ಗಾಂಧೀಜಿ ಕಂಡುಕೊಂಡ ಲೈಂಗಿಕತೆ

ಗಾಂಧೀಜಿ ಕಂಡುಕೊಂಡ ಲೈಂಗಿಕತೆ

ಬರಹ

ಬಡಕಲು ಶರೀರದ, ತುಂಡು ಬಟ್ಟೆಯ, ಬ್ರಿಟಿಷರು "ಫಕೀರ ಎಂದು ಕರೆಯುತ್ತಿದ್ದ ಗಾಂಧಿ ಒಂದು ಅಪರೂಪದ ವ್ಯಕ್ತಿತ್ವ.   ಬಿಳಿಯರ ದಾಸ್ಯದಿಂದ ಅಹಿಂಸಾತ್ಮಕವಾಗಿ ನಮಗೆ ಮುಕ್ತಿ ಕೊಡಿಸಿದ ಗಾಂಧೀಯ ಬಗ್ಗೆ ಕೆಲವರಿಗೆ ಪೂಜ್ಯ, ಗೌರವ ಭಾವನೆ ಇದ್ದರೆ  ಇನ್ನೂ ಕೆಲವರಿಗೆ ಅವರ ಆದರ್ಶ ಮತ್ತು ಆಶಯಗಳ ಬಗ್ಗೆ ತಕರಾರು. ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಚರಿತ್ರೆಯ ಅಧ್ಯಾಪಕರು ಗಾಂಧೀಯವರನ್ನು ಏಕವಚನದಲ್ಲಿ ಸಂಬೋಧಿಸಿ ತಮ್ಮದೇ ಆದ ರಾಜಕೀಯ ಆಶಯಗಳ ಚರಿತ್ರೆ ಓದುತ್ತಿದ್ದಾಗ ಸಿಟ್ಟಿಗೆದ್ದಿದಿದೆ. ಮನೆಗಳಲ್ಲಿ ನಾವು ಕಲಿತಿದ್ದು ಹಿರಿಯರನ್ನು ಗೌರವಿಸಬೇಕು, ಬಹುವಚನದಲ್ಲಿ ಕರೆಯಬೇಕು ಎಂದು. ಅದರಲ್ಲೂ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾ ಚೇತನ ಎಂದರಂತೂ ಏಕವಚನ ದೂರವೇ ಉಳಿಯಿತು. ದೊಡ್ಡವನಾಗುತ್ತಾ ಗಾಂಧಿಯ ಬಗ್ಗೆ ಇನ್ನೂ ಚಿತ್ರ ವಿಚಿತ್ರ ಸಂಗತಿಗಳು ಕೇಳಲು ಸಿಕ್ಕವು. ಗಾಂಧೀ ರಾಜಕಾರಣದ ಬಗ್ಗೆ ಅವರ ಉದ್ದೇಶಗಳ ಬಗ್ಗ್ಗೆ ಹಲವರಿಗೆ ಹಲವು ರೀತಿಯ ಅಭಿಪ್ರಾಯ. ವಿಚಿತ್ರವೆಂದರೆ ಗಾಂಧೀ ಬಗ್ಗೆ ದೇಶದ ಒಳಗೆ ಮಾತ್ರ ವಿರೋಧವಲ್ಲ, ಅವರು ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸುತ್ತಿದ್ದಾರೆಂದು, ಮುಸ್ಲಿಂ  ದೇಶವನ್ನು ಹುಟ್ಟುಹಾಕಲು ಕಾರಣಕರ್ತರಾದರೆಂದು ಅವರನ್ನು ವಧಿಸಿದ ನಾಥೂರಾಂ ಗೋಡ್ಸೆಯ ಅಭಿಪ್ರಾಯದಿಂದ ಹಿಡಿದು ಪಾಕಿಸ್ತಾನದ ದಿವಂಗತ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ವರೆಗೂ ಅವರ ಬಗ್ಗೆ ಸಂಶಯ. ಭುಟ್ಟೋ ತಾವು ಬರೆದ  