊಂಡಿ

ಅಸ್ತಮಿಸಿದ ಕನ್ನಡ ಅರುಣೋದಯದ ಕೊಂಡಿ

ಬರಹ

    ಹತ್ತಾರು ಮನೆಗಳನ್ನು ತಿರುಗಿ ಅವರ ಮನೆಯ ಅಂಚೆ ಕಾಗದಗಳನ್ನು ಒಟ್ಟು ಮಾಡಿ ಅಧ್ಯಯಿನಿಸಿ ಒಂದು ಕಾಲದ ಸಂಸ್ಕೃತಿ, ಸಾಮಾಜಿಕ ಜೀವನಪರಿಯ ಕುರಿತು ಸಂಶೋಧನೆ ಮಾಡಬಹುದೆಂಬ ಧೈರ್ಯ ಇದ್ದುದ್ದು ಕೇವಲ ಡಾ.ಶ್ರೀನಿವಾಸ ಹಾವನೂರರಿಗೆ ಮಾತ್ರ. ಇರುವೆ ಗುಣದ ಈ ಸಂಶೋಧಕರಿಗೆ ಒಂದು ಹಳೆಯ ಕಾಗದದ ತುಂಡು ಕೂಡ ಹತ್ತು ಕಥೆಗಳನ್ನು ಹೇಳುತ್ತದೆ ಎಂಬ ಸತ್ಯ ಗೊತ್ತಿತ್ತು. ಮೂಲತ: ಗ್ರಂಥಪಾಲಕರಾಗಿದ್ದ ಹಾವನೂರ ತಾವು ಕೆಲಸ ಮಾಡಿದ ಕಡೆಯಲೆಲ್ಲ ಇಂಥ ಸಂಗ್ರಹ ಸಂಸ್ಕೃತಿಯನ್ನು ಬೆಳೆಸುತ್ತಾ ಹೋದವರು. 

    ವ್ಯವಸ್ಥಿತ ಸಂಗ್ರಹ ಮತ್ತು ಸಂಶೋಧನೆ ಇವರ ಕೆಲಸಗಳಲ್ಲಿ ಕಾಣುವ ಮುಖ್ಯ ಅಂಶ. ಆಕರಗಳನ್ನು ಅರ್ಕೈವ್ ಮಾಡುವ ಮತ್ತು ಅಧ್ಯಯನಕ್ಕಾಗಿ ಹೊಂದಿಸಿಕೊಳ್ಳುವ ಕಲೆ ಇವರಿಗೆ ಕರಗತವಾಗಿತ್ತು. ಇವರ ಈ ಎಲ್ಲ ಯೋಜನೆಗಳ ಮೂಲನೆಲೆಗಳು ಬಹುಶ:  ವಿಜ್ಞಾನ ವಿದ್ಯಾರ್ಥಿಯಾಗಿದ್ದ ಕಾರಣದಿಂದ ಬಂದ ಗುಣಗಳು ಎನಿಸುತ್ತದೆ. ಇಂಥ ಒಂದು ಸಂಸ್ಕಾರದಿಂದಲೇ ವೈಜ್ಞಾನಿಕ ನೆಲೆಯಲ್ಲಿ  ಕನ್ನಡ ಸಾಹಿತ್ಯವು ನಡುಗನ್ನಡದಿಂದ ಹೊಸಗನ್ನಡಕ್ಕೆ ತಿರುವು ಪಡೆದುಕೊಂಡ ಆ ಸಂಕ್ರಮಣಕಾಲದ ಸಾಹಿತ್ಯದ ಚಿತ್ರಣವನ್ನು ತುಂಬಾ ಯಶಸ್ವಿಯಾಗಿ ಕಟ್ಟಿಕೊಡಲು ಸಾಧ್ಯವಾಯಿತು.
    ಸುಮಾರು ೧೮೫೦ ರಿಂದ ೧೯೨೦ ರವರೆಗಿನ  ಕನ್ನಡದ ಹತ್ತಾರು ಆಕರಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಹೊಸಗನ್ನಡ ಸಾಹಿತ್ಯ ಬೆಳೆದು ಬಂದ ಬಗೆಯನ್ನು ವಿವರಿಸಿದ್ದಾರೆ. ಆಗ ಮಿಶನರಿಗಳು ಕನ್ನಡ ನೆಲದಲ್ಲಿ ಕನ್ನಡದ ಕೃತಿಗಳನ್ನು ಸಂಗ್ರಹಿಸಿ ಪ್ರಕಟಿಸುವ, ಮುದ್ರಿಸುವ ಕಾಲ. ಇನ್ನೊಂದೆಡೆ ಜರ್ಮನಿಯ ಬಾಸೆಲ್ ಮಿಶನ್ ನ ಕನ್ನಡದ ಕಾರ್ಯ ಚಟುವಟಿಕೆ, ಮತ್ತೊಂದೆಡೆ ಕನ್ನಡದ ಪ್ರಥಮ ಪತ್ರಿಕೆ 'ಮಂಗಳೂರು ಸಮಾಚಾರ' ಮಾಡಿದ ಸಂಚಲನ ಇಷ್ಟೂ ವಿಚಾರಗಳು ಕನ್ನಡ ನಾಡು ನುಡಿಯ ಮೇಲೆ ಬೀರಿದ ಪ್ರಭಾವವನ್ನು ಅತ್ಯುತ್ತಮವಾಗಿ ಡಾಕ್ಯುಮೆಂಟ್ ಮಾಡಿದವರು ಡಾ.ಹಾವನೂರ. ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ದ ಬಗ್ಗೆ ಅವರು ಸಂಶೋಧನೆ ನಡೆಸಿದ್ದೂ ಅಲ್ಲದೆ ಅದರ ಪ್ರತಿಗಳ ನೆರಳಚ್ಚು ಕೃತಿಗಳನ್ನೂ ಕಾಪಿಡಲೂ ಕಾರಣರಾಗಿದ್ದಾರೆ. ಅವುಗಳನ್ನು ಮೈಕ್ರೋ ಫಿಲಂ ರೀತಿಯಲ್ಲಿ ಕೂಡ ಸಂಗ್ರಹಿಸಲಾಗಿದೆ.  


