ಎರಡು ಸಾಲುಗಳು - 2

ಎರಡು ಸಾಲುಗಳು - 2

ಉಳಿದ ಕೊನೆಯ ಮೊಗವಾಡವನ್ನೂ ಬಿಸಾಡಿದ್ದೇನೆ
ಮುಖವಿಲ್ಲದವನಿಗೆ ಇಲ್ಲದ ಶೋಭೆಯೇಕೆ?

ಪ್ರೀತಿ ಎಂದರೇನು ಎಂದು ಎಲ್ಲೆಲ್ಲೋ ಹುಡುಕುತ್ತಿದ್ದೆ
ನನ್ನ ಪ್ರೀತಿಸುತ್ತಿದ್ದವಳ ನೆನಪೇ ಇರಲಿಲ್ಲ.

ಮಗುವನ್ನು ಮೇಲಕ್ಕೆ ಬಿಸಾಡಿದಾಗ ಅದು ನಕ್ಕಿತು
ಆದರೆ ನಾನು ಯಾರನ್ನು ನಂಬಲ್ಲ

ಅಮ್ಮ ಹೇಳುತ್ತಾಳೆ, ಬೆಟ್ಟಕ್ಕಿಂತ ದೊಡ್ಡ ಬೆಟ್ಟವಿದೆ
ಅದಕ್ಕೆ ನನಗೆ ಎವರೆಸ್ಟ್ ಆಗಬೇಕು

ಪ್ರೀತಿಯೆಂದರೆ ಮೌನ ಎಂದು ನಂಬಿದ್ದವ
ಯಾವತ್ತೂ ಮಾತನಾಡಲೇ ಇಲ್ಲ, ಈಗ ಅವ ಮೂಕ

ನನ್ನವರ ಎದೆಯ ಮೇಲೆ ಕಾಲಿಡುತ್ತಾ ಬೆಳೆದ
ನಾನೀಗ ವಿಜಯಶಾಲಿ, ಆದರೆ ಅದನ್ನು ಹೇಳಿಕೊಳ್ಳಲು ಯಾರಿಲ್ಲ

ಮನೆ ಉಳಿಯಬೇಕು ಎಂದು ಹೋರಾಟ ಮಾಡುತ್ತಾ
ಕೆಲಸ ಬಿಟ್ಟೆ, ಮಡದಿ ಮಕ್ಕಳನ್ನು ಮರೆತೆ, ಉಳಿದದ್ದು ಕಟ್ಟಡ!

ನಾನು ಇನ್ನೊಂದು ಜೋಕ್ ಹೇಳಿದೆ, ಅವಳು ಪುನಃ ನಕ್ಕಳು
'ನಿನ್ನನ್ನು ಹೀಗೆ ಜೀವನವಿಡೀ ನಗಿಸುವೆ' ಎಂದೆ, ಅವಳು ನಗಲಿಲ್ಲ

ನನಗೆ ನೀನು ಸಂತೋಷದಲ್ಲಿರಬೇಕು
ನಿನ್ನನ್ನೂ ಸೇರಿಸಿ, ಅದು ಯಾರಿಗೂ ಅರ್ಥವಾಗುವುದಿಲ್ಲ.

ದೇವರಿಲ್ಲ ಎಂದು ನನಗೆ ಅನುಮಾನವಿಲ್ಲ
ಇಲ್ಲಿಯವರೆಗೆ ಖಚಿತವಾಗಿರುವುದು ಇದೊಂದೇ

Rating
No votes yet

Comments