ವಿದ್ಯುತ್ ಸಮಸ್ಯೆ:ನೀವೂ ಪವರ್‌ಕಟ್ ಕಡಿಮೆ ಮಾಡಬಹುದು!
ವಿದ್ಯುತ್ ಸಮಸ್ಯೆ:ನೀವೂ ಪವರ್‌ಕಟ್ ಕಡಿಮೆ ಮಾಡಬಹುದು!
ಸೆಕೆಯಿಂದ ಒಣಗಿರುವ ಕರ್ನಾಟಕದಲ್ಲಿ ವಿದ್ಯುಚ್ಛಕ್ತಿಯ ಬರ ಪರಿಸ್ಥಿತಿಯನ್ನು ಅಸಹನೀಯವಾಗಿಸಿದೆ.ದಿನದಿಂದ ದಿನಕ್ಕೆ ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತಿದೆ.ಎಲ್ಲಕಡೆ ವಿದ್ಯುತ್‌ಗೆ ಬೇಡಿಕೆ ಹೆಚ್ಚಿರುವಾಗ ಹೊರಗಿನ ರಾಜ್ಯಗಳಿಂದ ವಿದ್ಯುತ್ ಖರೀದಿಸಿ,ಬೇಡಿಕೆಯನ್ನು ಪೂರೈಸಲೂ ಅಸಾಧ್ಯವಾಗಿರುವ ಪರಿಸ್ಥಿತಿಯಲ್ಲಿ,ವಿದ್ಯುಚ್ಛಕ್ತಿ ಕಂಪೆನಿಯು ನಿಸ್ಸಹಾಯಕವಾಗಿದೆ.ಅವುಗಳಿಗೆ ಶಾಪ ಹಾಕುವ ಬದಲು,ಜನರು ತಮ್ಮ ಬೇಡಿಕೆಯನ್ನು ಮಿತಗೊಳಿಸಿ,ಪರಿಸ್ಥಿತಿ ಕೈಮೀರುವುದನ್ನು ತಡೆಯುವುದು ಅನಿವಾರ್ಯವಾಗಿದೆ.ಅಲಂಕಾರಿಕ ದೀಪಗಳನ್ನು ಬಳಸದಿರುವುದು,ಸಿ ಎಫ್ ಎಲ್,ಎಲ್ ಇ ಡಿ ದೀಪಗಳ ಬಳಕೆ ಮಾಡುವುದು ಅಗತ್ಯ.ಜತೆಗೆ ಮುಂಜಾನೆ ಮತ್ತು ಮುಸ್ಸಂಜೆಯ ನಂತರ ಮಿಕ್ಸಿ,ಗ್ರೈಂಡರ್,ಪಂಪ್,ಇಸ್ತ್ರಿಪೆಟ್ಟಿಗೆ,ವಿದ್ಯುತ್ ಒಲೆ,ಬಿಸಿನೀರಿನ ಗೀಸರುಗಳನ್ನು ಬಳಸದಿರುವ ಮೂಲಕ ಬೇಡಿಕೆ ಕಡಿತಗೊಳಿಸಿ.ಲಿಫ್ಟ್,ವಾತಾನುಕೂಲಿಗಳನ್ನು ಈ ಹೊತ್ತಿನಲ್ಲಿ ಚಾಲೂ ಇಡದಿರುವುದು ಅತ್ಯುತ್ತಮ.ಕಡಿಮೆ ಸಂಖ್ಯೆಯ ದೀಪಗಳ ಬಳಕೆ,ಫ್ಯಾನುಗಳ ಬಳಕೆಯನ್ನು ಮಿತಿಗೊಳಿಸಿ.ವಾಶಿಂಗ್ ಮೆಶೀನ್ ಬಳಕೆ ವಾರದಲ್ಲಿ ಕೆಲವೇ ದಿನ ಮಾಡಿ-ವಿದ್ಯುಚ್ಛಕ್ತಿಯ ಜತೆಗೆ ನೀರಿನ ಬಳಕೆಯನ್ನೂ ಮಿತಿಯಲ್ಲಿಡಬಹುದು.
