ಇರಲಾರದೆ ಇರುವೆ ಬಿಟ್ಕೊಂಡ ಸಾಫ್ಟ್ವೇರ್ ಎಂಜಿನಿಯರ್!

ಇರಲಾರದೆ ಇರುವೆ ಬಿಟ್ಕೊಂಡ ಸಾಫ್ಟ್ವೇರ್ ಎಂಜಿನಿಯರ್!

'ಇರಲಾರದೆ ಇರುವೆ ಬಿಟ್ಕೊಂಡ' ಅನ್ನೋ ಮಾತಿದೆಯಲ್ಲ, ಹಾಗೆ ಆಗಿದೆ ಈ ಉತ್ತರ ಭಾರತೀಯ ಮೂಲದ ಪ್ರಶಾಂತ್ ಚುಬೇಯ್ ಅನ್ನೋ ಸಾಫ್ಟ್ವೇರ್ ಎಂಜಿನಿಯರ್ ಮಾಡ್ಕೊಂಡಿರೋ ಕೆಲಸ.

ಹೊಟ್ಟೆ ಪಾಡಿಗೆ ಅಂತ ಹುಟ್ಟಿದ ಊರು ಬಿಟ್ಟು ಬೆಂಗಳೂರಿಗೆ ಬಂದ ಈ ಆಸಾಮಿ, ಪ್ರತಿಷ್ಟಿತ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು,ಜೇಬು-ಹೊಟ್ಟೆ ತುಂಬಿಸಿಕೊಂಡು , ಅದರ ಕೊಬ್ಬು ಜಾಸ್ತಿಯಾಗಿ My Love for South Indians ಅನ್ನೋ ಥರ್ಡ್ ರೇಟ್ ಲೇಖನ ಬರೆದಿದ್ದು ಅಲ್ಲದೆ, ಪುಣ್ಯಾತ್ಮ ಅದನ್ನ ಕಂಪೆನಿಯ ಮಿಂಚೆ ವಿಳಾಸದಲ್ಲಿ ತಿರುಪತಿ ಪ್ರಸಾದದಂತೆ ಹಂಚಿ ಸಿಕ್ಕಿ ಬೀಳಬಾರದಿದ್ದವರ ಕೈಗೆ ಸಿಕ್ಕಿ ಬಿದ್ದು, ಅವನು ಮಾಡಿದ ತಪ್ಪಿಗೆ ಕೆಲಸ ಕಳೆದು ಕೊಂಡಿದ್ದಾನೆ.

ಕೆಲಸ ಏನೋ ಕಳೆದು ಕೊಂಡ, ಆದರೆ ಈಗ ಮಾರ್ಕೆಟ್ನಲ್ಲಿ ಒಳ್ಳೆ openings ಇದೆ, ಸುಲಭವಾಗಿ ಒಳಗೆ ಸೇರಿಕೊಂಡರು ಸೇರಿಕೊಳ್ಳುತ್ತಾನೆ.ಅದೇ ಒಂದಿಷ್ಟು ದಿನ ಕೆಲಸವಿಲ್ಲದೇ ಮನೆಯಲ್ಲೇ ಇದ್ದ್ರೆ ಆಗ ಅವನ ಕೊಬ್ಬು ಕರಗಬಹುದೇನೋ?, ಅವನ ಅದೃಷ್ಟಕ್ಕೆ ಯಾರ ಕೈಗೂ ಸಿಕ್ಕಿ ಬಿದ್ದಿಲ್ಲ, ಬಿದ್ದರೆ ಅವನ ದಕ್ಷಿಣ ಭಾರತೀಯರ ಪ್ರೀತಿಗೆ ಒಂದಿಷ್ಟು ಪ್ರೇಮದ ಕಾಣಿಕೆ ಸಿಗುತಿತ್ತು.

ಹಿಂದೊಮ್ಮೆ 'ಸ್ಯಾನ್ ಮಿತ್ರ' ಅನ್ನೋ ಕೊಲ್ಕತ್ತದವ ಅಮೇರಿಕನ್ ಮೂಲದ ಕಂಪೆನಿಯಿಂದ ಇಂತದ್ದೆ ಕೆಲ್ಸಕ್ಕೆ ಕೈ ಹಾಕಿ, ಬೆಂಗಳೂರಿಂದ ಹೊರದಬ್ಬಿಸಿಕೊಂಡಿದ್ದ, ಆಮೇಲೆ ಮತ್ತಿನ್ನೊಂದು ಕಂಪೆನಿಯಲ್ಲಿ ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಉದ್ಯೋಗಿಯಿಂದಾಗಿ ಆ ಕಂಪೆನಿ ಕನ್ನಡ ಪರ ಹೋರಾಟಗಾರರ  ಆಕ್ರೋಶಕ್ಕೆ ತುತ್ತಾಗಿತ್ತು.

ಹೊಟ್ಟೆ ಪಾಡಿಗೆ ಅಂತ ಬೆಂಗಳೂರಿಗೆ ಬಂದವರು ತಾವು ಬಂದಿದ್ದರಿಂದಲೇ ಬೆಂಗಳೂರು ಬೆಳಕು ಕಾಣುತ್ತಿದೆ,ಉದ್ಧಾರ ಆಗ್ತಿದೆ ಅನ್ನೋ ಭ್ರಮೆಯಲ್ಲಿ ಇರುವಂತಿದೆ.ತಾವಿರುವ ಜಾಗದ ಸಂಸ್ಕೃತಿ,ಅಚಾರ,ವಿಚಾರ ,ಭಾಷೆಗೆ ಗೌರವ ನೀಡಿ ಬದುಕುವುದನ್ನ ಇವರು ಕಲಿಯಬೇಕಿದೆ.ಇಲ್ಲದಿದ್ದರೆ ಇಂತವರಿಗೆ ನಾವೇ ಖುದ್ದಾಗಿ ಕಲಿಸಬೇಕಿದೆ.

Rating
No votes yet

Comments