ಪುಸ್ತಕವೊಂದರಲ್ಲಿ ಗಾಂಧೀಜೀ ಹೀಗೆ ಹೇಳಿದ್ದರೆಂದು ಉಲ್ಲೇಖಿಸಿದ್ದರು. "ಒಂದು ವೇಳೆ ಹಿಂದೂಧರ್ಮ ಭಾರತದಿಂದ ಅಥವಾ ಏಷಿಯಾ ಖಂಡದಿಂದ ಮೂಲೋತ್ಪಾಟನೆಯಾದರೆ ಹಿಂದೂ ಧರ್ಮದ ಕತೆ ಮುಗಿದಂತೆ, ಆದರೆ ಇಸ್ಲಾಂ ಭಾರತದಿಂದ, ಯಾ ಏಶಿಯದಿಂದಲೇ ಮೂಲೋತ್ಪಾಟನೆಯಾದರೂ ಅದು ಬೇರೆಲ್ಲಾದರೂ ಚಿಗುರೊಡೆಯುತ್ತದೆ, ಬೆಳೆಯುತ್ತದೆ" ಎಂದು ಹೇಳಿದ ಗಾಂಧೀಜಿ ಮುಸ್ಲಿಮರು ಭಾರತದಿಂದ ಹೊರದಬ್ಬಲ್ಪಟ್ಟರೆ ಅದು ಸಮರ್ಥನೀಯ ಎನ್ನುವ ಅಭಿಪ್ರಾಯವ ನ್ನು ಹೊಂದಿದ್ದರು ಎಂದು ಬರೆದು ಗಾಂಧೀಜಿಯ ಇಬ್ಬಂದಿತನವನ್ನು ಟೀಕಿಸಿದ್ದರು. ಗಾಂಧಿ ಇಲ್ಲೂ ಸಲ್ಲಲಿಲ್ಲ, ಅಲ್ಲೂ ಸಲ್ಲಲಿಲ್ಲ.

ಗಾಂಧೀ ದೇಶದ ಒಳಗೆ ಮಾತ್ರವಲ್ಲ ವಿಶ್ವದೆಲ್ಲೆಡೆ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಆಫ್ರಿಕಾದ ಮಂಡೇಲಾ ರಿಂದ ಹಿಡಿದು ಅಮೆರಿಕೆಯ ಮಾರ್ಟಿನ್ ಲೂಥೆರ್ ಕಿಂಗ್ ವರೆಗೆ ಮಹನೀಯರಿಗೆ ಗಾಂಧೀ ಆದರ್ಶ ವ್ಯಕ್ತಿ. ಇಂಗ್ಲೆಂಡಿನಿಂದ ಪ್ರಕಟವಾಗುವ independent ಪತ್ರಿಕೆಯಲ್ಲಿ ಗಾಂಧಿಯವರ ಬಗ್ಗೆ ಲೇಖನ ನಿನ್ನೆ ಪ್ರಕಟವಾಯಿತು.  ಸಾಧಾರಣ ರಾಜಕೀಯ ಆಶಯಗಳ ಬಗೆಗಿನ ಲೇಖನವಾಗಿದ್ದರೆ ಆಸಕ್ತಿ ಇರುತ್ತಿರಲಿಲ್ಲವೇನೋ. ಆದರೆ ಇದು ಗಾಂಧೀಯವರ ಲೈಂಗಿಕ ಬದುಕಿನ ಬಗ್ಗೆ ಬರೆದ ಲೇಖನವಾಗಿತ್ತು. ಒಂದು ರೀತಿಯ explosive material. ಇದನ್ನು ನೋಡಿ ನಾನು ಸ್ವಲ್ಪ ಹಿಮ್ಮೆಟ್ಟಿದರೂ ಪೀಯುಸೀ ಯಲ್ಲಿದ್ದಾಗ " intimate sex lives of famous people" ಪುಸ್ತಕದಲ್ಲಿ ಹಿಟ್ಲರ್ ಮಹಾಶಯನ ಲೀಲೆಗಳಿಂದ ಹಿಡಿದು ಗಾಂಧಿಯ ತನಕ ಪ್ರಸ್ತಾಪವಿತ್ತು. ಈಗ ಮತ್ತೊಮ್ಮೆ ಈ ಪೆಡಂಭೂತ ತಲೆ ಎತ್ತಿದ್ದು ನೋಡಿ ಈ ಲೇಖನವನ್ನು ತಮ್ಮೊಂದಿಗೂ ಹಂಚಿ ಕೊಳ್ಳಲು ನಿರ್ಧರಿಸಿದೆ.

