ಸಾನಿಯಾ ಮೇನಿಯಾ!
ಟೆನ್ನಿಸ್, ಹಾಕಿ ಮತ್ತು ಫುಟ್ಬಾಲ್ ಪಂದ್ಯಗಳ ವೀಕ್ಷಣೆ ನನಗೆ ಬಲು ಇಷ್ಟ. ಬೆಂಗಳೂರಿನಲ್ಲಿರುವ ನಾನು ಇಲ್ಲಿ ನಡೆಯುವ ಈ ಮೂರೂ ವಿಭಾಗಗಳ ಪ್ರಮುಖ ಪಂದ್ಯಗಳನ್ನು ಪ್ರತ್ಯಕ್ಷ ವೀಕ್ಷಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ.
ಜನವರಿ ೨೦೦೪ರಲ್ಲಿ ಬೆಂಗಳೂರಿನಲ್ಲಿ ನಡೆದ ಫೆಡರೇಷನ್ ಕಪ್ ಫೈನಲ್ ಪಂದ್ಯದಲ್ಲಿ ಗೋವಾದ ಡೆಂಪೊ ಸ್ಪೋರ್ಟ್ಸ್ ಕ್ಲಬ್ ಪರವಾಗಿ ಆಡುತ್ತಿದ್ದ ಬ್ರೆಜಿಲ್ನ ಕ್ರಿಸ್ಟಿಯಾನೊ ಜ್ಯೂನಿಯರ್ ಅವರು ಮೋಹನ್ ಬಗಾನ್ನ ಗೋಲ್ಕೀಪರ್ ಸುಬ್ರತಾ ಪಾಲ್ಗೆ ಡಿಕ್ಕಿಹೊಡೆದು ಕುಸಿದು ಕೆಲವೇ ಕ್ಷಣಗಳಲ್ಲೇ ಸಾವನ್ನಪ್ಪಿದ ದುರ್ಘಟನೆಯನ್ನು ಅಂದು ಕಣ್ಣಾರೆ ಕಂಡ ಪ್ರೇಕ್ಷಕರಲ್ಲಿ ನಾನೂ ಒಬ್ಬ.
೨೦೦೭ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಸೋನಿ ಎರಿಕ್ಸನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಸಾನಿಯಾ ಮಿರ್ಜಾ ಅವರು ಶ್ರೇಯಾಂಕರಹಿತ ರಷ್ಯನ್ ಆಟಗಾರ್ತಿ ಶ್ವೆಡೋವಾ ಯಾರೊಸ್ಲಾವಾ ಕೈಯಲ್ಲಿ ಪರಾಜಿತೆಯಾದ ಪಂದ್ಯವನ್ನೂ ನಾನು ಪ್ರತ್ಯಕ್ಷ ವೀಕ್ಷಿಸಿದ್ದೇನೆ. ಅನಂತರ ಶ್ವೆಡೋವಾ ಅವರು ಆ ಪಂದ್ಯಾವಳಿಯ ಸಿಂಗಲ್ಸ್ ಛಾಂಪಿಯನ್ ಆಗಿ ಹೊರಹೊಮ್ಮಿದರು.
ಸಾನಿಯಾ ಆಡುವ ಪಂದ್ಯವನ್ನು ವೀಕ್ಷಿಸಲು ಜನ ಕಿಕ್ಕಿರಿದಿರುತ್ತಾರೆಂದು ಆ ದಿನ ನಾನು ಊಹಿಸಿದ್ದು ತಪ್ಪಾಗಿತ್ತು. ಕಬ್ಬನ್ ಪಾರ್ಕಿನ ಆ ಚಿಕ್ಕ ಸ್ಟೇಡಿಯಂನಲ್ಲಿ ಅರ್ಧದಷ್ಟು ಸೀಟುಗಳು ಖಾಲಿ ಉಳಿದಿದ್ದವು! ಟಿಕೆಟ್ ದರಗಳೇನೂ ಭಾರಿಯಾಗಿರಲಿಲ್ಲ. ಸಾನಿಯಾರ ಆಟಕ್ಕಲ್ಲದಿದ್ದರೂ ಸೌಂದರ್ಯಕ್ಕೆ ಮನಸೋತ ಯುವಸಮೂಹವೇ ನಮ್ಮಲ್ಲಿರುವಾಗ ಆಕೆಯ ಆಟ-ಮಾಟ ಎರಡನ್ನೂ ನೋಡಲು ಪ್ರೇಕ್ಷಕರೇಕೆ ಕಿಕ್ಕಿರಿದಿಲ್ಲ, ಎಂದು ಆ ದಿನ ನನ್ನನ್ನು ನಾನೇ ಪ್ರಶ್ನಿಸಿಕೊಂಡಿದ್ದೆ. ಈ ಪ್ರಶ್ನೆಗೆ ಉತ್ತರವಾಗಿ ಎರಡು ಕಾರಣಗಳು ಅಂದು ನನಗೆ ಹೊಳೆದಿದ್ದವು.
