ಅಪರಾಧಿ ಅರುಂಧತಿ

ಅಪರಾಧಿ ಅರುಂಧತಿ

ಬರಹ

  ’೨೦೦೧ರಲ್ಲಿ ಸಂಸತ್ತಿನಮೇಲೆ ನಡೆದ ದಾಳಿಯ ಆರೋಪಿ ಮೊಹಮ್ಮದ್ ಅಫ್ಜಲ್‌ಗೆ, ಅಗತ್ಯ ಸಾಕ್ಷ್ಯ ಇಲ್ಲದಿದ್ದರೂ ಸುಪ್ರೀಂ ಕೋರ್ಟ್ ನಿರ್ಭಿಡೆಯಿಂದ ಮರಣದಂಡನೆ ಶಿಕ್ಷೆ ವಿಧಿಸಿದೆ. ಅವನಿಗೆ ಇಂತಹ ಶಿಕ್ಷೆ ಕೊಟ್ಟರಷ್ಟೇ ಸಮಾಜದ ಸಮಷ್ಟಿ ಪ್ರಜ್ಞೆ ತೃಪ್ತಗೊಳ್ಳುತ್ತದೆ ಎಂಬ ಕಾರಣದಿಂದ ಅದು ಈ ತೀರ್ಮಾನಕ್ಕೆ ಬಂದಿದೆ.’
  ಹೀಗೆಂದು ಮಾವೊವಾದಿ ಪಕ್ಷದ ವಕ್ತಾರ ತನಗೆ ಹೇಳಿದ್ದಾಗಿ ಅರುಂಧತಿ ರಾಯ್ ತನ್ನ ವಿವಾದಿತ ’ವಾಕಿಂಗ್ ವಿತ್ ದ ಕಾಮ್ರೇಡ್ಸ್’ ಲೇಖನದಲ್ಲಿ ಬರೆದಿದ್ದಾರೆ.
  ಮಾವೊವಾದಿ ಪಕ್ಷದ ವಕ್ತಾರನ ಸದರಿ ಹೇಳಿಕೆಯನ್ನಷ್ಟೇ ದಾಖಲಿಸಿ, ಆ ಹೇಳಿಕೆಗೆ ಲೇಖನದಲ್ಲಿ ತಮ್ಮ ಪ್ರತಿಕ್ರಿಯೆ ದಾಖಲಿಸದಿರುವ ಮೂಲಕ ಅರುಂಧತಿ ರಾಯ್ ಅವರು ’ಮೌನಂ ಸಮ್ಮತಿ ಲಕ್ಷಣಂ’ ಎಂಬ ಧೋರಣೆ ಮೆರೆದಿದ್ದಾರೆ. ಈ ಎಲ್ಲ ಬೆಳವಣಿಗೆ ಅತ್ಯಂತ ಆಕ್ಷೇಪಾರ್ಹ.
  ಕ್ರಮಬದ್ಧವಾಗಿಯೇ ತೀರ್ಪು ನೀಡಿರುವ ಮತ್ತು ವಿವೇಕಿಗಳೂ ಪೂರ್ವಗ್ರಹರಹಿತರೂ ನಿಷ್ಪಕ್ಷಪಾತಿಗಳೂ ಜವಾಬ್ದಾರಿಯುತರೂ ಹಾಗೂ ನ್ಯಾಯಶೀಲರೂ ಆದಂಥ ನ್ಯಾಯಾಧೀಶರನ್ನೊಳಗೊಂಡಿರುವ ನಮ್ಮ ಸರ್ವೋಚ್ಚ ನ್ಯಾಯಾಲಯದ ಬಗ್ಗೆ ತಪ್ಪು ಕಲ್ಪನೆ ಉಂಟುಮಾಡಬಲ್ಲಂಥ ಮತ್ತು ಸೌಹಾರ್ದಶೀಲ ಭಾರತೀಯ ಸಮಾಜದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಬಲ್ಲಂಥ ಸದರಿ ಹೇಳಿಕೆಯು ಖಂಡನಾರ್ಹ. ಭಾರತದ ಘನತೆಗೆ ಪೆಟ್ಟು ನೀಡುವಂತಿರುವ ಅರುಂಧತಿಯ ಈ ಲೇಖನ(ಭಾಗ)ವನ್ನು ದೇಶ ವಿದೇಶಗಳ ನಾಗರಿಕರು ಓದುತ್ತಿದ್ದಾರೆ. ಭಾರತದ ಪ್ರಜೆಗಳಾದ ನಾವು ಈ ಸಂದರ್ಭದಲ್ಲಿ ಸುಮ್ಮನಿರಬಾರದು. ದೇಶದ ಘನತೆಗೆ ಕುಂದುಂಟುಮಾಡುವ ಮತ್ತು ದೇಶವನ್ನು ವಿಘಟನೆಯತ್ತ ಕೊಂಡೊಯ್ಯುವ ಈ ಹೇಳಿಕೆಯನ್ನು ಮತ್ತು ಅದಕ್ಕೆ ಮೌನದ ಸಮ್ಮತಿ ಸೂಚಿಸಿರುವ ಅರುಂಧತಿಯವರ ನಡೆಯನ್ನು ವಿರೋಧಿಸುವ ಮೂಲಕ ನಾವು ದೇಶದ ಘನತೆಯನ್ನು ಎತ್ತಿಹಿಡಿಯಬೇಕು. ಹೇಳಿಕೆ ನೀಡಿದ ವ್ಯಕ್ತಿಯ ಜೊತೆಗೆ ಅರುಂಧತಿಯೂ ಇಲ್ಲಿ ಅಪರಾಧಿ.