ಅನ್ವೇಷಣೆ..!!

ಅನ್ವೇಷಣೆ..!!

ಅವತ್ತಿನ ನಂತರ :

 ಹಾಗೂ ನಾವಿಬ್ಬರೂ ಪ್ರೀತಿಸುತ್ತಿದ್ದೆವು.

ಅವಳು ನನ್ನೊಳಗೆ ಅನಿರೀಕ್ಷಿತವಾಗಿ ನಡೆದು ಬಂದಿದ್ದಳು. ಥಟ್ಟನೆ ಎದುರಾಗುವ ಹೆದ್ದಾರಿಯ ತಿರುವಿನಂತೆ ಒಮ್ಮೆಲೇ ಬಂದಿದ್ದಳು.

ಅವತ್ತೂ ಸಹ ನಾನು ಬೆಳಗ್ಗೆ ಹದವಾಗಿ ಕಾದ ಬಿಸ್ಸಿ ನೀರಿನ ಸ್ನಾನ ಮುಗಿಸಿ ಒದ್ದೆ ಕೂದಲನ್ನು ಬೆಂಗಳೂರಿನ ಚಳಿಗಾಳಿಗೆ ದಾನವಾಗಿ ಕೊಟ್ಟು , ಅಂಗಾತಾನೆ ಮಲಗಿದ್ದ ಬಸವನಗುಡಿಯ ಫ್ಲೈ ಓವರ್ ಕೆಳಗಿನಿಂದ ಹಾದು ಬಂದು ಕೂಲ್ ಕಾರ್ನೆರ್ ಹೊಟೆಲ್‍ನಲ್ಲಿ ಬಿಸ್ಸಿ - ಬಿಸ್ಸಿ ಟೀ ಹೀರುತ್ತ , ಎದುರಿಗಿರುವ ಅಪಾರ್ಟ್‌ಮೆಂನ್ಟ್ ನ ಕಿಟಕಿಯಲ್ಲಿ ಕುಳಿತಿರುತ್ತಿದ್ದ ಅವಳ ಕಡೆಗೆ ಒಂದು ಸಣ್ಣ ದೃಷ್ಟಿ ಬೀರುತ್ತಿದ್ದೆ.

 

ಅವತ್ತು :

ಬಿರಬಿರನೆ  ನನ್ನೆಡೆಗೆ ನಡೆದು ಬಂದಳು.

ನಡಿಗೆಯಲ್ಲಿ ಆಕರ್ಷಣೆಯಿತ್ತು....!

"ಪ್ರೀತಿಸುತ್ತಿಯ? ಆಕೆ

ನನ್ನ ಕಣ್ಣುಗಳಲ್ಲಿ ಅವಳ ಕಣ್ಣುಗಳು.

ಟೀ ಯ ಬಿಸ್ಸಿ ಎದೆಯ ಗೂಡಿನೊಳಗೆ ಇಳಿಯುತ್ತಿತ್ತು ಅಚ್ಚರಿಯ ಜೊತೆಗೆ.

ನಾನು ಮಾತನಾಡಲಿಲ್ಲ.

ಅವಳೆಡೆಗೆ ದಿಟ್ಟಿಸಿದೆ. ಸ್ವಲ್ಪ ಹೊತ್ತು.

ಯಾಕೇ? ನಾನು.

"ಅನ್ವೇಷಣೆಗೆ !" ಆಕೆ.

ದನಿಯಲ್ಲಿ ನಿರ್ಧಾರವಿತ್ತು.

"ಯಾವುದರ ಅನ್ವೇಷಣೆಗೆ ?" ನಾನು

ಪ್ರೀತಿ..!!

ನಾನು ಮತ್ತೆ ಮಾತನಾಡಲಿಲ್ಲ.

ಮೌನ ಕೆಲವೊಮ್ಮೆ ಸಹನೀಯ .!!

ಇಬ್ಬರ ಉಸಿರಿಗೂ ಬೆಂಗಳೂರಿನ ಚಲಿಗಾಳಿಯ ಆಮ್ಲಜನಕ..!!

ಸ್ವಲ್ಪ ಮಾತು ಮತ್ತೆ....!! ಒಂದಷ್ಟು ಪ್ರಶ್ನೆಗಳು , ಮತ್ತೆ ಒಂದಷ್ಟು  ಉತ್ತರಗಳೂ...!!

 

ನಂತರ : 

ಮೊಬೈಲಿಗೆ ಮೆಸೇಜ್ ಪ್ಯಾಕ್ಗಳು ಬಂದವು. ಹೊಸ ಡಿಯೋ ಖರೀದಿಸಿದೆ..! ಕೂದಲು ಬಾಚಲು ಪ್ರಾರಂಭಿಸಿದೆ...!!

