ಆತ್ಮಸಂತೃಪ್ತರ ಸಮುದಾಯ ಸಂತೃಪ್ತವಾಗಲಿ!

ಆತ್ಮಸಂತೃಪ್ತರ ಸಮುದಾಯ ಸಂತೃಪ್ತವಾಗಲಿ!

ಆತ್ಮಸೃಂತೃಪ್ತರೆ!

ಮೊಟ್ಟಮೊದಲನೆಯದಾಗಿ ನಿಮ್ಮ ವಿಚಾರಧಾರೆಗೆ ನನ್ನ ಅಭಿನಂದನೆಗಳನ್ನು ಸ್ವೀಕರಿಸಿ.

ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ‘ಸ್ವಕೇಂದ್ರಿತ” ನಾಗುತ್ತಿರುವ ವಿಷಮ ಸ್ಥಿತಿಯಲ್ಲಿ ನಿಮ್ಮಂತಹವರೊಬ್ಬರು ಸಮುದಾಯದ ಬಗ್ಗೆ ಚಿಂತಿಸುತ್ತಿರುವುದು ಶ್ಲಾಘನೀಯ ವಿಚಾರ.

ವೈದ್ಯಕೀಯವು ಇಂದು ಒಂದು ಉದ್ಯಮವಾಗಿದೆ. ಸರಪಳಿ ಆಸ್ಪತ್ರೆಗಳು, ಸರಪಳಿ ತಪಾಸಣಾ ಕೇಂದ್ರಗಳು, ಸರಪಳಿ ಔಷಧ ಮಾರಾಟ ಕೇಂದ್ರಗಳು ಭಾರತದ ನಗರಗಳಲ್ಲಿ ವ್ಯಾಪಿಸಿವೆ. ಜಾಗತಿಕ ಆರೋಗ್ಯ ಪ್ರವಾಸೋದ್ಯಮದಲ್ಲಿ ಬೆಂಗಳೂರನ್ನು ಒಳಗೊಂಡಂತೆ ಭಾರತದ ನಗರಗಳು ಮುಂಚೂಣಿಯಲ್ಲಿವೆ. ಬೆಂಗಳೂರು ‘ಆರೋಗ್ಯ ಕಾಶಿ” ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಕಾರ್ಪೊರೇಟ್ ಮನೋಭಾವ-ಸರಪಳಿ ಆಸ್ಪತ್ರೆ-ಆರೋಗ್ಯ ವಿಮೆ-ಆರೋಗ್ಯ ಪ್ರವಾಸೋದ್ಯಮಗಳು ಒಂದು ಅನಿವಾರ್ಯ ಶನಿಯ ವರ್ತುಲವಾಗಿದೆ. ಈ ವಿಷಚಕ್ರದಲ್ಲಿ ಭಾರತೀಯರು-ಮುಖ್ಯವಾಗಿ ಶ್ರೀಸಾಮಾನ್ಯನು ನರಳುತ್ತಿದ್ದಾನೆ.  ಇವೆಲ್ಲವೂ ಚಿಕಿತ್ಸಾ ವೈದ್ಯಕೀಯ (ಕ್ಯುರೇಟಿವ್ ಮೆಡಿಸಿನ್) ಬಗ್ಗೆ ಪೂರ್ಣ ಗಮನವನ್ನು ನೀಡಿರುವ ಆಸ್ಪತ್ರೆಗಳು. ಇಲ್ಲಿ ಕೆಲಸ ಮಾಡುವ ವೈದ್ಯರಿಗೂ ರೋಗಿಗೆ ಯಾವ ಶಸ್ತ್ರಚಿಕಿತ್ಸೆ ಮಾಡಿಯೇನು, ಯಾವಾಗ ನನ್ನ ಟಾರ್ಗೆಟ್ ತಲುಪಿಯೇನು, ಯಾವಾಗ ಹೊಸ ಕಾರನ್ನು ಕೊಂಡುಕೊಳ್ಳುವೆನು ಇತ್ಯಾದಿ ತುಡಿತವಿರುತ್ತದೆ. ರೋಗಿಗಳಿಗೆ ನಿರ್ದಿಷ್ಟ ರೋಗ ಬಾರದಂತೆ ತಡೆಗಟ್ಟುವ ಪ್ರತಿಬಂಧ ವೈದ್ಯಕೀಯದ (ಪ್ರಿವೆಂಟಿವ್ ಮೆಡಿಸಿನ್) ಸುದ್ಧಿಯನ್ನು ಇಲ್ಲಿ ನೀವು ಕೇಳಲಾರಿರಿ.

