ಪುರೋಹಿತರಿಂದಲೂ ಹಾಸ್ಯ ಹುಟ್ಟುತ್ತದೆ "ಓದಿ ಎಂಜಾಯ್ ಮಾಡಿ"

ಪುರೋಹಿತರಿಂದಲೂ ಹಾಸ್ಯ ಹುಟ್ಟುತ್ತದೆ "ಓದಿ ಎಂಜಾಯ್ ಮಾಡಿ"

ಬರಹ

ನಮ್ಮಲ್ಲಿ ಒಂದು ಯುವ ಪುರೋಹಿತರ ತಂಡ ಇದೆ. ಎಲ್ಲರೂ ಸಮಾನ ವಯಸ್ಕರು ಹಾಗೇ ಸಮಾನ ಮನಸ್ಕರು. ಇವರು ಪುರೋಹಿತಕ್ಕೆ ಎಂದು ಹೋದಾಗ ಅಲ್ಲಿ ನಡೆದ ಹಾಸ್ಯ ಘಟನೆಯನ್ನು ಒಬ್ಬರು ಮತ್ತೊಬ್ಬರಿಗೆ ಹೇಳುತ್ತಾ ಎಂಜಾಯ್ ಮಾಡುವುದು ಇವರ ಹವ್ಯಾಸ. ಇವರು ಹೇಳುವ ಹಾಸ್ಯ ಪ್ರಹಸನಗಳು ನಿಶ್ಚಿತವಾಗಿ ಬೇರೆಯದಕ್ಕಿಂತ ಭಿನ್ನವಾಗಿರುತ್ತದೆ. ಹಾಗೇ ಕೆಲವೊಮ್ಮೆ ತಮ್ಮನ್ನೇ ಹಾಸ್ಯ ಪ್ರಸಂಗಗಳಲ್ಲಿ ತೊಡಗಿಸಿಕೊಳ್ಳುವುದು ಇವರ ವಿಶೇಷತೆಯಾಗಿದೆ. ಅವರ ಹೆಸರುಗಳನ್ನು ಯಾಕೆ ಪ್ರಸ್ತಾಪಿಸುತ್ತಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಅವರ ಕಾಯಕಕ್ಕೆ ತೊಂದರೆಯಾಗಬಾರದು ಎಂದು. ಅವರು ನನ್ನ ಬಳಿ ಹಂಚಿಕೊಂಡ ಕೆಲವು ಹಾಸ್ಯ ಪ್ರಹಸನಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನಗ್ತೀರಾ ಎನ್ನುವುದು ನನ್ನ ಭಾವನೆ.

ಒಮ್ಮೆ ಈ ಪುರೋಹಿತರ ತಂಡ ಶಿಕಾರಿಪುರದ ಹಳ್ಳಿಯೊಂದರಲ್ಲಿ ಆಂಜನೇಯ ದೇವರ ಪ್ರತಿಷ್ಠಾಪನೆಗೆ ತೆರಳಿದ್ದಾರೆ. ಹೋಮ, ಹವನ ಎಲ್ಲಾ ಮುಗಿಯಿತು. ಇನ್ನೇನು ಪ್ರಸಾದ ವಿನಿಯೋಗ ಮಾಡಬೇಕು ಎನ್ನುವಷ್ಟರಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬ ನೆಲದ ಮೇಲಿಂದ ಟಂಗನೆ ಜಿಗಿದು ಕಿಟಕಿಯಲ್ಲಿ ಕೂತಿದ್ದಾನೆ. ನಂತರ ಅಲ್ಲಿಂದ ಹಾರಿ ಬಾಗಿಲ ಮೇಲೆ ಕುಳಿತಿದ್ದಾನೆ. ನೆರೆದಿದ್ದವರೆಲ್ಲಾ ತಕ್ಷಣಕ್ಕೆ ಗಾಬರಿಯಾಗಿದ್ದಾರೆ. ಇದ್ಯಾಕೆ ಈ ವಯ್ಯ ಹಿಂಗಾಡ್ತಾನೆ ಅಂತ. ಆತ ನಾನು ಆಂಜನೇಯ, ನನ್ನನ್ನು ಪೂಜಿಸಿ ಎಂದು ಅರಚಾಡಿದ್ದಾನೆ. ನಮ್ಮ ಯುವ ಪುರೋಹಿತರ ತಂಡ ತಕ್ಷಣವೇ ಬುದ್ದಿವಂತಿಕೆ ಉಪಯೋಗಿಸಿ ದೇವರೆ ನಮ್ಮ ಬಳಿ ಬನ್ನಿ ಪೂಜೆ ಮಾಡುತ್ತೇವೆ ಎಂದು ಆತನಿಗೆ ಮೊದಲು ಗೋಮೂತ್ರ ಸೇವಿಸಬೇಕು ಎಂದಿದ್ದಾರೆ. ಅದಕ್ಕೆ ಆತ ಕೈ ಮುಂದೆ ಒಡ್ಡುತ್ತಿದ್ದಂತೆಯೇ ಹೋಮಕ್ಕೆ ತುಪ್ಪ ಹಾಕುವ ಸೌಟಿನಲ್ಲಿ ಮೂರು ಸೌಟು ಗೋಮೂತ್ರ ಕುಡಿಸಿದ್ದಾರೆ. ಅದರ ಕಿಕ್ಕಿಗೆ ವ್ಯಕ್ತಿಯ ಮೇಲೆ ಬಂದಿದ್ದ ದೇವರು ಕ್ಷಣಾರ್ಧದಲ್ಲಿ ಮಾಯವಾಗಿ ಸ್ವಾಮಿ ನೀವು ನನಗೆ ಕೊಟ್ಟ ತೀರ್ಥ ಯಾವುದು ಎಂದಿದ್ದಾನೆ. ಇದು ಆಂಜನೇಯನ ತೀರ್ಥ ಎಂದಿದ್ದಾರೆ. ತೀರ್ಥ ಕುಡಿದ ಮಹಾರಾಯ ಕೆಲವೇ ಕ್ಷಣಗಳಲ್ಲಿ ದೇವಸ್ಥಾನದಿಂದ  ಔಟ್ ಆಗಿದ್ದಾನೆ. ಆ ಊರಿನವರು ಇವತ್ತಿಗೂ ಹೇಳುತ್ತಾರೆ. ಮತ್ತೆ ಆ ವ್ಯಕ್ತಿಯ ಮೇಲೆ ದೇವರೇ ಬಂದಿಲ್ಲವಂತೆ.

ಪಕ್ಕದ ಹಳ್ಳಿಯೊಂದರಲ್ಲಿ ಲಂಬಾಣಿ ಜನಾಂಗದ ಮದುವೆಗೆ ನಮ್ಮ ಯುವ ಪುರೋಹಿರೊಬ್ಬರನ್ನು ಆಹ್ವಾನಿಸಲಾಗಿತ್ತು. ಅದು ರಾತ್ರಿ ಎಂಟರ ಹೊತ್ತಿಗೆ ಇದ್ದ ಮದುವೆ. ಇಲ್ಲೇ ಪಕ್ಕದ ಹಳ್ಳಿಯೆಂದು ನಮ್ಮ ಪುರೋಹಿತರು ಸಂಜೆ 7-30ಕ್ಕೆ ಮನೆ ಬಿಟ್ಟಿದ್ದಾರೆ. ಹಳ್ಳಿಯ ರಸ್ತೆಯಲ್ಲಿ ದೀಪವಿಲ್ಲದ ಕಾರಣ ಗ್ರಾಮಕ್ಕೆ ದಾರಿಯಾವುದು ಎನ್ನುವುದು ಗೊತ್ತಾಗದೇ ಗದ್ದೆಗಳಿಗೆ ಹೋಗುವ ರಸ್ತೆಯಲ್ಲಿ ಬೈಕ್ ಚಲಾಯಿಸಿದ್ದಾರೆ. ಇದೇನು ಅಕ್ಕ ಪಕ್ಕ ಮೆಕ್ಕೆಜೋಳದ ಗದ್ದೆ ಇದೆಯೆಲ್ಲಾ ಎಂದು ಬರುತ್ತಿದ್ದ ಒಬ್ಬರಿಗೆ ಸ್ವಾಮಿ ಗ್ರಾಮದ ದಾರಿ ಇದೇನಾ ಎಂದಿದ್ದಾರೆ. ಇದು ಗ್ರಾಮಕ್ಕೆ ಹೋಗಲ್ಲ ನನ್ನ ಗದ್ದೆಗೆ ಹೋಗುತ್ತದೆ ಎಂದು ನಿಜವಾದ ದಾರಿ ತೋರಿಸಿದ್ದಾನೆ. ಪುರೋಹಿತರು ಅಂತೂ 8-30 ಸುಮಾರಿಗೆ ಮದುವೆಯ ಮನೆ ತಲುಪಿದ್ದಾರೆ. ಅಲ್ಲಿ ಬಾಕ್ಸ್ ಚರಂಡಿ ಕಾಮಗಾರಿಗೆಂದು ಎಲ್ಲರ ಮನೆಯ ಮುಂಭಾಗದಲ್ಲಿ ಆಳೆತ್ತೆರದಷ್ಟು ಗುಂಡಿಯನ್ನು ತೋಡಲಾಗಿತ್ತು. ಮನೆಯಿಂದ ರಸ್ತೆಗೆ ಬರಲು ಪ್ರತಿಯೊಬ್ಬರ ಮನೆಯೂ ಒಂದು ಮರದ ಹಲಗೆ ಇಟ್ಟುಕೊಂಡಿದ್ದಾರೆ. ಪುರೋಹಿತರು ಆ ಹಲಗೆಯ ಮೇಲೆ ನಿಧಾನವಾಗಿ ಕಾಲಿಟ್ಟು ಮದುವೆಯ ಮನೆಯ ಒಳಗೆ ಸೇರಿದ್ದಾರೆ. ಇನ್ನು ವಾಪಸ್ಸು ಊರಿಗೆ ಹೋಗಬೇಕೆಲ್ಲಾ ಎಂದು ಪುರೋಹಿತರು ಗಂಡು ಹೆಣ್ಣನ್ನು ಬೇಗ ಕರೆಯಿರಿ ಎಂದು ಅವರ ಸಂಬಂಧಿಗಳಿಗೆ ನುಡಿದ ಮರುಕ್ಷಣದಲ್ಲೇ ಗಂಡು ಹೆಣ್ಣು ಮರದ ಹಲಗೆ ಮೇಲೆ ಹಾಜರ್. ಇವರಿಗೆ ಹಾರ ಬದಲಾಯಿಸಿಕೊಳ್ಳಲು ಹೇಳಿ ಎಂದು ಬಗ್ಗಿ ತಮ್ಮ ಚೀಲಕ್ಕೆ ಕೈಹಾಕಿದ್ದಾರೆ. ಎದ್ದಾಗ ಎದುರುಗಡೆಯಿದ್ದ ಗಂಡು ಹೆಣ್ಣು ಮಾಯ. ಇವರಿಬ್ಬರೂ ಎಲ್ಲಿ ಹೋದರು ಎಂದು ನೋಡಿದರೆ ಗಂಡು ಹೆಣ್ಣಿನ ಭಾರಕ್ಕೆ ಹಾಕಿದ್ದ ಮರದ ಹಲಗೆ ತಿರುಗಿ, ಇಬ್ಬರೂ ಚೆರಂಡಿಯಲ್ಲಿ ಬಿದ್ದಿದ್ದಾರೆ. ಅವರುಗಳನ್ನು ಸಂಬಂಧಿಕರು ಎಬ್ಬಿಸಿ ಅದೇ ಅವಸ್ಥೆಯಲ್ಲಿ ಹಾರ ಬದಲಾಯಿಸಿದ್ದಾರೆ. ಗಂಡು ಹೆಣ್ಣು ಇಬ್ಬರ ಮುಖವೂ ಕೆತ್ತಿ ಹೋಗಿದ್ದನ್ನ ಕಂಡ ಪುರೋಹಿತರಿಗೆ ಒಂದೆಡೆ ನಗು ಮತ್ತೊಂದೆಡೆ ಊರಿಗೆ ಸೇರಬೇಕಲ್ಲಾ ಎನ್ನುವ ತವಕ.