-------------------------------------------------------------
ಮೈಕ್ರೋಸಾಫ್ಟ್ ಡ್ರೀಮ್‌ಸ್ಪಾರ್ಕ್ ಯಾತ್ರಾ
ಕಂಪ್ಯೂಟರ್ ಬಳಸುವವರಿಗೆ ಮೈಕ್ರೋಸಾಫ್ಟ್ ಕಂಪೆನಿಯ ಬಗ್ಗೆ ಗೊತ್ತೇ ಇರುತ್ತದೆ.ಹೊಸ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ವಿಂಡೋಸ್ 7,ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ತಂತ್ರಾಂಶಗಳು ಸದ್ಯಸುದ್ದಿಯಲ್ಲಿವೆ.ಈ ಕಂಪೆನಿಯು ತನ್ನ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು.ವಿದ್ಯಾರ್ಥಿ ಸಹಭಾಗಿಗಳನ್ನು ನೇಮಿಸಿಕೊಳ್ಳುವ ವಿನೂತನ ತಂತ್ರ ಬಳಸುತ್ತಿದೆ.ವಿದ್ಯಾರ್ಥಿ ಸಹಭಾಗಿಗಳು ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಕೊಡುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಡ್ರೀಮ್‌ಸ್ಪಾರ್ಕ್ ಯಾತ್ರಾ ಎನ್ನುವ ಕಾರ್ಯಕ್ರಮಗಳನ್ನು ಭಾರತದಾದ್ಯಂತ ಹಮ್ಮಿಕೊಂಡಿದ್ದು,ಎಪ್ರಿಲ್ ಐದರಂದು ಒಂದು ದಿನದ ಕಾರ್ಯಕ್ರಮವು ನಿಟ್ಟೆಯ ಎನ್ ಎಂ ಎ ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರಗಲಿದೆ.ರಸಪ್ರಶ್ನೆ,ಹೆಚ್ಚು ಮಂದಿ ನೋಂದಾಯಿಸುವ ಕಾಲೇಜುಗಳಿಗೆ ಪ್ರಶಸ್ತಿಯಂತಹ ಕೊಡುಗೆಗಳಿವೆ.ವಿವರಗಳಿಗೆ http://www.nittedreamsparkyatra.in/ ಅಂತರ್ಜಾಲತಾಣವನ್ನು ನೋಡಬಹುದು.
--------------------------------------------------------------------
ನೋಬೆಲ್ ಬಹುಮಾನಕ್ಕೆ "ಅಂತರ್ಜಾಲ" ಅರ್ಹವೇ?
ಜಗತ್ತಿನ ಚಿತ್ರವನ್ನೇ ಬದಲಿಸಿರುವ ಶತಮಾನದ ತಂತ್ರಜ್ಞಾನದ ಅದ್ಭುತ ಅಂತರ್ಜಾಲಕ್ಕೆ ನೋಬೆಲ್ ಬಹುಮಾನವನ್ನು ಕೊಡಬೇಕು ಎನ್ನುವ ಅಭಿಪ್ರಾಯ ಮೂಡಿಬರುತ್ತಿದೆ.ಈ ಸಲದ ನೋಬೆಲ್ ಬಹುಮಾನಕ್ಕೆ ನಾಮಕರಣಗಳು ನಡೆಯುತ್ತಿದ್ದು,ಈವರೆಗಿನ ಗರಿಷ್ಠ ನಾಮಕರಣಗಳು ಈ ವರ್ಷ ಆಗಿದೆ.ಈಗಾಗಲೆ ಸುಮಾರು ಎರಡುನೂರೈವತ್ತು ನಾಮಕರಣಗಳಾಗಿವೆ.ಅಂತರ್ಜಾಲವನ್ನು ವಾಸ್ತವವಾಗಿಸಿದ ಲ್ಯಾರೀ ರಾಬರ್ಟ್,ವಿಂಟ್ ಸರ್ಫ್ ಮತ್ತು ಟಿಂ ಬರ್ನೆಸ್ ಲೀ ಅವರುಗಳ ಹೆಸರುಗಳೂ ನಾಮಕರಣಗೊಂಡಿವೆ.ಹೈಟಿ ಭೂಕಂಪ ಪೀಡಿತರಿಗೆ ಅಂತರ್ಜಾಲ ಮೂಲಕ ಒದಗಿದ ಸಹಾಯ,ಇರಾನ್‌ನ ನಿರಂಕುಶ ಪ್ರಭುತ್ವದ ವಿರುದ್ಧ ಹೋರಾಟಕ್ಕೆ ವೇದಿಕೆ ಒದಗಿಸಿದ,ಸದ್ಯದ ಘಟನೆಗಳು ಅಂತರ್ಜಾಲದ ನಾಮಕರಣಕ್ಕೆ ಸ್ಫೂರ್ತಿಯಾಗಿದೆ.ಆದರೆ ವ್ಯಕ್ತಿಗಳಿಗೆ ನೀಡುವ ಬಹುಮಾನವನ್ನು ತಂತ್ರಜ್ಞಾನಕ್ಕೆ ನೀಡುವುದಕ್ಕೆ ವಿರೋಧವೂ ಇದೆ.ಜತೆಗೆ ಅಂತರ್ಜಾಲವು ಒಳಿತು-ಕೆಡುಕುಗಳನ್ನೆರಡನ್ನೂ ಹೊಂದಿದ್ದು,ಇದೊಂದು ತಟಸ್ಥ ಮಾಧ್ಯಮ,ಇದನ್ನು ಪ್ರಶಸ್ತಿಗೆ ಪರಿಗಣಿಸಬಾರದು ಎಂದು ವಾದಿಸುವವರೂ ಇದ್ದಾರೆ.
