ಅದೇ ನೋಟ ಮತ್ತು ಮಾತು

ಅದೇ ನೋಟ ಮತ್ತು ಮಾತು

ಬರಹ

"ಅಯ್ಯಾ ಮಹರಾಜಾ ಇಲ್ಯಾಕೆ ಮಲಗಿದ್ದೀಯಪ್ಪಾ ಇಂತಹಾ ನಿರ್ಮಾನುಷ ಜಾಗದಲ್ಲಿ ಮಲಗಿರಬಾರದು ಅದೂ ರಾತ್ರೆಯ ಈ ಹೊತ್ತಿನಲ್ಲಿ" ಮಂಪರಿನಲ್ಲಿ ಈ ಮಾತು ಕೇಳುತ್ತಲೇ ಗಡಬಡಿಸಿ ಎದ್ದು ದನಿಯತ್ತ ಕಣ್ಣು ಹಾಯಿಸಿದೆ.ಇದಿರಿಗೆ ಕಾಷಾಯ ವಸ್ತ್ರಧಾರಿಯೊಬ್ಬ ನಿಂತಿದ್ದ. ಬರೇ ನಾಲ್ಕೈದು ದಿನಗಳ ಪ್ರವಾಸ ಅಲ್ಲದೇ ನಾನು ವೈಯ್ಯಕ್ತಿಕ ಕೆಲಸದಲ್ಲಿದ್ದುದರಿಂದ ಸಾಧಾರಣವಾದ ಕುರ್ತಾಪೈಜಾಮವನ್ನೇ ಧರಿಸಿದ್ದೆ, ಜತೆಗಿದ್ದ ಬುದ್ದಿಜೀವಿಗಳ ಚೀಲವನ್ನು ತಲೆಯ ಕೆಳಗಿಟ್ಟುಕೊಂಡು ಪ್ಲಾಟ್ ಫಾರಂನ ಕೊನೆಯ ಬೆಂಚಿನಮೇಲೆ ಮಲಗಿದ್ದೆ. ಹಳೆ ದೆಹಲಿಯ ರೈಲು ನಿಲ್ದಾಣದಲ್ಲಿ ಇಂತಹರು ಅನೇಕರು ಕಾಣಸಿಗುತ್ತಾರೆ ಈಗ ಈ ಜಬಲ್ಪುರದಲ್ಲಿಯೂ ಅಂತಹವನೊಬ್ಬ ಎಂದುಕೊಂಡು "ಇಲ್ಲ ಸ್ವಾಮೀಜಿ ನನ್ನ ರೈಲು ರಾತ್ರೆ ಎರಡು ಘಂಟೆಗೆ ಹಾಗೆಯೇ ಒರಗಿದ್ದೆ ಕಣ್ಣು ಬಾಡಿತು ಅಷ್ಟೆ" ಸಮಜಾಯಿಸಿದೆ. " ಹಾಗಲ್ಲ ರಾಜಾ ನಿನ್ನ ನೋಡಿದರೆ ಒಳ್ಳೆಯ ಮನೆತನದವನ ಹಾಗೆ ಕಾಣ್ಸತ್ತೆ ಏನೋ ಒಂದು ವಿಶೇಷ ಕಾರ್ಯಕ್ಕಾಗಿ ಹೊರಟ ಹಾಗಿದೆ" ಅದು ಬಡ ಪೆಟ್ಟಿಗೆ ಬಗ್ಗುವ ಅಸಾಮಿಯಲ್ಲ ಅನ್ನಿಸಿತು. ನಾನು" ಇಲ್ಲ ಸ್ವಾಮೀ ನಾನೊಬ್ಬ ಬಡ ವ್ಯಾಪಾರಿ ಬೊಂಬಾಯಿಗೆ ಹೊರಟಿದ್ದೇನೆ ವ್ಯಾಪಾರದ ನಿಮಿತ್ತ" ಎಂದೆ. ಎಲ್ಲಾರಿಗೂ ನಿಜ ಹೇಳೋ ಅವಶ್ಯಕಥೆ ಏನಿದೆ?.

