ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷವಾಗಿಬಿಡಬೇಕು ಲೇಖಕ
ಓದುಗನಿಗೆ ಲೇಖಕ ಸುಲಭಕ್ಕೆ ಸಿಕ್ಕಬಾರದು.
ಯಾವುದೋ ಮದುವೆ ಸಮಾರಂಭದಲ್ಲಿ ಆಗಷ್ಟೇ ಪರಿಚಯವಾದ ವ್ಯಕ್ತಿಯ ಜೊತೆ ಶತಮಾನಗಳಷ್ಟು ಹಿಂದಿನ ಪರಿಚಯದಂತೆ ಮಾತನಾಡಲು ಶುರುಮಾಡಿಬಿಡುವಂತೆ ಲೇಖಕನ ಜೊತೆಗಿನ ಪರಿಚಯ ತಿರುಗಿಬಿಡಬಾರದು.
ಒಂದು ಕತೆಯೋ, ಪುಸ್ತಕವೋ ಓದಿದ ಕ್ಷಣಕ್ಕೆ ಕವಿ, ಕತೆಗಾರನ ವಿಳಾಸವೋ, ನಂಬರೋ ಈಗಂತೂ ಸುಲಭಕ್ಕೆ ಸಿಕ್ಕುಬಿಡುತ್ತದೆ. ಅಲ್ಲಿಗೆ ಓದುಗ ಹೊಗಳುಭಟನಾಗಿ ರೂಪಾಂತರ ಹೊಂದುವ ಪ್ರಕ್ರಿಯೆ ಅನಿವಾರ್ಯವಾಗಿ ಶುರುವಾಗುತ್ತದೆ. ಅಥವಾ ಲೇಖಕ ಅಂತಹದೊಂದು ಅನಿವಾರ್ಯತೆಯನ್ನು ಇವತ್ತಿನ ದಿನಮಾನದಲ್ಲಿ ಖಡಾಖಂಡಿತವಾಗಿ ನಿರೀಕ್ಷಿಸುತ್ತಿದ್ದಾನೆಯೇ? ಬೆಂಗಳೂರಿನಲ್ಲಿರುವ ಈ ಒಂದೂವರೆ ವರ್ಷದಲ್ಲಿ ಹಾಗನ್ನಿಸುತ್ತಿದೆ. ಯಾಕೋ..???
ನಮ್ಮಿಷ್ಟದ ಲೇಖಕ, ಕವಿ, ಕತೆಗಾರನ ಪರಿಚಯ ಮಾಡಿಕೊಳ್ಳಲೇಬಾರದು, ಪರಿಚಯವಿದ್ದರೂ ಆದಷ್ಟು ದೂರದಲ್ಲಿದ್ದು ಬಿಡಬೇಕು ಅಂತನ್ನಿಸುತ್ತದೆ. ಆತ ಭವಿಷ್ಯದಲ್ಲಿ ಸೊಗಸಾದ ಪದ್ಯ ಬರೆಯುತ್ತಾನೆ, ನನ್ನ ಬಾಲ್ಯವನ್ನು ಮತ್ತೆ ಹೆಣೆಯಲು, ನೆನೆಯಲು ಪೂರಕವಾಗುವಂತೆ ಅವನ ಬಾಲ್ಯವನ್ನು ಕಟ್ಟಿಕೊಡುವ ಕತೆಯೊಂದನ್ನು, ಅಥವಾ ನನಗೆ ಪರಿಚಯವಿರದ ವಾತಾವರಣವನ್ನು ಪರಿಚಯಿಸಿ ಕೊಡುತ್ತಾನೆ ಅಂತ ಕಾಯುತ್ತಾ ಕೂರಬೇಕು. ಮಳೆ, ವಿರಹ, ಪ್ರಿಯತಮೆಯ ಸಲ್ಲಾಪ, ಸಂಗೀತದಲ್ಲೇ ಕಳೆದು ಹೋಗಿರುವ ಜಯಂತ್ ಕಾಯ್ಕಿಣಿಯ ಹೊಸ ಕತೆಗೆ ಓದುಗ ಕಾದುಕೂತಂತೆ ಸನ್ನಿವೇಶ ಸೃಷ್ಟಿಯಾಗಿಬಿಡಬೇಕು. ದೇಶಕಾಲದಲ್ಲಿ ಪ್ರಿಂಟಾಗಿದ್ದ ಜಯಂತರ "ಚಾರ್ಮಿನಾರು" ನಂತರ ಹೊಸದ್ಯಾವ ಕತೆ ತೆರೆದುಕೊಳ್ಳುತ್ತದೆ ಎಂದು ವರ್ಷಗಳಿಂದ ಕಾದುಕುಳಿತಿದ್ದೇವಲ್ಲ ಹಾಗೇ ಇರಬೇಕು ಓದುಗ. ಅದೇ ಚಡಪಡಿಕೆ, ಅದೇ ಕಾತರ, ಅದೇ ನಿರೀಕ್ಷೆ. ಪರಿಚಯವಾಗಿಬಿಟ್ಟರೆ ಬಿಟ್ಟರೆ ಮುಗೀತು ಬಿಡಿ. ಹೊಸ ಕಥೆ ಯಾವಾಗ ಎಂದು ಜಯಂತ್ ಸಿಕ್ಕಾಗಲೆಲ್ಲಾ ಕೇಳಿ ಪ್ರಾಣ ತಿನ್ನುತ್ತೇವೆ. ಜೊತೆಗೆ ಹೊಸ ಕತೆ ಬರೆದಿಲ್ಲವಲ್ಲ ಎನ್ನುವ ಪಾಪಪ್ರಜ್ಙೆಯನ್ನೋ, ಧಿಡೀರ್ ಎಚ್ಚರವನ್ನೋ ಲೇಖಕಕನಲ್ಲಿ ಹುಟ್ಟುಹಾಕಿ ಭಯಂಕರ ಓದುಗರಾಗಿಬಿಡುತ್ತೇವೆ. ಅಲ್ಲಿಗೆ ನಮಗೂ ಸೋನಿ ಚಾನೆಲ್ಲಿನಲ್ಲಿ ಪ್ರಸಾರವಾಗುವ ಸಿಐಡಿ ಧಾರಾವಾಹಿಗೂ ಹೆಚ್ಚಿನ ವ್ಯತ್ಯಾಸ ಉಳಿದಿರುವುದಿಲ್ಲ.
ಲೇಖಕ ಓದುಗನಿಗೆ ಅಚಾನಕ್ಕಾಗಿ ಸಿಕ್ಕಿಬಿಡಬೇಕು, ಪ್ರತ್ಯಕ್ಷವಾಗಿಬಿಡಬೇಕು ದೇವರಂತೆ ಎನ್ನುವುದೇ ಇಲ್ಲಿನ ವಾದ. ಕತೆಯ ಮಧ್ಯದಲ್ಲೆಲ್ಲೋ ಅನಿರೀಕ್ಷಿತ ತಿರುವು ಗೋಚರಿಸಿದಾಗ "ಓ...ಮುಂದಿನ ಓದು ಇನ್ನೂ ಮಜಾ ಇದೆ" ಎಂದು ಆಸ್ಥೆಯಿಂದ ಉಳಿದ ಪುಟಗಳನ್ನು ಓದುತ್ತಾ ಕೂರುವಂತಹ ಕುತೂಹಲದಂತಿರಬೇಕು ಲೇಖಕನ ಅಚಾನಕ್ ಭೇಟಿ.
ಗಡಿಬಿಡಿಯ ಒಂಭತ್ತು ಗಂಟೆಯ ಹೊತ್ತಲ್ಲಿ ರಶ್ಶಾದ ಬಿಎಂಟಿಸಿಯಲ್ಲಿ ಒಂದೂವರೆ ಕಾಲಲ್ಲಿ ನಿಲ್ಲುತ್ತಾ ಮೆಜೆಸ್ಟಿಕ್ ಕಡೆಗೆ ಹೋಗಬೇಕಾದರೆ, ಬಸವನಗುಡಿ ಪೋಲೀಸ್ ಸ್ಟೇಶನ್ನಿಂದ ಗಾಂಧೀಬಜಾರಿನ ಕಡೆಗೆ ಹೋಗುವ ರಿಕ್ಷಾದ ಒಳಗಿರುವ ವ್ಯಕ್ತಿಯ ಕಂಡ ಕೂಡಲೇ "ಹೇ ಅದು ಕಿ.ರಂ ಅಲ್ವಾ" ಎಂದು ಮನಸ್ಸು ಗಟ್ಟಿಯಾಗಿ ಹೇಳಬೇಕು. ವಿಮರ್ಶೆ ನೆನಪಾಗಬೇಕು. ಕಾವ್ಯದ ಕುರಿತ ಅವರ ಮಾತುಗಳು ಥಟ್ ಅಂತ ಕಣ್ಣೆದುರು ಬಂದು ನಿಲ್ಲಬೇಕು.
