ಪ್ರಸ್ತಾವಿತ ಕಾಪಿರೈಟ್ ಕಾಯ್ದೆಯ ತಿದ್ದುಪಡಿ ವಿರುದ್ಧ ದೃಷ್ಟಿವಿಕಲಚೇತನರಿಂದ ಚಳವಳಿ
ಅಖಿಲ ಭಾರತ ಮಟ್ಟದಲ್ಲಿ ಬಿಡುಗಡೆ ಏಪ್ರಿಲ್ ೧೫, ೨೦೧೦: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಇದೇ ಬಜೆಟ್ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಕಾಪಿರೈಟ್ ಆಕ್ಟ್, ೧೯೫೭ರ ತಿದ್ದುಪಡಿಯ ಕುರಿತಂತೆ ನ್ಯಾಶನಲ್ ಆಕ್ಸಸ್ ಅಲಯನ್ಸ್ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ಪ್ರಸ್ತಾವಿತ ತಿದ್ದುಪಡಿಯು ದೃಷ್ಟಿವಿಕಲಚೇತನರೂ ಸೇರಿದಂತೆ ಭಾರತದಲ್ಲಿರುವ ೭೦ ಮಿಲಿಯನ್ ಗೂ ಹೆಚ್ಚಿನ ವಿಕಲಚೇತನರಿಗೆ ಈ ತಿದ್ದುಪಡಿ ಅಕ್ಷರ ಕಲಿಯುವ ಹಕ್ಕು ಮತ್ತು ಇತರೆ ಮೂಲಭೂತ ಹಕ್ಕುಗಳಿಂದ ವಂಚಿತಗೊಳಿಸಲಿದೆ. ಈ ತಿದ್ದುಪಡಿಯನ್ನು ಹಲವು ಪಕ್ಷಗಳ ಪ್ರಮುಖ ಸಂಸದರು ಬೆಂಬಲಿಸಿದ್ದಾರೆ.
ಪ್ರಸ್ತಾವಿತ ತಿದ್ದುಪಡಿಯು ಎನ್ ಜಿ ಓ ಮತ್ತು ವಿದ್ಯಾಸಂಸ್ಥೆಗಳು, ತಮ್ಮ ವಿಕಲಚೇತನ ವಿದ್ಯಾರ್ಥಿಗಳ "ಓದಿಗಾಗಿ" ಪಠ್ಯಸಾಮಗ್ರಿಗಳಾದ ಪಠ್ಯಪುಸ್ತಕಗಳು ಸೇರಿದಂತೆ ಇತರೆ ಆಕರ ಸಾಮಗ್ರಿಗಳನ್ನು ಅಡಿಯೋ, ಡಿಜಿಟಲ್ ರೂಪದಲ್ಲಿ ಮತ್ತು ಇತರೆ ರೀತಿಯಲ್ಲಿ ಪರಿವರ್ತಿಸಿ ವಿಕಲಚೇತನರು ಉಪಯೋಗಿಸುವಂತೆ ಮಾಡುವ ಪರಿವರ್ತನೆಯನ್ನು ತಡೆಯುತ್ತದೆ. ಸರ್ಕಾರದ ಉದ್ದೇಶಿತ ಪ್ರಕ್ರಿಯೆಯ ಪ್ರಸ್ತಾವನೆ ಫಾರ್ಮ್ಯಾಟುಗಳ ನಡುವೆ ಕನ್ವರ್ಟ್ ಮಾಡುವಾಗ ಹಲವು ನಿರ್ಬಂಧನೆಗಳನ್ನು ಹಾಗು ದೀರ್ಘ, ಕ್ಲಿಷ್ಟವಾದ ಲೈಸೆನ್ಸಿಂಗ್ ನಿರೀಕ್ಷಿಸುತ್ತದೆ. ಹೀಗೆ ಮಾಡಿದಲ್ಲಿ ಕಲಿಯುವ ಹಕ್ಕು ಒಂದು ಮೂಲಭೂತ ಹಕ್ಕಾಗಿ ಜಾರಿಯಾಗುತ್ತಿರುವ ಸಂದರ್ಭದಲ್ಲಿಯೇ ಇವರೆಲ್ಲರನ್ನು ಅದರಿಂದ ವಂಚಿತಗೊಳಿಸಿದಂತಾಗುತ್ತದೆ.
ಎನ್ ಎ ಎ ಯ ಮೂಲ ಕಾಳಜಿ ಈ ಕಾಯ್ದೆಯು 'ವಿಶೇಷ' ಫಾರ್ಮ್ಯಾಟುಗಳ ಮೇಲೆ ಮಾತ್ರ ನಿರ್ಬಂಧ ಹೇರುತ್ತಿರುವ ಬಗ್ಗೆ. ಆ ಮೂಲಕ ಅದು ದೃಷ್ಟಿವಿಕಲಚೇತನರ ವಾಸ್ತವ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅವರ ಬದುಕಿನಲ್ಲಿ ತಾಂತ್ರಿಕ ಉನ್ನತಿಯನ್ನು ತಡೆಯುತ್ತಿದೆ. ಈ ಕಾಯ್ದೆಯು ಈಗಾಗಲೇ ಚಾಲ್ತಿಯಲ್ಲಿರುವ ಸಾಮಗ್ರಿಗಳನ್ನೇ ಉಪಯೋಗಿಸುವಂತೆ ಮಾಡುತ್ತದೆ. ಇದು ದೃಷ್ಟಿವಿಕಲಚೇತನರ ವೃತ್ತಿ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ. ಇದು ಅವರ ಬದುಕುವ ಹಕ್ಕು ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಹತ್ತಿಕ್ಕುತ್ತದೆ.
ನ್ಯಾಶನಲ್ ಆಕ್ಸಸ್ ಅಲೆಯನ್ಸ್ ನ ಸದಸ್ಯರು ಈ ಕಾಯ್ದೆಯಲ್ಲಿ ಕೆಳಗಿನ ಬದಲಾವಣೆಗಳನ್ನು ಆಗ್ರಹಿಸಿ ಅಭಿಯಾನ ಕೈಗೊಂಡಿದ್ದಾರೆ:
೧) ಮುದ್ರಿತ ಪುಸ್ತಕಗಳನ್ನು ವಿಕಲಚೇತನರ ಅಗತ್ಯಗಳಿಗೆ ತಕ್ಕಂತೆ ಯಾವುದೇ ಫಾರ್ಮ್ಯಾಟಿಗೆ ಪರಿವರ್ತಿಸಿಕೊಳ್ಳಲು ಅವಕಾಶ ನೀಡಬೇಕು.
೨) ಈ ಕುರಿತು ವಿಕಲಚೇತನರೂ ಸೇರಿದಂತೆ ಸಂಬಂಧಿತ ಸಂಘ ಸಂಸ್ಥೆ ಹಾಗೂ ವಿದ್ಯಾಸಂಸ್ಥೆಗಳೊಂದಿಗೆ ಚರ್ಚೆ ನಡೆಸಬೇಕು.
೩) ಈ ಚರ್ಚೆಯ ಕೆಂಪು ಪಟ್ಟಿ ಆಡಳಿತ ಸಂಪ್ರದಾಯಕ್ಕೆ ಸಿಲುಕಿ ಮತ್ತಷ್ಟು ವಿಳಂಬಕ್ಕೆ ಕಾರಣವಾಗಕೂಡದು.
ಈ ಕುರಿತು ಅಭಿಯಾನಿಗಳು ಕೇಂದ್ರ ಮಾನವ ಸಂಪನ್ಮೂಲ ಮಂತ್ರಿ ಶ್ರೀ ಕಪಿಲ್ ಸಿಬಲ್ ಅವರಿಗೆ ಮನವಿ ಸಲ್ಲಿಸಿದಾಗ, ವಿಕಲಚೇತನರ ಅಗತ್ಯಗಳ ಕುರಿತು ಗಮನಹರಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ. ಆದರೆ ಮಾನವ ಸಂಪನ್ಮೂಲ ಮಂತ್ರಿಗಳ ಉದ್ದೇಶಿತ ಕಾಯ್ದೆಯು ಒಳಿತಿಗಿಂತ ಹೆಚ್ಚು ಕೆಡುಕನ್ನೇ ಮಾಡಲಿದೆ. ದೃಷ್ಟಿವಿಕಲಚೇತನರ ಸಮುದಾಯವು ಈ ಕುರಿತು ಚರ್ಚಿಸಲು ಉಪಸಮಿತಿಯೊಂದನ್ನು ರಚಿಸುವಂತೆ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಮನವಿ ಮಾಡಿತ್ತು. ಈ ವಿಷಯದ ಕುರಿತು ವಿವರವಾಗಿ ಚರ್ಚಿಸಲು ಚಿತ್ರೋದ್ಯಮಕ್ಕೆ ರಚಿಸಿದ ಉಪಸಮಿತಿಯಂತೆ ಇಲ್ಲಿಯೂ ಉಪಸಮಿತಿ ರಚಿಸಿ ಎಂದು ದೃಷ್ಟಿವಿಕಲಚೇತನರ ಸಮುದಾಯವು ಆಗ್ರಹಿಸಿತ್ತು. ಆದರೆ ಯಾವುದೇ ಉಪಸಮಿತಿಯನ್ನು ಇದುವರೆಗೂ ರಚಿಸಲಾಗಿಲ್ಲ.