ಇವರು ಹಿರಿಯ ಪುರೋಹಿತರು. ಇವರು ವೃತ್ತಿಯಲ್ಲಿ ಪುರೋಹಿತರು ಅಲ್ಲವಾದರೂ ಸರ್ಕಾರಿ ನೌಕರಿಯ ವೃತ್ತಿ ನಂತರ ಈ ಕಾಯಕ ಆರಂಭಿಸಿದ್ದಾರೆ. ಇವರಿಗೆ ಮದುವೆಯೊಂದಕ್ಕೆ ಆಹ್ವಾನಿಸಲಾಗಿತ್ತು. ಕೆಲವು ಮಂತ್ರಗಳನ್ನು ಹೇಳುವ ಮೂಲಕ ಮದುವೆ ಮುಗಿಸಿ ಮನೆಗೆ ಹಿಂತಿರುಗಿದರು. ಊಟ ಮಾಡಿ ಇನ್ನೇನು ಮಲಗಬೇಕು. ಹೆಣ್ಣಿನ ಕಡೆಯವರು ಪುರೋಹಿತರ ಮನೆಗೆ ಬಂದು ಸದ್ಯ ನೀವು ಇಲ್ಲೇ ಇದ್ದೀರಲ್ಲಾ ಅಂದರು. ಅದಕ್ಕೆ ಅವರು ನಿಮ್ಮ ಸಂಭಾವನೆಯೆಲ್ಲಾ ತಲುಪಿದೆ ಎಂದ ಮರುಕ್ಷಣದಲ್ಲೇ ಸಂಭಾವನೆಗೆ ಬೆಂಕಿ ಬಿತ್ತು ಹೆಣ್ಣಿಗೆ ತಾಳಿನೇ ಕಟ್ಟಿಸಿಲ್ವಲ್ರಿ. ಹಾ ಅಂದ ಪುರೋಹಿತರು, ಸೊಂಟ ನೋಡಿಕೊಂಡರು. ಪಂಚೆಯಲ್ಲಿ ಸಿಕ್ಕಿಸಿಕೊಂಡಿದ್ದ ತಾಳಿ ಹಾಗೇ ನೇತಾಡುತ್ತಿತ್ತು. ಇನ್ನು ಮರೆತೆ ಎಂದರೆ ತಮ್ಮ ಮರ್ಯಾದೆ ಹೋಗುತ್ತದೆ ಎಂದು ನಿಮ್ಮ ಜಾತಿಯಲ್ಲಿ ಸಂಜೆಯಲ್ಲವಾ ತಾಳಿಕಟ್ಟಸೋದು ಎಂದು ಪುನಃ ಕಲ್ಯಾಣ ಮಂಟಪಕ್ಕೆ ತೆರಳಿ ತಾಳಿ ಕಟ್ಟಿಸಿ ಬಂದಿದ್ದಾರೆ.

ರಾಜಸ್ತಾನದ ಮೂಲದ ಒಬ್ಬರ ಮದುವೆಯ ಮೆರವಣಿಗೆ ದೇವಸ್ಥಾನದ ಕಡೆಗೆ ಹೋಗುತ್ತಿತ್ತು. ಗಂಡನ್ನು ಕುದುರೆ ಎಂದು ಹೇಳಬಹುದಾದ ಪ್ರಾಣಿಯ ಮೇಲೆ ಕೂರಿಸಲಾಗಿತ್ತು. ಅದಕ್ಕೆ ಕಜ್ಜಿಯೆಲ್ಲಾ ಆಗಿದ್ದು, ಕುಳ್ಳಗೆ ಇತ್ತು. ಇದರಿಂದಾಗಿ ಗಂಡು ಕೂತಂತೆ ಕಾಣದೆ. ಕುದುರೆಯ ಮೇಲೆ ನಡೆದುಕೊಂಡು ಹೋಗುವಂತೆ ಭಾಸವಾಗುತ್ತಿತ್ತು. ಗಂಡಿಗೆ ಮುಖ ಮುಚ್ಚುವಷ್ಟು ಹಾರ ಹಾಕಲಾಗಿತ್ತು. ಹಾಗೇ ಕೈಗೊಂದು