I.I.T ಯಲ್ಲಿ ಅಟೆಂಡೆನ್ಸ್
ನಮ್ಮ ಕಾಲೇಜಿನಲ್ಲಿ ನಡೆದ ಕೆಲವು ಘಟನೆಗಳೊಂದಿಗೆ, ಅವುಗಳ ಬಗೆಗೆ ನನ್ನ ನಿಲುವುಗಳನ್ನು ಇಲ್ಲಿ ಬರೆದಿದ್ದೇನೆ.
ಸಾಮಾನ್ಯವಾಗಿ, ನಮಗೆ ಅಟೆಂಡೆನ್ಸ್ ಇಲ್ಲ. ಆ ವಿಚಾರವಾಗಿ ಯಾವ ಜೆನೆರಲ್ ನಿಯಮಗಳೂ ಇಲ್ಲ. ಲೆಕ್ಚರರ್ ಇಚ್ಚಿಸಿದರೆ, ಅಟೆಂಡೆನ್ಸ್ ನೋಡಿ, ಅದಕ್ಕೆ ಮಾರ್ಕ್ಸ್ ಇಡಬಹುದು. ಈ ಸ್ವಾತಂತ್ರ್ಯವನ್ನು ಲೆಕ್ಚರರ್ ಗೆ ನೀಡಲಾಗಿದೆ. ಕೆಲವರು ಅಟೆಂಡೆನ್ಸ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ; ಕೆಲವರು, ಹುಡುಗರಿಗೆ ಸ್ವಲ್ಪ ಭಯ ಇರಲಿ ಎಂದು ವಾರಕ್ಕೆ ಮೂರ್ನಾಲ್ಕು ದಿನ ಅಟೆಂಡೆನ್ಸ್ ಇಡುತ್ತಾರೆ; ಇನ್ನು ಕೆಲವರು, ಅದಕ್ಕೆ ೧೦% ಅಥವಾ ೨೦% ಅಂಕಗಳನ್ನೇ ಇಟ್ಟಿರುತ್ತಾರೆ. ಅಟೆಂಡೆನ್ಸ್ ಇಲ್ಲದ ಕ್ಲಾಸಿಗೆ ಹೋಗುವಷ್ಟು ’ವಿನಯ’ ಹೆಚ್ಚು ಜನಕ್ಕೆ ಇಲ್ಲ.
ಈ ನಿಯಮಗಳನ್ನು ಮಾಡುವಲ್ಲಿ, ವಿದ್ಯಾರ್ಥಿಗಳ ಪಾಲೂ ಇರಬೇಕು ಎಂದು, ಪ್ರತಿಯೊಂದು ಬ್ಯಾಚಿನ ಪ್ರತಿನಿಧಿಯಾಗಿ, ಒಬ್ಬೊಬ್ಬ ಸೆನೆಟರ್ ಮತದಾನದ ಮೂಲಕ ಆಯ್ಕೆಯಾಗಿರುತ್ತಾನೆ. ಕಳೆದ ಸೆಮಿಸ್ಟರ್, ಯಾರೋ "೮೦% ಅಟೆಂಡೆನ್ಸ್ ಕಡ್ಡಾಯ ಮಾಡಬೇಕು" ಎಂಬ ಬಿಲ್ ಎತ್ತಿದರು. ಸೆನೆಟರ್ ಗಳ ಮೂಲಕ, ಈ ವಿಚಾರ ವಿದ್ಯಾರ್ಥಿಗಳ ಕಿವಿ ತಲುಪಿತು. ಹಲವರಿಗೆ ಇದು ಇಷ್ಟವಾಗದಿದ್ದರೂ, ತಮ್ಮ ಸೋಮಾರಿತನಕ್ಕೆ ಇದೇ ಮದ್ದು ಎಂದು, ಈ ಬೆಳವಣಿಗೆಯನ್ನು ಸ್ವಾಗತಿಸುವವರೂ ಇದ್ದರು!. ಈ ಸಮಯದಲ್ಲಿ, ತಮಾಷೆಗೆಂದು, ’ಬೇಸ್ ಲೈನ್ ವುಲ್ವ್ಸ್’ ಎಂಬ ವಿದ್ಯಾರ್ಥಿಗಳ ಗ್ಯಾಂಗ್, ಈ ಬೆಳವಣಿಗೆಯನ್ನು