ಪ್ರೇಮಿಗಳ ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ

ಪ್ರೇಮಿಗಳ ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ

ಬೊಗಳೂರು, ಡಿ.6- ಪ್ರೇಮ ರೋಗ ಮತ್ತು ಪ್ರೇಮ ವೈಫಲ್ಯದಿಂದ ಬಳಲುತ್ತಾ ಹೃದಯ ಹಾಳು ಮಾಡಿಕೊಂಡವರಿಗೊಂದು ಸಿಹಿ ಸುದ್ದಿ. ( http://bogaleragale.blogspot.com )

ಇದೇ ವೇಳೆ, ಪ್ರೀತಿ ಪ್ರೇಮದ ಹೆಸರಿನಲ್ಲಿ ಆತ್ಮಹತ್ಯೆಗೆ ಶರಣಾಗುವ ಯುವ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೂ ಕಾರಣ ಪತ್ತೆ ಹಚ್ಚಲಾಗಿದೆ.

ಹಾಳಾದ ಹೃದಯವನ್ನು ಹುಟ್ಟುವ ಮೊದಲೇ ಸರಿಪಡಿಸಲಾಗುತ್ತದೆ ಎಂಬ ಸುದ್ದಿ ಇದಾದರೂ, ಈ ಜನ್ಮದಲ್ಲಿ ನಾವಿಬ್ಬರೂ ಒಂದಾಗಲಿಲ್ಲ, ಮುಂದಿನ ಜನ್ಮದಲ್ಲಾದರೂ ಒಂದಾಗೋಣ ಎನ್ನುತ್ತಾ ಹೃದಯ ಛಿದ್ರವಾಗಿ ಆತ್ಮಹತ್ಯೆಗೆ ಶರಣಾದವರು ಇದರಿಂದ ಭಾರೀ ಹರ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಅವರು ಹರ್ಷಿತರಾಗಿ ಹೋದರೂ, ಈ ಲೋಕದಲ್ಲಿ ಪ್ರೇಮಿಗಳ ಆತ್ಮಹತ್ಯೆ ಪ್ರಮಾಣವೂ ಹೆಚ್ಚುತ್ತಿರುವುದಕ್ಕೆ ಇದೇ ಕಾರಣ ಎಂಬ ಕಳವಳಕಾರಿ ಅಂಶವನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಹುಟ್ಟುವ ಮೊದಲೇ ಹೃದಯ ಸರಿಪಡಿಸಿಕೊಳ್ಳಲು ಅವಕಾಶವಿರುವುದರಿಂದ, ಈ ಜನ್ಮದಲ್ಲಿ ಛಿದ್ರಗೊಂಡ ಹೃದಯವನ್ನು ಮರು ಜನ್ಮದಲ್ಲಿ ರಿಪೇರಿ ಮಾಡಿಸಿಕೊಳ್ಳುವ ಸಲುವಾಗಿ ಅವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ತಂತ್ರಜ್ಞಾನದ ಸಂಶೋಧಕನಿಗೆ ಅತ್ಯುನ್ನತ ಪ್ರೇಮಿ ಪ್ರಶಸ್ತಿ ನೀಡಲು ಪ್ರೇಮಿಗಳು ನಿರ್ಧರಿಸಿದ್ದರೆ, ಆತನನ್ನು ಹಿಡಿದು ಚಚ್ಚಲು ಪ್ರೇಮಿಗಳ ಹೆತ್ತವರು ಸಜ್ಜಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಪ್ರೇಮಿಗಳ ಹೃದಯ ಲಬ್ ಡಬ್ ಲಬ್ ಡಬ್ ಎಂದು ಬಡಿದುಕೊಳ್ಳುತ್ತಿದ್ದರೆ, ಪ್ರೇಮಿಗಳ ಹೆತ್ತವರ ಹೃದಯ ಲಬೋ ಲಬೋ ಅಂತ ಮಾತ್ರವೇ ಬಡಿದುಕೊಳ್ಳುತ್ತಿರುವುದು ವಿಜ್ಞಾನ ರಂಗಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.

Rating
No votes yet