ಸತ್ಯ-ದರ್ಶನ

ಸತ್ಯ-ದರ್ಶನ

ಬರಹ

ಇದು ಮಾರ್ಚ್ ೨೫ ೨೦೧೦ ರ ತರಂಗದಲ್ಲಿ ಸಂಪಾದಕಿ ಸಂಧ್ಯಾ ಪೈ ಅವರ ಲೇಖನ
ನಂಬಿಕೆ ಮತ್ತು ಸತ್ಯದ ಬಗ್ಗೆ ಒಂದು ಒಳ್ಳೆಯ ಲೇಖನ ಸಂಧ್ಯಾ ಪೈ ಬರೆದಿರುವುದನ್ನು ಸಂಪದಿಗರಿಗೂ ತಲುಪಿಸೋಣವೆಂದು ಇಲ್ಲಿಡುತ್ತಿದ್ದೇನೆ.

ಬಿಂಬಸಾರ ಮಗಧ ರಾಜ್ಯವಾಳುತ್ತಿದ್ದ ಕಾಲ. ಜೈನಮತ ಪ್ರತಿಪಾದಕ ಮಹಾವೀರ ಆ ದಾರಿಯಾಗಿ ಪಯಣಿಸುತ್ತಿದ್ದ. ವಿಶ್ರಾಂತಿಗೆಂದು ಊರ ಹೊರಗಿನ ಮರಗಳ ತೋಪಿನಲ್ಲಿ ಬೀಡು ಬಿಟ್ಟಿದ್ದ. ಪ್ರತಿದಿನ ಬೆಳಿಗ್ಗೆ-ಸಂಜೆ ಜನಸಾಗರ ಆ ತೋಪಿನೆಡೆಗೆ ಹೋಗುವುದನ್ನು ರಾಜ ಗಮನಿಸಿದ.
ಬಿಂಬಸಾರನಿಗೆ ಆಶ್ಚರ್ಯವಾಯ್ತು. ದೇಶದ ರಾಜ ಹೇಳಿಕಳಿಸಿದರೂ ಬರಲೊಲ್ಲದ ಜನ, ಒಬ್ಬ ಮುನಿಯನ್ನು ಕಾಣಲು ಹೋಗುವುದು ಅವನಲ್ಲಿರುವ ವಿಶೇಷತೆಯನ್ನು ತಿಳಿಯಲು ಕುತೂಹಲವಾಯ್ತು.
ಕಡೆಗೆ ತಿಳಿದು ಬಂದದ್ದು ಮುನಿಗೆ ಸತ್ಯ-ದರ್ಶನವಾಗಿದೆ ಅವರು ಮಹಾತ್ಮರು ಎಂಬ ವಿಷಯ. ರಾಜನಲ್ಲವೆ ಹೇಗಾದರೂ ಸತ್ಯವನ್ನು ತನ್ನದಾಗಿಸಿಕೊಳ್ಳಬೇಕೆಂಬ ಯೋಚನೆ ತಲೆಗೆ ಹೊಕ್ಕೊಡನೆಯೆ ತನ್ನ ಮಂತ್ರಿಗಳನ್ನು ಹೊನ್ನಿನ ತಟ್ಟೆಯೊಂದಿಗೆ ಮುನಿಯ ಬಳಿಗೆ ಅಟ್ಟಿದ. ಇವರನ್ನು ನೋಡಿ ಮಹಾವೀರ ನಸುನಕ್ಕ. ಮಂತ್ರಿಗಳು ಬರಿಗೈಲಿ ಮರಳಿದರು. ಸರಿ ಸ್ವತಃ ಚಕ್ರವರ್ತಿಯೆ ಹೊರಟ ಸತ್ಯ ತರಲು. ಅವನ ಹಿಂದೆ ಹೊನ್ನು ತುಂಬಿದ ಗಾಡಿ ಹೊರಟಿತು ಸತ್ಯ ಖರೀದಿಸಲು. ಎಲ್ಲವನ್ನೂ ಮುನಿಯ ಪದತಲದಲ್ಲಿಟ್ಟು ಬಿಂಬಸಾರ ಬೇಡಿಕೆ ಮುಂದಿಟ್ಟ. ಮುನಿಗಳು ಇವನನ್ನು ನೋಡಿ ನಸುನಕ್ಕರು.ಸರಿ ಬಿಂಬಸಾರ ಇದು ಸಾಕಾಗಲಿಲ್ಲವೆಂದು ಎಂದು ಕೊಂಡ ಮತ್ತಷ್ಟು ಬಂತು ಹೊನ್ನಿನ ಗಾಡಿಗಳು. ಉಹೂಂ ಮುನಿ ಈಗಲೂ ನಸುನಕ್ಕರು. ಕಡೆಗೆ ಚಕ್ರವರ್ತಿ ತನ್ನ ಪಟ್ಟದ ಕತ್ತಿ ಮುದ್ರೆಯುಂಗರ ಅವರ ಮುಂದಿಟ್ಟು ಈಗಲಾದರೂ ಸತ್ಯ ದಯಪಾಲಿಸಿ ಎಂದ.
