ಆಕೆಯ ಮುಖಕ್ಕೆ....ಥೂ!

ಆಕೆಯ ಮುಖಕ್ಕೆ....ಥೂ!

ಬರಹ

  ದಾಸರ ಪದ - ಶಾಸ್ತ್ರಿಯ ಒದೆ

  ಭ್ರಷ್ಟರಾದರು ಮನುಜರು
  ಅಷ್ಟಮದ ಗರ್ವದಲಿ ಹರಿಸ್ಮರಣೆಯನು ಮರೆತು
  -ಭ್ರಷ್ಟಳಾದಳು ಮಾಧುರಿ
   ದುಷ್ಟ ಯೋಚನೆಯಲ್ಲಿ ದೇಶಭಕ್ತಿಯ ಮರೆತು
  ***
  ಇಂಥಾ ಹೆಣ್ಣನು ನಾನೆಲ್ಲೂ ಕಾಣೆ
  ಹೊಂತಕಾರಿ ಕಾಣಿರೊ!
  ಸಂತತ ಸುರರಿಗೆ ಅಮೃತವನುಣಿಸಿದ
  ಪಂಕ್ತಿಯೊಳು ಪರವಂಚನೆ ಮಾಡಿದ
  -ಇಂಥಾ ಹೆಣ್ಣನು ನಾನೆಲ್ಲೂ ಕಾಣೆ
   ಆತಂಕಕಾರಿ ಕಾಣಿರೊ!
   ಹಂತಕ ವೈರಿಗೆ ಮಾಹಿತಿ ಕಳಿಸಿದ
   ಸ್ವಂತ ದೇಶಕೇ ವಂಚನೆ ಮಾಡಿದ
  ***  
  ಮಲವ ತೊಳೆಯಬಲ್ಲರಲ್ಲದೆ ಮನವ ತೊಳೆಯಬಲ್ಲರೆ?
  ಹಲವು ತೀರ್ಥಂಗಳಲಿ ಮುಳುಗಿ ಹಲುಬಿದರೆ ಫಲವೇನು?
  -ಮಲವ ತೊಳೆಯಬಹುದು ಮಾಧುರಿಯ ಮನವ ತೊಳೆಯಲು ಸಾಧ್ಯವೆ?
   ಹಲವು ವಿದ್ಯೆಯ ಕಲಿತು ಹುದ್ದೆಯೇರಿ ಫಲವೇನು?
  ***
  ವ್ಯರ್ಥವಾಯಿತೇ ಜನುಮ ವ್ಯರ್ಥವಾಯಿತೇ
  ಅತ್ತ ಅಲ್ಲ ಇತ್ತ ಅಲ್ಲ ಅರ್ಥ-ಮಾನ ಹಾನಿಯಾಗಿ
  -ವ್ಯರ್ಥವಾಯಿತು ಜನುಮ ವ್ಯರ್ಥವಾಯಿತು
   ಅರ್ಧ ಅಲ್ಲ ಗಿರ್ಧ ಅಲ್ಲ ಪೂರ್ತಿ ಮಾನ ಹರಾಜಾಗಿ
  ***
  ಬಾಲಂಗೋಚಿ:
  ಪಾಕ್‌ಗೆ ಇಷ್ಟ
  ಮಾಧುರಿ ದೀಕ್ಷಿತ್, ಮಾಧುರಿ ಗುಪ್ತಾ
  ಬೇರೆಬೇರೆ ಕಾರಣಕ್ಕೆ.
  ಭಾರತಕ್ಕೆ?
  ಮಾಧುರಿ ದೀಕ್ಷಿತ್ ಇಷ್ಟ
  ಮಾಧುರಿ ಗುಪ್ತಾ ಅನಿಷ್ಟ.
  ***
  ಮಾಡಬಾರದ ಕೆಲಸ
  ಮಾಡಿದಳು ಗುಪ್ತಾ
  ಗುಪ್ತ ಗುಪ್ತ.
  ಅದೀಗ ಬಯಲಾಗಿ
  ಅವಳಿನ್ನು ಜೈಲೊಳಗೆ
  ಕಳೆಯಬೇಕು ಜೀವನ
  ಬೆರಳು ಚೀಪ್ತಾ.

ಮಾಧುರಿ ಅಮ್ಮಾ........!

ಪ್ರೇಮಕ್ಕಾಗಿ ದೇಶದ್ರೋಹ ಬಗೆದೆಯಲ್ಲಮ್ಮಾ!
ದೇಶಪ್ರೇಮದ ಮೌಲ್ಯ ನಿನಗೇನು ಗೊತ್ತಮ್ಮಾ?

ಹಣಕ್ಕಾಗಿ ನೀನಿಂಥ ಅಪರಾಧ ಗೈದೆ
ಹೆಣವಾಗಿ ಹೋಗುವಾಗ ಹಣ ಜೊತೆಗೆ ಬರುವುದೇ?

ಬಡತಿ ಸಿಗಲಿಲ್ಲೆಂದು ಮಾತೃಭೂಮಿಯಮೇಲೇ ಸೇಡು!
ನಡತೆಗೆಟ್ಟವಳಿಗೆ ಬಡತಿಯೊಂದು ಕೇಡು!

ಕೇಡಿ ಪಾಕ್‌ಗೆ ಇದು ಭಾರತದ ಆಂತರಿಕ ವಿಷಯ!
ನೋಡಿದೆಯಾ, ಎಂಥ ದೇಶದವನು ನಿನ್ನಿನಿಯ!

ಮಾಧುರಿ ಎಂಬ ಹೆಸರು ಹೊತ್ತು
ಮಧುರಗುಣದವಳಾಗಬೇಕಿತ್ತು,
ಆದರೆ ನೀನು, ಮಾಧುರಿ ಅಮ್ಮಾ,
ಅಧಮಗುಣದವಳಾದೆಯಲ್ಲಮ್ಮಾ!

(’ಸಂಪದ’ದಲ್ಲಿ ಇದು ನನ್ನ ವಿದಾಯಲೇಖ. ಸಂಪದಿಗ ಮಿತ್ರರಿಗೆಲ್ಲ ನಮಸ್ಕಾರ.)