ಕತ್ತಿ. ಪಾಪ ಆತ ಹೂವನ್ನು ಬದಿಗೆ ಸರಿಸಿಕೊಳ್ಳುತ್ತಾ ದಾರಿ ನೋಡುತ್ತಿದ್ದ. ಮುಂದೆ ಹೋಗುತ್ತಿದ್ದ ವಾಲಗದವರು ಮಾತ್ರ ಸುಮ್ಮನೆ ಹೋಗುತ್ತಿದ್ದರು. ಇದ್ಯಾಕೆ ವಾಲಗದವರು ಸುಮ್ಮನೆ ಹೋಗುತ್ತೀದ್ದಾರಲ್ಲಾ ಎಂದು ನಮ್ಮ ಯುವ ಪುರೋಹಿತರನ್ನು ಪ್ರಶ್ನಿಸಿದೆ. ಈ ಕುದುರೆ ವಾಲಗದ ಶಬ್ದಕ್ಕೆ ಬೆದರುತ್ತೆ ಎಂದರು. ದೇವಸ್ಥಾನ ಬಂತು ಗಂಡು ಹಾಗೇ ಕುದುರೆ ಮೇಲೆ ನಿಂತಿದ್ದ, ದೇವರ ಪುಜೆಯೆಲ್ಲಾ ಆಯಿತು. ಬಾಯಿ ತಪ್ಪಿ ಪುರೋಹಿತರು ವಾಲಗ,ವಾಲಗ ಅಂದರು. ಅಷ್ಟು ಅಂದಿದ್ದೇ ತಡ ವಾಲಗದವರು ಬಾರಿಸುವುದಕ್ಕೆ ಶುರುಮಾಡಿದರು. ಎಲ್ಲರೂ ಏ,ಏ ಅನ್ನುತ್ತಿದ್ದಂತೆಯೇ ಅದರ ಶಬ್ದಕ್ಕೆ ಬೆದರಿದ ಕುದುರೆ ಗಂಡಿನ ಸಮೇತ ಎದುರುಗಡೆಯಿದ್ದ ಮನೆಯೊಳಕ್ಕೆ ನುಗ್ಗಿತು.  ಬಾಗಿಲು ಎತ್ತರ ಕಡಿಮೆ ಇದ್ದ ಕಾರಣ ಗಂಡು ತಲೆ ಬಗ್ಗಿಸಿಕೊಂಡೇ ಮನೆಯೊಳಕ್ಕೆ ನುಗ್ಗಿದ. ಕೆಲ ಕ್ಷಣದ ನಂತರ ಮೊದಲು ಗಂಡು ಹೊರ ಬಂದ, ನಂತರ ಮನೆಯ ಮಾಲೀಕ ಕುದುರೆಯನ್ನು ಹೊಡೆಯುತ್ತಾ ಹೊರ ಬಂದು ಗಂಡಿನ ಕಡೆಯವರಿಗೆ ಎರ್ರಾಬಿರ್ರಿ ಬಯ್ಯಲು ಆರಂಭಿಸಿದರು. ಯಾಕ್ ಸರ್ ಹೀಗೆ ಬಯ್ಯುತ್ತಿದ್ದೀರಾ ಗೊತ್ತಿಲ್ಲದೆ ಆಗಿ ಹೋಗಿದೆ ಎಂದು ಪುರೋಹಿತರು ನುಡಿಯುತ್ತಿದ್ದಂತೆ ರೀ ನಮ್ಮನೆಯವರೆಲ್ಲಾ ಒಳಗೆ ಮಲಗಿದ್ವಿ, ಈ ಕುದುರೆ ಮತ್ತು ಇವನು ನಮ್ಮ ಎದೆ, ತಲೆ ಮೇಲೆ ಕಾಲಿಡುವುದಲ್ಲದೆ ಅಡುಗೆ ಮನೆಯನ್ನು ಒಂದು ರೌಂಡು ಹಾಕಿ ಬಂದಿದ್ದಾರೆ ಎಂದಾಗ ಪುರೋಹಿತರಿಗೆ ನಗು ತಡೆಯಲು ಆಗಲೇ ಇಲ್ಲ.