ದೇವರು ನಾಚಿಕೆಪಡಬೇಕಾದ ವಿಷಯ ! ( ಓದಿದ ಕತೆ)
ತಲೆಬರಹ ನೋಡಿ ಆಸ್ತಿಕರು ಬೇಸರಮಾಡಿಕೊಳ್ಳಬೇಡಿ. ಇದು ನಾನು ಬಹಳ ಹಿಂದೆ ಓದಿದ ಒಂದು ಕತೆ. ಮುಂದೆ ಓದಿ.
ಒಬ್ಬ ಯುವಕ ಮತ್ತು ಶ್ರೀಮಂತನ ಮಗಳು ಪರಸ್ಪರ ಪ್ರೀತಿಸುತ್ತಾರೆ. ಯುವಕ ಮದುವೆಗೆ ಶ್ರೀಮಂತನ ಅನುಮತಿ ಕೇಳುತ್ತಾನೆ. ಮಗಳು ಸುಖವಾಗಿರಬೇಕೆಂದು ಯಾವ ತಂದೆ ಬಯಸುವದಿಲ್ಲ? ಯುವಕನನ್ನು 'ಏನು ಮಾಡ್ತಿದ್ದೀಯ' ಎಂದು ಕೇಳುತ್ತಾನೆ. ಯುವಕ ' ನಾನು ಲೇಖಕ , ಬರೆಯುತ್ತೇನೆ' ಎಂದರೆ ' ಅದು ಸರಿ ; ಗಳಿಕೆ ಹೇಗೆ?' ಎಂದು ಕೇಳಿ ತಿಳಿದು, 'ಸಾಕಷ್ಟಿಲ್ಲ; ತನ್ನ ಮಗಳನ್ನು ಹೇಗೆ ಅವನು ಸಾಕಿಯಾನು?' ಎಂದು ಒಪ್ಪಿಗೆ ನ್ರಾಕರಿಸುತ್ತನೆ. ಕೊನೆಗೆ ಮಗಳ ಹಟಕ್ಕೆ ತಲೆಬಾಗಿ , ಮದುವೆ ಮಾಡಿ ಕೊಡುತ್ತಾನೆ.
ಸರಿ , ಸಂಸಾರ ಶುರುವಾಗುತ್ತದೆ. ಶ್ರೀಮಂತ ಮನೆತನದಿಂದ ಬಂದೂ ತನ್ನನ್ನು ವರಿಸಿದವಳಲ್ಲವೆ? ಅವಳು ಸುಖವಾಗಿರಲಿ ಎಂದು ಯುವಕ ಒಳ್ಳೆಯ ಮನೆಯನ್ನು ಬಾಡಿಗೆ ಹಿಡಿಯುತ್ತಾನೆ. ಆಳುಕಾಳು ಇಡುತ್ತಾನೆ. ಇದಕ್ಕೆಲ್ಲ ಹಣ ಬೇಕಲ್ಲ. ಅವನ ಆದಾಯ ಇದಕ್ಕೆಲ್ಲ ಸಾಲದು. ಹೊರಗೆ ಸಾಲ ಮಾಡುತ್ತಾನೆ. ಮಕ್ಕಳೂ ಆಗುತ್ತವೆ. ಸಾಲವನ್ನು ತೀರಿಸಲು ಹೆಚ್ಚಿನ ಸಾಲ ... ಹೀಗೆ ಕೊನೆಗೆ ಸಾಲದ ಬಲೆಯಲ್ಲಿ ಸಿಕ್ಕು ಬೀಳುತ್ತಾನೆ. ಸಾಲಗಾರರ ಕಾಟ ಅತಿಯಾಗಿ , ಪೀಡಿಸಲಾರಂಭಿಸುತ್ತಾರೆ. ಕೊನೆಗೆ ಹೆಂದತಿ ತನ್ನ ಮಕ್ಕಳನ್ನು ಕಟ್ಟಿಕೊಂಡು ತಂದೆಯ ಮನೆಬಾಗಿಲಿಗೆ ಬರಬೇಕಾಗುತ್ತಾನೆ. ಮಗಳ ಮೇಲಿನ ಅಂತ:ಕರಣದಿಂದಾಗಿ ಅವರನ್ನು ಮನೆಯೊಳಕ್ಕೆ ಸೇರಿಸಿಕೊಳ್ಳುತ್ತಾನೆ. ಅಳಿಯನನ್ನು ಸೇರಿಸಿಕೊಳ್ಳಲು ಒಪ್ಪುವದಿಲ್ಲ . ಅವನನ್ನು ತನ್ನ ಹೆಂಡತಿ ಮಕ್ಕಳನ್ನು ಭೇಟಿಯಾಗಲೂ ಅವಕಾಶ ನಿರಾಕರಿಸುತ್ತಾನೆ. 'ಎಲ್ಲ ಸಾಲ ತೀರಿಸಿ ನಿನ್ನ ಕಾಲ ಮೇಲೆ ನಿಲ್ಲುವಂತಾಗಿ , ಹೆಂಡತಿ ಮಕ್ಕಳನ್ನು ಸಾಕುವ ಶಕ್ತಿ ಬರುವವರೆಗೆ ಭೇಟಿಯೂ ಆಗಬೇಡ' ಎನ್ನುತ್ತಾನೆ . (ಮಾವನಿಗೆ ಅಳಿಯನಾದವನು ಹೆಂಡತಿ ಮತ್ತು ಮಕ್ಕಳನ್ನು ತನ್ನ ಹತ್ತಿರ ಬಿಟ್ಟು ಹೋಗುವಾಗ ಏನನ್ನಿಸುತ್ತದೆ ,ಗೊತ್ತೆ? - ತನ್ನ ಮಗಳನ್ನು ಕರೆದುಕೊಂಡು ಹೋಗಿ ಕೆಡಿಸಿ ತಂದು ಬಿಟ್ಟ ಹಾಗೆ ಅನಿಸುತ್ತದೆ) ಅಂಥ ಹೊತ್ತು ಬರಲು ೧೦-೧೫ ವರ್ಷಗಳೇ ಬೇಕಾಗುತ್ತದೆ. ಅಷ್ಟು ಹೊತ್ತಿಗೆ ಅವನು ಹಣ್ಣಾಗಿರುತ್ತಾನೆ. ಹೆಂಡತಿಗೂ ವಯಸ್ಸಾಗಿರುತ್ತದೆ. ಮಕ್ಕಳು ದೊಡ್ಡವರಾಗಿರುತ್ತಾರೆ.
ಈ ಸಹಜ ವಾಸ್ತವಿಕ ವಿಷಾದಮಯ ಕತೆ ಹೇಳುವ ಕತೆಗಾರ - (ಸಿಂಗರ್ ಅಥವಾ ಓ ಹೆನ್ರಿ - ಸರಿಯಾಗಿ ನೆನಪಿಲ್ಲ) - 'ದೇವರು ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಒಂದಿಷ್ಟು ಅಕ್ಕಿ ಮತ್ತು ಗೋಡಂಬಿ ಒದಗಿಸದಿರುವದು ನಾಚಿಕೆಗೇಡಿನ ವಿಷಯ' ಎಂದು ಮರುಕ ಪಡುತ್ತಾನೆ.
ಬಹುಶಃ ಅಕ್ಕಿ ಎಂದರೆ ಒಂದಿಷ್ಟು ಅಗತ್ಯ ವಸ್ತು . ಗೋಡಂಬಿ ಎಂದರೆ ಒಂದಿಷ್ಟು ಸುಖ. Bread and Butter ; Man does not live by bread alone . ಎನ್ನುವ ಹಾಗೆ.
ವರಕವಿ ಬೇಂದ್ರೆ ತಮ್ಮ ಜೀವನವನ್ನೆಲ್ಲ ಕಡು ಬಡತನದಲ್ಲಿ ಕಳೆದರು. ಆದರೂ ಒಂದು ಕಡೆ ಹೇಳುತ್ತಾರೆ- ಎಲ್ಲ ಕಾಲಕ್ಕೂ ದಾರಿದ್ರ್ಯ ಮನೆ ಬಾಗಿಲಲ್ಲಿ ನಿಂತು ಒಳಗೆ ಬರುತ್ತೇನೆ ಎಮ್ದು ಹೆದರಿಸುತ್ತಿತ್ತು. ಆದರೆ , ದೇವರ ದಯ, ನನಗೆ ಯಾವತ್ತು ರೊಟ್ಟಿ ಜತೆಗೆ ಸಕ್ಕರಿ , ತುಪ್ಪ ತಪ್ಪಲಿಲ್ಲ ' ಎಂದು ಸಂತೋಷ ಪಡುತ್ತಾರೆ. ( ಎಷ್ಟೆಂದರೂ ಕವಿ ಮನಸ್ಸಿಗೆ ಸಂತೋಷಕ್ಕೆ ಬೇರೇನು ಬೇಕು? ಹೂತ- (ಹೂ ಬಿಟ್ಟ ) ಹುಣಸಿಮರ ಸಾಕು ಎಂದವರಲ್ಲವೆ?)