ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿದೆಯೇ?

ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿದೆಯೇ?

ಬರಹ

ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿದೆಯೇ?
ಪಠ್ಯಪುಸ್ತಕಗಳು ಮತ್ತು ನೋಟುಪುಸ್ತಕಗಳನ್ನು ಪ್ರತಿದಿನ ಶಾಲೆಗೊಯ್ಯುವ ಮಕ್ಕಳ ಪುಸ್ತಕದ ಹೊರೆ ಕಟುಕರ ಮನಸ್ಸನ್ನೂ ಕರಗಿಸಬಲ್ಲುದು.ಆದರೆ ನಮ್ಮ ಶಿಕ್ಷಣವೇತ್ತರು ಅದಕ್ಕಿನ್ನೂ ಪರಿಹಾರ ಕಂಡುಕೊಂಡಿಲ್ಲ.ಸಮಸ್ಯೆಗೆ ಪರಿಹಾರವನ್ನು ತಂತ್ರಜ್ಞಾನ ನೀಡುವ ಸಾಧ್ಯತೆಗಳು ಉಜ್ವಲವಾಗಿವೆ.ಪಠ್ಯಪುಸ್ತಕಗಳ ಇ-ಪುಸ್ತಕವನ್ನು ಹಾಕಿಕೊಂಡು ಓದಲು ಅನುಕೂಲ ಕಲ್ಪಿಸುವ ಮಿತಬೆಲೆಯ ಇ-ಪುಸ್ತಕಗಳನ್ನು ತಯಾರಿಸಲು ಫ್ರೀಸ್ಕೇಲ್ ಸೆಮಿಕಂಡಕ್ಟರ್ ಪ್ರಯತ್ನಿಸುತ್ತಿದೆ.ಬೆಂಗಳೂರಿನ ಎನ್‌ಕೋರ್ ಮತ್ತು ಹೈದರಾಬಾದಿನ ಎಲ್ಲೋಕ ಸಹಯೋಗದಲ್ಲಿವನ್ನು ತಯಾರಿಸಿ,ಮಾರಾಟಕ್ಕೆ ಒದಗಿಸುವ ಯೋಜನೆಯಿದೆ. ಬ್ಯಾಟರಿ ಬಾಳಿಕೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ,ಮಕ್ಕಳ ಕೈಯಲ್ಲಿನ ಜಾಗರೂಕತೆಯಿಲ್ಲದ ನಿರ್ವಹಣೆಯನ್ನು ತಾಳಿಕೊಳ್ಳಬಲ್ಲ ಸಾಮರ್ಥ್ಯವನ್ನಿವು ಹೊಂದುವಂತೆ ವಿನ್ಯಾಸ ಮಾಡಲಾಗುತ್ತಿದೆ.ಬೆಲೆಯನ್ನು ಏಳೆಂಟು ಸಾವಿರದ ಸಮೀಪ ಇರಿಸುವುದು ಕಂಪೆನಿಯ ಗುರಿ.ಪಠ್ಯಪುಸ್ತಕದ ಇ-ಪುಸ್ತಕಗಳು ಸಮಸ್ಯೆಯಾಗದು.ಈಗಾಗಲೆ ಎನ್ ಸಿ ಇ ಆರ್ ಟಿ,ಸಿಬಿಎಸ್ ಇ ಪಠ್ಯಪುಸ್ತಕಗಳ ಇ-ಪ್ರತಿ ಲಭ್ಯವಿವೆಯಂತೆ.ಆದರೆ ಇಂತಹ ಪರಿಹಾರ ಮೇಲ್ಮಧ್ಯಮ ವರ್ಗದ ಮಕ್ಕಳಿಗಳಿಗೆ ಮಾತ್ರಾ ಎಟಕುವ ಹಾಗಿದೆ ಎನ್ನುವುದು ವಾಸ್ತವ.
-----------------------------------------------------------------------
ಸುಲಭವಾಗಿ ಕೋಷ್ಟಕಗಳನ್ನು ಟೈಪಿಸಿ!

