ಗಾಯಕನೊಬ್ಬನಿಗೆ ಶ್ರದ್ದಾಂಜಲಿ
ಗಣಪತಿ ಹಬ್ಬ ಬಂತೆಂದರೆ ಎಲ್ಲೆಡೆ ಗಣಪತಿ ಇಡುವುದು ಆರ್ಕೆಸ್ಟ್ರಾ ಮಾಡುವುದು ಸಾಮಾನ್ಯ. ಅದರಂತೆ ಶಿಕಾರಿಪುರದ ಹಿಂದೂ ಮಹಾ ಸಭೆಯ ಪರವಾಗಿ ಹುಚ್ಚರಾಯ ದೇವಸ್ಥಾನದ ಆವರಣದಲ್ಲಿ ಸುಮಾರು 13ದಿನ ಗಣಪತಿ ಪ್ರತಿಷ್ಠಾಪಿಸುತ್ತಾರೆ. 3 ವರ್ಷಹಿಂದೆ ಸ್ನೇಹಿತ ರವಿಸಿಂಗ್ ಖಜಾಂಚಿಯಾಗಿದ್ದ, ಒಂದುಸೂರಿ ಯಾವುದಾದರೂ ಒಳ್ಳೆ ಆರ್ಕೆಸ್ಟ್ರಾ ಇದ್ರೆ ಹೇಳು ಅಂದ. ನಮ್ಮಕಡೆ ಚಲನ ಚಿತ್ರ ಗೀತೆಗಳಿಗೆ ಇರುವ ಮಹತ್ವ ಮತ್ತಿನ್ಯಾವುದೇ ಸಂಗೀತಕ್ಕೂ ಇಲ್ಲ. ಹಾಗೇ ಇದಕ್ಕೆ ಸಾವಿರಾರು ಜನ ಸೇರುತ್ತಾರೆ. ರಾತ್ರಿ 3ಆದರೂ ಮನೆಗೆ ಹೋಗುವುದೇ ಇಲ್ಲ. ಕಡೆಗೆ ಬೇಸತ್ತು ಆರ್ಕೆಸ್ಟ್ರಾದವರೆ ಲೈಟ್ ಆಫ್ ಮಾಡಿ ಬಲವಂತವಾಗಿ ಕಾರ್ಯಕ್ರಮ ಮುಗಿಸುತ್ತಾರೆ.
ರವಿಸಿಂಗ್ ಹೇಳಿದ್ದಾನಲ್ಲಾ ಅಂತ ಭದ್ರವಾತಿ, ಬೆಂಗಳೂರು, ಶಿವಮೊಗ್ಗದಲ್ಲಿ ಇರುವ ನ್ನ ಸ್ನೇಹಿತರಿಗೆ ಕರೆ ಮಾಡಿ ಒಂದು ಒಳ್ಳೆ ಆರ್ಕೆಸ್ಟ್ರಾ ಟೀಮ್ ಕಳಿಸಲು ಮನವಿ ಮಾಡಿದೆ. ಟೀಮ್ ಏನೋ ಸಿಕ್ಕಿತು ಆದರೆ ಅದು ನಮ್ಮ ಡೇಟ್ ಗೆ ಸರಿ ಹೊಂದಲಿಲ್ಲ. ಒಂದು ದಿನ ಸಾಗರದ ಭೀಮನಕೋಣೆಯ ಸ್ನೇಹಿತ ಶ್ರೀಧನ್, ಸೂರಿ ನಮ್ಮದು "ಸ್ವರಾಂಜಲಿ"ಯಂತ ಒಂದು ಆರ್ಕೆಸ್ಟ್ರಾ ಮಾಡಿಕೊಂಡಿದ್ದೀವಿ. ಆದರೆ ಭಕ್ತಿಗೀತೆ,ಜಾನಪದ ಗೀತೆ ಹಾಗೂ ದಾಸರ ಪದಗಳನ್ನು ಮಾತ್ರ ಹಾಡುತ್ತೀವಿ. ಅವಕಾಶ ಕೊಡಿಸು ಅಂದ. ಲೇ ಇಲ್ಲಿ ಫಿಲ್ಮ್ ಸಾಂಗ್ಸ್ ಇಷ್ಟಪಡುತ್ತಾರೆ. ನಿನ್ನದು ವರ್ಕ್ ಔಟ್ ಆಗಲ್ಲ ಅಂದೆ. ನಿಮ್ಮ ಕಮಿಟಿಯೇ ಇದೆ. ಏನಾದರೂ ಮಾಡಿ ಒಪ್ಪಿಸು ಅಂತ ಗಂಟು ಬಿದ್ದ, ಕಡೆಗೆ 7ಸಾವಿರಕ್ಕೆ ಕಾರ್ಯಕ್ರಮ ಕೊಟ್ಟಿದ್ದಾಯಿತು. ಊರಲ್ಲೆಲ್ಲಾ ಹಾಗೂ ಹಳ್ಳಿಗಳಲ್ಲಿ ಭಾರೀ ಆರ್ಕೆಸ್ಟ್ರಾ ಅಂತ ಅನೌಂನ್ಸ್ ಮಾಡಿಸಿದ್ದಾಯಿತು.