ಒಂದು ಸತ್ಯವನ್ನು ಇಲ್ಲಿ ದಾಖಲಿಸಬೇಕಿದೆ.

ಆನುವಂಶಿಕ ರೋಗಗಳು, ಜನ್ಮದತ್ತ ವೈಕಲ್ಯಗಳು ಹಾಗೂ ಅಪಘಾತಗಳನ್ನು ಬಿಟ್ಟು ಉಳಿದ ರೀತಿಯ ಸೋ ಕಾಲ್ಡ್ ರೋಗಗಳು, ರೋಗಗಳೇ ಅಲ್ಲ. ಏಕೆಂದರೆ, ಈ ಎಲ್ಲ ರೀತಿಯ ರೋಗಗಳನ್ನು ಪ್ರತಿಬಂಧಿಸುವ, ನಿಗ್ರಹಿಸುವ, ಗುಣಪಡಿಸಿಕೊಳ್ಳುವ ಅದ್ಭುತ ವ್ಯವಸ್ಥೆಯು ನಮ್ಮ ಒಡಲಿನಲ್ಲಿಯೇ ಇದೆ. ಇದುವೇ ರೋಗನಿರೋಧಕ ವ್ಯವಸ್ಥೆ. ಇದನ್ನು ಇಮ್ಯೂನ್ ಸಿಸ್ಟಮ್ ಎಂದೂ ಕರೆಯುತ್ತೇವೆ. ನಮ್ಮ ಆಚಾರ-ವಿಚಾರ-ನಡವಳಿಕೆ-ವ್ಯವಹಾರ-ಆಹಾರಾದಿಗಳೆಲ್ಲ ಈ ರೋಗನಿರೋಧಕ ವ್ಯವಸ್ಥೆಯನ್ನು ರೂಪಿಸುತ್ತವೆ ಹಾಗೂ ಸಶಕ್ತಗೊಳಿಸುತ್ತವೆ. ನಮ್ಮ ಮನಸ್ಸಿನಲ್ಲಿ ಒಂದು ವಿಚಾರ ಮೂಡಬೇಕು ಎಂದರೆ ಅದಕ್ಕೆ ಒಂದು ರಾಸಾಯನಿಕವು ಉತ್ಪಾದನೆಯಾಗಬೇಕಾಗುತ್ತದೆ. ನಮ್ಮ ಮನಸ್ಸಿನಲ್ಲಿ ಸದಾ ಒಳ್ಳೆಯ ವಿಚಾರಗಳು ಮೂಡುತ್ತಿದ್ದರೆ ಒಳ್ಳೆಯ ರಾಸಾಯನಿಕಗಳು ಉತ್ಪಾದನೆಯಾಗುತ್ತಿರುತ್ತವೆ. ಕೆಟ್ಟ ವಿಚಾರಗಳೇ ಮೂಡುತ್ತಿದ್ದರೆ ಕೆಟ್ಟ ರಾಸಾಯನಿಕಗಳು ಉತ್ಪಾದನೆಯಾಗುತ್ತಿರುತ್ತವೆ. ಹಾಗಾಗಿ ನಮ್ಮ ಬದುಕಿನ "ಫಿಲಾಸಫಿ" ಏನು ಎನ್ನುವುದರ ಮೇಲೆ ನಮ್ಮ ಆರೋಗ್ಯ ಹಾಗೂ ನಮಗೆ ಬರುವ ರೋಗಗಳು ನಿರ್ಧಾರವಾಗುತ್ತವೆ.

