ಕೊಡುವುದಾದರೆ ಕೊಟ್ಟುಬಿಡು...

ಕೊಡುವುದಾದರೆ ಕೊಟ್ಟುಬಿಡು...


ಕೊಡುವುದಾದರೆ ಕೊಟ್ಟುಬಿಡು ..ಇಂದೇ.. ಇದನ್ನೂ...

ಕಾಣಿಕೆಯ ಹುಂಡಿಯೊಳಗೆ ಯಾರದೋ ಆಸೆಗಳ 

ಸಾಕ್ಷಿಯಾಗಿ ವರ್ಷಾನುಗಟ್ಟಲೆ ಬಿದ್ದ ಬಿಂದು ಸಿಂಧು..

ಕೊಟ್ಟವನ ಋಣ ತೀರಿತಾ? 

ಅಥವಾ ಪಡೆವವ ಹಂಗಿಗೆ ಬಿದ್ದನಾ ?

ದ್ವಂದ್ವಗಳ ನಡುವೆ ಸಿಲುಕಿ ನಲುಗುವವ 

ನೀನಲ್ಲದಿದ್ದಲ್ಲಿ..

ಕೊಡುವುದಾದರೆ ಕೊಟ್ಟುಬಿಡು ..ಇಂದೇ  ಇದನ್ನೂ.

 

ಘಳಿಗೆಗೆ ಮುನ್ನ ಸುರಿದ ಮಳೆಧೂಳ ಹನಿ

ಅದಿನ್ನೆಲ್ಲೆಲ್ಲಿ ನುಸುಳಿತೋ

ಎಳೆಗಳ ನುಣುಪಿನೆಡೆಯೋ, ಕಲ್ಗಳ ದಾರ್ಷ್ಟ್ಯದೆಡೆಗೋ

ವರುಷಾನುಗಟ್ಟಲೆ ಕೊಳೆತು ನಾರುವ 

ಕೆಸರೊಸರಿನೆಡೆಗೋ.. 

ಕ್ಷಣದೊಳಗೆ ಆ ಹನಿಯು ಮಾಯವಾಗುವ ಮೊದಲು

ಕೊಡುವುದಾದರೆ ಕೊಟ್ಟುಬಿಡು..ಇಂದೇ ಇದನ್ನೂ..

 

 

ಬೆವರ ಹನಿಗಳ ಘಮ ವಾಸನೆಗೆ ಬದಲೋ ಮೊದಲು

ಮಧುರಾಮಧುರವೆಂದು ನೀನುಲಿದದ್ದೆಲ್ಲ ತೊಗಲು ಬರಿಯೆಂದು 

ಉಗಿದು ತೊಲಗೋ ಮೊದಲು 

ಬಿಸುಪಿನುಸಿರನ ವೇಗ ತಗ್ಗಿ ತೆವಳೋ ಮೊದಲು

ಹಳೆಯ ಕಂತುಗಳದೇನಿದ್ದರೂ 

ಕೊಡುವುದಾದರೆ ಕೊಟ್ಟುಬಿಡು.. ಇಂದೇ ಇದನ್ನೂ ..

ಕೊನೆಯದೊಂದು ಬಾರಿಗೆ...

 

 

 

 

 

Rating
No votes yet

Comments