ಪ್ರತಿಯೊಬ್ಬರೂ ಓದಿ

ಪ್ರತಿಯೊಬ್ಬರೂ ಓದಿ

ಬರಹ

ನಾವೆಲ್ಲಾ ಹಿಂಗ್ಯಾಕೆ ಆಗಿದೀವಿ?
ನಿಮ್ಮ ಹುದ್ದೆ, ಜಾತಿ ಮರೆತು ಒಂದು ಕ್ಷಣ ಯೋಚಿಸಿ, ಇವತ್ತಿನ ದಿನಗಳಲ್ಲಿ ಪ್ರತಿಯೊಂದು ವಿಷಯದಲ್ಲೂ ಸಾಕಷ್ಟು ಬದಲಾವಣೆ ಆಗ್ತಾ ಇದೆ. ನಮ್ಮ ಧಾರ್ಮಿಕ ಆಚರಣೆಗಳು ಬದಲಾಗಿದೆ, ನಮ್ಮ ಸಂಸ್ಕೃತಿ ಮರೆಯುತ್ತಾ ಇದ್ದೀವಿ, ಜನಪದ ಸೊಗಡು ನಶಿಸಿ ಹೋಗ್ತಾ ಇದೆ. ವೃತ್ತಿ ರಂಗಭೂಮಿ ಮೂಲೆಗುಂಪಾಗುತ್ತಾ ಇದೆ, ಸಾಕಷ್ಟು ಮತೀಯ ಗಲಭೆಗಳು, ಕೊಲೆ ನಡೆಯುತ್ತಲೇ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಮನುಷ್ಯತ್ವ ಮರೆತು ಬಾಳುತ್ತಿರುವ ನಾವುಗಳು ಬೆಳಿಗ್ಗೆಯಿಂದ ರಾತ್ರಿ ಮಲಗುವರೆಗೆ ಸಾಧಿಸಿದ್ದೇನು ಅಂತ ನೋಡಿದರೆ ಶೂನ್ಯ. (Big Zero). ಇದು ಯಾಕೆ ಅಂತ ಹುಡುಕುತ್ತಾ ಹೋದರೆ ಯೋಚಿಸಿ ಹುಚ್ಚೇ ಹಿಡಿಯುತ್ತದೆ. ನಾವು ಎಷ್ಟು ಕೀಳು ಮಟ್ಟದಲ್ಲಿ ಬದುಕನ್ನಾ ಸಾಗಿಸುತ್ತಿದ್ದೀವಿ ಎನ್ನುವುದಕ್ಕೆ ಪಕ್ಕದ ಮನೆಯಲ್ಲಿ ಯಾರಾದರೂ ಸತ್ತರೆ ಅಥವಾ ಕಷ್ಟದಲ್ಲಿದ್ದರೆ ಎಲ್ಲಿ ಹಣದ ಸಹಾಯ ಮಾಡಬೇಕಾಗುತ್ತೋ, ಎಲ್ಲಿ ರಜೆ ಹಾಳಾಗೋತ್ತೋ ಎನ್ನುವ ಕಾರಣಕ್ಕಾಗಿ ನಮ್ಮ ಮನೆಯಲ್ಲಿ ನಮ್ಮ ಪಾಡಿಗೆ ಸುಮ್ಮನೆ ಇದ್ದು ಬಿಡ್ತೀವಿ. ಕನಿಷ್ಠಮಟ್ಟದ ಸಾಂತ್ವನ ಕೂಡ ಹೇಳುವುದಕ್ಕೆ ಹೋಗುವುದಿಲ್ಲ (ನಗರ ಪ್ರದೇಶಗಳಲ್ಲಿ ಹೆಚ್ಚು). ಆದರೆ ಮುಂದೊಂದು ದಿನ ಅದೇ ಪರಿಸ್ಥಿತಿ ನಮ್ಮ ಮನೆಯಲ್ಲಿ ಬರುತ್ತೆ ಅಂತ ಯೋಚಿಸುವುದೇ ಇಲ್ಲ. ರಸ್ತೆಯಲ್ಲಿ ಯಾವುದಾದರೂ ಅಪಘಾತವಾಗಿದ್ದರೆ ನಮಗೆ ಯಾಕೆ ಬೇಕು ಅಂತ ಪಕ್ಕದಿಂದ ಸುಮ್ಮನೆ ಹೋಗುತ್ತೇವೆ. ಅದೇ ನಮ್ಮ ಮಕ್ಕಳೋ ಅಥವಾ ಮನೆಯವರೋ ಬಿದ್ದಿದ್ದರೆ ಹೀಗೆ ಮಾಡುತ್ತಿದ್ದವಾ ಅಂತ ಕ್ಷಣ ಮಾತ್ರವು ಚಿಂತಿಸುವುದಿಲ್ಲ. ಯಾರಾದರೂ ವೃದ್ದೆ ಭಿಕ್ಷೆ ಕೇಳಿದರೆ "ನಿರ್ದಾಕ್ಷಿಣ್ಯವಾಗಿ ನಿನ್ನ ಕೈ ಕಾಲು ಗಟ್ಟಿಯಾಗಿದೆ ಭಿಕ್ಷೆ ಬೇಡೋಕ್ಕೆ ನಾಚಿಕೆ ಆಗೋಲ್ವಾ" ಅಂತೀವಿ. ಆದೇ ನಮ್ಮ ಮನೆಯ ಹಿರಿಯರು ಈ ರೀತಿಯಾಗಿದ್ದರೆ ಅನ್ನುವ ಕಲ್ಪನೆಯೂ ಇರುವುದಿಲ್ಲ. ಮನೆಯ ಮುಂದಿನ ರಸ್ತೆ ಅಥವಾ ಚರಂಡಿ ಹಾಳಾಗಿದ್ದರೆ ನಮಗ್ಯಾಕೆ ಅದರ ವಿಷಯ ಎನ್ನುವಂತೆ ಸುಮ್ಮನೆ ನಮ್ಮ ಪಾಡಿಗೆ ಇದ್ದು ಬಿಡುತ್ತೇವೆ. ಪತ್ರಿಕೆಯಲ್ಲಿ ಅದರ ಬಗ್ಗೆ ಬಂದಾಗ ಕಚೇರಿಯಲ್ಲಿ ಕಾಫಿ ಕುಡಿಯುತ್ತಾ ಮಿತ್ರರ ಬಳಿ ಅದರ ಬಗ್ಗೆ ವಿತಂಡವಾಗಿ ಚರ್ಚೆ ಮಾಡುತ್ತೇವೆ. ಒಂದು ಕ್ಷಣ ಆ ರಸ್ತೆ, ಚರಂಡಿ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಇದು ನಾವು ಕೊಟ್ಟ ತೆರಿಗೆಯಿಂದ ಮಾಡಿದ್ದು, ಇದರ ಬಗ್ಗೆ ಪ್ರತಿಭಟನೆ ಮಾಡಬೇಕು. ಸಂಬಂಧಪಟ್ಟ ಜನಪ್ರತಿನಿಧಿಗೆ ತಿಳಿಸಬೇಕು ಅಥವಾ ಸಂಬಂಧಪಟ್ಟ ಅಧಿಕಾರಿಗೆ ಹೇಳಬೇಕು ಅಂತ ನಮಗೆ ಅನ್ನಿಸುವುದೇ ಇಲ್ಲಾ. ಇದನ್ನು ಬಂಡವಾಳನ್ನಾಗಿಸುವ ಗುತ್ತಿಗೆದಾರ, ಜನಪ್ರತಿನಿಧಿಗೆ, ಅಧಿಕಾರಿಗಳಿಗೆ ಕೊಡುವ ಕಮಿಷನ್ ಕೊಟ್ಟು ಹಾಯಾಗಿ ಮನೆ ಸೇರುತ್ತೇನೆ. ಮುಂದೊಂದು ದಿನ ಅದೇ ಚರಂಡಿಯಲ್ಲಿ ನಮ್ಮ ಮಕ್ಕಳೋ, ಅಥವಾ ಹಿರಿಯರೋ ಬಿದ್ದು ಕಾಲು ಮುರಿದುಕೊಂಡಾಗ ರಸ್ತೆಯಲ್ಲಿ ಹುಚ್ಚು ನಾಯಿ ತರಹ ಅಸಹಾಯಕತೆಯಿಂದ ಬೈಯುತ್ತಾ ನಿಂತಿರುತ್ತೀವಿ. ಅದೇ ಮನೆಯಲ್ಲಿ ಒಂದು ವಸ್ತು ಇರಬೇಕಾದ ಜಾಗದಲ್ಲಿ ಇರದೇ ಹೋದರೆ ರಂಪ ರಾಮಾಯಣ ಮಾಡುವ ಸಮಾಜದಲ್ಲಿ ನಾವು ಹೀಗೇಕೆ ಜೀವನ ಮಾಡುತ್ತಿದ್ದೀವಿ.

ಇವೆಲ್ಲಾ ನಮಗ್ಯಾಕೆ ಎಂದ ಪರಿಣಾಮ ಕಾಶ್ಮೀರದಲ್ಲಿದ್ದ ಭಯೋತ್ಪಾದನೆ ಇಂದು ಬೆಂಗಳೂರಿಗೆ ಬಂದಿದೆ. ಎಲ್ಲೋ ಇದ್ದ ನಕ್ಸಲೈಟ್ ಚಳುವಳಿಗಳು ನಮ್ಮ ಮಲೆನಾಡಿಗೂ ಬಂದಿದೆ. ಡ್ರಗ್ ಮಾಫಿಯಾ, ಆಯಿಲ್ ಮಾಫಿಯಾ ನಡೆಯುತ್ತಲೇ ಇದೆ. ಇವೆಲ್ಲದರ ಪರಿಣಾಮ ನಾವು ಒಬ್ಬ ಉತ್ತಮ ನಾಯಕನನ್ನು ಆರಿಸುವಲ್ಲಿ ವಿಫಲರಾಗ್ತಾ ಇದ್ದೀವಿ. ಉತ್ತಮ ನಾಯಕ ಇಲ್ಲ ಎಂದ ಮೇಲೆ ಇನ್ನು ನಮ್ಮ ಸುತ್ತಮುತ್ತಲಿನ ಪರಿಸರ ಹೇಗಿರುತ್ತದೆ ಹೇಳಿ. ಮನೆಯ ಹಿರಿಯನೊಬ್ಬ ಬೇಜವಾಬ್ದಾರಿಯಿಂದ ಇದ್ದರೆ ಹೇಗೆ ಇರುತ್ತದೋ ಹಾಗೇ ಇರುತ್ತದೆ. ಇಂದು ಮಲೆನಾಡಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಬಳ್ಳಾರಿಯಲ್ಲಿರುವಂತಹ ಬಿಸಿಲು ಇದೆ. 42 ಡಿಗ್ರಿ ತಲುಪಿದೆ. ಒಂದೆಡೆ ಅಭಿವೃದ್ದಿ ಹೆಸರಲ್ಲಿ ಮರಗಳ ಮಾರಣ ಹೋಮವಾಗುತ್ತಿದ್ದರೆ. ಮತ್ತೊಂದೆಡೆ ಬಗರ್ಹುಕಂ ಹೆಸರಲ್ಲಿ ಅರಣ್ಯವೆಲ್ಲಾ ಜಮೀನಾಗಿ ಪರಿವರ್ತನೆಯಾಗುತ್ತಿದೆ. ಇದರ ಬಗ್ಗೆ ಪತ್ರಿಕೆಗಳು ವರದಿ ಮಾಡಿರುವುದನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸುತ್ತೇವೋ ಹೊರತು ಅದಕ್ಕೆ ಮೀರಿ ಏನನ್ನೂ ಮಾಡುವುದಿಲ್ಲ. ಪರಿಸರವಾದಿಗಳು ಇದರ ಬಗ್ಗೆ ಏನಾದರೂ ಜನರಲ್ಲಿ ಜಾಗೃತಿ ಮೂಡಿಸಿದ್ದಾರಾ ಅಂತ ನೋಡಿದರೆ ಅವರು ಎಲ್ಲಿ ಇದ್ದಾರೆ ಅಂತ ಹುಡುಕಬೇಕಿದೆ. ಇನ್ನು ಕನ್ನಡದ ಹಲವು ಸಂಘಟನೆಗಳು ಕನ್ನಡಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ. ಇನ್ನು ಇತರೆ ಸಂಘಟನೆಗಳು ಧ್ವನಿ ಎತ್ತುತ್ತವಾ ಅಂತ ನೋಡಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ ಯಾವುದು ಇದೆ ಎನ್ನುವ ಚಿಂತನೆಯಲ್ಲಿದೆ. ಅರಣ್ಯ ಇಲಾಖೆ ಏನಾದರೂ ಸಸಿ ನೆಡುವ ಕಾರ್ಯಕ್ಕೆ ಮುಂದಾಗಿದೆಯಾ ಇಲ್ಲ. ಕಡೆಗೆ ಇದರ ಪರಿಣಾಮ ಎದುರಿಸುತ್ತಿರುವವರು ಯಾರು ಎಂದು