ಕೇಂದ್ರ ಕಾನೂನು ಮಂತ್ರಿ ಶ್ರೀ ವೀರಪ್ಪ ಮೊಯ್ಲಿ, ಶ್ರೀ ಮಣಿಶಂಕರ ಅಯ್ಯರ್ ಮತ್ತು ಶ್ರೀ ಶಶಿತರೂರ್ ಮುಂತಾದ ಕಾಂಗ್ರೆಸ್ ಮುಖಂಡರು ಈ ವಿಷಯವನ್ನು ಗಮನಿಸುವಂತೆ ಶ್ರೀ ಕಪಿಲ್ ಸಿಬಲ್ ರವರಿಗೆ ಪತ್ರ ಬರೆದಿದ್ದಾರೆ, ಆದರೂ ಈ ಕಡೆಗೆ ಗಮನ ಹರಿದಿಲ್ಲ. ವಿರೋಧ ಪಕ್ಷದ ಪ್ರಮುಖ ನಾಯಕರುಗಳಾದ ಶ್ರೀ ಎಲ್ ಕೆ ಅಡ್ವಾಣಿ, ಶ್ರೀಮತಿ ಸುಷ್ಮಾ ಸ್ವರಾಜ್, ಶ್ರೀ ಅರುಣ್ ಜೇಟ್ಲಿ ಮತ್ತು ಬೃಂದಾ ಕಾರಟ್ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ ಹಾಗೂ ತಮ್ಮ ಪಕ್ಷಗಳು ಈ ಉದ್ದೇಶಿತ ತಿದ್ದುಪಡಿ ಕಾಯ್ದೆಯ ಮಂಡನೆಯ ಸಮಯದಲ್ಲಿ ವಿರೋಧವ್ಯಕ್ತಪಡಿಸಲಿವೆ ಎಂದು ತಿಳಿಸಿದ್ದಾರೆ. ಎನ್ ಸಿ ಪಿ ಪಕ್ಷದ ಸುಪ್ರಿಯಾ ಸುಲೆ ಕೂಡ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ನ್ಯಾಶನಲ್ ಆಕ್ಸಸ್ ಅಲೆಯನ್ಸಿನ ಸದಸ್ಯರು ಲಭ್ಯವಿರುವ ಮುದ್ರಿತ ಸಾಮಗ್ರಿಗಳನ್ನು ಓದಲು ಬಳಸಬಹುದಾದ ಫಾರ್ಮ್ಯಾಟುಗಳಿಗೆ ಕನ್ವರ್ಟ್ ಮಾಡುವಲ್ಲಿ ಇರುವ ನಿರ್ಬಂಧನೆಗಳ ಕುರಿತು ರಾಷ್ಟ್ರೀಯ ಜನಜಾಗೃತಿ ಅಭಿಯಾನ ನಡೆಸಲಿದ್ದಾರೆ.
ನ್ಯಾಶನಲ್ ಆಕ್ಸಸ್ ಅಲೆಯನ್ಸ್ ನ ಕುರಿತು
ಇದು ಭಾರತದ ದೃಷ್ಟಿವಿಕಲಚೇತನರ ಪರವಾಗಿ ಕಾನೂನು ರೀತಿಯಲ್ಲಿ ಕೆಲಸಮಾಡುತ್ತಿರುವ ಪ್ರಮುಖ ಸಂಸ್ಥೆ. ಈ ಸಂಸ್ಥೆಯು ಅಖಿಲ ಭಾರತ ಅಂಧರ ಕಾನ್ಫೆಡರೇಶನ್, ಭಾರತ ರಾಷ್ಟ್ರೀಯ ಅಂಧರ ಸಂಸ್ಥೆ, ಅಂಧರ ರಾಷ್ಟ್ರೀಯ ಫೆಡರೇಶನ್, ಡೈಸಿ ಫಾರಮ್ ಆಫ್ ಇಂಡಿಯಾ, ಸೈಟ್ ಸೆವರ್ಸ್, ಇನ್ಕ್ಲೂಸಿವ್ ಪ್ಲಾನೆಟ್, ಸೆಂಟರ್ ಫಾರ್ ಇಂಟರ್ ನೆಟ್ & ಸೊಸೈಟಿ ಮತ್ತು ಝ್ಸೆವಿಯರ್ ರಿಸೋರ್ಸ್ ಸೆಂಟರ್ ಫಾರ್ ದಿ ವಿಶ್ಯೂಯಲಿ ಚಾಲೆಂಜ್ಡ್ ನ ಸದಸ್ಯರನ್ನು ಒಳಗೊಂಡಿದೆ.
ಹೆಚ್ಚಿನ ಮಾಹಿತಿಗಾಗಿ: nationalaccessalliance@gmail.com
(ಪ್ರಕಟಣೆ ಕೋರಿ ಕಳುಹಿಸಿದ್ದ ಲೇಖನವನ್ನು ಪ್ರಕಟಿಸಲಾಗಿದೆ)