ನೋಡಿದ್ದು - ಕಲಿತದ್ದು

ನೋಡಿದ್ದು - ಕಲಿತದ್ದು

ಬರಹ

ಲ. ನಾ. ಭಟ್ಟರು - ಎನ್ನೋಡ್ದೆ?

ನಾನು - ನೋಡಬಾರದ್ದೇನೂ ಅಲ್ಲ. ನೋಡಬೇಕಂತನೂ ನೋಡಲಿಲ್ಲ. ಅಕಸ್ಮಾತ್ ನೋಡಿದೆ. ನೋಡಿರದಿದ್ದರೆ ಕಲಿಯುವಿಕೆ ಹಿಂದುಳಿಯುತ್ತಿತ್ತು. ಅವರು ಒಬ್ಬ ವ್ಯಕ್ತಿ. ಬಿಬಿಎಂಪಿ ಚುನಾವಣೆ ನಡೆದಿತ್ತಲ್ಲ. ಆಗ ನಾನು ಅವರನ್ನ ನೋಡಿದ್ದು. ಹೆಸರು - ಎನ್. ಎಸ್. ರಮಾಕಾಂತ್.

ಲ. ನಾ. ಭಟ್ಟರು - ಎನ್ಕಲ್ತೆ?

ನಾನು - ಅವರನ್ನ ನೋಡಿ ಸುಮಾರು ಕಲ್ತೆ. ಅವರೊಬ್ಬ ನಿವೃತ್ತ ಮೈನಿಂಗ್ ಇಂಜಿನಿಯರ್. ಜರ್ಮನಿಯಲ್ಲಿ ವಾಸವಾಗಿದ್ದವರು ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ವಯಸ್ಸು ಎಪ್ಪತ್ತು ದಾಟಿರಬಹುದು. ಇಪ್ಪತ್ತು ವರ್ಷದವರನ್ನೂ ನಾಚಿಸುವಂತೆ ಅವರು ಕೆಲಸ ಮಾಡುತ್ತಿದ್ದಾರೆ. ನನಗಿನ್ನೂ ಅರ್ಥವಾಗದ ವಿಷಯವೆಂದರೆ ಆ ಸ್ಫೂರ್ತಿಯನ್ನು ಅವರಂತವರು ಹೇಗೆ ಕಾಪಾಡಿಕೊಂಡು ಬರುತ್ತಾರೆ ಎಂಬುದು. ಇಲ್ಲಿ ಅವರಂತವರು ಹೇಳಲಿಕ್ಕೆ ಉದ್ದೇಶವಿದೆ. ಇಂತದ್ದೇ ಇನ್ನೂ ಇಬ್ಬರನ್ನು ನಾನು ನೋಡಿದ್ದೇನೆ. ಡಾ. ಎನ್. ಆರ್.  ರಮೇಶ್ ಮತ್ತು ಸಂತೋಷ್ ಎಂಬ ಇನ್ನಿಬ್ಬರು. ಇವರಿಬ್ಬರು ರಮಾಕಾಂತ್ ಗಿಂತ ಸ್ವಲ್ಪ ಭಿನ್ನವಾಗಿ ನಿಲ್ಲುತ್ತಾರೆ. ಅವರ ಬಗ್ಗೆ ಇನ್ನೊಮ್ಮೆ ಹೇಳುತ್ತೆನೆ. ರಮಾಕಾಂತ್ ನೆಲೆಸಿರುವುದು ಬೆಂಗಳೂರಿನ ವಸಂತನಗರದಲ್ಲಿ. ಅಲ್ಲಿ ಇವರನ್ನು ಗಾರ್ಬೇಜ್ ಮ್ಯಾನ್ ಎನ್ನುತ್ತಾರೆ. ಅವರ ಮನೆಯಿರುವ ಪರಿಸರಕ್ಕೊಮ್ಮೆ ಭೇಟಿಯಿತ್ತರೆ ಇದರ ಕಾರಣ ಗೊತ್ತಾಗುತ್ತದೆ. ಇವರು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದವರು. ಇವರು