ಅವಲೋಕಿಸಿದರೆ ಮತ್ತೆ ನಾವೆ. ವಾತಾವರಣ ವೈಪರೀತ್ಯ. ಚರ್ಮ ರೋಗಗಳು, ಮಕ್ಕಳಲ್ಲಿ ಡೀಹೈಡ್ರೇಷನ್. ಇನ್ನೊಂದು ಸತ್ಯ ನಿಮಗೆ ಗೊತ್ತಿರಲಿ ರಸ್ತೆ ಬದಿಯ ಮರದ ಕಡಿತಲೆಯಿಂದಾಗಿ ಇಂದು ಉಪ್ಪಿನಕಾಯಿಗೆ ಹಾಕುವ ಜೀರಿಗೆ ಮಿಡಿ ಮಂಗಮಾಯವಾಗಿದೆ. ಇದು ಸಣ್ಣ ವಿಷಯವಾದರೂ ಒಂದು ತಳಿ ನಾಶವಾದಂತಾಗಿದೆ. ನಮ್ಮಲ್ಲಿರುವ ಸೋ ಕಾಲ್ಡ್ ಬುದ್ದಿ ಜೀವಿಗಳು ಏನಾದರೂ ಧ್ವನಿಯೆತ್ತಿದ್ದಾರಾ ಅಂತ ನೋಡಿದರೆ ಪಾಪ ಅವರುಗಳು ರಾಜಕೀಯ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸುವುದೇ ತಮ್ಮ ಕಾಯಕ ಎಂದುಕೊಂಡಂತಿದೆ. ಯಾವುದಾದರೂ ಗಲಭೆ ನಡೆಯುತ್ತಿದ್ದರೇ ನಮಗೆ ಯಾಕೆ ಬೇಕು ಅಂತ ಪಕ್ಕದ ರಸ್ತೆಯಿಂದ ಮನೆ ಸೇರುವ ನಾವುಗಳು ಇಷ್ಟೆಲ್ಲಾ ಯೋಚಿಸುತ್ತೇವಾ. ಅದೇ ನಮ್ಮ ಅಣ್ಣನ ತಮ್ಮನೋ ಅಲ್ಲಿದ್ದರೆ ಹೀಗೆ ಹೋಗುತ್ತಿದ್ದೆವಾ ಎಂದು ಕ್ಷಣ ಮಾತ್ರವೂ ಯೋಚಿಸಿದ ನಾವುಗಳು ಹೋಟೆಲ್ ನಲ್ಲಿ, ಬಾರ್ ನಲ್ಲಿ ಕೂತು ದೇಶದ ಪ್ರಗತಿಯ ಬಗ್ಗೆ ಗಂಟೆ ಗಟ್ಟಲೆ ಭಾಷಣ ಮಾಡ್ತೇವೆ. ಎಂತಹ ವಿಪರ್ಯಾಸ ಅಲ್ವಾವೋ ಅಥವಾ ನಾವು ನಮ್ಮ ಮಕ್ಕಳನ್ನು ಬೆಳೆಸುತ್ತಿರುವ ರೀತಿಯಾ ಎನ್ನುವ ಪ್ರಶ್ನೆಯನ್ನು ನಾವೇ ಹಾಕಿಕೊಳ್ಳಬೇಕು. ಮಗ (ಮಗಳು) ಇನ್ನು ಎರಡು ವರ್ಷವಿದ್ದಾಗಲೇ ಆತ ಸಾಫ್ಟವೇರ್ ಇಂಜಿನಿಯರ್ ಅಥವಾ ಡಾಕ್ಟರ್ ಆಗ್ತೀನಿ ಅಂತಾನೆ. ಯಾಕೆ ಸಾಹಿತಿ, ಹೋರಾಟಗಾರ, ಕಲಾವಿದನಾಗಬೇಕು ಅಂತ ಹೇಳಲ್ಲ ಅಂದರೆ ಈ ಹುದ್ದೆಗಳಲ್ಲಿ ಹೆಚ್ಚಿನ ಹಣ ಬರುತ್ತದೆ ಎಂದು ಆ ಸಣ್ಣ ವಯಸ್ಸಿನಲ್ಲೇ ಪೋಷಕರು ಮಕ್ಕಳ ತಲೆಗೆ ತುಂಬಿರುತ್ತಾರೆ. ಇನ್ನು ಶಿಕ್ಷಣದ ಪದ್ದತಿಗೆ ಹೋದರೆ ಹೋಂ ವರ್ಕ್, ಕೆಜಿಗಟ್ಟಲೆ ಪುಸ್ತಕ. ಇತರೆ ವಿಷಯಗಳ ಬಗ್ಗೆ ಮಾತ್ರ ಪಾಠ ಮಾಡುವ ಶಿಕ್ಷಕರು. ದೇಶದ ಬಗ್ಗೆ, ಪರಿಸರದ ಬಗ್ಗೆ, ಎಲ್ಲರೂ ಒಂದಾಗಿ ಬಾಳಬೇಕು ಎನ್ನುವ ಜಾಗೃತಿ ಮೂಡಿಸುವಂತಹ ಕಾರ್ಯ ಖಾಸಗಿ ಹಾಗೂ ಸರಕಾರಿ ಶಿಕ್ಷಣ ಸಂಸ್ಥೆಗಳಿಂದ ಆಗುತ್ತಲೇ ಇಲ್ಲ ಎನ್ನಬಹುದಾಗಿದೆ. ಮುಖ್ಯೋಪಾಧ್ಯಾಯರ ಕೊಠಡಿಗೆ ತೆರಳಿದರೆ ಹಿಂದಿನ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದ ಡಾಕ್ಟರ್ ಅಥವಾ ಇಂಜಿನಿಯರ್ ಪೋಟೋ ಹಾಕಿರುವುದನ್ನು ಕಾಣುತ್ತೇವೆ. ಅದೇ ಒಬ್ಬ ವಿದ್ಯಾರ್ಥಿ ಇತರರ ಪರವಾಗಿ ಹೋರಾಡಿ ಜೈಲು ಸೇರಿದ್ದವನ ಪೋಟೋ ಅಲ್ಲಿ ಇರುವುದೇ ಇಲ್ಲ. ಈ ಮುಂಚೆಯಾದರೆ ಸಂಜೆ 5 ಆಗುತ್ತಿದ್ದಂತೇ ಬೀದಿಗಳಲ್ಲಿ ಜನಪದ ಕ್ರೀಡೆಗಳಾದ ಗೋಲಿ, ಬುಗುರಿ,ಚಿಣ್ಣಿ ದಾಂಡು,ಸರಗೋಲು ಅಂತ ಆಟಗಳನ್ನು ಮಕ್ಕಳು ಆಡುತ್ತಿದ್ದುದನ್ನು ನೋಡುತ್ತಿದ್ದವು. ಇದೀಗ ಶಾಲೆಯಿಂದ ಬರುತ್ತಿದ್ದಂತೆ ಮಗು ಬಾಗಿಲು ಹಾಕಿಕೊಂಡು ಮನೆ ಸೇರಿದರೆ ಇನ್ನು ಹೊರ ಬರುವುದು ಮಾರನೆಯ ದಿನ ಬೆಳಿಗ್ಗೆನೇ. ಕಾರಣ ಪೋಷಕರು. ಹೊರಗೆ ಬೇಡ, ಅವನು ಸರಿಯಿಲ್ಲ, ಚರಂಡಿ ಬಳಿ ಆಡಿದರೆ ಇನ್ ಫೆಕ್ಷನ್ ಆಗುತ್ತೆ. ಹೀಗೆ ಮಕ್ಕಳ ತಲೆಗೆ ತುಂಬಿದರೆ ಆತ ಟಿವಿಯೊಂದನ್ನು ಬಿಟ್ಟು ಮತ್ತಿನ್ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಮುಂದಿನ ವಿದ್ಯಾಭ್ಯಾಸಕ್ಕೆ ಆತ ಬೇರೆ ಊರಿಗೆ ತೆರಳಿದಾಗ ಅಲ್ಲಿ ನಡೆಯುವ ಸಣ್ಣ ಘಟನೆಯೂ ತಡೆದುಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದನ್ನೆಲ್ಲಾ ನಾವುಗಳು ಯೋಚಿಸುವುದೇ ಇಲ್ಲ. ದೇಶದ ಬಗ್ಗೆ ಚಿಂತನೆಯಂತೂ ನಡೆಯುವುದೇ ಇಲ್ಲ. ಕಾರಣ ಅಪ್ಪ ಅನ್ನಿಸಿಕೊಂಡವನು ಮನೆಯಲ್ಲಿ ಅದನ್ನು ಮಾತನಾಡಿದರೆ ಮಗುವಿಗೆ ದೇಶದ ಬಗ್ಗೆ ಅಭಿಮಾನ ಹುಟ್ಟುತ್ತದೆ. ಅದೂ ಅವನಲ್ಲೇ ಇಲ್ಲ ಎಂದ ಮೇಲೆ. ಇಂದಿನ ಎಷ್ಟೋ ಮಕ್ಕಳಿಗೆ ರಾಜ್ಯದ ಮುಖ್ಯಮಂತ್ರಿ ಯಾರು ಎಂದರೆ ಬಾಯಿ ಬಿಡುತ್ತವೆ. ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ಸತ್ತರೆ ಪತ್ರಿಕೆಗಳ ಮುಖ ಪುಟದಲ್ಲಿ ರಾರಾಜಿಸುತ್ತಿರುತ್ತದೆ. ನಿಜಕ್ಕೂ ಆತ (ಕೆಲವರು) ಸಮಾಜಕ್ಕೆ ಏನು ಮಾಡಿದ್ದಾನೆ ಎಂದು ಯೋಚಿಸಿದರೆ ಏನೂ ಇಲ್ಲ. ಬರುವ ಹೆಚ್ಚಿನ ಸಂಬಳದಿಂದ 5-6 ಬಂಗಲೆ ತೆಗದುಕೊಂಡು, ಐಷಾರಾಮಿ ಕಾರು, ಜೊತೆಗೆ ಪಬ್, ಡಿಸ್ಕೋಥೆಕ್ ಅಂತ ಓಡಾಡಿಕೊಂಡಿರುತ್ತಾನೆ ಸತ್ತಿರುವ ಕಾರಣ ನೋಡಿದರೆ ಕ್ಷುಲ್ಲಕವಾಗಿರುತ್ತದೆ. ಅದೇ ಒಬ್ಬ ಜವಾನ ಕಡಿಮೆ ಸಂಬಳ ಪಡೆಯುವ ಮೂಲಕ ಇಡೀ ದಿನ ಜನರಿಗೆ ಸಹಾಯ ಮಾಡುತ್ತಾ ಎಲ್ಲರಿಂದ ಬೈಸಿಕೊಳ್ಳುತ್ತಾ ಕಾರ್ಯ ನಿರ್ವಹಿಸಿರುತ್ತಾನೆ. ಅವನ ಸಾವಿನ ಬಗ್ಗೆ ಅವರ ಕಚೇರಿಯಲ್ಲೇ ತಿಳಿದಿರುವುದಿಲ್ಲ. ಇನ್ನೊಂದು ದೇಶದ ಅಭಿವೃದ್ದಿ ಬಗ್ಗೆ ಮಾತನಾಡುವ ನಾವು ನೈಜವಾಗಿ ನಮ್ಮ ದೇಶದ ಬಗ್ಗೆ ಚಿಂತಿಸುತ್ತಲೇ ಇಲ್ಲ. ಮೊದಲು ನಾವು ನನ್ನದು ಬಡವ, ಬಲ್ಲಿದ ಅನ್ನುವುದನ್ನು ಮರೆತು ಪ್ರತಿಯೊಬ್ಬರೊಂದಿಗೂ ಬೆರೆಯಬೇಕಾಗಿದ ಸನ್ನಿವೇಶ ಸೃಷ್ಟಿಯಾಗಬೇಕಿದೆ. ಅದಕ್ಕೆ ಹಿಂದಿನ ದಿನಗಳಲ್ಲಿ ಹಬ್ಬ ಅಂತ ಆಚರಣೆ ಮಾಡುತ್ತಿದ್ದುದು, ಇದೀಗ ಗಣೇಶ ಯುಗಾದಿ,ದೀಪಾವಳಿ ಬಿಟ್ಟರೆ ಮಿಕ್ಕವಲ್ಲಾ ಮರೆತೇ ಹೋಗಿದೆ. ಬಿದಿಗೆ, ತದಿಗೆ ಅಂದರೆ ಏನು ಎನ್ನುವಂತಾಗಿದೆ. ರಾಮನ ಬಗ್ಗೆ ಮಾತನಾಡುವ ಸಂಘಟನೆಗಳು ರಾಮನವಮಿಯಂದು ಕನಿಷ್ಠ ಮಟ್ಟದ ಆಚರಣೆಯನ್ನೂ ಮಾಡಲಿಲ್ಲ. ಇವರುಗಳಿಗೆ ದೇವರ ಹೆಸರಲ್ಲಿ ಇಷ್ಯೂಸ್ ಮಾತ್ರ ಬೇಕಾಗಿದೆ. ದೇಶದ ಒಳಿತಿಗಾಗಿ ಎಲ್ಲರೂ ಒಂದೆಡೆ ಸೇರಬೇಕು ಎನ್ನುವ ಕಾರಣಕ್ಕಾಗಿಯೇ ಬೀದಿಗಳಲ್ಲಿ ಗಣೇಶನನ್ನು ಕೂರಿಸುವಂತಹ ಕಾರ್ಯಕ್ಕೆ ಬಾಲ ಗಂಗಾಧರ್ ತಿಲಕ್ ಚಾಲನೆ ನೀಡಿದ್ದರು. ಇಂತಹ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಬೆರೆತಾಗ ಒಂದು ನಮ್ಮ ನೋವುಗಳನ್ನು ಮರೆಯುವುದರ ಜೊತೆಗೆ ಹಲವಾರು ಚರ್ಚೆಗಳು ನಡೆಯುತ್ತವೆ. ಒಬ್ಬರಿಂದ ಮತ್ತೊಬ್ಬರಿಗೆ ಸಂಪರ್ಕ ಬೆಳೆಯುತ್ತದೆ. ವಿಷಯ ವಿನಮಯವಾಗುತ್ತದೆ.