ಸಾವಿರಾರು ಜನ ಸೇರಿದ್ದಾರೆ. ಇವರು ಮೊದಲು ಪ್ರಾರ್ಥನೆ ಮಾಡಿದರು. ನಂತರ ಸುಭಾಷ್ ಹಾರೇಗೊಪ್ಪ ಎಂಬ ಗಾಯಕ ದಾಸರ ಪದಗಳನ್ನು ಹಾಡಲು ಆರಂಭಿಸಿದ. ಕಮಿಟಿಯವರೆಲ್ಲಾ ನನ್ನನ್ನೇ ನೋಡಲು ಆರಂಭಿಸಿದರು. ಇನ್ನು ಎಲ್ಲರೂ ಉಗೀತಾರೆ ಅಂತ ಗೊತ್ತಾಗೋಯ್ತು. ಸುಮ್ಮನೆ ಏನೂ ಗೊತ್ತಿಲ್ಲದವನಂತೆ ಕುಳಿತು ಬಿಟ್ಟೆ. ಆದರೆ ಆತ ಕಣ್ಣು ಮುಚ್ಚಿ ಹಾಡುತ್ತಿದ್ದ ರೀತಿ ಹೇಗಿತ್ತೆಂದರೆ ಕೂತವರಿಗೆಲ್ಲಾ ರೋಮಾಂಚನವಾಗುತ್ತಿತ್ತು. ಆತನ ಹಾಡು ಮುಗಿಯುತ್ತಿದ್ದಂತೆ ಸೀಟಿ ಚಪ್ಪಾಳೆಗೆ ಎಗ್ಗೇ ಇರಲಿಲ್ಲ. ದುಡ್ಡಿನ ಸುರಿಮಳೆಯೇ ಆಗಿ ಹೋಯಿತು. ಒನ್ಸ್ ಮೋರ್ ಅಂತ ಹಳ್ಳಿಯವರು ಕೂಡ ಕೂಗಲು ಆರಂಭಿಸಿದರು. ಅಷ್ಟೊತ್ತು ಕುಗ್ಗಿ ಹೋಗಿದ್ದ ನಾನು ಕಾಲರ್ ಏರಿಸಿ ಕಾಲ್ ಮೇಲೆ ಕಾಲ್ ಹಾಕಿಕೊಂಡು ಪೋಸ್ ನೀಡಲು ಆರಂಭಿಸಿದೆ. ಯಾಕೆಂದರೆ ಇವರನ್ನು ಕರೆಸಿದ್ದೇ ನಾನೆ ಅಲ್ಲವಾ. ನಂತರ ಸುಮಾರು 15ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ. ಆತನ ಕಂಠ ಎಲ್ಲರನ್ನೂ ಆಕರ್ಷಿಸುವಂತಿತ್ತು.