ಇಂದು ಸಹಜ ಬದುಕು ಅಸಾಧ್ಯವಾಗಿದೆ. ಪ್ರತಿಬಂಧ ವೈದ್ಯಕೀಯ ಯಾರಿಗೂ ಬೇಡವಾಗಿದೆ. ಆರೋಗ್ಯವನ್ನು ಔಷಧಗಳ ಮೂಲಕ, ಪ್ರತಿಜೈವಿಕಗಳ ಮೂಲಕ, ಟಾನಿಕ್‍ಗಳ ಮೂಲಕ ಪಡೆಯಬಹುದು ಎಂಬ ಮೂಢ ನಂಬಿಕೆ ಜನರಲ್ಲಿ (ಕೆಲವು ವೈದ್ಯರಲ್ಲಿಯೂ) ಇದೆ. ರೈತನು ತನ್ನ ಹಿತ್ತಿಲ ತರಕಾರಿಯನ್ನು ಮಾರಿ, ತನ್ನ ಮಗಳಿಗೆ ಐರನ್ ಟಾನಿಕ್ ತಂದು ಕೊಡುತ್ತಾನೆ. ಹಾಸುವಿನ ಹಾಲನ್ನು ಮಾರಿ ತನ್ನ ಹೆಂಡತಿಗೆ ಕ್ಯಾಲ್ಸಿಯಂ ಮಾತ್ರೆ ತಂದುಕೊಡುತ್ತಾನೆ. ಇದು ನಿಜಕ್ಕೂ ಒಂದು ದೊಡ್ಡ ವ್ಯಂಗ್ಯ. ಆದರೆ ಅವನಿಗೆ ಹೇಳುವರಾರು?

ಕೋಳಿಮೊಟ್ಟೆಯನ್ನು ತಿಂದ ನಂತರ ಅದರ ಚಿಪ್ಪನ್ನು ಎಸೆಯಬೇಡಿ. ಚಿಪ್ಪನ್ನು ಒಣಗಿಸಿ. ಪುಡಿ ಮಾಡಿ. ಪ್ರತಿದಿನ ಒಂದು ಚಿಟಿಕೆ ಬಾಯಿಗೆ ಹಾಕಿಕೊಂಡು ಒಂದು ಲೋಟ ನೀರು ಕುಡಿಯಿರಿ. ನಿಮಗೆ ಬೇಕಾದ ಕ್ಯಾಲ್ಸಿಯಂ ದೊರೆಯುತ್ತದೆ. ದೇಹವು ನಿರವಯವ ಮೂಲದ (ಇನಾರ್ಗ್ಯಾನಿಕ್) ಕ್ಯಾಲ್ಸಿಯಂನನ್ನು ಬಳಸಿಕೊಳ್ಳುವುದಕ್ಕಿಂತ ಸಾವಯವ ಮೂಲದ ಕ್ಯಾಸ್ಲಿಯಂನನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ. ನೀವು ದುಬಾರಿ ಹಣ ತೆತ್ತು ತರುವ ಕ್ಯಾಲ್ಸಿಯಂ ಮಾತ್ರೆಯನ್ನು ನಿಮ್ಮ ದೇಹ ಹೆಚ್ಚು ಬಳಸಿಕೊಳ್ಳುವುದಿಲ್ಲ ಎಂಬ ಸತ್ಯವನ್ನು ನನ್ನಂತಹ ಒಂಟಿ ದನಿಗಳು ಹೇಳಿದರೆ ಕೇಳುವವರೇ ಇಲ್ಲ! - ವಾಸ್ತವದಲ್ಲಿ ನಮ್ಮ ಜನಕ್ಕೂ ಪ್ರತಿಬಂಧಕ ವೈದ್ಯಕೀಯದಲ್ಲಿ ಆಸಕ್ತಿಯಿಲ್ಲ. ಎಲ್ಲವೂ ಅವರಿಗೆ "ಟು-ಮಿನಿಟ್ಸ್-ನೂಡಲ್ಸ್" ರೂಪದಲ್ಲಿ ಆಗಬೇಕಿದೆ. ತಾಳ್ಮೆ ಎನ್ನುವುದು ಹಿಮಾಲಯದಾಚೆ ಹೋಗಿಬಿಟ್ಟಿದೆ.