ಒಂದನೆಯ ಕಾರಣ, ಬೆಂಗಳೂರಿಗರಿಗೆ ಕ್ರಿಕೆಟ್ ಬಿಟ್ಟು ಇನ್ನಾವ ಪಂದ್ಯದಮೇಲೂ ಅಷ್ಟೊಂದು ವ್ಯಾಮೋಹ ಇಲ್ಲ. ಎರಡನೆಯ ಕಾರಣ, ಸಾನಿಯಾ ಮೇನಿಯಾವನ್ನು ಹುಟ್ಟುಹಾಕಿ, ಬೆಳೆಸಲೆತ್ನಿಸುತ್ತಿರುವುವು ಮಾಧ್ಯಮಗಳು. ಎರಡನೆಯ ಕಾರಣಕ್ಕೆ ನಿದರ್ಶನವಾಗಿ ಅಂದು ಸಾನಿಯಾ ಸುತ್ತ ಅಭಿಮಾನಿಗಳಿಗಿಂತ ಮಾಧ್ಯಮದ ಮಂದಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದರು!
ಕ್ರಿಕೆಟ್...ಇರಲಿ ಬಿಡಿ
ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಗಳ ಟಿಕೆಟ್ಗಳು ಕಣ್ಮುಚ್ಚಿ ತೆರೆಯುವುದರೊಳಗೆ ಮಾರಾಟವಾಗಿಬಿಟ್ಟಿರುತ್ತವೆ. ಆದರೆ ಇದೇ ಬೆಂಗಳೂರಿನಲ್ಲಿ ಇದುವರೆಗೆ ನಾನು ನೋಡಿದ ಎಲ್ಲ ಪ್ರಮುಖ ಹಾಕಿ, ಫುಟ್ಬಾಲ್ ಮತ್ತು ಟೆನ್ನಿಸ್ ಪಂದ್ಯಗಳಲ್ಲೂ ಬಹಳಷ್ಟು ಸೀಟುಗಳು ಖಾಲಿ ಖಾಲಿ ಇದ್ದವು! ಫೆಡರೇಷನ್ ಕಪ್ ಫೈನಲ್ ಪಂದ್ಯದಲ್ಲೂ ನನಗೆ ಖಾಲಿ ಸೀಟುಗಳು ಕಂಡವು! ಅದೇ, ಐಪಿಎಲ್ ಕ್ರಿಕೆಟ್ ಪಂದ್ಯಗಳ ಟಿಕೆಟ್ಗಳಿಗೆ ದೇಶದಲ್ಲಿ ಅತ್ಯಂತ ಹೆಚ್ಚು ಬೇಡಿಕೆಯಿರುವುದು ಈ ಬೆಂಗಳೂರಿನಲ್ಲೇ!
ಇರಲಿ ಬಿಡಿ. ಕ್ರಿಕೆಟ್ಟೂ ಒಂದು ಕ್ರೀಡೆಯೇ ತಾನೆ. ಸಾನಿಯಾ ಸುದ್ದಿಗೆ ಹಿಂತಿರುಗೋಣ. ಜನರಲ್ಲಿ ಸಾನಿಯಾ ಮೇನಿಯಾ ಹುಟ್ಟುಹಾಕಿ ಪ್ರೋತ್ಸಾಹಿಸುವ ಮೂಲಕ ಕಾಸುಮಾಡಿಕೊಳ್ಳಲೆತ್ನಿಸುವ ನಮ್ಮ ಮಾಧ್ಯಮಗಳು, ಅದರಲ್ಲೂ ಇಂಗ್ಲಿಷ್ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳು, ತಮ್ಮ ಉದ್ದೇಶದ ಯಶಸ್ಸಿಗಾಗಿ ಸಾನಿಯಾರ ಆಟಕ್ಕಿಂತ ಆಕೆಯ ಮೈಮಾಟಕ್ಕೆ ಹೆಚ್ಚು ಒತ್ತು ನೀಡುತ್ತಿರುವುದನ್ನು ನಾವು ಗಮನಿಸಬಹುದು. ವರದಿ, ವಿಶೇಷ ಲೇಖನ, ಗಾಸಿಪ್, ಕೊನೆಗೆ, ಆಟದ ಫೋಟೊಗಳಲ್ಲಿ ಕೂಡ ಸಾನಿಯಾರ (ದೇಹ)ಸೌಂದರ್ಯವನ್ನು ಪ್ರಚುರಪಡಿಸುವ ಮಾಧ್ಯಮಗಳ ಚಾಲಾಕಿತನ ಜನರಿಗೆ ಗೊತ್ತಿಲ್ಲದ್ದೇನಲ್ಲ. ಕನ್ನಡದ ಒಂದು ಟ್ಯಾಬ್ಲಾಯ್ಡ್ ವಾರಪತ್ರಿಕೆಯಂತೂ ಕಳೆದ ವಾರ ಸಾನಿಯಾರ ಆಕ್ಷೇಪಾರ್ಹವೆನ್ನಬಹುದಾದ ಫೊಟೊವೊಂದನ್ನು ಇಡೀ ಮುಖಪುಟದಲ್ಲಿ ಮುದ್ರಿಸಿತ್ತು!