ಕೈಗೆತ್ತಿಕೊಂಡ ವಿಷಯ ಕಸ ವಿಲೇವಾರಿ. ಅವರ ಮನೆಯ ಸುತ್ತಮುತ್ತಲಿನ ಎಲ್ಲ ಮನೆಯವರ ಮನವೊಲಿಸಿ ಕಸವನ್ನ ಅದರ ಮೂಲದಲ್ಲಿಯೇ ಬೇರ್ಪಡಿಸುವುದಕ್ಕೆ ಹಚ್ಚಿದರು (Dry and Wet waste segregation). ಅದರಿಂದ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸುವುದು ಇದರ ಉದ್ದೇಶ. ಹಸಿ ಕಸವನ್ನು ಇವರು ಗೊಬ್ಬರ ಮಾಡಲು ಇವರು ಉಪಯೋಗಿಸುತ್ತಾರೆ ಮತ್ತು ಒಣ ಕಸವನ್ನು ಮಾರುತ್ತಾರೆ(Re-cycling). ಇವರು ತಯಾರಿಸಿದ ಗೊಬ್ಬರವನ್ನು ಕುಮಾರಾಪಾರ್ಕ್ ಉದ್ಧಾರಕ್ಕಾಗಿ ಬಳಸುತ್ತಾರೆ. ಗಮನಿಸಿ. ಬೆಂಗಳೂರಿನಲ್ಲಿ ಉತ್ತಮವಾದ ಉದ್ಯಾನಗಳಲ್ಲಿ ಕುಮಾರಾಪಾರ್ಕ್ ಕೂಡ ಒಂದು. ಈ ಉದ್ಯಾನಕ್ಕೆ ಬಿಬಿಎಂಪಿಯಿಂದ ಪಡೆಯಲಾಗುವ ಅನುದಾನ ತೀರಾ ಕಮ್ಮಿ ಮತ್ತು ಪಡೆದದ್ದನ್ನು ಸಮರ್ಪಕವಾಗಿ ಉಪಯೋಗಿಸಲಾಗಿದೆ. ಇದು ರಮಾಕಾಂತರ ಅಪ್ಪನ ಮನೆಯ ಪಾರ್ಕ್ ಅಂತೂ ಅಲ್ಲ ತಾನೆ? ಹಾಗಿದ್ದರೂ ಅವರು ಸ್ವಯಂ ಸ್ಫೂರ್ತಿಯಿಂದ ಇದರ ಅಭಿವೃದ್ಧಿ ಮಾಡುತ್ತಿದ್ದಾರೆ. ಅವರ ಮನೆಯ ಮೇಲೆ ಬೀಳುವ ಒಂದು ಹನಿ ಮಳೆಯೂ ಕಂಪೌಂಡ್ ದಾಟಿ ಹೊರಹೋಗುವ ಧೈರ್ಯ ಮಾಡುವುದಿಲ್ಲ. ಹಲವಾರು ಅಪಾರ್ಟ್ ಮೆಂಟ್ ಗಳಿಗೆ ಹೋಗಿ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡುವಂತೆ ಗೋಳು ಹೊಯ್ದುಕೊಳ್ಳುತ್ತಾರೆ. ನಗರದ ಬೀದಿ ನಾಯಿಯ ಕಾಟಕ್ಕೆ ಪ್ರಮುಖ ಕಾರಣ ನಾವು ಎಲ್ಲೆಂದರಲ್ಲಿ ಕಸ ಹಣಿಯುವುದು ಎನ್ನುತ್ತಾರವರು. ತ್ಯಾಜ್ಯ ವಿಲೇವಾರಿ ವಿಷಯಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯವರಿಗೆ ಹಲವಾರು ಭಾರಿ ಟ್ರೈನಿಂಗ್ ಕೊಟ್ಟಿದ್ದಾರೆ.