ವಿರೋಧಿಸಿ, ವೀಡಿಯೋ ಒಂದನ್ನು ತಯಾರಿಸಿತು: (ಇತ್ತೇಚೆಗೆ ಪ್ರಾರಂಭವಾದ IIT ರಾಜಸ್ಥಾನದ ವಿದ್ಯಾರ್ಥಿಗಳೂ, ನಮ್ಮ ಕ್ಯಾಂಪಸ್ ನಲ್ಲೇ ಇದ್ದಾರೆ. ಅವರ ಕ್ಯಾಂಪಸ್ ತಯಾರಾಗುವವರೆಗೆ ಈ ವ್ಯವಸ್ಥೆ; ಈ ದೃಶ್ಯಾವಳಿ ನೋಡುವ ಮುನ್ನ ಈ ವಿಚಾರ ತಿಳಿದಿರಬೇಕು ಎಂದು ಹೇಳಿದೆ)
(http://www.facebook.com/video/video.php?v=126032468631)
ಈ ದೃಶ್ಯಾವಳಿ ಯೂಟ್ಯೂಬಿನಲ್ಲಿತ್ತು; ಆದರೆ, ಇತ್ತೇಚೆಗೆ, ಕಾಪಿರೈಟ್ ನಿಯಮದೆ ಮೇಲೆ ಬ್ಲಾಕ್ ಮಾಡಲಾಯಿತು.
ಇದು, ಹುಡುಗರ ಒಂದು ಮೋಜಿನ ಆಟ ಅಷ್ಟೆ. ಕೊನೆಗೂ, ಆ ನಿಯಮ ಜಾರಿಯಾಗಲಿಲ್ಲ!
ಹಾಜರಿಗೆ ಸಂಭಂದಿಸಿದಂತೆ, ನನ್ನ ಎರಡು ಅನುಭವಗಳು, ಕುತೂಹಲಕರವಾಗಿವೆ. ಕಳೆದ ಸೆಮಿಸ್ಟರ್, ನನಗೊಂದು ’ಮೆಟೀರಿಯಲ್ ಸೈನ್ಸ್’ ಕೋರ್ಸ್ ಇತ್ತು. ನಾವು, ಅದನ್ನು ’ಮಟ್ಟಿ’ ಅಂತ ಕರೆಯುತ್ತಿದ್ದೆವು. (ಇಲ್ಲಿ ಹೀಗೇ, ಪ್ರಯೊಂದಕ್ಕೂ ಅಡ್ಡ ಹೆಸರುಗಳು; ಭೌತಶಾಸ್ತ್ರಕ್ಕೆ ’ಫೈ’, BSBE ಗೆ ’ಬಸ್ಬೆ’, ಎಲೆಕ್ಟ್ರಿಕಲ್ ಇಂಜಿನಿಯರಿಂಗಿಗೆ ’ಬತ್ತಿ’, ಕಂಪ್ಯೂಟರ್ ಗೆ ’ಡಬ್ಬಾ’!!; TA, ಅಂದರೆ, ’ಟೆಕ್ನಿಕಲ್ ಆರ್ಟ್’ ಗೆ ’ಟವ್ವಾ’..ಹೇಗೆ ಬಂತು ಎಂದು ಊಹಿಸಿ!). ನಮ್ಮ ಮಟ್ಟಿಯ ಅಧ್ಯಾಪಕರು, ಬಹಳ ಶಿಸ್ತಿನ ವ್ಯಕ್ತಿ. ಆದರೆ, ನಮಗೆಲ್ಲ, ಮಟ್ಟಿ ಅತೀ ಬೋರು ಹೊಡೆಯುವ ಕ್ಲಾಸು. ೭೨ಜನರ ಪೈಕಿ, ಮೊದ ಮೊದಲು, ೬೦-೬೫ ಜನ ಬರುತ್ತಿದ್ದರು. ಒಂದು ಪರೀಕ್ಷೆ ಆದನಂತರ, ಈ ಸಂಖ್ಯೆ ೨೫-೩೦ಕ್ಕೆ ಇಳಿಯಿತು. ಅವರು, ನಿತ್ಯವೂ ತಪ್ಪದೇ ಅಟೆಂಡೆನ್ಸ್ ತೆಗೆದುಕೊಳ್ಳುತ್ತಿದ್ದರೂ ಈ ಪಜೀತಿ!