ಕಳೆದೊಂದು ತಿಂಗಳು ಇವೇ ಮಾಧ್ಯಮಗಳು ಸಾನಿಯಾ-ಶೋಯೆಬ್-ಆಯೆಷಾ ಪ್ರೇಮ/ವಿವಾಹ ತ್ರಿಕೋನವನ್ನು ಬಗೆಬಗೆಯಾಗಿ ಬಣ್ಣಿಸಿ ಜನರನ್ನು ಸೆಳೆಯಲೆತ್ನಿಸಿದವು. ಒಂದು ತಿಂಗಳ ಕಾಲ ಈ ಮಾಧ್ಯಮಗಳಿಗೆ ಈ ತ್ರಿಕೋನವೇ ದೇಶದ ಪ್ರಮುಖ ಸುದ್ದಿಯಾಗಿತ್ತು. ಇದರ ನಡುವೆ ನಮ್ಮ ಪ್ರಮೋದ್ ಮುತಾಲಿಕರು ಸಾನಿಯಾ ಪಾಕಿಸ್ತಾನಿಯನ್ನು ವರಿಸುತ್ತಿರುವುದು ದೇಶದ್ರೋಹವೆಂಬಂತೆ ಬಿಂಬಿಸತೊಡಗಿದರು. ಆಕೆ ಇನ್ನು ಭಾರತದ ಪರವಾಗಿ ಆಡುವಂತಿಲ್ಲವೆಂದು ಘೋಷಿಸಿದರು ಕೂಡ!
ಪ್ರಶ್ನೆಗಳು
ಇವೆಲ್ಲವನ್ನೂ ಗಮನಿಸಿದಾಗ ನನ್ನಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ: ಬೆಂಗಳೂರಿಗರು ಕ್ರಿಕೆಟ್ನಂತೆ ಇತರ ಆಟಗಳನ್ನೂ ಆದರಿಸುವುದು ಯಾವಾಗ? ಸಾನಿಯಾ ಮೇನಿಯಾ ಎಂಬುದು ಆಕೆ ಆಡುವ ಆಟಕ್ಕಿಂತ ಆಕೆಯ ಸೌಂದರ್ಯಕ್ಕೆ ಹೆಚ್ಚು ಸಂಬಂಧಿಸಿದೆಯಲ್ಲವೆ? ಇದು ತರವೆ? ಇಂಥ ಪ್ರವೃತ್ತಿಯನ್ನು ಮಾಧ್ಯಮಗಳು ಪೋಷಿಸುತ್ತಿರುವುದು ಸರಿಯೆ? ಇದರಿಂದಾಗಿ ಆಟಕ್ಕೆ ಸೂಕ್ತ ನ್ಯಾಯ ಸಿಗದೇಹೋಗಬಹುದಲ್ಲವೆ? ಸಾನಿಯಾರ ಟೆನ್ನಿಸ್ನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಪಾಕಿಸ್ತಾನಿಯನ್ನು ಮದುವೆಯಾದಮೇಲೆ ಆಕೆ ಭಾರತದ ಪರವಾಗಿ ಏಕೆ ಆಡಬಾರದು? ಭಾರತಕ್ಕೆ ಅದು ಮೇಲುಗೈಯೇ ತಾನೆ? ಸಾನಿಯಾ ಮದುವೆ ಮತ್ತು ಆಕೆಯ ಉದ್ದೇಶಿತ ದುಬೈ ವಾಸ ಇವುಗಳ ಬಗ್ಗೆ ಪುಂಖಾನುಪುಂಖವಾಗಿ ಒದರುವ ಮಾಧ್ಯಮಗಳು, ವಿವಾಹಾನಂತರ ಆಕೆಯ ಟೆನ್ನಿಸ್ ಭವಿಷ್ಯದ ಗತಿಯೇನಾಗಬಹುದು ಎಂಬ ಬಗ್ಗೆಯಾಗಲೀ, ತತ್ಪರಿಣಾಮವಾಗಿ ಭಾರತದ ಟೆನ್ನಿಸ್ ಸಾಧನೆ ಹಾಗೂ ಭಾರತದಲ್ಲಿ ಟೆನ್ನಿಸ್ ಜನಪ್ರಿಯತೆ ಇವು ಕುಂದಿಯಾವೇ ಎಂಬ ಪ್ರಶ್ನೆ ಎತ್ತಿಕೊಂಡಾಗಲೀ ಗಂಭೀರ ಚರ್ಚೆ ಹುಟ್ಟುಹಾಕುವ ಜವಾಬ್ದಾರಿ ತೋರುತ್ತಿಲ್ಲವೇಕೆ?
ಇನ್ನು, ಸಾನಿಯಾ ಪಾಕಿಸ್ತಾನಿಯನ್ನು ಮದುವೆಯಾಗಬಾರದಿತ್ತೆಂಬ ಶ್ರೀರಾಮಸೇನೆಯ ಹೇಳಿಕೆಯಂತೂ ಅಪ್ಪಟ ಮೂರ್ಖತನದ್ದು. (ಶಿವಸೇನೆಯೂ ಹೀಗೇ ಹೇಳಿ ನಂತರ ತಿದ್ದಿಕೊಂಡಿತಷ್ಟೆ.) ಪರಸ್ಪರ ದ್ವೇಷಿಸುವ ಎರಡು ಕುಟುಂಬಗಳ ಅಥವಾ ಎರಡು ಗ್ರಾಮಗಳ ಹೆಣ್ಣು-ಗಂಡು ಪ್ರೀತಿಸಿ ಮದುವೆಯಾದಾಗ ಅದನ್ನು ಮೆಚ್ಚಿ ಕೊಂಡಾಡುವ ನಾವು ಎರಡು ದೇಶಗಳ ವಿಷಯದಲ್ಲೇಕೆ ಇದೇ ಬೆಳವಣಿಗೆಯನ್ನು ಸ್ವಾಗತಿಸಕೂಡದು? ಸಾನಿಯಾ-ಶೊಯೆಬ್ ಮದುವೆಯಿಂದಾಗಿ ಭಾರತ-ಪಾಕಿಸ್ತಾನದ ದ್ವೇಷ ಕೊಂಚ ತಗ್ಗಬಹುದು, ತಗ್ಗದಿರಬಹುದು, ಹೆಚ್ಚಂತೂ ಆಗುವುದಿಲ್ಲವಷ್ಟೆ. ನಮ್ಮ ಮಾಧುರಿ ದೀಕ್ಷಿತ್ ಅನ್ನು ಪಾಕ್ ಸೈನಿಕರು ಮೆಚ್ಚಿದಹಾಗೆ ನಮ್ಮ ಸಾನಿಯಾರನ್ನು ಪಾಕ್ ಕ್ರಿಕೆಟ್ ಕಲಿಯೊಬ್ಬ ಮೆಚ್ಚಿ ಬಂದು ಮದುವೆಮಾಡಿಕೊಂಡದ್ದು ಪಾಕ್ ಎದುರು ನಮ್ಮ ಘನತೆಯ ಹೆಚ್ಚಳವೆಂದು ನಾವೇಕೆ ಭಾವಿಸಬಾರದು?
ಸಾನಿಯಾ ಕುರಿತ ವರದಿ, ಚರ್ಚೆ ಇವು, ಆಕೆಯ ಸೌಂದರ್ಯ ಮತ್ತು ಭಾರತ-ಪಾಕಿಸ್ಥಾನ ನಡುವಿನ ವೈಮನಸ್ಯ ಈ ವಿಷಯಗಳ ಸುತ್ತ ಸುತ್ತಬಾರದು. ಆಕೆಯ ಆಟ ಮತ್ತು ಭಾರತದ ಟೆನ್ನಿಸ್ ಭವಿಷ್ಯ ಇವಷ್ಟೇ ಚರ್ಚೆಯ ವಿಷಯಗಳಾಗಬೇಕು.