ಸ್ನೇಹದ ಹಾದಿಯ.. ನೆನಪುಗಳ ರಂಗೋಲಿ... ಜಾತ್ರೆ

ಸ್ನೇಹದ ಹಾದಿಯ.. ನೆನಪುಗಳ ರಂಗೋಲಿ... ಜಾತ್ರೆ

ಗೆಳೆಯಾ, ಬೇಡ ಎಂದರೂ ಮರಳಿ ಬರುತ್ತಿದೆ ನನಗೆ ನಿನ್ನ ನೆನಪು. ನೆನಪಿರಬೇಕಲ್ವಾ ನಿನಗೆ, ನಮ್ಮಿಬ್ಬರ ಮೊದಲ ಭೇಟಿಗೆ ಇಂದಿಗೆ ಒಂದು ವರ್ಷ. ನಮ್ಮೂರ ಜಾತ್ರೆಯ ಗದ್ದಲದಲ್ಲಿ, ದೇವರ ದರ್ಶನಕ್ಕಾಗಿ ಸರತಿಯಲ್ಲಿ ನಿಂತಾಗಲೇ ಅಲ್ಲವೇ ನಮ್ಮಿಬ್ಬರ ಕಣ್ಣುಗಳು ಸಂದಿಸಿದ್ದು...! ಆಗಲೇ ನನಗೆ ತಿಳಿದಿದ್ದು ಪ್ರೀತಿ ಮೊದಲ ನೋಟದಲ್ಲೇ ಹುಟ್ಟುತ್ತೆ ಎನ್ನುವ ಮಾತಿನ ಅರ್ಥ.

          ನಾನು ಆರತಿ ತೆಗೆದುಕೊಂಡ ರೀತಿಯಲ್ಲೇ ನೀನೂ ಅನುಸರಿಸಿದ್ದು, ಸ್ನೇಹಿತನೊಂದಿಗೆ ಮಾತಿನಲ್ಲೇ ಮುಳುಗಿದ್ದ ನೀನು ನನ್ನ ಕಂಡೊಡನೇ ಮೌನವಾದ ರೀತಿ, ಒಲ್ಲದ ಮನಸ್ಸಿನಿಂದ ದೇವರಿಗೆ ದಕ್ಷಿಣೆ ಹಾಕಿದ ರೀತಿ, ದೇವರ ದರ್ಶನ ನಂತರ ನಾನು ಹೋದ ಅಂಗಡಿಗೆ ಹಿದಿನಿಂದ ಬರುತ್ತಿದ್ದ ನೀವು, ನಾನು ನೋಡಿದ ತಕ್ಷಣ ನಮ್ಮ ಅಮ್ಮನ ಪಕ್ಕದಲ್ಲಿ ನಿಂತು ನನ್ನ ನೋಡುತ್ತಿದ್ದ ರೀತಿ... ಏನೆಂದು ವರ್ಣಿಸಲಿ ಜಾತ್ರೆಯಲ್ಲಿ ಆರಂಭವಾದ ನಮ್ಮ ಮೊದಲ ಪ್ರೀತಿಯ ಅನುಭವವನ್ನು...