 ಪದಸಂಸ್ಕಾರಕ ತಂತ್ರಾಂಶದಲ್ಲಿ ಕೋಷ್ಟಕಗಳನ್ನು ಟೈಪಿಸುವುದು ಬಹಳ ಸುಲಭ.ಕೀಲಿ ಮಣೆಯನ್ನು ಬಳಸಿ(ಮೌಸ್ ಬಳಸದೇ) ಬೇಕಾದ ಕೋಷ್ಟಕ ಟೈಪಿಸಬಹುದು. ಪುಟದ ಯಾವ ಸ್ಥಳದಲ್ಲಿ ಕೋಷ್ಟಕ ಬೇಕೋ ಅಲ್ಲಿ,ಕರ್ಸರ್ ಇರಿಸಿ, + ಚಿಹ್ನೆಯನ್ನು ಟೈಪಿಸಿ.ಎಲ್ಲಿಯವರೆಗೆ ಕೋಷ್ಟಕದ ಪಟ್ಟಿ ಬೇಕೋ ಅಲ್ಲಿಯವರೆಗೆ - ಅನ್ನು ಟೈಪಿಸಿ.ಮೊದಲ ಚೌಕದ ಅಗಲ ಸಾಕೆನಿಸಿದಾಗ,ಮತ್ತೆ + ಟೈಪಿಸಿ.ನಂತರದ ಎರಡನೆಯ,ಮೂರನೆಯ ಚೌಕಗಳಿಗೂ ಹೀಗೇ ಮಾಡಿ.ಬೇಕಾದಷ್ಟು ಕೋಣೆಗಳಾದಾಗ enter ಕೀಲಿ ಒತ್ತಿ.ಕೋಷ್ಟಕದ ಮೊದಲ ಸಾಲು ತಯಾರಾಗುತ್ತದೆ. ಮುಂದೆ ಟ್ಯಾಬ್ ಕೀಲಿಯನ್ನು ಒತ್ತುತ್ತಾ,ಇದೇ ಆಕಾರದ ಸಾಲುಗಳನ್ನು ಪುನರಾವರ್ತಿಸಬಹುದು.
+------+------+-------+
ಮೇಲೆ ತೋರಿಸಿದ ಹಾಗೆ ಟೈಪಿಸಿದರೆ,ಮೂರು ಕೋಣೆಗಳಿರುವ ಕೋಷ್ಟಕದ ತಯಾರಿಗೆ ಸಿದ್ಧತೆ ಪೂರ್ಣವಾಯಿತು.ನಂತರ enter ,ಆಮೇಲೆ enter ಮತ್ತು ಟ್ಯಾಬ್ ಕೀಲಿ ಬಳಸಿದರಾಯಿತು!
------------------------------------------------------------------------
ಸುವಾಸನೆಯ ಕಸದ ರಾಶಿ!