ನಮ್ಮಲ್ಲಿ, ಲೆಕ್ಚರ್ ಹೊರತಾಗಿ, ’ಟ್ಯುಟೋರಿಯಲ್’ ಇಡುವ ಪರಿಪಾಠವಿದೆ. ಇದೂ ಕೂಡ, ಲೆಕ್ಚರ್ ನಂತೆ, ಕೋರ್ಸಿನ ಭಾಗವೇ. ’ಪ್ರಾಬ್ಲಮ್ ಸಾಲ್ವಿಂಗ್’ ಗಾಗಿ ಮೀಸಲಿಟ್ಟ ಸಮಯ. ಸಾಮಾನ್ಯವಾಗಿ, ಒಂದು ಟ್ಯುಟೋರಿಯಲ್ ನಲ್ಲಿ, ೩೦-೪೦ ಜನ ಇರುತ್ತಾರೆ. ನಮ್ಮ ಮಟ್ಟಿ ತರಗತಿಯನ್ನು, ಇದಕ್ಕಾಗಿ, ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ಅಂದರೆ, ಮೂರು ’ಟ್ಯುಟೋರಿಯಲ್ ಸೆಕ್ಷನ್’ ಗಳಿದ್ದವು. ಪ್ರತಿಯೊಂದರಲ್ಲೂ ೨೪ ಜನ. ಪ್ರತೀ ವಿಭಾಗಕ್ಕೂ ಬೇರೆ ಬೇರೆ ಅಧ್ಯಾಪಕರು, ಟ್ಯುಟೋರಿಯಲ್ ನಡೆಸುತ್ತಿದ್ದರು. ವಾರಕ್ಕೊಂದು ದಿನ, ಲ್ಯಾಬ್ ಕೂಡ ಇತ್ತು. ಒಮ್ಮೆಗೆ ಒಂದು ವಿಭಾಗಕ್ಕೆ ಲ್ಯಾಬ್ ಇರುತ್ತಿತ್ತು. ನಾನಿದ್ದ ವಿಭಾಗಕ್ಕೆ, ಪ್ರತೀ ಶುಕ್ರವಾರ ಲ್ಯಾಬ್ ಇರುತ್ತಿತ್ತು.
ಅಷ್ಟು ಕಠಿಣವಿದ್ದ ನಮ್ಮ ಅಧ್ಯಾಪಕರಿಗೂ ವಿದ್ಯಾರ್ಥಿಗಳನ್ನು ಸೆಳೆಯಲಾಗಲಿಲ್ಲ. ಕೆಲವು ದಿನಗಳಂತೂ, ತರಗತಿಯಲ್ಲಿ, ಹಾಜರಿ, ೨೦ಕ್ಕೂ ಕಡಿಮೆ ಇರುತ್ತಿತ್ತು! ವಿದ್ಯಾರ್ಥಿಗಳನ್ನು ಸೆಳೆಯಲು, ನಮ್ಮ ಅಧ್ಯಾಪಕರು ಉಪಯೋಗಿಸದ ತಂತ್ರವಿಲ್ಲ. ಪ್ರತೀ ದಿನ ಹಾಜರಿ ತೆಗೆದುಕೊಳ್ಳುತ್ತಿದ್ದರು, ಹಾಗೂ ಅದಕ್ಕೆ ೧೦% ವೈಟೇಜ್; ತರಗತಿಯ ಮಧ್ಯ, ವಿದ್ಯಾರ್ಥಿಗಳಲ್ಲಿ ಯಾರನ್ನಾದರು ದಿಢೀರನೆ ಎಬ್ಬಿಸಿ ಹಿಂದಿನ ದಿನದ ಪಾಠದ ಬಗೆಗಿನ ಪ್ರಶ್ನೆಗಳನ್ನು ಸುರಿಸುತ್ತಿದ್ದರು. ಒಮ್ಮೆಯಂತೂ ’ಸರ್ಪ್ರೈಸ್ ಕ್ವಿಜ್’ ಕೊಟ್ಟಿದ್ದರು(ಕ್ವಿಜ್ ಅಂದರೆ, ’ಕ್ಲಾಸ್ ಟೆಸ್ಟ್’) ಅದಕ್ಕೆ ೫% ವೈಟೇಜ್ ಬೇರೆ! ಆದರೂ ನಾವು ಜಗ್ಗಲಿಲ್ಲ! ಒಮ್ಮೆ, ತರಗತಿಯಲ್ಲಿ, ತೀರಾ ಕುಪಿತರಾಗಿ, ಪಾಠವನ್ನು ಅರ್ಧಕ್ಕೇ ನಿಲ್ಲಿಸಿ ಹೋಗಿದ್ದರು; ಲ್ಯಾಬಿಗೆ ಬಂದು, ಒಬ್ಬೊಬ್ಬರನ್ನೇ ಹಿಡಿದು "why don't you come to class? Do you want me to fail you?" ಎಂದು ಹೆದರಿಸುತ್ತಿದ್ದರು. ಏನೇ ಮಾಡಿದರೂ, ಹಾಜರಿ, ೩೫ ದಾಟಲಿಲ್ಲ!! ಕಡೆಗೂ ೭೨ ಜನರಲ್ಲಿ, ಇಬ್ಬರಿಗೆ ಮಾತ್ರ A ಗ್ರೇಡ್ ಕೊಟ್ಟು, ಸೇಡು ತೀರಿಸಿಕೊಂಡರು. ೧೫ ಜನಕ್ಕೆ F ಕೊಟ್ಟು ಫೇಲ್ ಮಾಡಿದರು. ಸಣ್ಣ ಅಂತರದಲ್ಲಿ, A ಕಳೆದುಕೊಂಡು B ಪಡೆದ ನತದೃಷ್ಟರಲ್ಲಿ ನಾನೂ ಒಬ್ಬ! :D
ಇದಕ್ಕೆ ತೀರಾ ವ್ಯತಿರಿಕ್ತವೆನಿಸುವ ಇನ್ನೊಂದು ಅನುಭವ, ಕಳೆದ ವರ್ಷ ನಡೆದಿತ್ತು. ಸರಿಯಾಗಿ ಒಂದು ವರ್ಷದ ಕೆಳಗೆ, ನಮಗೊಂದು ಗಣಿತದ ಕೋರ್ಸ್ ಇತ್ತು. ಕೋರ್ಸ್ ನಲ್ಲಿದ್ದವರು ೬೦೦ ವಿದ್ಯಾರ್ಥಿಗಳು. ಎಲ್ಲರನ್ನೂ ಒಂದೇ ಲೆಕ್ಚರ್ ನಲ್ಲಿ ಕೂರಿಸಲಾಗದು ಎಂದು ಎರಡು ವಿಂಗಡಣೆ ಮಾಡಿ ಇಬ್ಬರು ಅಧ್ಯಾಪಕರನ್ನು ಇಟ್ಟಿದ್ದರು. ಪ್ರತೀ ವಿಭಗದಲ್ಲಿ ೩೦೦ ಜನ; ನಾನಿದ್ದ ವಿಭಾಗದ ಲೆಕ್ಚರ್ ೯ ಘಂಟೆಗೆ, L16(ಅಂದರೆ ೧೬ನೇ ಲೆಕ್ಚರ್ ಹಾಲ್) ನಲ್ಲಿ. ಇನ್ನೊಂದು ವಿಭಾಗದ ಲೆಕ್ಚರ್, ಮಧ್ಯಾಹ್ನ ೧೨ ಘಂಟೆಗೆ, L7 ನಲ್ಲಿ. ನಮ್ಮಲ್ಲಿ, L7 ಅತೀ ದೊಡ್ಡ ಹಾಲ್. ೫೦೦ ಜನ ಕೂರುವಷ್ಟು ದೊಡ್ಡದು. ಆ L7 ಅಧ್ಯಾಪಕರ ವಿಚಾರ ನಿಧಾನವಾಗಿ ಹರಡತೊಡಗಿತು. ಎಲ್ಲೆಡೆ ಅವರ ಸಾಮರ್ಥ್ಯದ ಬಗ್ಗೆ ಒಳ್ಳೆ ಅಭಿಪ್ರಾಯಗಳು ಕಂಡುಬರತೊದಗಿದವು. ಕೊನೆಗೆ ನಮ್ಮ ವಿಭಾಗದ ಕೆಲವರು, ೧೨ ಟೆಗೆ ಕ್ಲಾಸ್ ಬಂಕ್ ಮಾಡಿ, L7 ಗೆ ಹೋಗಿ ಬಂದರು. ಹಾಗೆ ಮಾಡಿದವರು ಅವರ ಬಗ್ಗೆ ಇನ್ನಷ್ಟು ಒಳ್ಳೆಯ ಅಭಿಪ್ರಾಯವನ್ನು ಮೂಡಿಸಿದರು. ಕೊನೆಗೆ, ಇದು ಎಲ್ಲಿಯವರೆಗೆ ಮುಟ್ಟಿತೆಂದರೆ, ಸೆಮಿಸ್ಟರ್ ಕೊನೆಕೊನೆಗೆ, L7 ನಲ್ಲಿ, ೪೦೦ ಜನ ಕುಳಿತಿರುತ್ತಿದ್ದರು!!!