    ಕನ್ನಡದ ಹಲವು ಮೊದಲುಗಳು ಹುಟ್ಟಿದ ಮಂಗಳೂರಿಗೆ ಬಂದಾಗಲಂತೂ ಅವರ ಅಧ್ಯಯನ ವೇಗ ಇನ್ನೂ ಹೆಚ್ಚಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾವನೂರ ಅವರು ಕನ್ನಡ ವಿಭಾಗದಲ್ಲಿಯೇ ಹುಟ್ಟು ಹಾಕಿದ ಪತ್ರಾಗಾರದಂಥ ಆರ್ಕೈವ್ ವ್ಯವಸ್ಥೆ ಇಂದಿಗೂ ಕೂಡ ನೂರಾರು ಜನರನ್ನು ಅಧ್ಯಯನಕ್ಕಾಗಿ ಕೈಬೀಸಿ ಕರೆಯುತ್ತಿದೆ. ಇಲ್ಲಿ ಸಾಹಿತ್ಯಿಕ ಗ್ರಂಥಗಳೇ ಅಲ್ಲದೇ ಹಳೆಯ ಪತ್ರಿಕೆಗಳು, ಓಲೆಗರಿಗಳು, ಹಸ್ತಪ್ರತಿಗಳು, ಶಾಸನಪ್ರತಿಗಳ ಇವೆ. ಮಾಹಿತಿಕೋಶವೆಂಬ ಸಂಗ್ರಹದಲ್ಲಿ  ಹತ್ತಾರು ಪತ್ರಿಕೆಗಳಲ್ಲಿ ಪ್ರಕಟವಾದ, ಒಂದು ವಿಷಯಕ್ಕೆ ಸಂಬಂಧಿಸಿದ ವಿಷಯಗಳನ್ನು ಕ್ರಮಬದ್ಧವಾಗಿ ಜೋಡಿಸಿಡಲಾಗಿದೆ. ಇವೆಲ್ಲವಕ್ಕೂ ಕೆಟಲಾಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಇಂಥ ಒಂದು ಅಚ್ಚುಕಟ್ಟುತನ ಬಂದದ್ದು ಹಾವನೂರರ ದುಡಿಮೆಯ ಫಲ. ಮುಂದೆ ಇದನ್ನು ಯಶಸ್ವಿಯಾಗಿ ವಿಭಾವು ಮುಂದುವರೆಸಿಕೊಂಡು ಹೋಗಿದೆ.
      ಕನ್ನಡದ ನವೋದಯಸಾಹಿತ್ಯ ಕಾಲಘಟ್ಟದ ಕುರಿತು ಅಧ್ಯಯನ ಮಾಡುವವರಿಗೆ ಇಂದಿಗೂ ಅಧ್ಯಯನಕ್ಕೊಂದು ಆಕರ ಗ್ರಂಥ ಡಾ.ಹಾವನೂರರ 'ಹೊಸಗನ್ನಡದ ಅರುಣೋದಯ'. ಇಂಥ ವಿಶಿಷ್ಟ ಕೃತಿಯನ್ನು ನೀಡಿದ ಶ್ರೀಯುತರು  ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಇಂಗ್ಲಿಷ್ ಪ್ರಭಾವವನ್ನು ಬಹಳ ಸೂಕ್ಷ್ಮವಾಗಿ ಗ್ರಹಿಸಿದವರು. ಕನ್ನಡ ಸಾಹಿತ್ಯದ ಭಾಷೆ, ವಿಷಯ, ವಸ್ತು, ನಿರ್ವಹಣೆ ಮತ್ತು ಕಥನ ತಂತ್ರಗಳಲ್ಲಿ ಇಂಗ್ಲಿಷ್ ನ ಪ್ರಭಾವ ಹೇಗೆ ಕನ್ನಡಕ್ಕೊಂದು ಆಧುನಿಕ ಸಂವೇದನೆಯನ್ನು ತಂದು ಕೊಟ್ಟಿತು ಎಂಬ ಬಗ್ಗೆಯೂ ಈ ಗ್ರಂಥ ತಿಳಿಸುತ್ತದೆ.


