ಮಾಯವಾದ ಮುಖದ ಕಲೆ

ಮಾಯವಾದ ಮುಖದ ಕಲೆ

ಸುನಂದಾಗೆ ಇತ್ತೀಚಿಗೆ ಕನ್ನಡಿ ನೋಡಿಕೊಂಡಾಗೆಲ್ಲಾ ಸಂತೋಷ. ಇತ್ತೀಚಿಗೆ ಅವಳ ಮುಖದ ಮೇಲಿನ ಕಲೆಗಳು, ಕಾಣಲಾರದವಾಗಿದ್ದವು. "ರೀ ನನ್ನಮುಖದಲ್ಲಿ ಕಲೆಗಳೆಲ್ಲಾ  ಕಡಿಮೆ ಆಗ್ತಾ ಇವೆ" ಖುಷಿ ಇಂದಲೇ ಹೇಳುತ್ತಿದ್ದಳು. "ಅಬ್ಬಾ ಆ ಕಲೆಗಳು ಎಷ್ಟು ದೊಡ್ಡ ದೊಡ್ಡದವಾಗಿದ್ದವು ಕನ್ನಡಿ ನೋಡೋಕೆ ಬೇಜಾರಾಗುತ್ತಿತ್ತು. ಈಗ ನೋಡಿ ಎಲ್ಲಾ ಕಡಿಮೆಯಾಗಿ ಎಷ್ಟು ಚೆನ್ನಾಗಿ ಕಾಣಿಸ್ತಾ ಇದ್ದೇನೆ. "

ಗಂಡ ಹೌದೆಂದು ತಲೆಯಾಡಿಸುತ್ತಿದ್ದ. ಪುಟ್ಟ ಮಗನನ್ನೂ ಕೇಳಿ ಖಾತ್ರಿ ಪಡಿಸಿಕೊಳ್ಳುತ್ತಿದ್ದಳು.   ಆದರೆ ತಾನೇನೂ ಹಚ್ಚಿಕೊಳ್ಳದೆ ಕಡಿಮೆಯಾಗ್ತಿರೋದು ಹೇಗೆ ಎಂಬುದೇ ಅವಳಿಗೆ ಗೊತ್ತಾಗುತ್ತಿರಲಿಲ್ಲ . ಆದರೂ ತಾನು ಬರ ಬರುತ್ತಾ ಸುಂದರವಾಗಿ ಕಾಣುತ್ತಿರುವುದು ಅವಳಿಗೆ ಅರಿವಾಯ್ತು

ಹೌದು ಆ ಕಲೆಗಳು ಇದ್ದುದುರಿಂದಲೇ ಅವಳ ಮದುವೆ ನಿಧಾನಕ್ಕೆ ಆಯ್ತು. ತಂಗಿಯರ ಮದುವೆ ಎಲ್ಲಾ ಆದ ಮೇಲೆ ಕಷ್ಟ ಪಟ್ಟು ಹೆತ್ತವರು ರವಿಯನ್ನು ಹುಡುಕಿ ಕಟ್ಟಿದ್ದರು. ಈಗಾಗಲೇ ಅವಳಿಗೆ ೩೫ ವರ್ಷ. ಆ ಕಲೆಗಳೆಂದರೆ ನರಕ. ಕನ್ನಡಿ ನೋಡಲೇ ಹೆದರಿಕೊಳ್ಳುತ್ತಿದ್ದಳು. ಆ ಕಲೆ ಹೇಗಾದರೂ ಮಾಯವಾಗಬಾರದೆ ಎಂದುಎಷ್ಟು ಸಲ ಬೇಡಿಕೊಂಡಿದ್ದಳೋ. ಈಗ ಅದಾಗಿಯೇ ಕಡಿಮೆ ಆಗುತ್ತಿರುವುದು ಸಂತಸವನೀಯತೊಡಗಿತು

ಕಾಲ ಹಾಗೆ ಇರೋದಿಲ್ಲ

 

 

ಹಾಗೆಯೇ ಅವಳಿಗೆ ಕಣ್ಣು ಮಸುಕು ಮಸುಕಾಗುತ್ತಿದ್ದೆ ಎಂದನಿಸಿತು ಬಸ್ಸಿನ ನಂಬರ್ ದೂರದಿಂದ ಕಾಣಿಸುತ್ತಿಲ್ಲ ಎಂದನಿಸಲಾರಂಭಿಸಿತು.ಆಫೀಸಿನ ಕಡತಗಳು ಅಕ್ಷರಗಳು ನಾಟ್ಯ ಮಾಡಲಾರಂಭಿಸಿದಾಗ

ನಾರಾಯಣ ನೇತ್ರಾಲಯಕ್ಕೆ ಹೋಗಿ ಬಂದಳು. ಎರೆಡು ದಿನದಲ್ಲಿ ಕಣ್ಣಿಗೆ ಕನ್ನಡಕ ಬಂದಿತು

ಕನ್ನಡಕ ಧರಿಸಿ ಕನ್ನಡಿಯ ಮುಂದೆ ನಿಂತಳು.ಅರೆ  ಕಲೆಗಳು ಮತ್ತೆ  ಕಾಣಿಸಲಾರಂಭಿಸಿದವು. ಸತ್ಯ ತಲೆಗೆ ಹೊಳೆಯಿತು.  ಕೂಡಲೇ ಕನ್ನಡಕ ಬಿಚ್ಚಿದಳು

ಈಗ ಸುನಂದ ಕನ್ನಡಿಯ ಮುಂದೆ ನಿಂತಾಗೆಲ್ಲಾ ಕನ್ನಡಕ ತೆಗೆದೇ ನಿಲ್ಲುತ್ತಾಳೆ .  ತನ್ನ  ಮುಖದ ಕಲೆಗಳು ಕಾಣಬಾರದೆಂದು

 

Rating
No votes yet

Comments