"ಇಲ್ಲ ನೀನು ನನಗೆ ಸುಳ್ಳು ಹೇಳುತ್ತಿದ್ದೀಯಾ, ನಿನ್ನನ್ನ ನೋಡಿದರೆ ನೀನು ಸರಕಾರೀ ಉದ್ಯೋಗದಲ್ಲಿ ಇರುವ ಅಧಿಕಾರಿಯ ಹಾಗೆ ಕಾಣುತ್ತೀ" ಎಂದ ಆ ಸ್ವಾಮಿ, " ತುಂಬಾ ಸಂತೋಷದ ವಿಷಯ ನೆಲಗಡಲೆ ವ್ಯಾಪಾರಿಯೊಬ್ಬ ಹಾಗೆ ಕಾಣಿಸಿದರೆ" ವ್ಯಂಗ್ಯವಾಡಿದೆ ನಾನು. "ತಮಾಷೆ ಬಿಡಪ್ಪಾ! ಬಾ ನಾನು ನಿನಗೆ ಚಹಾ ಕುಡಿಸ್ತೀನಿ" ಎಂದ ಸ್ವಾಮಿ. ನನಗೀಗ ಈತನ ಬಗ್ಗೆ ಸಂಶಯ ಮೂಡಿತು. ರೈಲಿನಲ್ಲಿ ಚಾ ಕುಡಿಸಿ ಲೂಟಿ ಮಾಡೊದು ಕೇಳಿ ಬಲ್ಲೆ, ನಾನು ಕಿಸೆಯಿಂದ ಎರಡು ರೂಪಾಯಿ ತೆಗೆದು ಕೊಟ್ಟು ಅವನಿಗೆ ಕುಡಿಯಲು ಹೇಳಿದೆ, ಆತ ತೆಗೆದುಕೊಳ್ಳಲೇ ಇಲ್ಲ, ಬದಲು " ನಾನು ನಿನಗೆ ಚಹಾ ಕುಡಿಸ್ತೀನಿ ಅಂದದ್ದಲ್ವಾ, ನೀನ್ಯಾಕೆ ಹಣ ಕೊಡ್ತೀ?" ಎಂದ. ನಾನು "ಚಹಾ ಕುಡಿಯುವ ಅಭ್ಯಾಸವೇ ನನಗೆ ಇಲ್ಲವಲ್ಲ" ಎಂದೆ.ಅವನಿಗೆ ಬೇಸರವಾದ ಹಾಗೆ ಕಂಡಿತು "ರಾಜಾ ನೀನು ಕುಡಿಯದಿದ್ದರೆ ನನಗೂ ಬೇಡ"ಎಂದ ಆತ ಬಂದು ನನ್ನ ಹತ್ತಿರವೇ ಕುಳಿತು ಲೋಕಾಭಿರಾಮವಾಗಿ ಮಾತನಾಡಿದ, ನನಗೂ ಸಮಯ ಕಳೆಯಲಿತ್ತಲ್ಲ, ಸುಮಾರು ಹತ್ತು ನಿಮಿಷ ಕಳೆದು ಆತನೆಂದ "ರಾಜ ನಿನ್ನ ಕೈಯಿಂದ ಒಂದು ಊಟ ಆಗಲೆಂಬ ಆಸೆಯಾಗುತ್ತಿದೆ, ಹಣ ಕೊಡು". ನಾನು ಹೇಗಾದರೂ ತಪ್ಪಿಸಿಕೊಳ್ಳಲೋಸುಗ ಆತನಿಗೆ ಹತ್ತರ ಒಂದು ನೋಟು ಕೊಟ್ಟೆ ಆತ ಅದನ್ನು ತೆಗೆದುಕೊಂಡು ಸ್ವಲ್ಪ ದೂರ ಹೋಗಿ ವಾಪಾಸು ಬಂದು, "ಹತ್ತು ರುಪಾಯಿಯಲ್ಲಿ ಎಂತಹ ಊಟ ಸಿಗುತ್ತೆ ಹೇಳು ಇನ್ನೊಂದು ಹತ್ತು ರುಪಾಯಿ ಕೊಡು ನಿನ್ನ ಹೆಸರು ಹೇಳಿ ಊಟ ಮಾಡ್ತೇನೆ ಸನ್ಯಾಸಿಯೊಬ್ಬನಿಗೆ ಹೊಟ್ಟೆತುಂಬಾ ಊಟ ಹಾಕಿದ ಪುಣ್ಯ ಸಿಗುತ್ತೆ". ನನಗೆ ಆತನ ಕೇಳುವ ಈ ಪರಿ ವಿಚಿತ್ರ ಅನ್ನಿಸಿತಾದರೂ ಹೇಳುವುದರಲ್ಲಿ ನಿಜವಿದೆ ಅನ್ನಿಸಿ ಇನ್ನೊಂದು ಹತ್ತು ರೂ ನ ನೋಟು ಅವನಿಗಿತ್ತು ಸಾಗಹಾಕಿದೆ. ಆತ ಹೊರಟು ಹೋದ ಮೇಲೆ ಯಾತಕ್ಕೂ ಇರಲಿ ಅಂತ ಅಲ್ಲಿಂದೆದ್ದು ಪ್ಲಾಟ್ ಫ಼ಾರಮ್ಮಿನ ಮೊದಲ ತುದಿಯಲ್ಲಿ ಬಂದು ನಿಶ್ಚಿಂತೆಯಿಂದ ಮಲಗಿದೆ.