ಆಮೇಲೆ ಆತನನ್ನು ಪರಿಚಯ ಮಾಡಿಕೊಂಡೆ, ಸಂಗೀತದಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದೇನೆ. ಸಾಗರದ ಹಾರೇಗೊಪ್ಪ ಗ್ರಾಮದ ಶ್ರೀಪಾದ್ ಮತ್ತು ಸುನಂದ ದಂಪತಿಗಳ ಪುತ್ರ ಎಂದು ತಿಳಿಯಿತು. ಬೆಕ್ಕಿನ ಕಣ್ಣು, ಉತ್ತಮ ಹೈಟ್, ಆಕರ್ಷಕವಾಗಿದ್ದ. ತುಮಕೂರಿನ ಕಾಲೇಜೊಂದರಲ್ಲಿ ಸಂಗೀತ ಟೀಚರ್ ಆಗಿದ್ದೇನೆ. ಶ್ರೀಧನ್ ಈ ಟೀಮ್ ಕಟ್ಟಿದ್ದೇನೆ ಎನ್ನುವುದಕ್ಕಾಗಿ ಇವರ ಜೊತೆ ಬಂದು ಹಾಡುತ್ತೇನೆ. ನನ್ನದೇ ಆದ ದಾಸರ ಪದಗಳ ಹಲವಾರು ಕ್ಯಾಸೆಟ್ ಗಳನ್ನು ಮಾಡಿದ್ದಾಗಿ ಆತ ಹೇಳುತ್ತಿದ್ದಾಗ. ಇಂತಹ ದೊಡ್ಡ ವ್ಯಕ್ತಿ ಇಷ್ಟೊಂದು ಸಿಂಪಲ್ ಆಗೀದ್ದಾನಲ್ಲಾ ಅನ್ನಿಸಿತು. ಉಚಿತವಾಗಿ ಕೂಡ ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಡುತ್ತೇನೆ ಅಂದ. ಹಾಗೇ ಆತನ ಕಂಠ ನನ್ನಲ್ಲಿ ಹೊಟ್ಟೆ ಉರಿ ಕೂಡ ತರಿಸಿತ್ತು. ಕಾರಣ ನನಗೆ ಆ ಕಂಠ ಇಲ್ಲವಲ್ಲ ಎಂದು. ಅಂದಿನ ಕಾರ್ಯಕ್ರಮದಲ್ಲಿ ನನಗೂ ವೇದಿಕೆ ಬಿಟ್ಟುಕೊಟ್ಟಿದ್ದರು. ಒಂದಿಷ್ಟು ಮಿಮಿಕ್ರಿ ಮಾಡಿ ಜನರನ್ನು ರಂಜಿಸಿದ್ದೆ. ಈ ಘಟನೆ ನಡೆದು ವರ್ಷಗಳೇ ಕಳೆದಿದೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಸುಭಾಷ್ ಹಾರೇಗೊಪ್ಪ (34), ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಪತ್ನಿ ಹಾಗೂ 2ವರ್ಷದ ಗಂಡು ಮಗುವನ್ನು ಅಗಲಿದ್ದಾರೆ ಎನ್ನುವುದನ್ನು ನೋಡಿದೆ. ನನಗಾದ ಆಘಾತ ಅಷ್ಟಿಷ್ಟಲ್ಲ. ತಕ್ಷಣವೇ ಶ್ರೀಧನ್ ಗೆ ಪೋನ್ ಮಾಡಿ ಏನೋ ಇದು ಅಂದೆ. ಇಲ್ಲಾ ಮನೆಯಲ್ಲಿ ಟಿವಿ ನೋಡುತ್ತಾ ಕೂತಾಗಲೇ ಹೃದಯಾಘಾತವಾಗಿದೆ ಎಂದ. ಮರುಕ್ಷಣದಿಂದಲೇ ಆತ ಹೇಳಿದ ಹಾಡುಗಳು ನನ್ನ ಕಿವಿಯಲ್ಲಿ ಗುನುಗಲು ಆರಂಭಿಸಿತು. ಸಿ.ಅಶ್ವಥ್ ರಂತೆ ತನ್ನದೇ ವಿಶಿಷ್ಟ ಕಂಠದಿಂದ ಸುಭಾಷ್ ಪ್ರಸಿದ್ದಿ ಪಡೆದಿದ್ದ ಎನ್ನುವ ವಿಷಯ ತಿಳಿದಾಗ ದೇವರು ಎಷ್ಟು ಕ್ರೂರಿ ಅನ್ನಿಸಿತು. ಒಳ್ಳೆಯವರನ್ನು ಬಿಡುವುದೇ ಇಲ್ಲವಲ್ಲಾ ಅನ್ನಿಸಿತು.
ಇಂತಹ ಗಾಯಕರು ಬೆಳಕಿಗೇ ಬರುವುದೇ ಇಲ್ಲವಲ್ಲಾ ,
ಇದು ಯಾಕೆ ಎನ್ನುವ ಪ್ರಶ್ನೆ ಕಾಡಲು ಆರಂಭಿಸಿದೆ. ಏನೇ ಆಗಲಿ ಒಬ್ಬ ಉತ್ತಮ ಗಾಯಕ ನಮ್ಮನ್ನು ಅಗಲಿದ್ದಾನೆ. ಆತನಿಗೆ ಶ್ರದ್ದಾಂಜಲಿ ಅರ್ಪಿಸುವುದರ ಜೊತೆಗೆ ಆತನ ಮಗನಿಗೆ ಆ ದೇವರು ಉತ್ತಮ ಕಂಠ ನೀಡುವ ಮೂಲಕ ಉತ್ತಮ ಗಾಯಕನನ್ನಾಗಿ ಮಾಡಲಿ. ಅವನು ಪ್ರಸಿದ್ದಿ ಹೊಂದಲಿ ಎನ್ನುವುದೇ ನನ್ನ ಆಶಯ. ಸುಭಾಷ್ ಗೆ ಆ ದೇವರು ಚಿರಶಾಂತಿ ನೀಡಲಿ.