          ತೆಪ್ಪೋತ್ಸವದಂದು ನೀನು ಹುಡುಗರ ಗುಂಪಿನಲ್ಲಿ ನಿಂತು ನಗುತ್ತಿದ್ದ ರೀತಿ, ಕೈಕಟ್ಟಿಕೊಂಡು ನೀನು ನಿಲ್ಲುವ ಭಾವ ಎಲ್ಲವೂ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ, ಗಗನದಲ್ಲಿ ಬೆಳಕು ಚೆಲ್ಲುತ್ತಿದ್ದ ಪಟಾಕಿ ಸಿಡಿದಾಗಲೆಲ್ಲಾ ನಾನು ನಿನ್ನ ಮುಖದಲ್ಲೇ ಅದರ ಬೆಳಕು ಕಾಣುತ್ತಾ ಸಂಭ್ರಮಿಸಿದ್ದು ನೆನಪಿದೆಯಾ ನಿನಗೆ...
          ಒಂದೇ ಕಾಲೇಜಿನಲ್ಲಿ ಓದುತ್ತಿದ್ದರೂ, ಅಪರಿಚಿತರಂತಿದ್ದ ನಾವು, ಜಾತ್ರೆಯ ನಂತರದಲ್ಲಿ ನಿತ್ಯ ಮುಗುಳ್ನಗೆಯೊಂದಿಗೆ ಆರಂಭವಾದ ನಮ್ಮ ಸ್ನೇಹ... ಸಮಯಕ್ಕೂ ಮೊದಲೇ ಕಾಲೇಜಿಗೆ ಬಂದು ಮಾತನಾಡುತ್ತಿದ್ದ ನಮ್ಮಿಬ್ಬರ ರೀತಿ, ಸ್ನೇಹಿತರೆಲ್ಲರೂ ನಮ್ಮ ಕುರಿತು ಮಾತನಾಡುತ್ತಿದ್ದ ಮಾತುಗಳು, ತಿಂಡಿ, ಊಟದ ನೆಪದಲ್ಲಿ ಕ್ಯಾಂಟಿನ್‌ನಲ್ಲಿ ಕಳೆದ ದಿನಗಳು ಅಬ್ಬಾ ಎಲ್ಲವೂ ಎಷ್ಟೊಂದು ಸುಂದರ... ಇದ್ಯಾವುದೂ ನಮ್ಮ ಓದಿಗೆ ಅಡ್ಡಿಯಾಗದೇ ಪರಸ್ಪರ ಜ್ಞಾನಕ್ಕೆ ಬಳಕೆಯಾಗಿದ್ದು, ಆ ದೇವರ ದಯವೇ ಇರುಬೇಕು ಅಲ್ವಾ...
          ಕಾಲವೇ ಹಾಗೆ... ಸಂತಸದಲ್ಲಿ ಕಳೆದದ್ದೇ ತಿಳಿಯುವುದಿಲ್ಲ, ಇದೀಗ ನೀನು ಬೆಂಗಳೂರಿನಲ್ಲಿ ಉದ್ಯೋಗಿ, ನಾನಿನ್ನೂ ಮಧುರ ನೆನಪಲ್ಲೇ ಕಾಲ ಕಳೆಯುತ್ತಿರುವ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ, ಯಾಕೋ ಗೊತ್ತಿಲ್ಲ ಗೆಳೆಯಾ, ಜಾತ್ರೆಗೆ ಬರಲ್ಲಾ ಎನ್ನುವ ನಿನ್ನ ಸಂದೇಶ ನನಗೆ ತೀವ್ರ ದುಃಖ ತರಿಸಿದೆ.

          ನಮ್ಮೂರ ಜಾತ್ರೆ ನನಗೆ ಕೇವಲ ದೇವರ ಉತ್ಸವ ಅಲ್ಲ, ನಮ್ಮಿಬ್ಬರ ಮೊದಲ ಭೇಟಿಯ ನೆನಪುಗಳ ಸಂಭ್ರಮದ ತೇರು, ಒಟ್ಟಿಗೆ ಕೈಹಿಡಿದುಕೊಂಡು ಸುತ್ತಾಡಬೇಕು, ಜಾತ್ರೆ ಅಂಗಡಿಗಳಲ್ಲಿ ಹೇರ್‌ಬ್ಯಾಂಡ್‌, ಕಲ್ಲರ್‌ ಟ್ಯೂಬ್‌ ಸೆಟ್‌, ಬಣ್ಣ ಬಣ್ಣದ ಬಿಂದಿಗಳು, ಐಸ್‌ಕ್ರೀಂ ತಿನ್ನುತ್ತಾ ತೆಪ್ಪೋತ್ಸವ ನೋಡುವ ನನ್ನ ಕನಸು ನನಸಾಗಲೇ ಇಲ್ಲವಲ್ಲಾ ಗೆಳೆಯಾ...