ಇದು ಕಳೆದು ಸುಮಾರು ಅರ್ಧ ಗಂಟೆಯಾಗಿರಬಹುದು, ಯಾರೋ ನನ್ನ ತಲೆಯ ಬಳಿ ಬಂದು ಕುಳಿತ ಹಾಗೆ ಅನ್ನಿಸಿ ಕಣ್ತೆರೆದು ಎದ್ದು ಕುಳಿತೆ, ಪುನಃ ಅಸಾಮಿ ಅಲ್ಲಲ್ಲ ಆ ಸ್ವಾಮಿ ಪ್ರತ್ಯಕ್ಷ!ನಾನು ಏನಾದರೂ ಮಾತನಾಡುವ ಮೊದಲೇ ತನ್ನ ಕೈಯ್ಯನ್ನು ನನ್ನ ತಲೆಯ ಮೇಲಿಟ್ಟು ಹರಸುತ್ತಾ " ಮಹಾರಾಜಾ ನೀನು ಯಾವ ಕಾರಣಕ್ಕಾಗಿ ಸುಳ್ಳು ಹೇಳುತ್ತೀಯಾ ನನಗೆ ಗೊತ್ತಿಲ್ಲ, ಆದರೂ ಒಬ್ಬ ಸನ್ಯಾಸಿಯ ಹೊಟ್ಟೆ ತುಂಬಿಸಿ ಒಂದು ಮಹತ್ಕಾರ್ಯ ಮಾಡಿದೆ"ಎಂದನಾದರೂ ನಾನು ಮಧ್ಯದಲ್ಲೇ ಅವನ ಮಾತು ತುಂಡರಿಸಿ ಹೇಳಿದೆ" ಸ್ವಾಮಿ ಈ ಇಪ್ಪತ್ತು ರೂನಲ್ಲಿ ನಂದೇನೂ ರಾಜ್ಯ ಹೋಗುವುದಿಲ್ಲ, ನಿಮ್ಮ ಸಂತೋಷವೇ ನನಗೂ, ಇದೇನೂ ಅಂತಹಾ ಘನ ಕಾರ್ಯವಲ್ಲ ಬಿಡಿ" ಎಂದೆ. ಆದರೂ ಸಂತೋಷ ನಿಜವಾಗಿಯೂ ಆತನ ಕಣ್ಣುಗಳಲ್ಲಿ ಪ್ರತಿಫ಼ಲಿಸುತ್ತಿತ್ತು. " ನಿನ್ನ ಕೆಲಸ ನಿರ್ವಿಘ್ನವಾಗಿ ನೆರವೇರಲಿ ಅಂತ ಹೃತ್ಪೂರ್ವಕ ಹಾರೈಸುತ್ತೇನೆ, ನಿನಗೆ ಮಂಗಳವಾಗಲಿ,ನಾನಿನ್ನು ಹೋಗಿ ಬರುತ್ತೇನೆ" ಎಂದ ಆತ ಅಲ್ಲಿಂದ ಹೊರಟ. ನಾನು ಇನ್ನೊಮ್ಮೆ ನೋಡುವಾಗ ಆತ ಕಾಣಿಸಲಿಲ್ಲ,ಅದೆಲ್ಲಿಂದ ಆತ ನಿರ್ಗಮಿಸಿರಬಹುದು ಆಶ್ಚರ್ಯವಾಯಿತು.

ಅಷ್ಟರಲ್ಲಿ ರೈಲಿನ ಅಶರೀರವಾಣಿ ನನ್ನ ರೈಲು ಬರುವ ಸೂಚನೆ ನೀಡಿತು, ಗಡಬಡಿಸಿ ಎದ್ದು ರೆಡಿಯಾದೆ.ನನ್ನ ಬರ್ತ್ ಹೋಗಿ ಹುಡುಕಿ ಆರಾಮ್ ಆಗಿ ನಿದ್ದೆ ಮಾಡಿದೆ. ಪೂನಾದಲ್ಲಿಳಿದು ಸ್ನಾನಾದಿ ವಿಧಿಗಳೆಲ್ಲ ಪೂರೈಸಿ ಅರ್ ಟಿ ಓ ತಲುಪಲು ಆಟೋ ಹಿಡಿದೆ.

ನನ್ನದು ಭಾರತದ ಎಲ್ಲಾ ಊರುಗಳನ್ನೂ ಸುತ್ತುವ ಪ್ರತಿ ಮೂರು ವರುಷಗಳಿಗೊಮ್ಮೆ ಟೆಂಟೆತ್ತುವ,ನನಗೆ ತುಂಬಾಖುಷಿ ಕೊಡುವ ಕೇಂದ್ರ ಸರಕಾರೀ ನೌಕರಿ.ನಾನು ಉಧಂಪುರದಲ್ಲಿರುವಾಗ ಯಾರಿಂದಲೋ ಒಂದು ಬಜಾಜ್ ಸ್ಕೂಟರ್ ಕೊಂಡಿದ್ದೆ. ಅದು ನಾನು ಬೊಂಬಾಯಿ,ಒರಿಸ್ಸಾ,ಎಲ್ಲಾ ತಿರುಗುವ ವರೆಗೆ ನನ್ನ ಬಳಿಯೇ ಇತ್ತು. ನಾನು ಬಿಹಾರದಲ್ಲಿರುವಾಗ, ಯಾಕೋ ಇದನ್ನು ಮಾರಾಟ ಮಾಡಿ ಹೊಸ ದ್ವಿಚಕ್ರ ವಾಹನ ಕೊಂಡುಕೊಳ್ಳಬೇಕೆನ್ನಿಸಿತು. ಅದಕ್ಕೆ ಕಾರಣವೂ ಇತ್ತು. ಆಫೀಸಿನ ಒಬ್ಬ ಡ್ರೈವರ್ ದಿನಾ ನನ್ನನ್ನು ಒತ್ತಾಯಿಸುತ್ತಿದ್ದ ಮಾರುವುದಾದರೆ ತನಗೇ ಮಾರಿ ಅಂತ.