ಆತ್ಮಸಂತೃಪ್ತರೆ! ನಿಮ್ಮ ಹಾಗೆ ನಾನೂ ಬಣ್ಣ ಬಣ್ಣದ ಕನಸುಗಳನ್ನು ಕಂಡಿದ್ದೆ. ಆದರೆ ನನ್ನ ವೈಯುಕ್ತಿಕ ಸಮಸ್ಯೆಗಳ ಕಾರಣ ಯಾವ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನನ್ನ ಸೀಮಿತ ಸಾಮರ್ಥ್ಯದಲ್ಲಿ ನನ್ನ ವೃತ್ತಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ಖಾಸಗಿಯಾಗಿ ವೈದ್ಯಕೀಯ ವೃತ್ತಿಯನ್ನು ನಡೆಸುದಿಲ್ಲ. ಆ ಸಮಯವನ್ನು ಅಧ್ಯಯನ-ಅಧ್ಯಾಪನಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಮನೆಗೆ ಬರುವವರಿಗೆ ಉಚಿತ ಚಿಕಿತ್ಸೆ-ಸಲಹೆಯನ್ನು ನೀಡುತ್ತಿದ್ದೇನೆ. ಅನೇಕ ಜನರು ಫೋನ್ ಮೂಲಕ ತಮ್ಮ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಅವರಿಗೆಲ್ಲ ಉತ್ತರಿಸುತ್ತೇನೆ. ವೈದ್ಯಕೀಯ ಲೇಖನಗಳನ್ನು, ಪುಸ್ತಕಗಳನ್ನು ಬರೆಯುತ್ತಿದ್ದೇನೆ. ನಾಡಿನ ಯಾವ ಮೂಲೆಯಿಂದ ಕರೆಬಂದರೂ, ಅಲ್ಲಿಗೆ ಹೋಗಿ ಆರೋಗ್ಯ ಭಾಷಣಗಳನ್ನು ನೀಡುತ್ತಿದ್ದೇನೆ. ನನಗೆ ತಿಳಿದಿರುವುದನ್ನು ನಮ್ಮವರಿಗೆ ಹಂಚಬೇಕು ಎಂಬ ಏಕೈಕ ಕಾಳಜಿಯಿಂದ ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ನಡೆಸುತ್ತಿದ್ದೇನೆ. ಈ ಕಾರ್ಯಕ್ರಮವನ್ನು ನಡೆಸುವುದರಿಂದ ನನಗೆ ಆರ್ಥಿಕ ಲಾಭವಿಲ್ಲ. ಇದೇ ಅವಧಿಯಲ್ಲಿ ನಾನು ಖಾಸಗೀ ವೃತ್ತಿಯನ್ನು ನಡೆಸಿದರೆ ಸಾಕಷ್ಟು ಹಣವನ್ನು ಸಂಪಾದಿಸಬಲ್ಲೆ. ತಿಂಗಳ ಮೂರು ಶನಿವಾರ-ಮೂರು ಭಾನುವಾರಗಳನ್ನು ಸ್ಟುಡಿಯೋದಲ್ಲಿ ಕಾರ್ಯಕ್ರಮ ಮುದ್ರಣಕಾರ್ಯದಲ್ಲಿ ತೊಡಗಿಕೊಂಡು ಸಮುದಾಯ ಚಟುವಟಿಕೆಗಳಲ್ಲಿ ಭಾಗವಹಿಸಲಾಗದೇ ಅನೇಕರ ಕೋಪಕ್ಕೆ ತುತ್ತಾಗಿದ್ದೇನೆ. ಪ್ರತಿದಿನ ಸಂಜೆ ಪ್ರಶ್ನೆಗಳನ್ನು ರೂಪಿಸಲು ಓದಿನಲ್ಲಿ ತೊಡಗಿಕೊಳ್ಳುತ್ತೇನೆ. ಹೀಗೆ ಯಾವುದೇ ರೀತಿಯ ಲಾಭದ ಆಸೆಯಿಲ್ಲದೇ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. "ನಿಮ್ಮಏನು ಮಾಡಲಿ ????????" ಲೇಖನದಲ್ಲಿ ಈ ಕೆಳಕಂಡದ್ದನ್ನು ಓದಿದಾಗ