ಅಷ್ಟು ದೊಡ್ಡ ತರಗತಿಯಲ್ಲಿ, ಹಾಜರಿ ತೆಗೆದುಕೊಳ್ಳುವು ಕನಸಿಗೂ ನಿಲುಕದ ಮಾತು. ಅವರು, ಅಟೆಂಡೆನ್ಸ್ ಬಗ್ಗೆ ತೆಲೆಯೇ ಕೆಡಿಸಿಕೊಳ್ಳುತ್ತಿರಲಿಲ್ಲ. ಇಷ್ಟಾಗಿಯೂ, ೩೦೦ ಜನ ಇರಬೇಕಾದ ತರಗತಿಯಲ್ಲಿ ೪೦೦ ಜನ ಇರುತ್ತಿದ್ದರು!
ಕುತೂಹಲದಿಂದ ನಾನೂ ಒಮ್ಮೆ ಅವರ ತರಗತಿಗೆ ಹೋದೆ. ನನಗೇನೂ ಅಷ್ಟು ಮೆಚ್ಚುಗೆಯಾಗಲಿಲ್ಲ. ಆದರೆ, ನನಗೆ ಅಲ್ಲಿ ಒಂದು ವಿಷಯ ತಿಳಿದು ಬಂತು: ಅವರು, ಎಲ್ಲರಿಗೂ ಕಠಿಣವಾದ ಗಣಿತಶಾಸ್ತ್ರವನ್ನು, ಜಾಗರೂಕತೆಯಿಂದ, ಸಾಧಾರಣ ಭಾಷೆಯಲ್ಲಿ, ಹೆಚ್ಚಿನ 'rigour' ಇಲ್ಲದೇ ಹೇಳಿಕೊಡುತ್ತಿದ್ದರು ಅಷ್ಟೆ.(ನನಗೆ ,ಮೆಚ್ಚುಗೆಯಾಗದಿದ್ದುದು 'rigour' ಇಲ್ಲದಿದ್ದುದರಿಂಗಲೇ..ಗಣಿತ ನನ್ನ ನೆಚ್ಚಿನ ವಿಷಯ, 'rigour' ಇಲ್ಲದ ಗಣಿತವನ್ನು ನಾನು ಏಕೋ ಇಷ್ಟಪಡುವುದಿಲ್ಲ). ಇದು, ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿತ್ತು. ಲೆಕ್ಚರರ್ ಇಂದ ತಮಗೆ ಬಹಳ ಸಹಾಯವಾಗಲಿದೆ ಎಂದು ಅರಿತ ವಿದ್ಯಾರ್ಥಿಗಳು, ಅವರ ಕ್ಲಾಸಿಗೆ ತಪ್ಪದೇ ಹೋಗುತ್ತಿದ್ದರು. ಇದು, ವಿದ್ಯಾರ್ಥಿಗಳನ್ನು ಸೆಳೆಯುವ ಸರಳ ವಿಧಾನ! ಆ ಅಧ್ಯಾಪಕರು, ನಾನು ಅತೀ ಗೌರವದಿಂದ ಕಾಣುವ ಅಧ್ಯಾಪಕರಲ್ಲಿ ಒಬ್ಬರಾದರು.