-----------------------------------------------------------
ಮಿಂಚಂಚೆಯನ್ನು ಕಾದಿಡಿ,ಅಳಿಸಬೇಡಿ ಎಂದ ಜಿಮೇಲ್‌ಗೆ ಈಗ ಏಳು
ಇತರ ಮಿಂಚಂಚೆ ಸೇವೆಗಳು ಒದಗಿಸುತ್ತಿದ್ದ ಸ್ಮರಣಸಾಮರ್ಥ್ಯದ ನಲುವತ್ತು ಪಟ್ಟು ಹೆಚ್ಚು ಅವಕಾಶ ನೀಡುವ ಮೂಲಕ,ಮಿಂಚಂಚೆಗಳನ್ನು ಅಳಿಸಿಹಾಕದೆ ಕಾದಿಡಿ ಎನ್ನುವ ಸಂದೇಶ ನೀಡಿದ ಜಿಮೇಲ್ ಈಗ ಆರುವರ್ಷಗಳನ್ನು ಪೂರೈಸಿದೆ.ಒಂದೇ ವಿಷಯದ ಬಗ್ಗೆ ನಡೆಸಿದ ಮಿಂಚಂಚೆ ವಿನಿಮಯವನ್ನು ಒಟ್ಟಿಗೆ "ಸಂಭಾಷಣೆ"ಯಂತೆ ಒದಗಿಸಿದ ಮೊದಲ ಸೇವಾದತೃ ಜಿಮೇಲ್ ಆಗಿತ್ತು.ಕಳೆದವಾರವಷ್ಟೇ ತನ್ನ ವಿನೂತನ ಸೇವೆಯಲ್ಲಿ ಜಿಮೇಲ್, ಮಿಂಚಂಚೆ ಖಾತೆಯು ದುರುಪಯೋಗವಾಗುತ್ತಿರುವ ಅನುಮಾನ ಬಂದೊಡನೆ,ಅದನ್ನು ಬಳಕೆದಾರನ ಗಮನಕ್ಕೆ ತರುವ ಕೆಲಸವನ್ನೂ ಮಾಡಲಿದೆ.ಬಳಕೆದಾರನು ಭಾರತದಲ್ಲಿ ವಾಸವಾಗಿರುವವನಾಗಿದ್ದು,ಖಾತೆಯು ಬೇರೆಡೆ ಬಳಕೆಯಾದರೆ,ಅದರ ಹಿಂದೆ ಹ್ಯಾಕರುಗಳ ಕೈಯಿರಬಹುದೆಂಬ ಗುಮಾನಿ ವ್ಯಕ್ತಪಡಿಸಿ,ಅವುಗಳ ವಿವರಗಳನ್ನು ನೀಡಿ ಬಳಕೆದಾರನ ಗಮನ ಸೆಳೆಯುವ ಕೆಲಸವನ್ನು ಜಿಮೇಲ್ ಮಾಡಲಿದೆ.
--------------------------------------------------------------
ಐಪ್ಯಾಡ್:ಲ್ಯಾಪ್‌ಟಾಪ್‌ಗೆ ಖೋ ಕೊಡಲಿದೆಯೇ?