ಅವಳು ಇದೆಲ್ಲವನ್ನುಇಷ್ಟಪಡುತ್ತಾಳೋ ಇಲ್ಲವೋ ಎಂದು ಚಡಪಡಿಸಿದೆ.!!

ನಾಟಕಗಳಲ್ಲಿ ಯಾರನ್ನೋ ಮೆಚ್ಚಿಸಬೇಕೆಂಬ ಹಂಬಲ ...!

ಬಾಯಿಗೆ  ಲಿಪಸ್ಟಿಕ್ನ ರುಚಿ ಗೊತ್ತಾಗಿತ್ತು.!!

ವೀಕೆಂಡುಗಳಲ್ಲಿ ನನ್ನ ಎದೆಯ ಮೇಲೆ ಅವಳ ಹಲ್ಲಿನ ಗುರುತುಗಳು ಅನಾಥವಾಗಿ ಬಿದ್ದಿರುತ್ತಿದ್ದವು..!!

 

ಭವಿಷ್ಯದ ಇವತ್ತಿಗೂ ಮೊದಲು :

ನಾನು ಆಕೆಗೆ ನದೀ ಅನ್ನುತ್ತಿದ್ದೆ..!!

ಇಬ್ಬರು ಹುಚ್ಚಿಗೆ ಬಿದ್ದವರ ಹಾಗೆ ಪ್ರೀತಿಸುತ್ತಿದ್ದೆವು....!!

ಅವಳು ನನಗೆ ಅರ್ಥವಾಗುತ್ತಿರಲಿಲ್ಲ....!!

ರಾತ್ರಿಯಿಡಿ ಕುಳಿತು ಕಾದಂಬರಿ ಓದುತ್ತಿದ್ದವನ  ಮಡಿಲಲ್ಲಿ ಅವಳ ತಲೆ..!!

ಶಬ್ಧಕ್ಕೆ ನಿಲುಕದಷ್ಟು ಪ್ರೀತಿಸಿದೆವು..!!

 ಆಮೇಲೆ :

ಅವತ್ತಿನಂತದೇ ಬೆಳಿಗ್ಗೆ. ನಾನು ಟೀ ಕುಡಿಯುತ್ತಿದ್ದೆ. ಮೊನ್ನೆಯಿಂದ ಅವಳು ಟೀ ಕುಡಿಯುತ್ತಿಲ್ಲ.!!

"ಮಾರಬೇಕಿದೆ" ಅವಳು

"??" ನಾನು

"ಪ್ರೀತಿಯನ್ನ..! ನನ್ನ ಪ್ರೀತಿಯನ್ನ..!! " ಅವಳು

"!!" ನಾನು ಹುಬ್ಬು ಗಂಟಿಕ್ಕಿದೆ.

"ನನ್ನ ಪಾಲಿನ ಪ್ರೀತಿಯನ್ನ ಮಾರಬೇಕಿದೆ " ಅವಳು ಮತ್ತೆ ಹೇಳಿದಳು.

"ಯಾರಿಗೆ??" ನನಗೆ ಅಚ್ಚರಿ , ದು:ಖ , ಸಂಕಟ .

"ಗೊತ್ತಿಲ್ಲ" ಆಕೆ

"ಯಾಕೆ?" ನಾನು ಕೇಳಿದೆ.

"ಅನ್ವೇಷಣೆಗೆ !" ಆಕೆ

"ಯಾವುದರ "ಅನ್ವೇಷಣೆಗೆ !" ?? " ನನಗೆ ಮರೆತೇ ಹೋಗಿತ್ತು ಅಥವಾ ಮರೆತಂತೆ ನಟಿಸಿದೇ.

ಪ್ರೀತಿಯನ್ವೇಷಣೆ ..... ಆಕೆ

"............ "

"........"

.........

  ಮುಂದಿನ ಘಟನೆ ಹಿಡಿದಿಡಲು ನನಗೆ ಸಾಧ್ಯವಿಲ್ಲವೇನೋ..!!

 

ಇವಾಗ :

ಮತ್ತೆ ನಾನು ಫ್ಲೈ ಓವರ್ ದಾಟಿಕೊಂಡು ಬಂದು ಟೀ ಕುಡಿಯುತ್ತೆನೆ. ಬೆಂಗಳೂರಿನ ಚಳಿಗಾಳಿಗೆ ಬೈ ಟು ಟೀ ಬೇಕು ಅನ್ನಿಸುತ್ತದೆ.

ಸುಮ್ಮನೇ ಅಪಾರ್ಟ್‌ಮೆಂನ್ಟ್  ದಿಟ್ಟಿಸುತ್ತೇನೆ.!!!

Rating
No votes yet

Comments