ಈಗ ಇವೆರಡು ಅನುಭವಗಳನ್ನು ಹೋಲಿಸಿ ನೋಡಿದರೆ, ತಿಳಿದುಬರುವ ಸರಳ ವಿಚಾರ: ’ಅವಶ್ಯಕತೆ ಇಲ್ಲದೇ ಯಾರೂ ಯಾವ ಕೆಲಸವನ್ನೂ ಮಾಡುವುದಿಲ್ಲ’. ಮೊದಲ ಘಟನೆಯಲ್ಲಿ, ಕ್ಲಾಸ್ ಗೆ ಹೋಗುವ ಅವಶ್ಯಕೆತೆ ಯಾರಿಗೂ ಇರಲಿಲ್ಲ. ಹಾಸ್ಟಲ್ ನಲ್ಲಿ ಕುಳಿತು ಪಟ್ಟು ಹಿಡಿದು ಓದಿದರೆ, ಪರೀಕ್ಷೆಗೆ ಹಿಂದಿನ ಎರಡು ದಿನಗಳ ಕೆಲಸ ಆಷ್ಟೆ. ಅಷ್ಟು ಬೋರು ಹೊಡೆಯುವ ಕ್ಲಾಸಿಗೆ ಹೋಗಲು ಯಾರಿಗೂ ಇಷ್ಟವಾಗುವುದಿಲ್ಲ. ಹಾಗಾಗಿ, ಏನೇ ಮಾಡಿದರೂ, ಕ್ಲಾಸಿನತ್ತ ವಿದ್ಯಾರ್ಥಿಗಳನ್ನು ಸೆಳೆಯಲಾಗಲಿಲ್ಲ. ಎರಡನೇ ಘಟನೆಯಲ್ಲಿ, ಅಧ್ಯಾಪಕರ ಪ್ರಭಾವಿ ಪಾಠದ ಅವಶ್ಯಕತೆ ಎಲ್ಲರಿಗೂ ಇತ್ತು. ಹಾಗಾಗಿ, ಶ್ರಮವಿಲ್ಲದೇ ವಿದ್ಯಾರ್ಥಿಗಳನ್ನು ಸೆಳೆಯಲಾಯಿತು.
ಈ ಎರಡು ಘಟನೆಗಳು, ನನ್ನ ಪಿಯುಸಿ ದಿನಗಳನ್ನು ನೆನಪಿಸಿದವು. ಉಪಯೋಗವಿಲ್ಲದ ೭೫% ಅಟೆಂಡೆನ್ಸ್ ಗಾಗಿ ಕ್ಲಾಸ್ ಗೆ ಹೋಗುವುದು ನನಗೆ ಆಗ ಬಹಳ ಕಿರಿಕಿರಿಯುಂಟುಮಾಡಿತ್ತು. ಒಂದು ತಾರ್ಕಿಕ ಊಹೆಯ ಪ್ರಕಾರ, ಹಿಂದೆ, ಹುಡುಗರನ್ನು ಕ್ಲಾಸಿನತ್ತ ಸೆಳೆಯಲು ಇಷ್ಟು ಕಷ್ಟವಿರಲಿಲ್ಲ; ಈಗಿನ ಸ್ಥಿತಿ, ’ಅಟೆಂಡೆನ್ಸ್ ಇಲ್ಲದಿದ್ದರೆ ಪರೀಕ್ಷೆಗೆ ಕೂರಲು ಬಿಡುವುದಿಲ್ಲ’ ಎಂಬ ನಿಯಮ ತಂದು ಹುಡುಗರನ್ನು ಕ್ಲಾಸಿಗೆ ಬಲವಂತವಾಗಿ ಕರೆತರುವಷ್ಟು ಶೋಚನೀಯವಾಗಿದೆ. ಇದಕ್ಕೆ ನಾನು ನೀಡುವ ಕಾರಣ, ಕುಗ್ಗುತ್ತಿರುವ ಹಿರಿಯರ ಮೇಲಿನ ಕಿರಿಯರ ಅವಲಂಬನೆ. ಹಿರಿಯರ ಮಾತನ್ನು ಕೇಳದಿರುವುದೂ, ಇದರ ಪರಿಣಾಮವೇ. ಹುಡುಗರಿಗೆ ಅವಶ್ಯಕವಲ್ಲದ್ದನ್ನು ಬಲವಂತವಾಗಿ ನೀಡಲು ಹೋದರೆ, ಈ ರೀತಿಯ ಹೀನ ಸ್ಥಿತಿ ತಲುಪುದರಲ್ಲಿ ಆಶ್ಚರ್ಯವಿಲ್ಲ.
Comments
ಉ: I.I.T ಯಲ್ಲಿ ಅಟೆಂಡೆನ್ಸ್
In reply to ಉ: I.I.T ಯಲ್ಲಿ ಅಟೆಂಡೆನ್ಸ್ by nr_nagendra
ಉ: I.I.T ಯಲ್ಲಿ ಅಟೆಂಡೆನ್ಸ್
ಉ: I.I.T ಯಲ್ಲಿ ಅಟೆಂಡೆನ್ಸ್