ಎಪ್ರಿಲ್ ಮೂರರಂದು ಐಪ್ಯಾಡ್ ಸಾಧನವನ್ನು ಬಿಡುಗಡೆಗೊಳಿಸಿದ ಐಪ್ಯಾಡ್,ಐಪೋಡ್-ಐಪೋನ್‌ಗಳಂತೆ ಇದೂ ಜನರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಬಹುದು ಎಂದು ಆಶಿಸಿದ್ದಾರೆ.ಅಂತರ್ಜಾಲ,ಮಿಂಚಂಚೆ,ಇ-ಪುಸ್ತಕ,ಸಂಗೀತ,ವಿಡಿಯೋ ಮತ್ತು ಚಿತ್ರಗಳು ಇವೆಲ್ಲವುಗಳಿಗೂ ಐಪ್ಯಾಡ್ ಹೇಳಿ ಮಾಡಿಸಿದ್ದು ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ತಂತ್ರಜ್ಞಾನ ವಿಮರ್ಶಕರ ಅಭಿಪ್ರಾಯವಾಗಿದೆ.ಇದು ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡುವ ಬಹುಕಾರ್ಯಪಟುತ್ವವನ್ನು ಹೊಂದಿಲ್ಲದಿದ್ದರೂ,ಲ್ಯಾಪ್‌ಟಾಪಿಗೆ ಸ್ಪರ್ಧೆ ನೀಡಲು ಸಮರ್ಥವಾಗಿದೆ ಎಂದು ಇನ್ನಿತರರ ಅಭಿಪ್ರಾಯವಾಗಿದೆ.ವೆಬ್‌ಕ್ಯಾಮ್ ಇಲ್ಲವಾದ್ದು ಒಂದು ಪ್ರಮುಖ ಕೊರತೆಯಾದರೆ,ಫ್ಲಾಶ್ ತಂತ್ರಜ್ಞಾನಕ್ಕೆ ಬೆಂಬಲ ಲಭ್ಯವಿಲ್ಲವಾದ ಕಾರಣ,ಅವನ್ನು ಬಳಸುವ ಹಲವಾರು ಅಂತರ್ಜಾಲ ತಾಣಗಳನ್ನು ಪ್ರದರ್ಶಿಸುವಲ್ಲಿ ಐಪ್ಯಾಡ್ ಸಮಸ್ಯೆ ಎದುರಿಸುತ್ತದೆ ಎಂದು ಟೀಕಾಕಾರರ ಅನಿಸಿಕೆ.
-----------------------------------------------------------
ಶರವೇಗದ ಅಂತರ್ಜಾಲ ಒದಗಿಸುವ ದಕ್ಷಿಣಕೊರಿಯಾ
ಅಮೆರಿಕಾದಲ್ಲಿ ಲಭ್ಯವಿರುವ ಅಂತರ್ಜಾಲದ ವೇಗಕ್ಕಿಂತ ಧಿಕ ವೇಗದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ರಾಷ್ಟ್ರವೆಂದರೆ,ದಕ್ಷಿಣಕೊರಿಯಾ ಆಗಿದೆ.ಅಲ್ಲಿ ಅಂತರ್ಜಾಲದ ಸಾಮಾನ್ಯವೇಗದ ಸಂಪರ್ಕ ಮಾಸಿಕ ಮೂವತ್ತು ಡಾಲರು ಬೆಲೆಗೇ ಲಭ್ಯ.ಅಮೆರಿಕಾದಲ್ಲಿ ಅದಕ್ಕೆ ನಲ್ವತ್ತೈದು ಡಾಲರು ತೆರಬೇಕು.ಸೇವೆ ಒದಗಿಸುವವರ ನಡುವಣ ಹೆಚ್ಚಿನ ಸ್ಪರ್ಧೆ ,ಸ್ವಭಾವತ: ಅಧಿಕ ವೇಗಿಗಳೂ ಆದ ಕೊರಿಯನ್ನರ ಮನೋಭಾವ,ಅಲ್ಲಿನ ರಾಜಕೀಯ ಸ್ಥಿತಿಗತಿಗಳು ಅಗ್ಗದ ಅಂತರ್ಜಾಲಕ್ಕೆ ಕಾರಣ ಎನ್ನುವ ಅಭಿಪ್ರಾಯವಿದೆ.