ಗಾಂಧೀಜಿ ಕೇವಲ ಒಬ್ಬ ರಾಜಕಾರಣಿ ಯಾಗಿರದೆ ಆಧ್ಯಾತ್ಮಿಕ ವ್ಯಕ್ತಿಯೂ ಆಗಿದ್ದರು. ಮುಸ್ಲಿಂ ಪರ ಎಂದು ಅವರನ್ನು ಧ್ವೇಷಿಸುತ್ತಿದ್ದ ಹಿಂದೂ ಪರ ವ್ಯಕ್ತಿಗಳಿಗಿಂತ ಹೆಚ್ಚು ಸಂಪ್ರದಾಯಸ್ಥರಾಗಿದ್ದರು ಗಾಂಧೀ. ತಮ್ಮ ಆಶ್ರಮದ ಲ್ಲಿ ಭಜನೆ, ವ್ರತ ಗಳಂಥ ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುತ್ತಿದ್ದ ಗಾಂಧೀಜಿಗೆ ಲೈಂಗಿಕ ಬದುಕಿನ ಬಗ್ಗೆ ಒಂದು ರೀತಿಯ ಪಾಪ ಭಾವನೆ ಇತ್ತು. ತಮ್ಮ ಪ್ರೀತಿಯ ತಂದೆ ಕೊನೆಯುಸಿರೆಳೆಯುತ್ತಿದ್ದರೂ ಅದರ ಮಧ್ಯೆ ಎದ್ದು ಹೋಗಿ ತಮ್ಮ ಲೈಂಗಿಕ ಚಪಲ ತೀರಿಸಿ ಕೊಳ್ಳಲು ಹೋಗಿದ್ದರು. ಆದರೆ ತಮಗೆ ಬೇಕಿದ್ದನ್ನು ಪಡೆದುಕೊಂಡ    ಗಾಂಧೀ ತನ್ನ ತಂದೆಯಯನ್ನು ಕಳೆದುಕೊಂಡಿದ್ದರು.  ಇಲ್ಲಿಂದ ಶುರುವಾಗಿದ್ದು ಗಾಂಧೀಜಿಯ ವೈರಾಗ್ಯ ಭಾವ. ವಿವಾಹಿತರಾದರೂ ಲೈಂಗಿಕ ಕ್ರಿಯೆ ನಡೆಸದೆ ಸನ್ಯಾಸದ ಬದುಕು ನಡೆಸಿ ಎಂದಾಗ ಬಹಳ ಷ್ಟು ಜನ ಹುಬ್ಬೇರಿಸಿದ್ದರು. ಸಹಜ ತಾನೇ. ಮನುಷ್ಯ ಮದುವೆಯಾದ ಕೂಡಲೇ ಜಿಗಿಯುವುದು ಪ್ರಸ್ಥದ ಕೋಣೆಗೆ. ಅದು ಬಿಟ್ಟು ವೃತಾಚರಿಸುತ್ತಾ "ರಘು ಪತಿ ರಾಘವ ರಾಜಾರಾಂ ಎನ್ನುತ್ತ ಇರು ಎಂದರೆ ಜನ ಹುಬ್ಬೆರಿಸದೆ ಇರುತ್ತಾರೆಯೇ, ಅದರಲ್ಲೂ ನೆಹರೂರಂಥ ರಸಿಕ ಮಹಾನರು? ಗಾಂಧೀಜಿಯ ಈ ಹೊಸ ವಾದ ಕೇಳಿದ ನೆಹರೂ ಹೇಳಿದ್ದು " ಅಸ್ವಾಭಾವಿಕ ಮತ್ತು ವಿಕೃತ" ಎಂದು. ಗಾಂಧೀಜಿಯನ್ನು ರಾಷ್ಟ್ರ ಪಿತ ಪಟ್ಟಕ್ಕೆ ಏರಿಸಿದ್ದರಿಂದ ಬಹಳಷ್ಟು ಅಪ್ರಿಯ ವಿಷಯಗಳನ್ನ ಮುಚ್ಚಿ ಹಾಕಲಾಯಿತು. ಹೀಗೆ ಗಾಂಧೀಜಿಯ ಕೆಲವೊಂದು ವಿಷಯಗಳನ್ನು ಒಪ್ಪದವರು ಶಿಷ್ಟಾಚಾರಕ್ಕೆ ಮಣಿದು ಮೌನವಾಗಿದ್ದರೆ ಇನ್ನೂ ಕೆಲವರು ಗಾಂಧೀಜಿಯನ್ನು " ಅತ್ಯಂತ ಅಪಾಯಕಾರಿ ಮತ್ತು ಪಾರ್ಶ್ವವಾಗಿ ಅದುಮಿಟ್ಟ ಕಾಮೋನ್ಮತ್ತ" ಎಂದು ಕರೆದರು. ಅಂದರೆ ಗಾಂಧೀಜಿಯ ಜೀವಿತ ಕಾಲದಲ್ಲೂ ಬಹಳಷ್ಟು ಟೀಕಾಕಾರರು ಅವರನ್ನು ವಿಮರ್ಶಿಸಿದ್ದರು ಎಂದು ನಮಗೆ ಅರಿವಾಗುವುದು.          

ಹೀಗೆ ತಮ್ಮ ತಂದೆಯ ಸಾವಿನ ಸಂದರ್ಭದ ಘಟನೆಯಿಂದ ನೊಂದ ಗಾಂಧೀಜಿ ವೈರಾಗ್ಯದ ಕಡೆ ವಾಲ ತೊಡಗಿ ತಾವೇ ನಡೆಸುತ್ತಿದ್ದ ಪತ್ರಿಕೆಗೆ ಹೀಗೆ ಬರೆದರು. " ವಿವಾಹಿತರಾಗದೆ ಇರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಹಾಗೇನಾದರೂ ಆತ ವಿವಾಹದ ವಿಷಯದಲ್ಲಿ ನಿಜಕ್ಕೂ ನಿಸ್ಸಹಾಯಕನಾದರೆ ತನ್ನ ಪತ್ನಿಯೊಂದಿಗೆ ಲೈಂಗಿಕತೆಯನ್ನು ತ್ಯಜಿಸಬೇಕು". ಇದೊಂಥರಾ ವಿಚಿತ್ರ ನಡವಳಿಕೆಯಾಗಿ ತೋರಿತು ಜನರಿಗೆ. ಹಸಿದವನ ಮುಂದೆ ಮೃಷ್ಟಾನ್ನ ಬಡಿಸಿ ಉಪವಾಸವಿರು ಎಂದಂತೆ. ಆದರೆ ಮನುಷ್ಯನ ಈ ನೈಸರ್ಗಿಕ ಭಾವನೆಗಳನ್ನು ಅದುಮಿಡಲು ಸಾಧ್ಯವಾಗದು ಎನ್ನುವ ಸಾಮಾನ್ಯ ಜ್ಞಾನ ಗಾಂಧೀಜಿಗೆ ಹೇಗೆ ತಪ್ಪಿತೋ ಏನೋ. ಹೀಗೆ ಜನರನ್ನು ಲೈಂಗಿಕತೆಯಿಂದ ದೂರ ಎಳೆಯಲು ಪ್ರಯತ್ನಿಸಿದ ಅವರು ತಮ್ಮಲ್ಲಿ ಸುಪ್ತವಾಗಿ ಅಡಗಿದ್ದ ದಾಹವನ್ನು ಬೇರೆಯದೇ ಆದ ರೀತಿಯಲ್ಲಿ ಅದುಮಿಡಲು ದಾರಿ ಕಂಡು ಕೊಂಡರು. ತಮ್ಮ ಆಶ್ರಮದಲ್ಲಿ ಹೆಣ್ಣು ಗಂಡುಗಳು ಒಟ್ಟಿಗೆ ಸ್ನಾನ ಮತ್ತು ಮಲಗುವುದಕ್ಕೆ (ಲೈಂಗಿಕ ಚಟುವಟಿಕೆ ಖಂಡಿತಾ ಇಲ್ಲ) ಅನುಮತಿ ನೀಡಿ, ಲೈಂಗಿಕತೆ ಕೂಡಿದ ಮುಕ್ತ ಹರಟೆಗಳಿಂದ ಅವರನ್ನು ತಡೆದರು. ಅಷ್ಟೇ ಅಲ್ಲ, ಗಂಡಂದಿರು ತಮ್ಮ ಪತ್ನಿಯರೊಂದಿಗೆ ಯಾವಾಗಲೂ ಏಕಾಂತ ವಾಗಿ ಇರಕೂಡದು ಮತ್ತು ಹಾಗೇನಾದರೂ ಎಡವಟ್ಟಾಗುವ ಭಯವಿದ್ದಲ್ಲಿ ತಣ್ಣೀರಿನ ಸ್ನಾನ ಮಾಡಬೇಕೆಂದು ತಾಕೀತು  ಮಾಡುವುದನ್ನು ಮರೆಯಲಿಲ್ಲ ಮಹಾತ್ಮ.  

ಆದರೆ ಈ ತಾಕೀತು ತಮಗೆ ಅನ್ವಯಿಸಿಕೊಳ್ಳ ಲಿಲ್ಲ ಗಾಂಧೀಜಿ ಎಂದು ಹೇಳುತ್ತಾರೆ ಲೇಖಕ ಆಡಮ್ಸ್. ಗಾಂಧೀಜಿಯವರ ಆಪ್ತ ಸಹಾಯಕರ ಆಕರ್ಷಕ ಸೋದರಿ ಸುಶೀಲ ನಾಯರ್ (ಈಕೆ ಗಾಂಧೀಜಿಯವರ ಖಾಸಗಿ  ವೈದ್ಯೆ ಸಹ) ಗಾಂಧೀಜಿ ಯೊಂದಿಗೆ ಸ್ನಾನವನ್ನೂ ಮಾಡುತ್ತಿದ್ದರು ಮತ್ತು ಒಟ್ಟಿಗೆ ಮಲಗುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಗಾಂಧೀಜಿ ಹೇಳಿದ್ದು "ಸಭ್ಯತೆ ಮೀರದಂತೆ ನಾವೀ ಕೆಲಸ ಮಾಡುತ್ತಿದ್ದದ್ದು, ಮತ್ತು ಆಕೆ ಸ್ನಾನ ಮಾಡುವಾಗ ನಾನು ಕಣ್ಣು ಮುಚ್ಚಿ ಕೊಂಡು ಇರುತ್ತಿದ್ದೆ ಮತ್ತು ಆಕೆ ವಿವಸ್ತ್ರಳಾಗಿದ್ದಳೋ ಎಂದು ನನಗೆ ತಿಳಿಯದು, ಆದರೆ ಸಾಬೂನನ್ನು ಹಚ್ಚಿಕೊಳ್ಳುತ್ತಿದ್ದ ಶಬ್ದ ಮಾತ್ರ ನನಗೆ ಕೇಳಿಸುತ್ತಿತ್ತು". ಈ ರೀತಿಯ ಗಾಂಧೀಜಿಯ "ಪ್ರಯೋಗ" ಗಳು ಆಶ್ರಮದ ಸಹ ನಿವಾಸಿಗಳಲ್ಲಿ ಮತ್ಸರವನ್ನು ಹುಟ್ಟಿಸಿತು ಮಾತ್ರವಲ್ಲ ಇದು ಸ್ವಲ್ಪ ಅತಿಯಾಯಿತೆಂದು ಕೆಲವರಿಗೆ ತೋರಿದರೆ ಗಾಂಧೀಜಿಗೆ ಅನ್ನಿಸಿದ್ದು " ಈ ಪ್ರಯೋಗದ  ಮೂಲಕವೇ ನಿಜವಾದ ದೇಶ ಸೇವೆ ಸಾಧ್ಯ" ಎಂದು. ಈ ರೀತಿಯದಾದ ದೇಶ ಸೇವೆಯ ಮಾದರಿಯನ್ನು ಸಹಿಸದ ಕೆಲವರು ಗಾಂಧೀಜಿ ನಡೆಸುತ್ತಿದ್ದ ಪತ್ರಿಕೆಯನ್ನು  ತೊರೆದರು.

ಆದರೆ ಈ ವಿಷಯಗಳೆಲ್ಲಾ ಗಾಂಧೀಜಿಯ ಸುತ್ತಮುತ್ತಲಿನವರಿಗೆ ತಿಳಿದಿದ್ದರೂ ಗಾಂಧೀಜಿ ಇದರ ಬಗ್ಗೆ ಗೌಪ್ಯತೆ ಯನ್ನು ಪಾಲಿಸಲಿಲ್ಲ. ಮತ್ತು ಇದರ ಬಗ್ಗೆ ತಮ್ಮ ಮಗನಿಗೂ ಪತ್ರದ ಮೂಲಕ ಬರೆದು ತಿಳಿಸಿದ್ದರು. ಹೀಗೆ ನಿರ್ಭಿಡೆಯಿಂದ, ಗೌಪ್ಯತೆ ಪಾಲಿಸದೆ ತನ್ನದೇ ಆದ ವಿಶ್ಲೇಷಣೆ ಗಳನ್ನು ನೀಡುತ್ತಾ ನಡೆದ ಗಾಂಧೀಜಿ ಬಹುಶಃ ಸಾಮಾನ್ಯವಾಗಿ ಸಾಧಾರಣ ಜನರಲ್ಲಿ ಕಾಣಸಿಗುವ ಲೈಂಗಿಕತೆಯಿಂದ ಮುಕ್ತರಾಗಿದ್ದರೋ ಏನೋ. ತಮ್ಮ ಮಗನಿಗೆ ತಮ್ಮ ಈ ಪ್ರಯೋಗ ಗಳ ಬಗ್ಗೆ ಬರೆಯಲು ಗಾಂಧೀಜಿ ಹೇಳಿದರೂ ಪುತ್ರ ಇದಕ್ಕೆ ಸಮ್ಮತಿಸದೆ  ಸಂಬಂಧಿಸಿದವರಿಗೆ ತಾಕೀತನ್ನೂ ಮಾಡಿದರು ಬರೆಯದಂತೆ.  

ಬದುಕಿಗೆ ಎದುರಾಗುವ ಸವಾಲುಗಳನ್ನು ಎದುರಿಸುವತ್ತ  ಬೌಧ್ದಿಕ ದೃಢಚಿತ್ತತೆಯ ಅಗತ್ಯ ಇರುತ್ತದೆ ಮತ್ತು ಇದಕ್ಕಾಗಿ ಕಿರಿ ವಯಸ್ಸಿನ ಮಹಿಳೆಯರನ್ನು ಗಾಂಧೀಜಿ ಉಪಯೋಗಿಸಿಕೊಳ್ಳುತ್ತಿದ್ದರು ಎಂದು ಜಾಡ್ ಆಡಮ್ಸ್ ಹೇಳುತ್ತಾರೆ.