ಎಸ್.ದಿವಾಕರ್ ಹೊಸ ಮಯೂರ ತಿರುವಿ ಹಾಕುತ್ತಾ ಸುಚಿತ್ರಾದ ಎದುರಿನ ಟೀ ಅಂಗಡಿ ಹತ್ರ ನಿಂತಿರಬೇಕಾದರೆ ಅವರನ್ನು ದೂರದಲ್ಲೇ ನಿಂತು ನೋಡಬೇಕು. ಅವರ ಒಂದಷ್ಟು ಉತ್ತಮ ಅನುವಾದಗಳು, ಕತೆಗಳು ನೆನಪಾಗುತ್ತಾ, ಮರೆತ ಮತ್ತೊಂದಷ್ಟನ್ನು ನೆನಪಿಸಬೇಕು. ಮರೆತು ಹೋದ ಅವರ ಕತೆಯೊಂದನ್ನು ಅದೇ ದಿನ ರೂಮಿಗೆ ಹೋದಾಗ ಹುಡುಕುತ್ತಾ ನಿದ್ದೆಯಿಲ್ಲದೇ ಕಳೆಯಬೇಕು. ಸಿಕ್ಕರೆ ಮತ್ತೊಮ್ಮೆ ಓದಿ ಖುಷಿಯಾಗಬೇಕು.
ಚಿಕ್ಕಲಸಂದ್ರ- ಉತ್ತರಹಳ್ಳಿ ರಸ್ತೆಯಲ್ಲಿ ರಾತ್ರಿ ಎಂಟರ ಹೊತ್ತಿಗೆ ಬಸ್ಸಿಳಿದು ರೂಂ ಕಡೆ ಹೊರಟಾಗ ಚಂದ್ರಶೇಖರ ಆಲೂರು ಟ್ರ್ಯಾಕ್ ಪ್ಯಾಂಟು ಹಾಕಿಕೊಂಡು ನಮ್ಮೆದುರೇ ಹಾದುಹೋದ ಹೊತ್ತಿನಲ್ಲಿ ನಮ್ಮೊಳಗೆ ಹುಟ್ಟುವ ಪುಳಕಕ್ಕೆ ಅಕ್ಷರಗಳ ಹಂಗಿಲ್ಲ. ಮಾತಿನ ಹಂಗಿಲ್ಲ. ಸ್ಮೃತಿಪಟಲದಲ್ಲಿ ವೆರೋನಿಕಾಳದ್ದೇ ಒಲಿದಂತೆ ಹಾಡುವ ಚಿತ್ರ.
