ಮಲೇಷ್ಯಾದಲ್ಲಿ ಬಾಲಿವುಡ್ ಚಿತ್ರೀಕರಣ ನಿಷೇಧ ಚಿಂತನೆ !
ಬೊಗಳೂರು, ಡಿ.8- ಮಲೇಷ್ಯಾದಲ್ಲಿ ಭಾರತೀಯ ಚಿತ್ರಗಳ ಚಿತ್ರೀಕರಣವನ್ನು ನಿಷೇಧಿಸಲಾಗುತ್ತಿದೆ ಎಂಬ ಮಹತ್ವದ ತನಿಖಾ ವರದಿಯನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬೊಗಳೆ ರಗಳೆ ಬ್ಯುರೋ ಕೈಗೊಂಡಿದೆ. (bogaleragale.blogspot.com)
ಇದಕ್ಕೆ ಕಾರಣವೆಂದರೆ ಎಲ್ಲವನ್ನೂ ಬಯಲಾಗಿಸುವ ಅಥವಾ ಹುಟ್ಟಿನ ಉಡುಗೆಗಳಲ್ಲಿ ಅಡ್ಡಾಡಬಾರದು ಎಂದು ಅಲ್ಲಿನ ಸ್ಥಳೀಯಾಡಳಿತೆಯು ಆದೇಶ ಮಾಡಿರುವುದು.
ಇದೀಗ ಚಿತ್ರೀಕರಣ ನೆಪದಲ್ಲಾದರೂ ಮಲೇಷ್ಯಾಕ್ಕೆ ಹೋಗುವ ಅವಕಾಶ ತಪ್ಪಿ ಹೋಗುವುದರಿಂದ ಆಕ್ರೋಶಗೊಂಡಿರುವ (ವಸ್ತ್ರ)ಖಾಲಿ ವುಡ್ ನಟೀಮಣಿಯರು, ಜನ್ಮಉಡುಗೆ ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಹೋರಾಟಕ್ಕಿಳಿಯಲು ತೀರ್ಮಾನಿಸಿದ್ದಾರೆ.
ಈ ಹೋರಾಟದ ಮೊದಲನೆ ಹಂತದ ಅಂಗವಾಗಿ, ಬಟ್ಟೆ ಹಾಕಿಕೊಳ್ಳುವ ಬಾಲಿವುಡ್ ತಾರೆಯರನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಅವರು ಈ ರಾಯಭಾರದಲ್ಲಿ ವಿಫಲರಾದಲ್ಲಿ, ಮತ್ತೆ ತೊಟ್ಟ ಉಡುಗೆಯ ಮತ್ತೆ ಉಡದಿರು (ತೊಟ್ಟ ಬಾಣವ ಮತ್ತೆ ತೊಡದಿರು ಎಂದು ಕುಂತಿಯು ಕರ್ಣನಲ್ಲಿ ಕೇಳಿಕೊಂಡ ಮಾದರಿಯಲ್ಲಿ) ಎಂಬ ಘೋಷಣಾ ವಾಕ್ಯದೊಂದಿಗೆ ಭರ್ಜರಿ ಪ್ರತಿಭಟನೆ ಮಾಡಲು ಬಿಚ್ಚಮ್ಮ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು.
ಈಗ ಸಿನಿಕ ನಾಯಕಿರ ಜತೆಗೆ ಕೋಪ ಮರೆತು ಒಂದಾಗಿ ಸೇರಿಕೊಂಡಿರುವ ಬಿಚ್ಚೋಲೆ ಐಟಂಗಳೂ ಕೂಡ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.