ಇಸ್ಮಾಯಿಲರ ಮದುವೆ

ಇಸ್ಮಾಯಿಲರ ಮದುವೆ

ಬರಹ

ಹಾಸನದಿಂದ ಸಕಲೇಷಪುರದೆಡೆ ಒಂದಷ್ಟು ಮೈಲಿ ದೂರ, ಅತ್ತ ಎಡಕ್ಕೆ ತಿರುಗಿ "ಮಡ್ ರೋಡ್" ಎಂದರೂ ನಾಚುವಂತ ಅಸಾಧ್ಯವಾದ ರೋಡಿನಲ್ಲಿ ಒಂದೆರಡು ಮೈಲಿ - ಅಲ್ಲಿ ಒಂದು ಬಸ್ಸು ಮಾತ್ರ ಹಿಡಿಸುವಷ್ಟು ಅಗಲದ ರೋಡು - ಪಕ್ಕದಲ್ಲೇ ಚೆಂದವಾದ ಒಂದು ಮನೆ. ದಾರಿಯುದ್ದಕ್ಕೂ ಅಲ್ಲಿಲ್ಲಿ ಮನೆಗಳು - ಒಂದೆರಡು ಮುಖ ಕಂಡರೂ ಹೆಚ್ಚು ಎಂಬಂತಿದ್ದರೂ ಮನೆಯ ಸುತ್ತಲು ಬೆಂಗಳೂರಿನಲ್ಲಿ ಮಾತ್ರ ಸಾಮಾನ್ಯವೆಂಬಷ್ಟು ಜನಜಂಗುಳಿ. ತಲುಪತ್ತಲೇ ಎದುರಿಗೆ ಈ ಜನಸ್ತೋಮವನ್ನು ನಿಯಂತ್ರಿಸುತ್ತ , ಬಂದವರನ್ನು ಸ್ವಾಗತಿಸುತ್ತ ಸ್ವಚ್ಛ ಕನ್ನಡದಲ್ಲಿ ಮಾತನಾಡುತ್ತ ಸ್ವಾಗತಿಸುತ್ತಿದ್ದ ಪಾಳ್ಯದ ಹಮೀದ. ಅತ್ತಿತ್ತ ಪತ್ರಿಕೆಯ ಆಫೀಸುಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಸ್ನೇಹಿತರ ಮುಖಗಳು. ನಡೆಯುತ್ತಿದ್ದುದು ನಮ್ಮೆಲ್ಲರ ಆಪ್ತ ಸ್ನೇಹಿತ [:http://sampada.net/user/ismail|ಇಸ್ಮಾಯಿಲರ] ಮದುವೆ.

ನನ್ನ ಜೊತೆಗೆ ಬಂದಿದ್ದ ಇಬ್ಬರು ಸ್ನೇಹಿತರಿಗೆ ಅಲ್ಲಿದ್ದವರಲ್ಲಿ ಎಷ್ಟು ಜನರ ಪರಿಚಯವಿತ್ತೋ ತಿಳಿಯದು, ಈ-ಟಿವಿಯಲ್ಲಿ ಸುದ್ದಿ ಓದುತ್ತಿದ್ದ ಹಮೀದರನ್ನಂತೂ ಗುರುತಿಸಿದರು. ಇಂತಹ ಮಲೆನಾಡಿನಲ್ಲಿ ಮನೆ ಮಾಡಿಕೊಂಡಿದ್ದಾರಾದರೆ ಇಸ್ಮಾಯಿಲರ ತೋಟವೋ ಗದ್ದೆಯೋ ಇರಲೇಬೇಕೆಂದುಕೊಂಡು ಅತ್ತಿತ್ತ ಕೆಲವರಿಗೆ ಕೇಳುತ್ತ ಹತ್ತಿರವೇ ಇದ್ದ ಝರಿಯತ್ತ ನನಗೆ ತಿಳಿಯುವ ಮುಂಚೆಯೇ ಹೊರಟುಬಿಟ್ಟಿದ್ದರು!
"ಹೊಳೆಯ ಹತ್ತಿರ ಜಿಗಣೆಗಳಿವೆ" ಎಂದು ಅಲ್ಲಿದ್ದವರೊಬ್ಬರು ಹೇಳಿದಾಗ ನನಗೆ ಮೊಬೈಲು ಪ್ರಿಯವಾಯಿತು. ಇತ್ತೀಚೆಗೆ ಎಲ್ಲೆಲ್ಲೂ (ನಿಜವಾಗಲೂ) ಬೆನ್ನಟ್ಟುವ ಮೊಬೈಲ್ ನೆಟ್ವರ್ಕಿನ ಜೊತೆಗೆ ಬರುವ ಎಸ್ ಎಮ್ ಎಸ್ಸು, ಈ ಮೇಯ್ಲು, ಕೊನೆಗೆ ಫೋನ್ ಕಾಲೂ (ಕಾಲಲ್ಲ, Callಉ) ಎಷ್ಟೋ ಪಜೀತಿಗಳಿಂದ ನಮ್ಮನ್ನು ಉಳಿಸುತ್ತವೆ. ಮೊಬೈಲು ನನ್ನನ್ನ ಬಿಝಿ ಇಟ್ಟಿರುವಂತೆ ನನ್ನ ಸ್ನೇಹಿತರು ಕೆಳಗಿಳಿದು ಹೋಗಿ ಸುತ್ತಾಡಿಕೊಂಡು ಬಂದರು.

ಅತ್ತ ಈ‌ ಪಾಟಿ ಜನಜಂಗುಳಿ ಕಂಡ ಹಿರಿಯ ಪತ್ರಕರ್ತರೊಬ್ಬರು "ಹೇಯ್, ಇವತ್ತು ಧರಣಿ ನಡೆಸಬೇಕು ಕಣ್ರೋ, leftist ನಮ್ ಅಂಕಲ್ ಮದುವೆ - ಇಷ್ಟೊಂದ್ ಜನ್ರ ಮಧ್ಯೆ ಅದ್ಧೂರಿಯಾಗಿ ನಡೀತಿದೆ ಅಂದ್ರೆ ಹೆಂಗೆ?" ಎಂದು ಚಟಾಕಿ ಹಾರಿಸುತ್ತಿದ್ದರು. ಇತ್ತ ಗುಂಡ್ಕಲ್ ಸಾಹೇಬ್ರು ಕೈ ಕಾಲ್ ಪೆಟ್ಟು ಮಾಡ್ಕೊಂಡು ದಾರಿ ಪಕ್ಕದ ಕಲ್ಲೊಂದರ ಮೇಲೆ ಆಸನಾರೂಢರಾಗಿದ್ದರು. “ಏನಾಯ್ತ್ರಿ?” ಅನ್ನೋದರಿಂದ ಪ್ರಾರಂಭವಾದ ಚರ್ಚೆ ಎಂದಿನಂತೆ ಲಿನಕ್ಸ್, ಉಬುಂಟುವಿನತ್ತ ಹೊರಳಿತ್ತು. ಸರಿ, ಕಸ್ತೂರಿ ಬಣ್ಣದ ತುತ್ತೂರಿ ತೋರಿಸಿದಂತೆ ನಾನು ಲ್ಯಾಪ್ ಟಾಪಿನಲ್ಲಿ ಉಬುಂಟು, ಅದರಲ್ಲಿ ಕನ್ನಡ ಬರೋದನ್ನೂ, ಬರೆಯೋದನ್ನೂ, ಜೊತೆಗೆ ಕೆಲವು ಇಂಟರೆಸ್ಟಿಂಗ್ ಪ್ರೋಗ್ರಾಮುಗಳನ್ನೂ ತೋರಿಸುತ್ತ ಉಳಿದ ಸಮಯ ಕಳೆದೆ. "ಫ್ರೀ ಸಾಫ್ಟ್ವೇರ್ ಭಕ್ತರಾದ ನಮ್ ಇಸ್ಮಾಯಿಲ್ ಮದುವೇಲಿ ನೀವು ಎಲ್ಲರಿಗೂ ಲಿನಕ್ಸ್ ತೋರಿಸುತ್ತಿರೋದು ನಿಜವಾಗಲೂ significantಉ" ಎಂದು ಗುಂಡ್ಕಲ್ ಸಾಹೇಬ್ರು ಉದ್ಗರಿಸಿದ್ದರು.