ಮಹಾನ್ ವ್ಯಕ್ತಿಗಳು ತಮ್ಮ ಕಾರ್ಯ ಸಿದ್ದಿ ಗಾಗಿ ತಮ್ಮದೇ ಆದ ಶೈಲಿಯಲ್ಲಿ ಕಾರ್ಯ ತಂತ್ರ ರೂಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅವು ನಮಗೆ ಆಭಾಸವಾಗಿ ಕಂಡರೂ ಮಹಾತ್ಮರಿಗೆ ಹಾಗೆ ತೋರುವುದಿಲ್ಲ. ಗಾಂಧೀಜಿ ತಮ್ಮಲ್ಲಿ ಆಗಾಗ ತಲೆಎತ್ತುತ್ತಿದ್ದ ಕಾಮ, ಕ್ರೋಧ, ಮದ, ಮತ್ಸರಗಳನ್ನು ಗೆಲ್ಲಲು ತಮ್ಮದೇ ಆದ ಮಾರ್ಗ ಅನುಸರಿಸಿದರು. ಉದಾಹರಣೆಗೆ, ಕೇವಲ ಉಪವಾಸ ಸತ್ಯಾಗ್ರಹದಿಂದ ತನ್ನ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟು ವಿಶ್ವವನ್ನು ದಂಗು ಬಿಡಿಸಿದ ಗಾಂಧೀಜಿಯ ಈ ಮಾರ್ಗವನ್ನು ಎಷ್ಟು ಜನ, ಎಷ್ಟು ಮಹನೀಯರು ಅನುಕರಿಸುತ್ತಿದ್ದಾರೆ? ಏಕೆಂದರೆ ಅಹಿಂಸಾತ್ಮಕ ಹೋರಾಟದಲ್ಲಿ ಗಾಂಧೀಜಿಗೆ ಬಲವಾದ ನಂಬಿಕೆ ಇತ್ತು ಮತ್ತು ಆ ನಂಬಿಕೆ ಅವರನ್ನು ಹುಸಿಗೊಳಿಸಲಿಲ್ಲ. ಸಾವಿರಾರು ವರ್ಷಗಳಿಂದ ಮಾನವ ಸಂತತಿಯನ್ನು ಕಾಪಾಡುತ್ತಾ, ಉಳಿಸುತ್ತಾ ಬಂದಿರುವ ವೀರ್ಯದ ಶಕ್ತಿಯ ಬಗ್ಗೆ ಅಪಾರ ವಿಶ್ವಾಸವಿದ್ದ ಗಾಂಧೀಜಿ ಹೇಳಿದ್ದು, "ಗಂಡಿನಲ್ಲಿ ಹರಿಯುವ ಈ ದ್ರವವನ್ನು ಉಳಿಸಿಕೊಳ್ಳುವವರು ಅಜೇಯ ಶಕ್ತಿ ಪಡೆಯುವರು" ಎಂದು.

ಗಾಂಧೀಜಿ ತಮ್ಮ ವೀರ್ಯವನ್ನು ಹಿಡಿದಿಟ್ಟು ಕಾಮವನ್ನು ಗೆಲ್ಲಲು ಯತ್ನಿಸಿ ಯಶಸ್ಸನ್ನು ಸಹ ಪಡೆದರೂ ತಮ್ಮ ಪ್ರೀತಿಯ ದೇಶ ಮಾತ್ರ ಇಬ್ಭಾಗವಾಗುವುದನ್ನು ಈ "ಪ್ರಯೋಗ" ದಿಂದ ತಡೆಗಟ್ಟಲು ಸಾಧ್ಯವಾಗದೆ ಇದ್ದದ್ದು ದೊಡ್ಡ ದುರಂತವೆಂದೇ ಹೇಳಬಹುದು.