ಈಗ ಮುನಿಗಳು ಬಾಯಿಬಿಟ್ಟರು ರಾಜನ್ ಸತ್ಯವನ್ನು ಹುಡುಕುತ್ತಾ ನಾನು ಬದುಕಿನ ೪೦ ವರುಷಗಳನ್ನು ಕಳೆದಿದ್ದೇನೆ. ನಾನೂ ಒಬ್ಬ ರಾಜಕುಮಾರನಾಗಿದ್ದೆ. ಈ ಸತ್ಯಕ್ಕಾಗಿ ರಾಜ್ಯವನ್ನು ತ್ಯಜಿಸಿದೆ. ಆದುದರಿಂದ ಇದನ್ನು ಮಾರಲಾರೆ. ಮತ್ತೆ ದಾನ ಮಾಡಲಾರೆ.ಆದರೆ ಒಂದು ವಿಚಾರವಿದೆ ನಿನ್ನ ರಾಜ್ಯದಲ್ಲಿ ಇಂಥ ಮನುಷ್ಯನಿದ್ದಾನೆ ಅವನಿಗೂ ಸತ್ಯ ದರ್ಶನವಾಗಿದೆ ಬಹುಶಃ ನಿನಗೆ ಅವನಿಂದ ಪ್ರಯೋಜನವಾಗಬಹುದು ಹೋಗಿ ನೋಡು ಎಂದರು.
ಬಿಂಬಸಾರ ಅರಸಿದ. ಅವನೊಬ್ಬ ಹಾದಿ ಬೀದಿಗಳ ಕಸ ಬಳಿಯುವ ಜಾಡಮಾಲಿ. ಕೊಳಗೇರಿಯ ಶುಭ್ರ ಮನೆಯಲ್ಲಿದ್ದ. ಹೊನ್ನ ರಥ ಮನೆಯ ಮುಂದೆ ನಿಂತೊಡನೆ ಗಡಬಡಿಸಿ ಬಂದ. ಮಹಾರಾಜರು ಮುಂದಿಟ್ಟ ಬೇಡಿಕೆ ಕೇಳಿ ಇಂತೆಂದ ’ಮಹಾಪ್ರಭೋ’ ನಾನೋರ್ವ ಬಡಕೂಲಿ ಸತ್ಯವಿದೆ ನನ್ನಲ್ಲಿ. ಯಾವುದೇ ಪ್ರತಿಫಲ ಬೇಡ ನನಗೆ. ನಾನು ನನ್ನ ಸತ್ಯವನ್ನು ನೀಡಬಲ್ಲೆ ಆದರೆ ನೀವದನ್ನು ತೆಗೆದುಕೊಳ್ಳಬಲ್ಲಿರಾ? ಸ್ವೀಕರಿಸಲು ಪಕ್ವವಾಗಿದೆಯೆ ನಿಮ್ಮ ಬುದ್ದಿ, ಮನಸ್ಸು, ದೇಹ? ನಾನು ಅದರ ಬಗ್ಗೆ ಮಾತನಾಡಿದರೆ ನಿಮಗೆ ಕೇಳಿಸುವುದು ಬರಿ ಭಾಷೆಯ, ಪದಗಳ ಚಮತ್ಕಾರ ಮಾತ್ರ. ಸತ್ಯವನ್ನು ಪದದೊಳಗೆ ಸೇರಿಸಲಾಗದು. ಮತ್ತು ನಾನು ಕಂಡ ಕಾಣುವ ಸತ್ಯ ನಿಮ್ಮದಾಗದು. ಸತ್ಯ ದರ್ಶನ ಒಂದು ವೈಯಕ್ತಿಕ ಆತ್ಮಾನುಭವ. ಪದಗಳೊಂದಿಗೆ ಹೆಣೆವ ಕಸರತ್ತಲ್ಲ ಎಂದ ನಮ್ರತೆಯಿಂದ.
ನಮ್ಮ ಅಹಂ ಗಳನ್ನು ಪಕ್ಕಕ್ಕಿಡದೇ ನಾನು ಹೇಳಿದ್ದೇ ಸರಿಯೆಂದು, ನಾನು ತೋರಿಸಿದ್ದು ಮಾತ್ರ ಸರಿ, ಬೇರೆಯವರದೆಲ್ಲ ತಪ್ಪು.  ಎನ್ನುವ ಮನಸ್ಥಿತಿಯಿಂದ ಹೊರ ಬರದ ನನ್ನಂತಹ ಬಹುತೇಕರಿಗೆ ಈ ಲೇಖನ  ಕಣ್ಣು ತೆರೆಸುವ ಲೇಖನವೆನಿಸಿತು. ನಾನು ಮಾತ್ರ ಸರಿ ಇದ್ದೇನೆ ಪ್ರಪಂಚವೇ ಸರಿ ಇಲ್ಲ ಎಂಬ ಭಾವನೆಯಿಂದ ನಾನೂ ಸರಿ ಇದ್ದೇನೆ ಪ್ರಪಂಚವೂ ಸರಿ ಇದೆ ಎನ್ನುವ ಹಂತಕ್ಕೆ ಹೋಗಲು ಪ್ರೇರೇಪಿಸುವ  ತರಂಗದ ಈ ಲೇಖನವನ್ನು ಸಂಪಾದಕಿ ಸಂಧ್ಯಾ ಪೈ ಅವರ ಕ್ಷಮೆ ಕೋರುತ್ತಾ ಅವರ ಅನುಮತಿಯಿಲ್ಲದೆ ಇಲ್ಲಿಡುತ್ತಿದ್ದೇನೆ.