ಇಸ್ಮಾಯಿಲರ ಮದುವೆ ನಾನು ಗಮನಿಸಿದ ಮೊದಲ ಮುಸ್ಲಿಮ್ ಮದುವೆ. ಮೊದಲ ನೋಟಕ್ಕೆ ಬಹಳ uncomplicated ಎನಿಸಿತು. ನಮ್ಮಣ್ಣನ ಮದುವೆ ಎರಡು ದಿನಗಟ್ಟಲೆ ನಡೆದು ಕಾಶೀ ಯಾತ್ರೆ ಎಲ್ಲ ಕಾಶೀನಾಥ್ ಮೂವಿಗಳ ಥರಾ ಸಿಕ್ಕಾಪಟ್ಟೆ ಬೋರ್ ಹೊಡೆಸಿದ್ದು ಜ್ಞಾಪಕವಾಯಿತು. ಇವರಲ್ಲಿ ವಿವಾಹ ಎರಡು ಗಂಟೆಯಲ್ಲೇ ಮುಗಿದುಹೋಯಿತು.

****

ಊಟ obviously ಎರಡು division. ನಮ್ಮಂತಹ ಕೆಲವರಿಗೆ ವೆಜ್ಜೀ ಊಟ. ಉಳಿದವರಿಗೆ ಮಾಮೂಲು. ಆದರೆ ಬಹಳ ಅಚ್ಚುಕಟ್ಟಾಗಿ ಏರ್ಪಡಿಸಿದ್ದರು.

ಮದುವೆಗೆ ಕರೆಯೋದಕ್ಕೆ ಇಸ್ಮಾಯಿಲ್ ನಮ್ಮ ಮನೆಗೆ ಬಂದಿದ್ದ ದಿನ ಇವರೂರು, ಇವರ ವಿವಾಹ – ಇವನ್ನು ಬಿಟ್ಟು ಉಳಿದೆಲ್ಲವನ್ನೂ (ಸಂಪದ, ಕನ್ನಡ ಫಾಂಟ್ಸು, ವಿಕಿಪೀಡಿಯ ಇತ್ಯಾದಿ) ಗಂಟೆಗಟ್ಟಲೆ ರಾಶಿ ಮಾತು ಆಡುತ್ತ ಕೊನೆಗೆ ಬಸವನಗುಡಿಯ ಪುಸ್ತಕಮಳಿಗೆಗಳಿಗೆ ಲಗ್ಗೆ ಇಡುತ್ತಲೂ ಸಮಯ ಕಳೆದುದ್ದರ ಪರಿಣಾಮ – ನನಗೆ ಇವರ ವಿವಾಹಕ್ಕೆ ಉಡುಗೊರೆ ತೆಗೆದುಕೊಂಡು ಹೋಗುವುದು "ಮನಾ ಹೆ (ಹೈ)" ಎಂಬುದು ತಿಳಿದಿರಲಿಲ್ಲ. :-)
ಎಲ್ಲರ ಮಧ್ಯೆ ನಾವು ಮಾತ್ರ ಉಡುಗೊರೆ ತೆಗೆದುಕೊಂಡು ಹೋಗಿ ಪಜೀತಿಗೆ ಸಿಕ್ಕಿಹಾಕಿಕೊಂಡು ಇಸ್ಮಾಯಿಲರನ್ನೂ ಪಜೀತಿಗೆ ಸಿಕ್ಕಿಸಿಹಾಕಿಬಿಟ್ಟೆವು. ಕೊನೆಗೆ ಸೂಟು ಬೂಟು ಹಾಕಿಕೊಂಡ ಇಸ್ಮಾಯಿಲರನ್ನು ನೋಡಿ "ಇವರು ಇಸ್ಮಾಯಿಲರೋ ಹೇಗೆ?” ಎಂದು ಜನರು ತಲೆಕೆಡಿಸಿಕೊಳ್ಳುತ್ತಿರುವಾಗ, ಸದ್ಯ, ಉಡುಗೊರೆ ಅವರ ಕೈಗೆ ರವಾನಿಸಿ ಜಾಗ ಖಾಲಿ ಮಾಡಿಬಿಟ್ಟೆವು ;-)

ಹಳೇ ರೋಡು - ಹಳೇ ಬೀಡು

ಹಾಸನಕ್ಕೆ ಹಿಂದಿನ ದಿನವೇ ತೆರಳಿದ್ದೆವು. ಎಲ್ಲ ಮಲೆನಾಡು ಸಮೀಪದ ಊರುಗಳಂತೆ ಇಲ್ಲೂ ಒಳ್ಳೆಯ ಹೋಟೆಲುಗಳಿಲ್ಲ.
ಇರುವ ಒಂದೆರಡು "ಚೆಂದ ಕಾಣುವ" ಲಾಡ್ಜಿಂಗುಗಳಲ್ಲಿ ಊಟ ಒಂದಿಷ್ಟೂ ಸರಿ ಇಲ್ಲ.

