ಮಾತು ಮದಿರೆಯೇ ಮಾನಿನಿಯರಿಗೆ ?
ಬೊಗಳೂರು, ಡಿ.12- ಬೊಗಳೆ ರಗಳೆ ಬ್ಯುರೋದ ಕೆಲಸವನ್ನು ಬೇರೆಯವರಾರೋ ಮಾಡಿರುವುದರಿಂದಾಗಿ ಬೆಚ್ಚಿ ಬಿದ್ದ ಬ್ಯುರೋ ಸಿಬ್ಬಂದಿ ಚೇತರಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. (bogaleragale.blogspot.com)
ಸ್ತ್ರೀಯರು ಪುರುಷರಿಗಿಂತ ಬರೇ ಮೂರು ಪಟ್ಟು ಮಾತ್ರವೇ ಹೆಚ್ಚು ಮಾತನಾಡುತ್ತಾರೆ ಎಂದು ಸಂಶೋಧನಾ ವರದಿಯೊಂದು ತಿಳಿಸಿರುವುದು ಇಲ್ಲಿ ಪ್ರಕಟವಾಗಿದೆ. ಪುರುಷರು ದಿನಕ್ಕೆ 7 ಸಾವಿರ ಅಣಿ ಮುತ್ತುಗಳನ್ನು ಉದುರಿಸಿದರೆ, ಸ್ತ್ರೀಯರು ಕೇವಲ 20 ಸಾವಿರ ಮಾತ್ರವೇ ಶಬ್ದಗಳನ್ನು ಉದುರಿಸುತ್ತಾರೆ. ಹಾಗಾಗಿ ಪುರುಷರಿಗೆ ಈ ಅಣಿಮುತ್ತುಗಳನ್ನು ಹೆಕ್ಕಿಕೊಳ್ಳುವುದರಲ್ಲೇ ಸಮಯ ತಗುಲುತ್ತದೆ ಎಂಬ ಅಂಶವನ್ನು ಮಾತ್ರವೇ ಬೊಗಳೆ ರಗಳೆ ಬ್ಯುರೋ ತನಿಖೆ ನಡೆಸಿ ಹೆಕ್ಕಿಕೊಂಡಿದೆ.
ಆದರೆ ಮಾತುಗಾರಿಕೆ ಎಂಬುದು ಮಹಿಳೆಯರಿಗೆ ಮಾದಕ ದ್ರವ್ಯವಿದ್ದಂತೆ ಎಂದು ಹೇಳಿರುವುದರ ಹಿನ್ನೆಲೆಯನ್ನು ಪತ್ತೆ ಹಚ್ಚಲು ಬೊಗಳೆ ರಗಳೆ ಬ್ಯುರೋಗೆ ಸಾಧ್ಯವೇ ಆಗಲಿಲ್ಲ.
ಬಹುಶಃ ಸಂಶೋಧಕರು, ಆಗಾಗ್ಗೆ ಅಣಿಮುತ್ತು ಉದುರಿಸಿ, ಬೊಂಬಾಯಿಗರಾಗಿ ವಿವಾದಕ್ಕೆ ಸಿಲುಕುತ್ತಿರುವ ಜಯಶಬರಿಮಾಲರಂತಹ ಹೀರೋಯಿನ್‌ಗಳನ್ನು ಹೆರಾಯ್ನ್ ಎಂದು ತಪ್ಪು ತಿಳಿದುಕೊಂಡಿರಬಹುದೇ ಎಂಬ ಒಂದೇ ಒಂದು ಶಂಕೆ ಕಾಡಿದೆ.
ಈ ಮಧ್ಯೆ, ಸ್ತ್ರೀಯರ ಮಾತಿನ ಧಾವಂತಕ್ಕೆ ಅಷ್ಟಪಥದ ಎಕ್ಸ್‌ಪ್ರೆಸ್ ಹೆದ್ದಾರಿ ಇದ್ದರೆ, ಪುರುಷರ ಮಾತಿಗೆ ಹಳ್ಳಿಗಾಡಿನ ರಸ್ತೆಯೇ ಗತಿ ಇದೆ ಎಂದು ಹೋಲಿಕೆ ನೀಡಲಾಗಿರುವುದು ಪುರುಷರನ್ನು ಕೆರಳಿಸಿದೆ ಎಂದು ತಿಳಿದುಬಂದಿದೆ.
ಎಕ್ಸ್‌ಪ್ರೆಸ್ ಹೆದ್ದಾರಿಗಳಲ್ಲಿ ಗಾಡಿ ಸುಲಲಿತವಾಗಿ ಓಡಿಸಬಹುದು, ಆದರೆ ಹಳ್ಳಿಯ ಹೊಂಡಾಗುಂಡಿ ತುಂಬಿದ ರಸ್ತೆಗಳು ನಮಗೆ ಬೇಡ ಎಂಬುದು ಅವರ ಒಕ್ಕೊರಲ ಕೂಗಾಟವಾಗಿದೆ. ಹಾಗಾಗಿ ಈ ಸಂಶೋಧನೆ ನಡೆಸಿರುವುದು ಒಬ್ಬ ಸ್ತ್ರೀಯೇ ಆಗಿರುವುದರಿಂದ ಪುರುಷರು ಕೂಡ ಪ್ರತಿ-ಸಂಶೋಧನೆಗೆ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.