ಗಾಡಿಯನ್ನ ಮಾರ ಬೇಕಾದರೆ ಏನೆಲ್ಲಾ ತಲೆಬಿಸಿಗಳಿರಬಹುದು ಅಂತ ಗೊತ್ತಾಗಿದ್ದುದು, ಏಜಂಟ್ ಒಬ್ಬನನ್ನು ಕೇಳಿದಾಗಲೇ. ಇದಕ್ಕೆ ತೆರಿಗೆ ಅದೂ ಇದೂ ಎಲ್ಲಾ ಸೇರಿ ಏಳು ಸಾವಿರ ಖರ್ಚಾಗುತ್ತೆ ಎಂದಾಗ, ನನಗೆ ಆಶ್ಚರ್ಯವಾಯಿತು, ಅಮ್ಮಮ್ಮ ಅಂದರೆ ಹತ್ತು ಸಾವಿರದ ಗಾಡಿಯಿದು, ತೆರಿಗೆಗೇ ಆರು ಕೊಟ್ಟರೆ ಇನ್ನೇನು ಉಳಿಯಿತು? ಹೇಳೀ ಕೇಳಿ ಬಿಹಾರವದು ! "ಬೇರೆ ಏನೂ ಉಪಾಯವಿಲ್ಲವಾ?"ಕೇಳಿದೆ ನಾನು.ಅದಕ್ಕಾತ" ಸಾರ್ ಇದು ಪೂನಾದ ರಿಜಿಸ್ಟ್ರೇಶನ್ ಹೊತ್ತ ಗಾಡಿಯಾದುದರಿಂದ ನೀವು ಅಲ್ಲಿಂದಲೇ ತಂದರೆ ಮಾತ್ರ ಸರಿಯಾದೀತು, ಆದರೆ ಈಗ ಯಾರು ನಿಮಗೆ ಹಿಂದಿನ ತಾರೀಖಿನಿಂದ ಅದನ್ನು ಕೊಡುತ್ತಾರೆ? ಅದಕ್ಕೆ ಇಲ್ಲಿ ಲಂಚತಿನ್ನಿಸಿ ಇಲ್ಲಿನ ರಿಜಿಸ್ಟ್ರೇಶನ್ ಮಾಡಬೇಕಾದರೆ ಅಷ್ಟು ಕೊಡಲೇ ಬೇಕಾದೀತು" ಎಂದ ಸರಳವಾಗಿ."ಮಹಾರಾಷ್ಟ್ರದ ಯಾವ ಊರಿನಿಂದ ಕೂಡಾ ಈ ಎನ್ ಓ ಸಿ ಸಿಗಬಹುದಾ?" ಕೇಳಿದೆ ನಾನು. "ಹೌದು ಸಾರ್, ನೀವು ಮೊದಲು ಅಲ್ಲಿಂದ ಎನ್ ಓ ಸಿ ತನ್ನಿ ಸಾರ್, ಆಮೇಲೆ ನೋಡೋಣ" ಎಂದ ಏಜಂಟ್ ವ್ಯಂಗ್ಯವಾಗಿ, ಅಧ್ಯಾಗ್ ತರ್ತೀರೋ ನೋಡೇಬಿಡೋಣ ಅನ್ನುವಂತಿತ್ತು ಅವನ ಮಾತಿನ ಧಾಟಿ.ನನಗೂ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಲು ಮನಸ್ಸಿಲ್ಲ, ಯಾಕೆಂದರೆ ನಾಳೆ ಏನಾದರೂ ಹೆಚ್ಚು ಕಮ್ಮಿಯಾದರೆ ಹಿಂದಿನಿಂದ ನನ್ನನ್ನು ಆ ಡ್ರೈವರ್ ಬೈದು ಕೊಳ್ಳಬಾರದಲ್ಲಾ.
ಈ ವಿಷಯವನ್ನು ನನ್ನ ಶ್ರೀಮತಿಯೂ ಅನುಮೋದಿಸಿದಳು, ಯಾಕೆಂದರೆ ಮೂರು ವರ್ಷ ಕಾಲ ಥಾನೆ (ಪೋಲೀಸ್ ಠಾಣೆ ಅಲ್ಲ, ಮಹರಾಯರೇ ಬೊಂಬಾಯಿಯ ಒಂದು ಜಾಗ)ಯಲ್ಲಿದ್ದೆವಲ್ಲ, ಅದಕ್ಕೆ ಅಲ್ಲಿಂದ ಹೇಗಾದರೂ ಎನ್ ಓ ಸಿ ಪಡೆದುಕೊಂಡು ಬರಬಹುದು, ಅಲ್ಲಿ ನನಗೆ ಕೆಲವರು ಆತ್ಮೀಯರಿದ್ದುದೂ ಕಾರಣವಿರಬಹುದು, ಅನ್ನಿಸಿತು. ಅದಕ್ಕೆ ಸರಿಯಾಗಿ ನನಗೊಂದು ಆಫೀಸಿನ ಕೆಲ್ಸವೂ ಬಿತ್ತು ಜಬಲ್ಪುರಿನ ನಮ್ಮ ಮುಖ್ಯ ಅಭಿಯಂತರ ಆಫೀಸಿಗೆ ಬಿಹಾರದ ಆಫೀಸಿನಿಂದ ಒಂದು ವರದಿ ಸಲ್ಲಿಸಬೇಕಾಗಿತ್ತು. ಬಾಸ್ ಗೆ ಹೇಳಿ ಅಲ್ಲಿಂದ ಥಾನೆಗೆ ಹೋಗಿ ಬರಲು ಎರಡು ದಿನ ರಜೆ ಕೂಡಾ ತಗೊಂಡೆ, ಸ್ವಾಮಿ ಕಾರ್ಯ ಸ್ವಕಾರ್ಯ ಎರಡೂ ಮುಗಿಸ ಬಹುದೆಂದುಕೊಂಡು. ಸರಿ ಅದಕ್ಕೆಂದೇ ಗಾಡಿಯ ಕಾಗದ ಪತ್ರಗಳನ್ನೆಲ್ಲಾ ತೆಗೆದುಕೊಂಡು ಜಬಲ್ಪುರಿನಿಂದ ಸಾದಾ ಉಡುಪಿನಲ್ಲಿ ಥಾನೆಗೆ ಹೊರಟಿದ್ದೆ.