 ಬೀಜಿಂಗ್‌ನ ಜನಸಂಖ್ಯೆ ಹದಿನೇಳು ದಶಲಕ್ಷಕ್ಕೂ ಹೆಚ್ಚು.ಪ್ರತಿದಿನ ನಗರದಲ್ಲಿ ಹದಿನೆಂಟು ಸಾವಿರಕ್ಕೂ ಅಧಿಕ ಟನ್ ಕಸ ಎಸೆಯಬೇಕಾಗುತ್ತದೆ.ನಗರದ ಮೂರು ಕಡೆ ಕಸವನ್ನೆಸೆಯುವ ಗುಂಡಿಗಳಿವೆ.ಬೇಸಗೆಯ ಈ ದಿನಗಳಲ್ಲಿ,ಇಲ್ಲಿನ ನಿವಾಸಿಗಳು ಗಾಳಿ ಬೀಸಲೆಂದು ಕಿಟಕಿ ತೆರೆದರೆ,ನಾರುವ ಕಸದ ರಾಶಿಯ ವಾಸನೆ ಮೂಗಿಗೆ ಅಡರುತ್ತದೆ.ಕೆಲವರಿಗಿದು ಕೆಮ್ಮಿನ ಕಾಟವನ್ನೂ ಉಂಟು ಮಾಡುತ್ತದೆ.ಕಸದ ವಿಲೇವಾರಿ ಮಾಡುವ ಕಂಪೆನಿ ಗ್ವಾಂಟುನ್ ಗಾರ್ಬೇಜ್ ಲ್ಯಾಂಡ್‌ಫಿಲ್ ಘಟಕವು ಇದಕ್ಕೊಂದು ಪರಿಹಾರ ಕಂಡು ಹಿಡಿದಿದೆ.ಸಸ್ಯವೊಂದರಿಂದ ತೆಗೆದ ಸುವಾಸಿತ ಸ್ಪ್ರೇಯನ್ನು ಈ ಕಸದ ರಾಶಿಯ ಮೇಲೆ ಸಿಂಪಡಿಸಲಾಗುತ್ತದೆ.ಇದಕ್ಕೆ ಲೀಟರುಗಟ್ಟಲೆ ಸ್ಪ್ರೇ ಬೇಕಾಗುತ್ತದೇನೋ ನಿಜ.ಆದರೆ ಕಸದ ವಾಸನೆ ಅಡಗಿ,ಅದು ಸುವಾಸನೆ ಬೀರಲಾರಂಬಿಸುತ್ತದೆ.ಇದರ ಮೇಲೆ ನಾರುವ ವಾಸನೆಯನ್ನು ಹೀರುವ  ಹಾಳೆಯ ಹೊದಿಕೆಯನ್ನು ಹೊದಿಸಿ,ನಂತರ ಇನ್ನಷ್ಟು ಸುವಾಸಿತ ಸಿಂಪಡಣೆ ಮಾಡಲಾಗುತ್ತದೆ.ಇಂತಹ ಪರಿಹಾರಗಳೇನಿದ್ದರೂ ತಾತ್ಕಾಲಿಕ ಎಂದು ಮೂಗು ಮುರಿಯುವ ಪರಿಸರವಾದಿಗಳು ಬೇಕಾದಷ್ಟಿದ್ದಾರೆ.ಸುವಾಸನೆ ಬಂದರೂ,ಇವು ಪರಿಸರಕ್ಕೆ ಹಾನಿ ಮಾಡದೆ ಇರುವುದಿಲ್ಲ ಎಂದು ಅವರುಗಳ ಕಿಡಿನುಡಿ.
-------------------------------------------------------
ಮಂಕುತಿಮ್ಮನ ಕಗ್ಗ ಮತ್ತು ಪಟ್ಟಣಸುದ್ದಿ


ಬ್ಲಾಗಿನಲ್ಲಿ ಮಂಕುತಿಮ್ಮನ ಕಗ್ಗದ ತಾತ್ಪರ್ಯವನ್ನು ನಿಯತವಾಗಿ ಉಣಬಡಿಸುವ ಬ್ಲಾಗು http://todayskagga.blogspot.comನಲ್ಲಿ ಕಾಣಬಹುದು.ಮಂಕುತಿಮ್ಮನ ಬಗ್ಗೆ ಬಂದಿರುವ ಪುಸ್ತಕಗಳಿಂದ ತೆಗೆದ ಅರ್ಥವಿವರಣೆಯನ್ನು ಬ್ಲಾಗಿನಲ್ಲಿ ಬಳಸಲಾಗಿದೆ.ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ವೆಂಕಟೇಶ್ ಮೂರ್ತಿ ಈ ಬ್ಲಾಗ್ ನಿರ್ವಹಿಸುತ್ತಿದ್ದಾರೆ.
ಜಗನ್‌ಮೋಹನ ಉದ್ಯಾವರ ಅವರು ಸದಾ ತಿರುಗಾಟದಲ್ಲಿರುವವರು.ತಾವು ವಿವಿಧ ಪಟ್ಟಣಗಳಲ್ಲಿ ಕಂಡ ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಳ್ಳಲು ಬ್ಲಾಗ್ ಮಾಧ್ಯಮದ ಉಪಯೋಗ ಪಡೆದಿದ್ದಾರೆ.http://www.pattanasuddi.blogspot.com/ಯಲ್ಲಿ ಸ್ವಾರಸ್ಯಕರ ತುಣುಕುಗಳನ್ನು ಪ್ರಸ್ತುತ ಪಡಿಸಿದ್ದಾರೆ.
----------------------------------------------------------------
ಮತ್ತೊಂದು ಇ-ಬುಕ್ ಎಚ್ ಪಿ ಸ್ಲೇಟ್