ನಮ್ಮ ದಿನ ನಿತ್ಯದ ಕಾಯಕದ ಜೊತೆಗೆ ನಮ್ಮ ಸ್ವಾರ್ಥವನ್ನು ಮರೆತು ಕೆಲ ಕಾಲ ಧಾರ್ಮಿಕವಾಗಿ ಸಾಮಾಜಿಕವಾಗಿ ಚಿಂತನೆ ನಡೆಸುವಂತಹ ಕಾರ್ಯವಾಗಬೇಕಿದೆ. ಮಕ್ಕಳ ಮೇಲೆ ನಮ್ಮ ಕನಸನ್ನು ಹೇರದೆ ಆತ ಇಷ್ಟ ಬಂದಂತೆ ಇರಲು ಬಿಟ್ಟರೆ. ಖಂಡಿತ ಆತ ತನ್ನಲ್ಲಿರುವ ಕಲೆಯಿಂದ ಮುಂದೆ ಬರುತ್ತಾನೆ. ದೇಶದ ಬಗ್ಗೆ, ಜನಪದ ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ನಾವು ತಿಳಿಹೇಳಿದರೆ. ಆತ ಮುಂದಿನ ದಿನಗಳಲ್ಲಿ ಯಾವುದೇ ಚಟಕ್ಕೆ ದಾಸನಾಗದೆ ಉತ್ತಮ ಪ್ರಜೆಯಾಗುತ್ತಾನೆ. ನಮ್ಮ ಸುತ್ತಮುತ್ತಲಿನ ಕೆಟ್ಟ ಪರಿಸರದ ಬಗ್ಗೆ ಸ್ವಲ್ಪ ಮಟ್ಟಿಗಾದರೂ ಪ್ರತಿಭಟಿಸಲೇ ಬೇಕಾಗುತ್ತದೆ. ಪಕ್ಕದ ಮನೆಯವರಿಗೆ ಆದ ನೋವುಗಳ ನಾಳೆ ನಮಗೆ ಆಗುವುದು ನಿಶ್ಚಿತ ಎಂದು ಸಹಾಯಕ್ಕೆ ಮುಂದಾಗಿ ಅದರಲ್ಲಿರುವ ಮಜಾನೇ ಬೇರೆ. ಅದೂ ಬಿಟ್ಟು ಅವರ ಶವಕ್ಕೆ ಹೋಗಿ ರೂ ಖರ್ಚಾಯಿತು ಎಂದು ಯೋಚಿಸಿ ಡಯಾಬಟೀಸ್, ಬಿಪಿ ತರಿಸಕೊಳ್ಳಬೇಡಿ. ನೀವು ಯಾರಿಗಾದರೂ ಸಹಾಯ ಮಾಡಿದಾಗ ಸಿಗುವ ಸುಖ ಬ್ಯಾಂಕಿನಲ್ಲಿ ಕೋಟಿ ಇಟ್ಟರೂ ಸಿಗುವುದಿಲ್ಲ. ಇದನ್ನು ನಾನು ಹಲವರಿಂದ ಕೇಳಿದ್ದೇನೆ ಹಾಗೇ ಅನುಭವಿಸಿದ್ದೇನೆ. ನನ್ನ ಸ್ನೇಹಿತ ಸಾಗರದ ನಾಗೇಶ (ಕುಳ್ಳ), ಗ್ಲೋಬಲ್ ಸಾಫ್ಟ್ ವೇರ್ ನಲ್ಲಿ ಸಾವಿರಾರು ರೂಗಳನ್ನು ದುಡಿಯುತ್ತಿದ್ದಾನೆ. ಅಮೆರಿಕಾ ಸೇರಿದಂತೆ ಹಲವಾರು ದೇಶಗಳನ್ನು ಸುತ್ತಿದ್ದಾನೆ. ಆದರೂ ಆತನ ವ್ಯಕ್ತಿತ್ವ ಮಾತ್ರ ಇಂದಿಗೂ ಹಾಗೇ ಇದೆ. ಅವನ ಬಾಯಲ್ಲಿ ಬರುವ ಮೊದಲ ಪದ ಭಾರತ ಬಿಟ್ಟರೆ ಯಾವ ದೇಶನೂ ನನಗೆ ಇಷ್ಟ ಇಲ್ಲ ಎನ್ನುತ್ತಾನೆ. ದಿನ ನಿತ್ಯ ಧಾರ್ಮಿಕ ಆಚರಣೆ, ವಿವಿಧ ಮಜಲುಗಳಲ್ಲಿ ಭಾಗವಹಿಸುವುದು, ಬಡವ ಬಲ್ಲಿದ ಎನ್ನದೇ ಎಲ್ಲರೊಂದಿಗೆ ಬೆರೆಯುವ ಕಾರಣ ನಾಗೇಶ ಎಂದರೆ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದಾನೆ. ಕಾರಣ ಅವನ ಪೋಷಕರು ನೀಡಿದಂತಹ ಮಾರ್ಗದರ್ಶನ ಅವನಿಗೆ ಸಿಕ್ಕಂತಹ ಶಿಕ್ಷಣ. ಇಷ್ಟೆಲ್ಲಾ ವಿಷಯಗಳನ್ನು ನಿಮಗೆ ತಿಳಿಸಿದ್ದು ಯಾಕೆ ಎಂದರೆ ನಾವು ಅನ್ನುವ ಪದ ಈಗಿನ ಪೀಳಿಗೆಯಲ್ಲಿ ಬರಲಿಲ್ಲ ಎಂದರೆ. ನಮ್ಮತನ ಅನ್ನುವುದು ಕನಿಷ್ಟ ಮಟ್ಟದಲ್ಲೂ ಉಳಿಯುವುದಿಲ್ಲ. ಮುಂದೊಂದು ದಿನ ನಾವೆಲ್ಲಾ ಅನಾಥ ಶವಗಳಾಗಿ ಸಾಯಬೇಕಾಗುತ್ತದೆ. ಕೆಳ ವರ್ಷಗಳ ಹಿಂದೆ ವಿಶ್ವೇಶ್ವರ ಭಟ್ ತಮ್ಮ ಅಂಕಣದಲ್ಲಿ ಸಿಂಗಪೂರ್, ಮಲೇಷಿಯಾ ಪತ್ರಿಕೆಗಳಲ್ಲಿ ರಾಜಕೀಯದ ಬಗ್ಗೆ ಚರ್ಚೆನೇ ಇರುವುದಿಲ್ಲ. ಬದಲಾಗಿ ಅಭಿವೃದ್ದಿಯ ಬಗ್ಗೆ ಸಲಹೆ ಇರುತ್ತದೆ ಎಂದು. ನಮ್ಮ ದೇಶ ಹಾಗಾಗುವುದು ಯಾವಾಗ ಸ್ವಾಮಿ. ನಿಮಗೆ ಅನ್ನಿಸಬಹುದು ಇವನೇನೂ ತತ್ವ ಜ್ಞಾನಿಯಂತೆ ಮಾತನಾಡಿದ್ದಾನಲ್ಲಾ ಅಂತ. ಆದರೆ ಇದು ಸತ್ಯ. ಒಬ್ಬರೇ ಕೂತಾಗ ಅಥವಾ ನಿಮ್ಮ ಹುಟ್ಟು ಹಬ್ಬ ಬಂದಾಗ ನೀವು ಸಾಧಿಸಿದ್ದೇನು ಎನ್ನುವುದನ್ನು ಪ್ರಶ್ನಿಸಿಕೊಳ್ಳಿ. ಆಗ ನಾನು ಹೇಳಿದ್ದು ಸ್ವಲ್ಪವಾದರೂ ಸರಿ ಎನ್ನಿಸುತ್ತದೆ.