"ಏಯ್ ಸಾಬ್ ಧೇಖೋ ತುಮ್ಹಾರಾ ಅರ್ ಟಿ ಓ ಆಗಯಾ.."
ಆಟೊ ನಿಂತಿತು. ನಾನು ಅವನಿಗೆ ಹಣಕೊಟ್ಟು ಸಾಗ ಹಾಕಿದೆ. ಮೊದಲ ಬಾರಿಗೆ ವಿಚಾರಣೆಯಲ್ಲಿ ಕೇಳಿದರೆ ಸರ್ಕಲ್ ಇನ್ಸಪೆಕ್ಟರನನ್ನು ಕೇಳಲು ತಿಳಿಸಲಾಗಿ ನಾನು ಅವನಿರುವ ರೂಮಿಗೆ ಹೋದೆ. ಅಲ್ಲಿ ನನ್ನ ಹಾಗಿನ ಅಸಂಖ್ಯಾತ ಮಂದಿಯನ್ನ ನೋಡಿ ನಾನೆಣಿಸಿದಷ್ಟು ಸರಳವಲ್ಲ ಇದು ಅನ್ನಿಸಿತು.ಅಂತೂ ಮೂರು ಘಂಟೆ ಕಾದಾಗ ನನ್ನ ಸರದಿ ಬಂತು. ಇನ್ಸಪೆಕ್ಟರ್ ನನ್ನ ಅಹವಾಲು ಕೇಳಿ ನನ್ನನು ಮೇಲಿನಿಂದ ಕೆಳಗಿನವರೆಗೆ ನೋಡಿ" ನೋಡಯ್ಯಾ, ಹೀಗೆ ಎಂಟು ವರ್ಷ ಹಿಂದಿನ ಕೇಸಿದು, ಇಲ್ಲಿಯವರೆಗೆ ಈಗಾಡಿ ಏನೆಲ್ಲಾ ಕಾರುಬಾರು ಮಾಡಿದೆ ನನಗೆ ಗೊತ್ತಿಲ್ಲ, ನಾನು ಹ್ಯಾಗೆ ನಿನಗೆ ಎನ್ ಓ ಸಿ ಕೊಡಲಿ? ಮೊದಲು ನೀನು ಇಲ್ಲಿದ್ದುದಕ್ಕೆ ಪುರಾವೆ ಏನಾದರೂ ತೆಗೆದುಕೊಂಡು ಬಂದಲ್ಲಿ ನೋಡಬಹುದು" ಎಂದ. ಆಗಲೇ ಸಂಜೆಯಾಗಿತ್ತು. ಇನ್ನು ಅಲ್ಲಿಂದ ಹಿಂದೆ ನಾನಿದ್ದ ಆಫೀಸಿಗೆ ಹೋಗಲು ತಡವಾಯ್ತು. ಇವತ್ತು ಇನ್ನು ನನಗೆ ಹೋಟೆಲ್ಲೇ ಗತಿ ಎನ್ನಿಸಿ, ಅಲ್ಲಿಂದ ಹೊರಟು ಥಾನೆಯ ರೈಲ್ವೇ ನಿಲ್ದಾಣದ ಬಳಿಯ ಹೋಟೆಲ್ಲೊಂದರಲ್ಲಿ ರಾತ್ರೆ ಕಳೆದೆ.