ಹೀಗೊಮ್ಮೆ ಕಲ್ಪಿಸಿಕೊಳ್ಳಿ. ನೀವು ಮತ್ತು ನಿಮ್ಮ ಪ್ರೇಯಸಿ ಒಂದು ರೈಲ್ ನಲ್ಲಿ ಪ್ರಯಾಣಿಸುತ್ತಿದ್ದೀರಿ. ರೈಲಾದರೂ ಹೋಗುವ ದಾರಿ ಎಂಥದ್ದು? ಇಕ್ಕೆಲಗಳಲ್ಲೂ ಹೂಗಿಡಗಳನ್ನು ಬೆಳೆಸಲಾಗಿದೆ. ಇಂತಹ ಪ್ರಯಾಣ ನಿಮ್ಮ ಪ್ರೇಮವನ್ನು ಇಮ್ಮಡಿಗೊಳಿಸದೇ ಇರದು. ಆದರೆ ನಮ್ಮ ದೇಶದ ಯಾವುದೇ ನಗರದಲ್ಲಿ ರೈಲ್ ನಲ್ಲಿ ಸಂಚರಿಸುವಾಗಿನ ಸು-ವಾಸನೆ, ರೈಲ್ ಪ್ರಯಾಣದಿಂದಲೇ ನಮ್ಮನ್ನು ಹಿಮ್ಮೆಟ್ಟಿಸದೇ ಇರದು. ರೈಲ್ವೇ ಹಳಿಯ ಇಕ್ಕೆಲಗಳಲ್ಲೂ ಸಿಕ್ಕಾಪಟ್ಟೆ ಉಪಯೋಗಿಸದ ಭೂಮಿ ಎಲ್ಲೆಲ್ಲೂ ಇದೆ. ಈ ಭೂಮಿಯಲ್ಲಿ ಅಲ್ಪ-ಸ್ವಲ್ಪ ಉದ್ಯಾನಗಳನ್ನು ನಿರ್ಮಿಸಿದರೆ ಪ್ರಯಾಣಿಕರಿಗೂ ಹಿತ, ಗಲೀಜು ಮಾಡುವವರೂ ಮತ್ತೊಮ್ಮೆ ಯೋಚಿಸುವಂತಾಗುತ್ತದೆ. ಈ ಕೆಲಸವನ್ನು ವಸಂತನಗರದಲ್ಲಿ ರಮಾಕಾಂತ್ ರವರು ಸ್ವಯಂಸ್ಫೂರ್ತಿಯಿಂದ ಹೋರಾಡಿ ಸಾಧಿಸಿದ್ದಾರೆ. ವಸಂತನಗರಕ್ಕೆ ವಾಚನಾಲಯವನ್ನು ತಂದಿದ್ದಾರೆ. ಮಾಡಿರುವ ಕೆಲಸ ಸಾಕಷ್ಟಿದೆ.

ಭಟ್ಟರೆ, ಮಾಡಿರುವ ಕೆಲಸಕ್ಕಿಂತಲೂ ನನ್ನನ್ನು ಕಾಡುವ ಪ್ರಶ್ನೆ ಅವರ ಸ್ಫೂರ್ತಿಯದು. ನಿವೃತ್ತರಾಗಿ ಮನೆಯಲ್ಲಿ ಆರಾಮವಾಗಿ ಕೂರುವ ಬದಲು ಇದ್ದ ಬದ್ದ ಕೆಲಸಗಳನ್ನೆಲ್ಲಾ ಮೈಮೇಲೆಳೆದುಕೊಂಡು ಸಾಧಿಸಲು ಹೆಣಗತೊಡಗುತ್ತಾರೆ. ಇಂತವರಿಂದ ನಮಗೊಂದಿಷ್ಟು ಒಳ್ಳೆಯ ಬುದ್ಧಿ ಬಂದರೆ ಕಲಿತಂತಲ್ಲವೆ ಭಟ್ಟರೆ?

-ಮಾಧವ