ಐಪ್ಯಾಡ್ ಅನ್ನುವ ಸಾಧನವನ್ನು ಆಪಲ್ ಮಾರುಕಟ್ಟೆಗೆ ತಂದಿರುವ ಬೆನ್ನಲ್ಲೇ,ಅಂತಹುದೇ ಸಾಧನವನ್ನು ಹ್ಯುಲೆಟ್ ಪ್ಯಕರ್ಡ್ ಕಂಪೆನಿಯೂ  ತಯಾರಿಸುತ್ತಿದೆ.ಕನೆಕ್ಟಿಕಾ ಎನ್ನುವ ತಾಣದ ವರದಿ ಪ್ರಕಾರ ಐಪ್ಯಾಡಿಗೆ ಹೋಲಿಸಿದರೆ,ಸ್ಲೇಟ್‌ನಲ್ಲಿ ಹೆಚ್ಚಿನ ಸ್ಪಷ್ಟತೆಯಿದೆ.ಫ್ಲಾಶ್ ತಂತ್ರಾಂಶವೂ ಇದರಲ್ಲಿ ಕೆಲಸ ಮಾಡುತ್ತದೆ.ಜತೆಗೆ ಇದರ ಪ್ಲಾಸ್ಟಿಕ್ ಹೊರಕವಚ ಹೆಚ್ಚು ದೃಡ ರಚನೆಯ ರಕ್ಷಣೆಯನ್ನು ಸಾಧನಕ್ಕೆ ನೀಡುತ್ತದೆ.
--------------------------------------
ಅಂತರ್ಜಾಲದಲ್ಲಿ ವಸ್ತುಪ್ರದರ್ಶನ,ಸಮಾವೇಶಗಳು


 ವಸ್ತುಪ್ರದರ್ಶನ,ಟ್ರೇಡ್ ಶೋ,ಸಮಾವೇಶಗಳನ್ನು ಏರ್ಪಡಿಸಿ ಜನರಿಗೆ ಹೊಸ ಆವಿಷ್ಕಾರಗಳ ಬಗ್ಗೆ ಮಾಹಿತಿ ನೀಡುವುದು ಹಿಂದಿನಿಂದಲೂ ನಡೆದು ಬಂದಿದೆ.ಈಗ ಇಂತವನ್ನು ಅಂತರ್ಜಾಲದಲ್ಲೂ ಮಾಡಲು ಸಾಧ್ಯ. ಸೆಕೆಂಡ್ ಲೈಫ್,ಓ ಎನ್24 ಮತ್ತು ಯುನಿಸ್ಫ಼ೇರ್ ಕಂಪೆನಿಗಳು ಜತೆಯಾಗಿ ಅಂತರ್ಜಾಲದಲ್ಲಿ ವಸ್ತುಪ್ರದರ್ಶನಗಳನ್ನು ಆಯೋಜಿಸುವುದನ್ನು ಸಾಧ್ಯವಾಗಿಸಿವೆ.ನಗರಗಳಿಗೆ ದೂರದೂರಿನಿಂದ ಬಂದು,ವಸತಿ-ಊಟಗಳಿಗೆ ಖರ್ಚು ಮಾಡುವ ಬದಲು ಕುಳಿತಲ್ಲಿಂದಲೇ ವಸ್ತುಪ್ರದರ್ಶನವನ್ನು ನೋಡಿ,ತಮಗೆ ಬೇಕಾದ ಮಾಹಿತಿ ಪಡೆಯುವ ಸೌಕರ್ಯವನ್ನು ಪಡೆಯಬಹುದು.ಆಯೋಜಕರಿಗೂ ಯಾರೆಲ್ಲಾ ತಮ್ಮ ಪ್ರದರ್ಶನದ ಬಗ್ಗೆ ಕುತೂಹಲ ವ್ಯಕ್ತಪಡಿಸಿದರು,ಪ್ರದರ್ಶನವನ್ನು ಎಷ್ಟು ಹೊತ್ತು ವೀಕ್ಷಿಸಿದರು ಎನ್ನುವುದನ್ನು ತಿಳಿದು,ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ.ಅಟೋ ವೀಕ್ ಎನ್ನುವ ಜನಪ್ರಿಯ ವಾಹನಗಳ ಬಗೆಗಿನ ಪತ್ರಿಕೆಯು  ಕಾರುಗಳ ಬಗೆಗಿನ  ಟ್ರೇಡ್ ಶೋವನ್ನು ಸದ್ಯವೇ ನಡೆಸಲಿದೆ.
ಉದಯವಾಣಿ

*ಅಶೋಕ್‌ಕುಮಾರ್ ಎ