ಬೆಳಿಗ್ಗೆ ಬೇಗ ಎದ್ದು ನಿತ್ಯವಿಧಿ ಪೂರೈಸಿ ಕಾಯುತ್ತಿದ್ದೆ.ನನ್ನ ಅವಸರ ಕಾಲಕ್ಕೆಲ್ಲಿದೆ? ಅಂತೂ ಎಂಟೂವರೆಗೆಲ್ಲಾ ರೈಲ್ವೇ ನಿಲ್ದಾಣದಲ್ಲಿ ಹಾಜರಾದೆ. ಅದಕ್ಕೆ ಕಾರಣವೂ ಇತ್ತು. ನಾನು ಹಿಂದೆ ಇದ್ದ ಆಫೀಸಿನವರೆಲ್ಲಾ ಬೇರೆ ಬೇರೆ ಕಡೆಯಿಂದ ಲೋಕಲ್ ರೈಲಿನಲ್ಲೇ ಬಂದು ಥಾನೆಯಲ್ಲಿಳಿದು ಬಸ್ ಹಿಡಿಯುತ್ತಿದ್ದರು.ನನ್ನ ಹಳೇ ಸ್ನೇಹಿತ ಬಿರಡೆ ಸಿಕ್ಕಿದ. ನಮ್ಮ ಹಳೆಯ ವೈಭವವನ್ನೆಲ್ಲಾ ಜ್ಙಾಪಿಸಿಕೊಂಡೆವು.ನನ್ನೆಲ್ಲಾ ಕಥೆ ಅವನಿಗೆ ಹೇಳಿದೆ. ಆತ ನನ್ನನ್ನು ಸೀದಾ ಅವನ ಬಾಸ್ ಗೆ ಪರಿಚಯ ಮಾಡಿಸಿಕೊಟ್ಟ. ಅಂತೂ ಅವನಿಂದ ನಾನು ಹಿಂದೆ ಅಲ್ಲಿ ಇದ್ದ ಬಗ್ಗೆ ಬರೆಸಿಕೊಂದು ಅಲ್ಲಿಂದ ಆರ್ ಟಿ ಓ ಗೆ ಹೋದೆ. ಇವತ್ತು ನಿನ್ನೆಯ ಆಫ಼ೀಸರ್ ಬರಲೇ ಇಲ್ಲವಂತೆ, ನಾಳೆ ಬರಲು ಹೇಳಿದರು. ಅಲ್ಲಿಂದ ಸೀದಾ ರೂಮಿಗೆ ಹೊರಟೆ ನಾನು ತಂದ ಹಣದಲ್ಲಿ ಆಗಲೇ ಮುಕ್ಕಾಲುವಾಸಿ ಖಾಲಿಯಾಗಿ ಹೋಯ್ತು. ನಾಳೆಯ ಚಿಂತೆನನಗೆ ಬಹಳವಾಯ್ತು. ಇಲ್ಲಿ ಯಾರನ್ನು ಕೇಳಲೂ ನನಗೆ ಮನಸ್ಸಿಲ್ಲ. ನನ್ನ ಮನಸ್ಸು ಡೋಲಾಯಮಾನವಾಯ್ತು, ಹಲಕೆಲವೊಮ್ಮೆ ನಮಗೆ ಬೇಡವೆನ್ನಿಸಿದ್ದೂ ಮಾಡಬೇಕಾಗಿ ಬರುತ್ತೆ. ರಹದಾರೀ ಆಫೀಸಿನ ಹಲವು ಮುಖಗಳನ್ನು ಈ ಎರಡು ದಿನಗಳಲ್ಲಿ ಕಂಡೆ. ಅಲ್ಲಿಯ ಕಿಡಿಕಿಯ ಒಳ ತೂರುವ ಪ್ರತಿ ಕಾಗದದ ಮೇಲೆ ’ಭಾರ’ ವಿರುತ್ತಿತ್ತು. ಹೀಗಾದರೆ ನಾನು ಇಲ್ಲಿಗೆ ಬಂದ ಉದ್ದೇಶವೇ ಬದಲಾಗುತ್ತದಲ್ಲ? ನನ್ನ ಮನಸ್ಸು ತುಂಬಾ ಘಾಸಿಯಾಗಿತ್ತು.ಎರಡು ದಿನದಲ್ಲೇ ಕೆಲಸವಾಗಬಹುದೆನ್ನಿಸಿ ವಾಪಾಸು ಮನೆಗೆ ಹೋಗಲು ರಿಸರ್ವ ಸಹಾ ಮೊದಲೇ ಮಾಡಿದ್ದೆ. ಅದನ್ನ ಕ್ಯಾನ್ಸಲ್ ಮಾಡಿದರೆ ಮುಂದಿನಗತಿ? ಈಗ ಈ ಕೆಲಸ ಯಾವಾಗ ಆಗುತ್ತದೆನ್ನುವ ಭರವಸೆಯೂ ಇಲ್ಲ. ಹಣ ಕೊಟ್ಟರೆ ಆಗಬಹುದೆನ್ನುವ ಸೂಚ್ಯವೂ ಆಗಲೇ ಕೆಲವರಿಂದ ಬಂದಾಗಿತ್ತು, ಆದರೆ ಇದು ನನ್ನ ಪ್ರವೃತ್ತಿಗೆ ವಿರುದ್ಧ.ಆ ರಾತ್ರೆ ನನಗೆ ತುಂಬಾ ಹೊತ್ತಿನವರೆಗೆ ನಿದ್ರೆ ಬರಲೇ ಇಲ್ಲ. ನಾಳೆ ಕೆಲಸವಾಗದಿದ್ದರೆ ನಾಳೆಯೇ ವಾಪಾಸು ಹೊರಡುವದೆಂತಲೂ, ಈ ಸ್ಕೂಟರನ್ನ ಮಾರುವುದೇ ಆಲ್ಲವೆಂತಲೂ ನಿಶ್ಚೈಸಿಕೊಂಡಮೇಲೆಯೇ ನಿದ್ದೆ ಬಂತು.

