ಊಟದ ಮೊದಲು - ಊಟವಾದ ನಂತರ!

ಊಟದ ಮೊದಲು - ಊಟವಾದ ನಂತರ!

ಊಟದ ಮೊದಲು

(ಹಸಿದಿತ್ತು. ಸಂಜೆಯಾದರೂ, ದೆಹಲಿಯ ಸೆಖೆ ಸುಡುತ್ತಿತ್ತು. ದೂರವಾಣಿ ಸಂಭಾಷಣೆ; ಉಭಯ ಕುಶಲೋಪರಿಯ ನಂತರ)

ನಾನು: ಫೋನ್ ಬಿಲ್ ಬಂತಾ?

ಅಪ್ಪ: ಬಂದಿತ್ತು. ಶಂಭು ಭಟ್ರಿಗೆ ದುಡ್ಡು ಕೊಟ್ಟು, ನಾಳೆ ಹೊನ್ನಾವರಕ್ಕೆ ಹೋಗಿ ಕಟ್ಟಲು ಹೇಳಿದ್ದೇನೆ. 

ನಾನು: ಅಪ್ಪ! ಫೋನ್ ಬಿಲ್ ನಾನು ಆನ್ಲೈನ್ ಕಟ್ಟುತ್ತೇನೆ ಎಂದು ಹೇಳಿದ್ದೆನಲ್ಲಾ?

ಅಪ್ಪ: ಮತ್ತೆ ನಿನಗ್ಯಾಕೆ ತೊಂದರೆ ಅಂತ ಅನ್ನಿಸಿತು, ಶಂಭು ಭಟ್ರಿಗೆ ಹೊನ್ನಾವರದಲ್ಲಿ ಬೇರೆ ಕೆಲಸವೂ ಇದೆ.

ನಾನು: ಸರಿ. ನಿಮ್ಮಿಷ್ಟ. ಅವರಿಗೆ ತೊಂದರೆ ಕೊಡುತ್ತಲೇ ಇರುತ್ತೀರಿ. ಅವರಿಗಾದರೆ ಬಿಸಿಲಲ್ಲಿ ಓಡಾಡಿ ತುಂಬಬೇಕು. ನನಗೋ ಕಂಪ್ಯೂಟರ್ ಮುಂದೆ ಕುಳಿತು ಒಂದೆರಡು ಕೀಲಿ ಕುಟ್ಟಿದರಾಯ್ತು. ಇದನ್ನೆಲ್ಲಾ ಮೊದಲೇ ಹೇಳಿದ್ದೇನೆ.

 

ಅಪ್ಪ:"... ... ... ... ... ... ... ... ..."

ನಾನು: ಹ್ಞೂ  (ಮನಸ್ಸಿನಲ್ಲಿ: ಏನು ಬೇಕಾದರೂ ಮಾಡಿಕೊಳ್ಳಿ. ಅಲ್ಲ, ಫೋನ್ ಬಿಲ್ ಕಳೆದ ಆರೇಳು ತಿಂಗಳುಗಳಿಂದ ನಾನೇ ಕಟ್ಟುತ್ತಿದ್ದೇನೆ. ಆದರೂ ಶಂಭು ಭಟ್ರಿಗೆ ಮತ್ತೆ ತ್ರಾಸು ಕೊಡುವ ಕಾರಣವೇನಿತ್ತು ಅಂತ. 'ನನಗ್ಯಾಕೆ ತೊಂದರೆ?' ಅಂತೆ. ಇದೇನು ಲಕ್ಷದ, ಹೋಗಲಿ, ಸಾವಿರದ ಬಿಲ್ ಕೂಡ  ಅಲ್ಲವಲ್ಲ. ಇನ್ನೂರು ರೂಪಾಯಿಯ ಬಿಲ್ ಕಟ್ಟುವುದಕ್ಕೂ ನನಗೆ ತೊಂದರೆಯೇ?}        

ಅಪ್ಪ:"... ... ... ... ... ... ... ... ..." 

ನಾನು: ಹ್ಞೂ (ಮನಸ್ಸಿನಲ್ಲಿ: ನಾಳೆಯಿಂದ ಫೋನೇ ಮಾಡುವುದಿಲ್ಲ. ಸಿಟ್ಟು ಬಂದಿದೆ ಎಂದು ಗೊತ್ತಾಗಲಿ.  ಎಷ್ಟು ಸಲ ಹೇಳಿದರೂ ತಿಳಿಯುವುದಿಲ್ಲ. ಇದಾದರೂ ಒಂದು ಕೆಲಸದಲ್ಲಿ ಇಲ್ಲಿಂದಲೇ ಸಹಾಯ ಮಾಡಬಹುದು ಅಂತ ಅಂದುಕೊಂಡರೆ ಅದಕ್ಕೂ ಭಾಗ್ಯವಿಲ್ಲ. ಏನಾದರೂ ಮಾಡಿಕೊಳ್ಳಿ.)


ಊಟವಾದ ನಂತರ:


(ರೂಮಿಗೆ ಬಂದು ದಣಿವಾರಿಸಿಕೊಂಡಿದ್ದೆ.)

ಆಗಲೇ ಹೇಳಿಬಿಡಬೇಕಾಗಿತ್ತು, 'ನಾನು ರೂಮಿಗೆ ಹೋಗಿ ಆನ್ಲೈನ್ ಬಿಲ್ ಕಟ್ಟುತ್ತೇನೆ. ಶಂಭು ಭಟ್ರಿಗೆ ಫೋನ್ ಮಾಡಿ ಹೇಳಿ; ನೀವೇನೂ ಕಟ್ಟಬೇಕಾಗಿಲ್ಲ' ಅಂತ. ಈಗಂತೂ ತಡವಾಯ್ತು. ಒಹ್ ...ಈಗ ನೆನಪಾಯ್ತು. ಹಿಂದಿನ ಸಲ ನಾನು ಕೊನೆಯ ದಿನಾಂಕದವರೆಗೂ ಬಿಲ್ ಕಟ್ಟಲು ಮರೆತೇ ಬಿಟ್ಟಿದ್ದೆ ಆಲ್ವಾ?  ಅವತ್ತು, ಬಿಲ್ ಕಟ್ಟಲು ಕೊನೆಯ ದಿನದಂದು, ಅಪ್ಪ ನೆನಪು ಮಾಡಿದ ಮೇಲೆ ತಾನೇ ತುಂಬಿದ್ದು.  ಈ ಸಲವಾದರೂ ಮೊದಲೇ ಇಂಟರ್ನೆಟ್ನಲ್ಲಿ ನೋಡಿ, ಇಷ್ಟರಲ್ಲೇ ತುಂಬಿಬಿಡಬೇಕಾಗಿತ್ತು. ಈಗಂತೂ ತಡವಾಯ್ತು. ಫೋನ್ ಮಾಡುವ ಹಾಗೂ ಇಲ್ಲ. ಹೋಗಲಿ. ಮುಂದಿನ ಸಲ ನಾನೇ ಮೊದಲೇ ತುಂಬಿ ಬಿಡ್ತೀನಿ. ಸುಮ್ಮನೆ ಅವರ ಮೇಲೆ ಸಿಟ್ಟಾದೆ. ತಪ್ಪು ನನ್ನದೇ.

ಈಗೇನು ಮಾಡ್ಲಿ? ಸಂಪದಿಗರಲ್ಲಿ ಹೇಳಿ ಕೊಳ್ತೀನಿ.

ಹಾಗೇ ನಿದ್ದೆ ಮಾಡ್ತೀನಿ.    

Rating
No votes yet

Comments