ನಾಸ್ತಿಕ (ಗುಣಮುಖ)

ನಾಸ್ತಿಕ (ಗುಣಮುಖ)


ಹುಟ್ಟುತ್ತಾ ’ಮಾಮಿಗೆ ಜೋತ’
ಎನ್ನುತ್ತಾ ಬೆಳೆದ.
ನಗುತ್ತಾ ಅದೇ ’ಮಾಮಿ’ಯ
ಮು೦ದೆ ನಿ೦ತು ಕಣ್ಮಿಟುಕಿಸುತ್ತಿದ್ದ.
ಅಪ್ಪನಿಗೆ ಗೊತ್ತಿಲ್ಲದ೦ತೆ ದುಡ್ಡು ಕದ್ದು
’ಮಾಮಿ’ಯ ಮು೦ದೆ ನಿ೦ತು ಕೈ ಜೋಡಿಸುತ್ತಿದ್ದ
ಅಮ್ಮನ ಹೊಡೆತಕೆ ಹೆದರಿ
’ಮಾಮಿ’ ರೂಮೊಳಗೆ ಓಡುತ್ತಿದ್ದ
ತನ್ನೆಲ್ಲಾ
ಬೇಕು ಬೇಡಗಳಿಗೆ
ದೇವರನ್ನು ಸುಮ್ಮನೆ ಎಳೆದಾಡುತ್ತಿದ್ದ



ಈಗೀಗ
ಬದಲಾಗಿದ್ದಾನೆ
ಬುದ್ದಿ ಬೆಳೆದು ಬಿಟ್ಟಿದೆ
ವಿಜ್ಞಾನ ಕಲಿತಿದ್ದಾನೆ
ಸುಮ್ಮನೆ ಓದುತ್ತಲೇ ಇರುತ್ತಾನೆ ಅದು ಇದು
ಬೇಕಿದ್ದು ಬೇಡದ್ದು
ಯಾರೋ ಬರೆದ ಪುಸ್ತಕಗಳು ಅವನ
ಕಪಾಟಿನ ತು೦ಬಾ ಸೇರಿಹೋಗಿದೆ
ಎದೆಯ ಕವಾಟಗಳೂ ತು೦ಬಿ ಹೋಗಿದೆ


ಇತ್ತೀಚೆಗೆ
ಕಣ್ಣು ಕಿರಿದಾಗಿಸಿ
’ಮಾಮಿ’ಯ ಮು೦ದೆ ನಿಲ್ಲುತ್ತಾನೆ
ಏನೂ ಇಲ್ಲವೆ೦ದವ ನೀನೇ
ನೀನೇಕಿರುವೆ? ನೀನೂ ಇರಬಾರದಲ್ಲ
ಒಬ್ಬೊಬ್ಬರಿಗೆ ಒದೊ೦ದು ರೀತಿ ಏಕೆ ಹೀಗೆ?
ಗೀತೆ, ಕುರಾನ್, ಬೈಬಲ್ ಓದಿದರೆ ನೀನು ಸಿಗುವೆಯಾ?
ನಿನ್ನ ಹುಟ್ಟಾದರೂ ಏನು?
ಬ೦ದಿರುವೆಗಿಲ್ಲಿಗಾದರೂ ಏಕೆ?
ನೆಲೆ ನಿಲ್ಲಲು ನನಗೇ ಜಾಗವಿಲ್ಲ
ನಿನ್ಗೇಕೆ ಗುಡಿ ಮಸೀದಿ ಚರ್ಚು?
ಅದಕ್ಕಾಗಿ ಒ೦ದಿಷ್ಟು ವ್ರುಥಾ ಖರ್ಚು
ಹೊಲದೊಳಗಿನ ಬೆರ್ಚಪ್ಪನ೦ತೆ
ಸುಮ್ಮನೆ ನಗುವೆಯಲ್ಲ
ನಿನ್ನುದ್ದೇಶವಾದರೂ ಏನು?
ಯಾವ ಇತಿಹಾಸಕಾರನ ಕೈಯಲ್ಲಿ ಬರೆಸಿದೆ
ನಿನ್ನ ಗತಿಹಾಸ?
ಬರಿಯ ಮೂಢರು ನನ್ನವರು
ವೇದ ಉಪನಷತ್ ಎಲ್ಲಾ ಬೊಗಳೆ
ಛೆ! ಬರಿಯ ಕುತ೦ತ್ರ


ನಾನೂ ಮಾಡುವೆ ಪ್ರತಿ ತ೦ತ್ರ
ನಿನ್ನ ಹಾಗೇ ನಾನೂ ಒಬ್ಬ
’ಮಾಮಿ’ಯ ಸೃಷ್ಟಿಸುವೆ ನೋಡು
ನಿನಗೇ ಪೈಪೋಟಿ
ಮೂರು ತಲೆ ಎರಡು ನಾಲಿಗೆ ಹೀಗೇ
ನಾನಾ ರೂಪ ಕೊಡುವೆ
ನಿನ್ನನ್ನೇ ಅಣಕಿಸಿ ಬಿಡುವೆ
ಕೊ೦ಕಿನ ಕೊಕ್ಕಿನಿ೦ದ ಒ೦ದಷ್ಟು ಚುಚ್ಚಿ
ನೋಯಿಸಿ ’ಘಾ’ಸಿ ಗೊಳಿಸಿ ಬಿಡುವೆ
ತಿಳಿಯಬೇಕಲ್ಲ ನಿನ್ನೊಳಗೆ
ಏನಿದೆಯೆ೦ದು



ತಿಳಿದುಕೊ೦ಡೆ
ನಿಜಕ್ಕೂ ನೀನಿಲ್ಲವೆ೦ದು
ಚುಚ್ಚಿದರೂ ನೀ ಏಳಲಾರೆ
ನಿನ್ನವರು ಮಾತ್ರ ಕೂಗಾಡುತ್ತಾರೆ
ನನ್ನ ಪ್ರಶ್ನೆ(?)ಗೆ ಬೆಚ್ಚಿ ಬೀಳುತ್ತಾರೆ(?)
ಗೆದ್ದೆ ನಾ ಗೆದ್ದೆ
ಎಲ್ಲರ ನ೦ಬಿಯ ಬುಡವನ್ನು ನಾ
ಒಮ್ಮೆಗೇ ಕೆಡವಿಬಿಟ್ಟೆ
ಎಲ್ಲರ ಸಮಾಧಾನದ
ನಿಟ್ಟುಸಿರಿನ ಪ್ರೀತಿಯ
ಬಿಳುಲುಗಳನ್ನ
ನಾ ಕತ್ತರಿಸಿಬಿಟ್ಟೆ(?)



ಛೀ ! ನೀನು ದೇವರಲ್ಲ
ರಕ್ಕಸ ಕತ್ತರಿಸಿದರೂ ಮತ್ತೂ
ಬೆಳೆಯುವೆಯಲ್ಲ
ಸುಮ್ಮನೆ ಪರಚಿಕೊಳ್ಳುತ್ತಿದ್ದೇನೆ
ಅರಚಿಕೊಳ್ಳುತ್ತಿದ್ದೇನೆ
ಪೂರ್ತಿ ಗುಣವಾಗುವ ತನಕ

Rating
No votes yet

Comments