>>ಇಷ್ಟಕ್ಕೂ ನಮ್ಮಪ್ಪನಿಗಿರುವ ಕಾಯಿಲೆಯ ನಿರ್ದಿಷ್ಟ ಡಯಗ್ನೋಸಿಸ್ ಏನು ಮತ್ತು ಅದಕ್ಕೆ ಶಸ್ತ್ರ ಚಿಕಿತ್ಸೆ ಮಾತ್ರ ಪರಿಹಾರವೇ?. ಅದು ಶಾಶ್ವತ ಪರಿಹಾರವೋ ಅಥವಾ ಶಸ್ತ್ರಚಿಕಿತ್ಸೆಯ ನಂತರವೂ ಇನ್ನೊಮ್ಮೆ ಮತ್ತದೇ ತೊಂದರೆ ಮರುಕಳಿಸುವ ಸಾಧ್ಯತೆಯಿದೆಯ / ಅಥವಾ ಇನ್ನೇನಾದರೂ ಬದಲಿ ಚಿಕಿತ್ಸೆ / ಚಿಕಿತ್ಸಾ ಕ್ರಮವನ್ನು ಪ್ರಯತ್ನಿಸಬಹುದೇ . ಒಂದೂ ಗೊತ್ತಿಲ್ಲ. ಮಾಹಿತಿ ಎಲ್ಲಿ ದೊರಕುತ್ತದೆ ಎಂದು ತಿಳಿದಿಲ್ಲ. ನಮ್ಮಪ್ಪನ ಡಾಕ್ಟರ ಹತ್ರ ಮತ್ತೊಮ್ಮೆ ಕೇಳಿದ್ದಕ್ಕೆ ಅದೆನ್ನೇನೋ ಇಂಗ್ಲಿಷ್ ನಾಲ್ಕಾರು ಶಬ್ದಗಳನ್ನು ಹೇಳಿ 'ನಮ್ಮ ಅಸಿಸ್ಟಂಟ್ ಹತ್ರ ಮಾತಾಡಿ' ಅಂತ ನನ್ನನ್ನ ಕಳುಹಿಸಿದರು .ಹೊಸ ವೈದ್ಯರಿಗೆ ನನ್ನ ಕನ್ನಡ ಚೆನ್ನಾಗಿ ಅರ್ಥವಾಗುವುದಿಲ್ಲ . ಸಾವಧಾನವಾಗಿ ಮಾತನಾಡುವ ತಾಳ್ಮೆಯೂ ಆ ಹುಡುಗು ವೈದ್ಯನಿಗಿಲ್ಲ . ಅವರು ಹೇಳಿದ್ದು ನನಗೆ ಅರ್ಧಂಬರ್ಧ ಗೊತ್ತಾಯಿತು. ಮತ್ತೊಮ್ಮೆ ಕೇಳಿದ್ದಕ್ಕೆ ' ಇನ್ನು ನಿಮ್ಮಿಷ್ಟ ನಾವ್ಯಾವದನ್ನೂ ಗ್ಯಾರಂಟಿ ಕೊಡೋಕಾಗಲ್ಲ 'ಅಂತ ನನ್ನ ಸಾಗುಹಾಕಿದ<<

ನಾನು ಸಹಜವಾಗಿ

>>ಗಂಭೀರವಾದ ಆರೋಗ್ಯ ಸಮಸ್ಯೆಗಳು ಬಂದಾಗ ಲಭ್ಯವಿರುವ ವಿವಿಧ ಪರಿಹಾರೋಪಾಯಗಳ ಬಗ್ಗೆ ಮಾಹಿತಿ ಬೇಕಾದರೆ ನನಗೆ ಮಿಂಚೆ ಕಳುಹಿಸಿ.
-ನಾಸೋ<<


ಎಂದು ಉತ್ತರವನ್ನು ನೀಡಿದೆ. ಆಗ ತಾವು

>>ತಾವು ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸುವದರ ಬದಲು ತಮ್ಮ ಉದ್ದೇಶಕ್ಕಾಗಿ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸಿದಿರಿ ಅನ್ಸುತ್ತೆ.<<

ಎಂದು ಉತ್ತರಿಸಿದಾಗ, ನನಗೆ ಎಲ್ಲವೋ ಅಯೋಮಯವಾಯಿತು. ನಾನು ಯಾವ ರೀತಿ ನಿಮ್ಮನ್ನು ಬಳಸಿಕೊಳ್ಳುತ್ತಿದ್ದೇನೆ ಎಂದು ತಿಳಿಯದಾಯಿತು. ಆಗ ನಿಜಕ್ಕೂ ನನ್ನ ಮನಸ್ಸಿಗೆ ನೋವಾಯಿತು. ನನ್ನ ಉತ್ತರ ಯಾವ ರೀತಿಯಲ್ಲಿ ನಿಮಗೆ ಅನ್ಯಾಯವನ್ನು ಮಾಡುತ್ತದೆ ಎಂದು ನನಗೆ ಅರಿವಾಗಲಿಲ್ಲ. ಅದನ್ನು ತಿಳಿಯಲು ನಾನು ಮಿಂಚೆ ಕಳುಹಿಸುವುದು, ಅದಕ್ಕೆ ನೀವು ಉತ್ತರ ಕೊಡುವುದು ಇತ್ಯಾದಿ ಅನುತ್ಪಾದಕ, ಅನುಪಯುಕ್ತ ಕೆಲಸದಲ್ಲಿ ತೊಡಗುವುದು (ಸಂಪದದಲ್ಲಿ ಹೀಗೆ ಆಗಿವೆ) ನನ್ನ ಮನಸ್ಸಿಗೆ ಹಿಡಿಸದ ಕಾರಣ ನಾನು ಮೌನವಾದೆ.