ಹಿಂದೆ ಅದ್ಯಾವಾಗ ಬೇಲೂರಿಗೆ ಹೋಗಿದ್ದೆವೋ, ರೋಡು ಮಾತ್ರ ಹೇಗಿದೆ ಎಂಬುದು ಜ್ಞಾಪಕವಿರಲಿಲ್ಲ. ಜೊತೆಗೆ ಬಂದಿದ್ದ ಸ್ನೇಹಿತನೊಬ್ಬ "ಬೇಲೂರು ಬೇಡ, ಹಳೇಬೀಡಿಗೆ ಹೋಗೋಣ ಕಣ್ರೋ. ಅಲ್ಲಿ ಕೆ ಎಸ್ ಮೂವ್ಸ್ ಕೆತ್ತಿದಾರಂತೆ" ಎಂದ.
ಇದಕ್ಕೆ ಉತ್ತರ ಹೇಳಲು ತೋಚದೆ ಸುಮ್ಮನಿದ್ದುದರ ಫಲವಾಗಿ ಜೊತೆಗೆ ನಡೆಯಬೇಕಾಯಿತು.

ಹಳೇಬೀಡಾದ್ರೇನು, ಬೇಲೂರಾದ್ರೇನು ನನ್ನ ಹತ್ತಿರ ಅಂತೂ SLR ಡಿಜಿಟಲ್ ಕ್ಯಾಮೆರ ಇಲ್ಲ, ಆದ್ದರಿಂದ ಇದೊಂದು ಸುಮ್ಮನೆ Dummy visit ಅನ್ನೋದು ನನ್ನ ತಲೇಲಿತ್ತು. ಪುಟ್ಟ ಡಿಜಿಟೆಲ್ ಕ್ಯಾಮೆರ ಹಿಡಿದು ಹಳೇಬೀಡಿನ ಶಿಲ್ಪಗಳೆಲ್ಲವನ್ನೂ ಸೆರೆ ಹಿಡಿಯೋದಕ್ಕೆ ಪ್ರಯಾಸ ಪಡುತ್ತಿದ್ದ ಸ್ನೇಹಿತನಿಗೆ ನನ್ನ ಅಭಿಪ್ರಾಯ ಪ್ರಾಮಾಣಿಕವಾಗಿ ತಿಳಿಸಲು ಹೋಗಿ ಸಾಕಷ್ಟು ಗುರ್ ಅನ್ನಿಸಿಕೊಂಡದ್ದಾಯಿತು.

ಹಳೇಬೀಡಿನ ರೋಡು, ಹಳೇ ರೋಡು. ರೋಡೇ ಅಲ್ಲ. ಮಂಡೆಗೆ ಮತ್ತು ಉಳಿದ ಭಾಗಗಳಿಗೊಂದೊಂದು ದಿಂಬು ಇಟ್ಟುಕೊಂಡು ಬಸ್ಸು ಹತ್ತಬೇಕು. ಪ್ರತಿಯೊಂದೂ ಎಲುಬು ಕಟ ಕಟ ಎನ್ನುವಷ್ಟು ಹಾರಾಡುತ್ತ ಎತ್ತಿ ಹಾಕುತ್ತ ನಡೆದ ಬಸ್ಸು ನಮಗೆ ಇನ್ನೆಂದೂ ಹಾಸನದಿಂದ ಹಳೇಬೀಡಿಗೆ ಸಾಮಾನ್ಯ ಬಸ್ ಹಿಡಿದು ಹೋಗಬಾರದೆಂಬ ಪಾಠ ಕಲಿಸಿತು. ಹ್ಜ್ಞೂಂ, ಕೆ ಎಸ್ ಮೂವ್ಸ್ ಶಿಲ್ಪಗಳನ್ನ ಕೆತ್ತಿದ್ರೂ!