    ತಮ್ಮ ಜೀವಿತದ ಸಂಧ್ಯಾಕಾಲದಲ್ಲೂ ಅವರದ್ದು ಬತ್ತದ ಉತ್ಸಾಹ. ಮಂಗಳೂರಿನ ಕರ್ನಾಟಕ ಥಿಯೋಲಜಿಕಲ್ ಕಾಲೇಜಿನಲ್ಲಿ ಬಾಸೆಲ್ ಮಿಶಿನ್ನಿಗೆ ಸಂಬಂಧಿಸಿದ ಹಲವು ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದರು.ಕರ್ನಾಟಕ ಮತ್ತು ಜರ್ಮನಿ ನಡುವಣ ಸೇತುವೆಯಂತಿದ್ದ ಹಾವನೂರು ಅವರು ಕನ್ನಡಕ್ಕೆ ಹರ್ಮನ್ ಮೊಗ್ಲಿಂಗ್,  ಕಿಟ್ಟೆಲ್ ಅಂತಹ ಕ್ರೈಸ್ತ ಪಾದ್ರಿಗಳ ಕೊಡುಗೆಯ ಕುರಿತು ಬೆಳೆಕು ಚೆಲ್ಲಿದವರು. ಜರ್ಮನಿಯಲ್ಲಿಯೇ ಇದ್ದು ತಮ್ಮ ಸಂಶೋಧನೆ ಮಾಡಿ ನಂತರ ಇಲ್ಲಿಗೆ ಬಂದು ಅದನ್ನು ವ್ಯವಸ್ಥಿತ ಗೊಳಿಸಿದವರು. ಅವರು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಾಕಷ್ಟು ಸಂಖ್ಯೆಯ ಸಂಶೋಧರಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇಂದಿನವರೆಗೆ ಬೆಳಕಿಗೆ ಬಾರದ ವಿಷಯಗಳ ಕುರಿತು ಅಪಾರವಾದ ಆಸಕ್ತಿಯನ್ನು ಸೆಳೆದುಕೊಂಡಿದ್ದವು.
    ತಮ್ಮ ಜೀವಿತಾವಧಿಯುದ್ದಕ್ಕೂ ಸಂಶೋಧನೆಯನ್ನು ವ್ರತದಂತೆ ಪಾಲಿಸಿದವರು. ಪ್ರಾಚೀನ ಕೃತಿಗಳು, ಬರಹಗಳು ಹೇಗೆ ಅವರ ಗಮನಸೆಳೆಯುತ್ತಿದ್ದವೋ ಹಾಗೆಯೇ ಆಧುನಿಕ ವಿಷಯಗಳಿಗೂ ತೆರೆದುಕೊಂಡವರು. ಅವರು ಆಸಕ್ತಿಯ ಫಲವಾಗಿ ಇಂದು ಹಲವಾರು ಗ್ರಂಥಸೂಚಿಗಳು ಡಿಜಿಸೈಜ್ ಆಗಿಬಂದಿವೆ. ಕಂಪ್ಯೂಟರ್ ನಲ್ಲಿ ಕನ್ನಡವನ್ನು ಅಳವಡಿಸುತ್ತಿದ್ದ ಕಾಲದಲ್ಲಿ ಇವರ ಸೇವೆ ಅನನ್ಯವಾದುದು.
  ಒಂದರ್ಥದಲ್ಲಿ ಕನ್ನಡ ಸಾಹಿತ್ಯಕ್ಕೆ ಇತಿಹಾಸವೊಂದನ್ನು ರಚಿಸಿಕೊಳ್ಳುತ್ತಿದ್ದ ಕಾಲದಲ್ಲಿ ಹಾವನೂರರು ಮಾಡಿದ ಸಂಗ್ರಹಣೆಯ ಕಾರ್ಯಗಳು ಅತಿ ಅಮೂಲ್ಯವಾದ ಸೇವೆಯಾಗಿತ್ತು. ಇಂಥ ಆದರ್ಶ ಮತ್ತು ಮೇರು ವ್ಯಕ್ತಿತ್ವ ನಮ್ಮಿಂದ ಸೋಮವಾರ ಅಗಲಿದೆ. ಇದು ಆ ಮಹಾಚೇತನಕ್ಕೆ ಅರ್ಪಿಸುತ್ತಿರುವ ನುಡಿನಮನ.

ಚಿತ್ರಕೃಪೆ: ಪ್ರಜಾವಾಣಿ