ಈಗಂತೂ ಎಲ್ಲೆಡೆಯೂ ಲೇಖಕ ಸುಲಭಕ್ಕೆ ಸಿಕ್ಕುಬಿಡುತ್ತಾನೆ ಬಿಡಿ. ಬೆಂಗಳೂರಿನ ಪ್ರಶಸ್ತಿ, ಗೋಷ್ಠಿ, ಸೆಮಿನಾರು, ಸಾಹಿತ್ಯ ಚರ್ಚೆ, ಪುಸ್ತಕ ಬಿಡುಗಡೆಯ ನಿತ್ಯ ಗೊಂದಲಪುರಕ್ಕಿಂತ ಹೀಗೇ ಬೆಂಗಳೂರಿನ ಫುಟ್ಪಾತು, ಅನಾಮಿಕ ಅಂಗಡಿಯ ಮುಂಭಾಗ, ಯಾವುದೋ ನಾಟಕದ ಪ್ರದರ್ಶನದ ವೇಳೆ ಪ್ರೇಕ್ಷಕರ ನಡುವೆ ನಮ್ಮ ಪ್ರೀತಿಯ ಲೇಖಕ ಕಣ್ಣಿಗೆ ಕಾಣಿಸಿಕೊಂಡರೆ, ಓದುಗನಿಗೆ ಪ್ರಿಯತಮೆಯನ್ನೇ ಕಂಡಷ್ಟು ಪುಳಕವಾಗುತ್ತದೆ. ಆತನನ್ನು ಆ ಫಳಿಗೆಗಳಲ್ಲಿ ಓಡಿಹೋಗಿ ಮಾತಾಡಿಸೋಣ ಎನ್ನುವುದಕ್ಕಿಂತ ಸುಮ್ಮನೆ ನಿಂತು ನೋಡುವುದು, ಆತನ ಬರಹಗಳ ಮಳೆಯ ನೆನಪಲ್ಲಿ ನೆನೆಯುವುದೇ ಖುಷಿ. ಹಾಗೆ ಓದುಗ ಸುಮ್ಮನೆ ನಿಂತು ನೋಡುವ ಕ್ಷಣಗಳಲ್ಲೇ ಲೇಖಕನೊಬ್ಬನ ಬರಹದ ಶಕ್ತಿಯ ಸಾರ್ಥಕತೆಯೂ ಅಡಗಿದೆಯೇನೋ...ಯಾರಿಗೆ ಗೊತ್ತು. ಅದಕ್ಕೇ ಇರಬೇಕು ಅಕ್ಷರವೆಂಬ ಬಣ್ಣದ ಹುಡಿ ಒಮ್ಮೆ ಕೈ ತಾಕಿದರೆ ಸಾಕು, ಮೈಮನ ರಂಗೋಲಿಯಾಗುತ್ತದೆ.
ಕತೆಗಾರ ವ್ಯಾಸರು ಹೇಳುತ್ತಿದ್ದ ಥೇಟಾನುಥೇಟ್ "ಬೆಂಗಳೂರಿಗರ" ಎಲ್ಲಾ ಲಕ್ಷಣಗಳನ್ನು ಹೊಂದಿರುವ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಕಂಡುಬರುವ ಅದದೇ ರಿಪೀಟೆಡ್ ಹೊಗಳಿಕೆ, ಉತ್ತಮ, ಅತ್ಯುತ್ತಮ ಎಂದು ಹೇಳಲೇ ಬೇಕಾದ ಅನಿವಾರ್ಯತೆ ಹಾಗೂ ಪ್ರೇಕ್ಷಕನಾಗಿ ಹೋದರೆ ಇಂಥದ್ದನ್ನೆಲ್ಲಾ ಕೇಳಲೇಬೇಕಾದ ರಿಯಾಲಿಟಿ ಶೋಗಳ ಫಾರ್ಮ್ಯಾಟ್ ಗಿಂತ ಓದುಗನಿಗೆ ದಾರಿ ಮಧ್ಯೆ ಅಚಾನಕ್ಕಾಗಿ ಪ್ರತ್ಯಕ್ಷನಾಗಿ ಕಣ್ಮರೆಯಾಗುವ ಲೇಖಕನೇ ವಾಸಿ. ಕಡೇ ಪಕ್ಷ ಆತನ ಕತೆಯ, ಕವಿತೆಯ ಪುನರ್ ಮನನ, ಪುನರ್ ಓದು ಓದುಗನಿಗೆ ಸಾಧ್ಯ.
ಅಂತಹ ಅನಾಮಿಕ ಭೇಟಿಗಳನ್ನು, ಪ್ರತ್ಯಕ್ಷಗಳನ್ನು ಸಾಧ್ಯವಾಗಿಸುವ ಬೆಂಗಳೂರಿನ ಟ್ರಾಫಿಕ್ಕು, ಬಿಎಂಟಿಸಿ, ಫುಟ್ಪಾತು, ಅಂಗಡಿ ಮುಂಭಾಗ ಇತ್ಯಾದಿಗಳಿಗೆ ಮನದುಂಬಿ ನಮಸ್ಕಾರ.
Comments
ಉ: ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷವಾಗಿಬಿಡಬೇಕು ಲೇಖಕ