ನಿಮ್ಮ ಏಪ್ರಿಲ್ ೨೭ರ ಮಿಂಚೆಯನ್ನು ಓದಿ ಈ ಪ್ರತಿಕ್ರಿಯೆಯನ್ನು ಬರೆಯಬೇಕೆನ್ನಿಸಿದೆ.
ಮೊದಲನೆಯದಾಗಿ ನೀವು ಕ್ಷಮೆ ಕೇಳುವ ಅಗತ್ಯವಿಲ್ಲ. ನಿಮ್ಮ ಸಾಧನೆಯ ಪಾಲನ್ನು ನಿಮ್ಮ ಅನುಮತಿಯಿಲ್ಲದೆಯೇ ನಾನು ಲೂಟಿ ಹೊಡೆಯ ಹೊರಟಿದ್ದೇನೆ ಎಂಬ ಭಾವ ನಿಮ್ಮ ಮನಸ್ಸಿನಲ್ಲಿ ತಿಳಿದೋ, ತಿಳಿಯದೆಯೋ ಹುಟ್ಟಿದ ಕಾರಣ ಅಂತಹ ಪ್ರತಿಕ್ರಿಯೆ ತೀರಾ ಸಹಜವಾಗಿ ಹೊರಬಂದಿದೆ.
"ನಿಮ್ಮಏನು ಮಾಡಲಿ ????????"  ಲೇಖನದಲ್ಲಿ http://aatmasantrapta.blogspot.com/ ಕೊಂಡಿ ಇದ್ದಹಾಗೆ ಕಾಣಲಿಲ್ಲ. ಹಾಗಾಗಿ ನಿಮ್ಮ ಈ ಬರಹವನ್ನು ನಾನು ಓದಲಿಲ್ಲ. ಬಹುಶಃ ಅದು ಎಲ್ಲ ಗೊಂದಲಕ್ಕೆ ಕಾರಣವಾಗೆ ಎಂದು ನನ್ನ ಭಾವನೆ. ಇದನ್ನು ನಾನು ಓದಿದ್ದರೆ, ನನ್ನ ಪ್ರತಿಕ್ರಿಯೆ ಸಂಪೂರ್ಣ ಭಿನ್ನವಾಗಿರುತ್ತಿತ್ತು.


ಬಹುಶಃ ನಾನು ನಿಮ್ಮ ಏನು ಮಾಡಲಿ ಲೇಖನವನ್ನು ನಿಧಾನವಾಗಿ ಓದಿ, ಅರ್ಥ ಮಾಡಿಕೊಂಡು ಉತ್ತರಿಸಬೇಕಿತ್ತು. ಮೇಲ್ಕಂಡ ಪ್ಯಾರಾದ ಮೇಲೆ ಕಣ್ಣಾಡಿಸಿ, ಥಟ್ ಅಂತ ಪ್ರತಿಕ್ರಿಯೆ ಬರೆದೆ ಎಂದು ಅನಿಸುತ್ತಿದೆ.

