ಐ.ಟಿ.ಐ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಬಯಲು ಮಾಡುವುದು ಕಾಪಿ ಹೊಡೆಸುವುದು ಎಷ್ಟರ ಮಟ್ಟಿಗೆ ಸರಿ?
ಬರಹ
ಐ.ಟಿ.ಐ ಎಂಬ ಅಲ್ಪಾವಧಿ ತಾಂತ್ರಿಕ ಕೋರ್ಸ್ ನ ಪರೀಕ್ಷೆಗಳು ಈ ಮುಂಚೆ ಹೇಗೆ ನಡೆಯುತ್ತಿತ್ತೋ ಗೊತ್ತಿಲ್ಲ. ಆದರೆ ಕಳೆದ 5-6 ವರ್ಷಗಳಿಂದ ಒಂದನೇ ತರಗತಿಯ ಪರೀಕ್ಷೆಗಳಾದರೂ ಸ್ವಲ್ಪ ಮಟ್ಟಿಗಾದರೂ ಕಟ್ಟು ನಿಟ್ಟಾಗಿ ನಡೆಯುತ್ತದೆಯೋ ಏನೋ ಆದರೆ ಐ.ಟಿ.ಐ ಪರೀಕ್ಷೆಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಹದಗೆಟ್ಟುಹೋಗಿದ್ದು. ಅದಕ್ಕಿಂತ ಕೆಳ ಮಟ್ಟದಲ್ಲಿ ನಡೆಯುತ್ತಿದೆ. ಇದು ರಾಜ್ಯದೆಲ್ಲೆಡೆ ಸಾಮಾನ್ಯವಾಗಿ ನಡೆಯುತ್ತಿರುವ ಪದ್ದತಿ ಎಂದರೂ ತಪ್ಪಾಗಲಾರದು. ಒಟ್ಟು 4ಪೇಪರ್ ಗೆ ಲಿಖಿತ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯ ಹಿಂದಿನ ದಿನವೇ ಪ್ರಶ್ನೆ ಪತ್ರಿಕೆಗಳು ಉತ್ತರದ ಸಮೇತ ಸಿಕ್ಕಿರುತ್ತದೆ. ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿ (ತರಬೇತುದಾರ) 2ಸಾವಿರ ರೂ ಕೊಟ್ಟು ಕೊಂಡುಕೊಳ್ಳುತ್ತಾನೆ. ಇದಕ್ಕೆಂದೇ ಹಲವು ಬ್ರೋಕರ್ ಗಳು ಪರೀಕ್ಷಾ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತಾರೆ.
ಹೋಗಲಿ ಇದನ್ನು ಓದಿಕೊಂಡು ಪರೀಕ್ಷೆ ಬರೆಯುತ್ತಾನಾ ಎಂದರೆ ಅದೂ ಇಲ್ಲ. ಅದನ್ನು ಸಣ್ಣ ಸಣ್ಣ ಚೀಟಿಯನ್ನಾಗಿ ಮಾಡಿಕೊಂಡು ಪರೀಕ್ಷಾ ಕೇಂದ್ರದಲ್ಲಿ ನಿರ್ಭಯವಾಗಿ ಬರೆಯುತ್ತಾನೆ. ಇದು ಹೇಗೆ ಸಾಧ್ಯ ನಿಮಗೆ ಅನ್ನಿಸಬಹುದು. ಆದರೆ ಸಾಧ್ಯ ಬಂದಂತಹ ಪರೀಕ್ಷಾ ಮೇಲ್ವಿಚಾರಕನಿಗೆ ಮತ್ತೆ ದುಡ್ಡು. ಲಿಖಿತ ಪರೀಕ್ಷೆ ಏನೋ ನೆಗೆದು ಬಿದ್ದು ಹೋಗಲಿ ಎಂದರೆ ಪ್ರಾಯೋಗಿಕ (practical) ಪರೀಕ್ಷೆ ಇದರ ಅಪ್ಪ. ಇಲ್ಲಿ ವಿದ್ಯಾರ್ಥಿ ಎಷ್ಟೇ ಚೆನ್ನಾಗಿ ಮಾಡಿದರೂ 1500ರೂ ಕಕ್ಕಲೇಬೇಕು. ಇಲ್ಲದೇ ಹೋದಲ್ಲಿ ಅಂಕ ಕಡಿಮೆ ನಿಶ್ಚಿತ. ಹೆಚ್ಚಿಗೆ ಹಣ ಕೊಟ್ಟವರಿಗೆ ಹೆಚ್ಚಿನ ಅಂಕ. ಇದು ಬೇರೇ. ಇದಲ್ಲದೆ ಆಂತರಿಕ (internal) ಅಂಕಗಳಿಗೆ ಮತ್ತೆ ದುಡ್ಡು.