ನಿನ್ನೇಲ್ಲಾ ಸ್ನೇಹಿತರು ಕಾಣುತ್ತಿದ್ದಾರೆ, ಪೀಪಿ ಊದುತ್ತಾ, ಹರಟುತ್ತಾ ಓಡಾಡುತ್ತಿದ್ದಾರೆ. ನನ್ನ ಸ್ನೇಹಿತೆಯರೆಲ್ಲಾ ನಿನ್ನನ್ನು ನೆನಪು ಮಾಡುತ್ತಾ ಮತ್ತೆ ಮತ್ತೆ ಅದೇ ವಿಷಯ ಕೇಳುತ್ತಿದ್ದಾರೆ ಕಣೋ...

ಪಡ್ಡೆ ಹುಡುಗರ ಗುಂಪು ಪೀಪಿ ಊದುತ್ತಾ ಪಕ್ಕದಲ್ಲೇ ಸಾಗುತ್ತಿದ್ದಾರೆ, ಗಲಾಟೆ ಮಾಡಬೇಡಿ ಎನ್ನುತ್ತಾ ಪೊಲೀಸರು ಕೂಗುತ್ತಿದ್ದಾರೆ. ಇದಾವುದರ ಪರಿವೇ ನನಗಿಲ್ಲ. ಕಳೆದ ವರ್ಷದ ಜಾತ್ರೆಯ ಸಂಭ್ರಮದ ನೆನಪಿನಲ್ಲೇ ಭಾರದ ಹೆಜ್ಜೆ ಹಾಕುತ್ತಿದ್ದ ನನ್ನೊಳಗೆ ಎಲ್ಲವೂ ನೆನಪುಗಳ ಅಲೆಗಳೇ,

ದೇವರೇ... ಬೇಜಾರಾಗಿದೆ ಎಂದರೆ ಅವನೂ ನನಗೆ ಸಾಂತ್ವನ ಹೇಳುವ ಸ್ಥಿತಿಯಲ್ಲಿಲ್ಲ, ಇದೆಲ್ಲವೂ ಮನದ ಭಾವನೆ, ಎಂದು ಕೊಳ್ಳುತ್ತಾ...  ನನ್ನ ಮನದ ಆಸೆ ಈಡೇರಿಸು, ಕಾಯಿ, ಕಡುಬು ನೀಡುತ್ತೇನೆ ಎನ್ನುವ ಮನದ ಸ್ವಾರ್ಥದ ಬೇಡಿಕೆ, ದೇವರ ಮುಂದಿಟ್ಟಿದ್ದೇನೆ. ದೇವರೂ ಇದನ್ನೇ ನಡೆಸಿಕೊಡುತ್ತಾನೆ ಎನ್ನುತ್ತಾರೆ, ಅದಕ್ಕೇ ಹರಕೆ ಮುಡಿಪುಗಳು ನಡೆಯುತ್ತವೆ ಎನ್ನುತ್ತಾರೆ. ಮುಂದಿನ ಜಾತ್ರೆಯೊಳಗೆ ನೀನು ನನ್ನ ಬಾಳಲ್ಲಿ ಬಂದರೆ ಒಟ್ಟಿಗೆ ತೇರಿನಲ್ಲಿ ನೆನಪಿನ ಜಾತ್ರೆಯೊಂದಿಗೆ ಪಾಲ್ಗೊಳ್ಳೋಣ... ಅನ್ನೋ ಆಸೆ ನನ್ನದು. ಈಡೇರಿಸುತ್ತೀಯಾ... ಪ್ಲೀಸ್‌... ಕಣೋ...

ನಿನ್ನ ಪ್ರೀತಿಯ,

Rating
No votes yet