ಬೆಳಿಗ್ಗೆ ಆರ್ ಟಿ ಓ ಗೆ ಹೋದರೆ ಆ ಇನ್ಸಪೆಕ್ಟರ್ ಇನ್ನೆರಡು ದಿನ ಬರುವುದೇ ಇಲ್ಲವೆಂತ ಗೊತ್ತಾಯ್ತು. ಆಗಲೇ ಯಾರಿಂದಲೋ ಗೊತ್ತಾಯ್ತು, ಅಲ್ಲಿನ ದೊಡ್ಡ ಆಫ಼ೀಸರನ್ನ ಕಂಡರೆ ಕೆಲ್ಸ ಆಗಬಹುದು ಅಂತ. ಅಂತೆಯೇ ಮೊದಲ ಮಹಡಿಯತ್ತ ಹೆಜ್ಜೆ ಹಾಕಿದೆ. ಅಲ್ಲಿ ಅವರ ಅಸಿಸ್ಟೆಂಟ್ "ದೊಡ್ಡ ಆಫೀಸರು ತುರ್ತು ಮೀಟಿಂಗನಲ್ಲಿದ್ದಾರೆ, ಆ ಮೀಟಿಂಗ್ ಮಧ್ಯಾಹ್ನ ಎರಡು ಘಂಟೆಯವರೆಗೆ ನಡೆಯಬಹುದು" ಎಂದಳು. ನನ್ನ ನಿರಾಶೆಯ ಮೋಡ ಪೂರಾ ಕವಿದು ಮಳೆಯೇ ಬರಲು ಶುರುವಾಯ್ತು. ಅಂದರೆ ನನ್ನ ಕೆಲ್ಸವಾಗಲು ಸಾಧ್ಯವೇ ಇಲ್ಲ , ಅವರ ಮೀಟಿಂಗ್ ಮುಗಿದು ಅವರು ಬಂದು ನಾನು ಅವರ ಬಳೀ ನನ್ನ ಅಹವಾಲು ಹೇಳಿ ಅದೆಷ್ಟು ಹೊತ್ತಾಗುತ್ತೋ..? ಅಂದರೆ ನನ್ನ ನಾಲ್ಕು ಘಂಟೆಯ ರೈಲೂ ಹೋಗಿರುತ್ತೆ.ನನ್ನ ನಿರಾಶೆ ಕವಿದ ಮುಖ ನೋಡಿ ಅವಳಿಗೇನನ್ನಿಸಿತೋ " ಬೇಕಾದರೆ ಇನ್ನೊಬ್ಬ ಸೀನಿಯರ್ ಆಫ಼ೀಸರರು ಪಕ್ಕದ ಕೋಣೆಯಲ್ಲೇ ಇದ್ದಾರೆ ಅವರನ್ನು ನೋಡಿ, ಅವರು ತುಂಬಾ ಒಳ್ಳೆಯವರು,ನಿಮ್ಮ ಕೆಲಸವಾಗಲೂ ಬಹುದು" ಎಂದಳು. ನಾನು ಒಲ್ಲದ ಮನಸ್ಸಿನಿಂದ ಪಕ್ಕದ ರೂಮಿನ ಒಳಹೊಕ್ಕು "ನಮಸ್ತೆ ಸರ್"ಎಂದೆ.

ಒಳಗೆ ಐವತ್ತು ಐವತೈದರ ಆಸುಪಾಸಿನ ಪ್ರಸನ್ನ ಮುಖಮುದ್ರೆ ಹೊತ್ತ ದೃಢಕಾಯರೊಬ್ಬರು ಕುಳಿತ್ತಿದ್ದರು."ನಮಸ್ತೆ,ಬನ್ನಿ ಕುಳಿತುಕೊಳ್ಳಿ" ಎಂದರು. ಅವರ ಮಾತಿನಲ್ಲಿ ಗೌರವ ಕಕ್ಕುಲತೆ, ಪ್ರೀತಿ ಎಲ್ಲವೂ ಒಸರುತಿತ್ತು.ನಾನು ಮೂರು ದಿನದಿಂದ ನೋಡುತ್ತಿದ್ದ ಆಫೀಸಿನವರೇನಾ ಎಂಬಂತಿತ್ತು,ಅವರ ನಡವಳಿಕೆ. ನಾನು ನನ್ನೆಲ್ಲಾ ದುಗುಡವನ್ನು ಅವರಿಗೆ ನಿವೇದಿಸಿಕೊಂಡೆ. ಅವರು ತಲೆಯಾಡಿಸುತ್ತಾ" ನೋಡಿ ಈಗ ನಾನೇನು ಮಾಡಲು ಸಾಧ್ಯ?, ಈ ವಿಷಯದಲ್ಲಿ ನನ್ನ ಮೇಲಿನವರಿಗೆ ನಾನು ತುಂಬಾ ಸಲ ಹೇಳಿದ್ದೆ, ಕೇಂದ್ರ ಸರಕಾರದ ನೌಕರರಿಗೆ ಈ ಕಾನೂನಿನಿಂದ ಬಹಳ ತೊಂದರೆ ಯಾಗುತ್ತೆ ಅಂತ ಅವರು ನನ್ನ ಮಾತು ಕೇಳಲೇ ಇಲ್ಲ, ನಾವು ಕಾನೂನಿನ ಹೊರಗೆ ಹೋಗಿ ಕೆಲಸ ಮಾಡಲಾಗುವುದಿಲ್ಲವಲ್ಲ, ನನಗೆ ನಿಮ್ಮ ತೊಂದರೆ ಗೊತ್ತು ಆದರೆ ನಾನು ಅಸಹಾಯಕ"ಎಂದರು. ನಾನೆಂದೆ"ನೋಡಿ ಸರ್ ನೀವು ಈಗ ನನಗೆ ಎನ್ ಓ ಸಿ ಕೊಟ್ಟರೆ, ನಿಮ್ಮನ್ನು ಯಾಕೆ ಕೊಟ್ಟೆ ಅಂತ ಕೇಳುವವರು ಯಾರಿದ್ದರೆ ಸರ್, ನನಗೆ ಇದು ಅತ್ಯಂತ ಅವಶ್ಯಕ, ಇದಕ್ಕಾಗಿ ನಾನು ಬಿಹಾರದಿಂದ ಬಂದಿದ್ದೆ,ದಯವಿಟ್ತು ಸರ್" ಎಂದೆ.