ಒಟ್ಟು ಒಂದು ಪರೀಕ್ಷೆ ಮುಗಿಯುವುದರೊಳಗೆ ಪ್ರತೀ ವಿದ್ಯಾರ್ಥಿ 10 ರಿಂದ 12 ಸಾವಿರ ಖರ್ಚು ಮಾಡುತ್ತಾನೆ. ಅಂದರೆ ಒಂದು ಪರೀಕ್ಷಾ ಕೇಂದ್ರದಲ್ಲಿ 350 ರಿಂದ 400 ವಿದ್ಯಾರ್ಥಿಗಳಿ ಪರೀಕ್ಷೆ ಬರೆಯುತ್ತಾರೆ ಅಂದರೆ ಅಲ್ಲಿ ಲಕ್ಷಾಂತರ ರೂಗಳ ವಹಿವಾಟು ನಡೆಯುತ್ತದೆ. ಈ ಹಣ ಮೇಲ್ವರ್ಗದಿಂದ ಕೆಳಗಿನವರೆಗೆ ಹಂಚಿಕೆಯಾಗುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ಇದರಿಂದಾಗಿ ನಿಜವಾದ ತರಬೇತುದಾರ ಉತ್ತಮ ಅವಕಾಶಗಳಿಂದ ವಂಚಿತನಾಗುತ್ತಿದ್ದಾನೆ. ಪ್ರತೀ ಬಾರಿ ಪರೀಕ್ಷೆಯಲ್ಲೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧ ಪಟ್ಟವರು ಹೇಳುತ್ತಾರೆ. ಆದರೆ ಪರೀಕ್ಷೆ ನಡೆಯುವುದು ಎಂದಿನಂತೆ. ಹೀಗಾದರೆ ನಮ್ಮ ದೇಶದಲ್ಲಿ ಭವಿಷ್ಯದಲ್ಲಿ ಉತ್ತಮ ಕಾರ್ಮಿಕರು ದೊರೆಯುತ್ತಾರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ.
ಇಲ್ಲಿ ಉತ್ತಮ ಅಂಕ ಪಡೆದ ಹಲವರು ಸರ್ಕಾರಿ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಯಾಕೆಂದರೆ ಖಾಸಗಿ ಕಂಪೆನಿಗಳ ಸಂದರ್ಶನದಲ್ಲಿ ಸಾಕಷ್ಟು ಪ್ರಶ್ನಿಸಿದುವುದರಿಂದ. ಪ್ರಶ್ನೆ ಪತ್ರಿಕೆ ಬಯಲಾಗುವುದನ್ನು ಯಾಕೆ ತಪ್ಪಿಸಲಾಗುತ್ತಿಲ್ಲ ಎಂದರೆ ಇದು ದೇಶಾದ್ಯಾಂತ ನಡೆಯುವ ಪರೀಕ್ಷೆ ಎನ್ನುವ ಅಸಡ್ಡೆ ಉತ್ತರ ಇದು ಹೀಗೆ ಮುಂದುವರೆದರೆ ಐ.ಟಿ.ಐ ಪರೀಕ್ಷೆ ಬೇಕಾ?