  • ನಿಮ್ಮ ಯೋಜನೆ ನಮ್ಮ ನಾಡಿಗೆ ಬೇಕು. ಇದರಲ್ಲಿ ಯಾವುದೇ ಅನುಮಾನವಿಲ್ಲ.
  • ನಾಲ್ಕು ಪ್ರಮುಖ ಅಡ್ಡಿಗಳು ನಿಮ್ಮನ್ನು ಕಾಡಬಹುದು.       ೧. ಸಂಪನ್ಮೂಲಗಳ ಕೊರತೆ ೨. ನಿಮ್ಮನ್ನು ತುಳಿಯಲು ಪ್ರಯತ್ನಿಸುವ ನಮ್ಮ ಜನ ೩. ನಿಮ್ಮ ಕನಸು ನನಸಾಗಿ, ಮುಂದುವರೆಯಲು ಬೇಕಾದ ಈಗಿನ ಉತ್ಸಾಹಕ್ಕಿಂತ ಹೆಚ್ಚು ಉತ್ಸಾಹ. ೪. ಈ ಯೋಜನೆಯ ಪ್ರತಿಫಲರಹಿತ-ನಿರಪೇಕ್ಷ ಮನೋಭಾವ. ಈ ಎಲ್ಲ ನಿಮ್ಮಲ್ಲಿ ಇರುವುದಾದರೆ, ನೀವು ಖಂಡಿತ ಮುಂದುವರೆಯಿರಿ. ನಿಮ್ಮ ಕನಸು ಈಡೇರುತ್ತದೆ. ಈಡೇರಲಿ ಎಂದೇ ನನ್ನ ಹಾರೈಕೆ.
  • ಗಣೇಶ್ ಸೂಚಿಸಿದ ಹಾಗೆ ಡಾ.ಸುದರ್ಶನ್ ಹಾಗೂ ಈ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಕೆಲವು ಸಂಘಸಂಸ್ಥೆಗಳನ್ನು ಅಧ್ಯಯನ ಮಾಡಿ, ಅವರ ತಪ್ಪುಗಳಿಂದ ಪಾಠ ಕಲಿತು, ಕಾಲನಿಗದಿತ ಯೋಜನೆಯನ್ನು ಹಲವು ಹಂತಗಳಲ್ಲಿ ಹಾಕಿಕೊಳ್ಳುವುದು ಒಳಿತು.
  • ನಾನು ಮಾರ್ಗದರ್ಶನ ನೀಡುವಷ್ಟು ದೊಡ್ಡವನಲ್ಲ. ನನ್ನದು ಸೀಮಿತ ತಿಳಿವಳಿಕೆ. ಆದರೆ ನನಗೆ ತಿಳಿದಿರುವುದನ್ನು ನಿಮ್ಮೊಡನೆ ಹಂಚಿಕೊಳ್ಳಲು ಸಿದ್ಧ. 
  • ನನ್ನ ಮನಸ್ಸಿಗೆ ನೋವಾಗಿದೆ ಎಂದು ಮಿಂಚಿಸಿದ ಎಲ್ಲ ಸಂಪದಿಗರಿಗೆ ನನ್ನ ಕೃತಜ್ಞತೆಗಳು. ನನ್ನ ಮನಸ್ಸಿನಲ್ಲಿ ಯಾವುದೇ ಕಹಿ ಉಳಿದಿಲ್ಲ. 
  • ಒಂದು ಮಾತು: ನಿಮ್ಮ ಪತ್ರಕ್ಕೆ ಉತ್ತರಿಸುವಾಗ, ಸಾಮಾನ್ಯವಾಗಿ ನಾನು ಎಲ್ಲಿಯೂ ಹೇಳಿಕೊಳ್ಳದ ನನ್ನ ವೈಯುಕ್ತಿಕ ಕೆಲವು ವಿಷಯಗಳನ್ನು ಇಲ್ಲಿ ಹೇಳಬೇಕಾಯಿತು. ಇದನ್ನು ನನ್ನ ಸಾಧನೆ-ಬಡಾಯಿಯೆಂದು ಭಾವಿಸದಿರಿ. ನಾನು ಯಾರನ್ನೂ ಮೆಚ್ಚಿಸಬೇಕಿಲ್ಲ ಎಂಬ ಸ್ಪಷ್ಟ ತಿಳಿವಳಿಕೆ ನನಗಿದೆ. ನನ್ನ ಹಾಡು ನನ್ನದು-ಎಂದು ನನ್ನ ಪಾಡಿಗೆ ನಾನು ಕೆಲಸ ಮಾಡುಕೊಂಡು ಹೋಗಬೇಕು ಎಂಬ ಇರಾದೆ ನನ್ನದು. ಪ್ರಾಕೃತಿಕ ನ್ಯಾಯದಲ್ಲಿ (ನ್ಯಾಚುರಲ್ ಜಸ್ಟೀಸ್) ನನಗೆ ನಂಬಿಕೆಯಿದೆ.

      - ನಾಸೋ

Rating
No votes yet

Comments