ಒಂದುಕ್ಷಣ ಅವರು ಯೋಚನಾಮಗ್ನರಾದರು. ಒಮ್ಮೆಲೇ ತನ್ನ ಇಂಟರ್ ಕಾಮ್ ನಲ್ಲಿ ಯಾರನ್ನೋ ಉದ್ದೇಶಿಸಿ ಪೂನಾ ಏರಿಯಾದ ಗುಮಾಸ್ತನನ್ನು ಕರೆಯಲು ಹೇಳಿದರು. ಅವನು ಬಂದ ಕೂಡಲೇ ಅತನಿಗೆ " ನೋಡು ಸುರೇಶ್, ಇವರು ನನಗೆ ಬೇಕಾದವರು, ಇವರ ಗಾಡಿಗೆ ಕೂಡಲೇ ಒಂದು ಎನ್ ಓ ಸಿ ಬಿಹಾರಕ್ಕೆ ಮಾಡಿ ಕೊಡು, ನಿನ್ನ ಬೇರೆ ಎಲ್ಲಾ ಕೆಲಸ ಆಮೇಲೆ ಗೊತ್ತಾಯ್ತಾ, ಎನ್ ಓ ಸಿ ಇನ್ನರ್ಧ ಘಂಟೆಯಲ್ಲಿ ನನ್ನಮೇಜಿನ ಮೇಲಿರಬೇಕು ಸೈನ್ ನನ್ನ ಹೆಸರಲ್ಲೇ ಇರಲಿ" ಎಂದರು. ನನ್ನಕಡೆ ತಿರುಗಿ" ಮಿಸ್ಟರ್, ನೋಡಿ ಸುರೇಶ್ ಜತೆ ಹೋಗಿ ನಿಮ್ಮ ಕೆಲಸ ಮಾಡಿಸಿಕೊಳ್ಳಿ ಆಯ್ತಾ" ಎಂದರು.

ಬರೇ ಇಪ್ಪತೈದು ನಿಮಿಷದಲ್ಲಿ ನನ್ನ ಕೆಲಸವಾಯ್ತು. ಅಂತಹಾ ರಹದಾರೀ ಆಫೀಸಿನಲ್ಲಿ ನನ್ನ ಕೆಲಸ ಲಂಚವಿಲ್ಲದೇ ಅಯಿತು ಎನ್ನುವುದಕ್ಕೆ ನನಗೆ ತುಂಬಾ ಇಂದಿಗೂ ಸಂತೋಷವಾಗುತ್ತದೆ. ನನ್ನ ಕೆಲಸ ಮುಗಿಸಿ ನಾನು ಪುನಃ ಆ ಆಫೀಸರಲ್ಲಿಗೆ ಹೋಗಿ ", ನೀವಿಲ್ಲದಿದ್ದರೆ ನಾನು ತುಂಬಾ ನಿರಾಶೆಯಿಂದ ವಾಪಾಸು ಹೋಗಬೇಕಾಗುತ್ತಿತ್ತು. ನಿಮ್ಮಿಂದ ತುಂಬಾ ಸಹಾಯವಾಯ್ತು ಸರ್"ಎಂದೆ. "ಇದೇನೂ ಮಹಾ ಘನ ಕಾರ್ಯವಲ್ಲ ಬಿಡಿ, ನಿಮ್ಮ ತಾಪತ್ರಯ ನಾನೂ ಬಲ್ಲೆ ಏಕೆಂದರೆ ನನ್ನ ತಂದೆಯವರೂ ಕೂಡಾ ನಿಮ್ಮ ಹಾಗೆ ಕೇಂದ್ರ ಸರಕಾರೀ ನೌಕರಿಯಲ್ಲಿದ್ದರು, ಅವರ ಜತೆ ನಾನೂ ಪ್ರತಿ ಮೂರು ವರುಷಕ್ಕೊಮ್ಮೆ ಬೇರೆ ಬೇರೆ ಊರಿಗೆ ಹೊರಡ ಬೇಕಾಗುತ್ತಿತ್ತು,ಅದೆಷ್ಟು ಕಷ್ಟ ಅಂತ ನಾನು ಬಲ್ಲೆ, ಅದಕ್ಕೆ ಈಗ ನಿಮಗೆ ಸಹಾಯ ಮಾಡಿದೆ , ಹಾಗೆ ನೋಡಿದರೆ ಇದು ನನ್ನ ಕರ್ತವ್ಯವಷ್ಟೇ" ಎಂದರು ನಗುತ್ತಾ. ಆಗ ಪಕ್ಕನೆ ನನಗೆ ಜಬಲ್ಪುರಿನಲ್ಲಿ ರಾತ್ರೆ ಸನ್ಯಾಸಿ ಊಟ ಮುಗಿಸಿ ಬಂದು ನುಡಿದ ಮಾತು ಮತ್ತು ಅವನ ನೋಟ ನೆನಪಿಗೆ ಬಂದು ಏನೂ ನುಡಿಯಲು ಕೂಡದೇ ಅವಾಕ್ಕಾದೆ.