ಮೊರೆ - ನೆರವು !!!
ಈ ಹಿಂದೆ ಪ್ರಕಟವಾಗಿದ್ದ "ಹೀಗೊಂದು ಬಿಕರೀ ನೋಟೀಸು" (http://sampada.net/blog/ksmanjunatha/05/05/2010/25238) ಲೇಖನದ ಮುಂದುವರೆದ ಭಾಗ (ಈ ಲೇಖನವನ್ನು ಬೇರೊಂದು ವೇದಿಕೆಗಾಗಿ ಸಿದ್ಧಪಡಿಸಿದ್ದರಿಂದ, ಈ ಹಿಂದಿನ ಲೇಖನದ ಕೆಲವು ಅಂಶಗಳು ಇದರಲ್ಲಿ ಪುನರಾವೃತ್ತಿಯಾಗಿವೆ, ಕ್ಷಮಿಸಿ)
ಮೊರೆ: ಕೆಲವು ಗೀಳುಗಳು ನಮ್ಮನ್ನು ಬಹು ಗಾಢವಾಗಿ ಹಿಡಿದುಬಿಡುತ್ತವೆ. ಅದರಲ್ಲಿ ಪುಸ್ತಕದ ಗೀಳೂ ಒಂದು. ಪುಸ್ತಕವೆಂದರೆ ಕೇವಲ ಕಾಗದದ ಕಂತೆಯಲ್ಲ, ಜೀವನದ ಒಂದು ಭಾಗ - ಒಂದು ಜೀವನವಿಧಾನ ಎಂದು ಪುಸ್ತಕ ಪ್ರೇಮಿಯು ಪ್ರಮಾಣಮಾಡಿ ಹೇಳಬಲ್ಲ. ವ್ಯಕ್ತಿಯೊಬ್ಬನ ಪುಸ್ತಕ ಸಂಗ್ರಹ ಅವನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ತನ್ನ ಪುಸ್ತಕ ಸಂಗ್ರಹ ಬೆಳೆದುಬಂದ ದಾರಿಯನ್ನು ತಿರುಗಿ ನೋಡಿದಾಗ, ಅತ ಅಲ್ಲಿ ತನ್ನ ಸ್ವಂತ ಬೆಳವಣಿಗೆಯನ್ನೇ ಕಾಣುತ್ತಾನೆ. ಇಂಥದ್ದೊಂದು ವೈಯಕ್ತಿಕ ಆಸ್ತಿಯನ್ನು ಕಳೆದುಕೊಳ್ಳುವುದು ಅತಿಯಾದ ನೋವಿನ ವಿಷಯ. ಎರಡುಸಾವಿರಕ್ಕೂ ಮೀರಿದ ತಮ್ಮ ಪುಸ್ತಕ ಸಂಗ್ರಹವನ್ನು ಮಾರಿಬಿಡುವ ನಿರ್ಧಾರ ತೆಗೆದುಕೊಳ್ಳುವಲ್ಲಿ ಸತ್ಯ ಅನುಭವಿಸಿದ ನೋವು ಇದೇ. ಕೊನೆಗೂ ಒಮ್ಮೆ ಅನಿವಾರ್ಯ ಆರ್ಥಿಕ ಸ್ಥಿತಿಗತಿಗಳು ಅವರನ್ನು ಈ ನಿರ್ಧಾರಕ್ಕೆ ಬಗ್ಗಿಸುವ ಮೊದಲು ಸುಮಾರು ಎರಡು ತಿಂಗಳು ಈ ಭಯಾನಕ ಆಲೋಚನೆಯನ್ನು ಹತ್ತಿಕ್ಕಲು ಯತ್ನಿಸಿದ್ದಾರೆ.
’ಕತ್ಲು ಸತ್ಯ' ಎಂದೇ ಹವ್ಯಾಸೀ ರಂಗವಲಯಗಳಲ್ಲಿ ಹೆಸರಾದ ಶ್ರೀ ಸತ್ಯನಾರಾಯಣ ಒಬ್ಬ ರಂಗಕರ್ಮಿಯಾಗಿ, ನಟನಾಗಿ, ನಿರ್ದೇಶಕನಾಗಿ ಮತ್ತು ನಾಟಕಕಾರನಾಗಿ ರಂಗ ಹವ್ಯಾಸಿಗಳಿಗೆ ತಿಳಿದ ಹೆಸರು. ಒಬ್ಬ ಸಾಮಾನ್ಯ ಕನಸುಗಣ್ಣಿನ ಹಳ್ಳಿಯ ಹುಡುಗನ ಸ್ತರದಿಂದ ಅನುಭವೀ ರಂಗ ಕಲಾವಿದನ ಮಟ್ಟಕ್ಕೆ ಬೆಳೆಯುವ ದಾರಿಯಲ್ಲಿ ಅನೇಕ ಏಳು-ಬೀಳು, ಸಿಹಿ ಕಹಿಗಳನ್ನು ಕಂಡವರು. ಸಿಜಿಕೆ, ಬಿ.ವಿ.ಕಾರಂತ ಮೊದಲಾದ ಘಟಾನುಘಟಿಗಳೊಡನೆ ಕೆಲಸ ಮಾಡುತ್ತಾ ತಮ್ಮದೇ ಕಲಾಜೀವನವನ್ನು ರೂಪಿಸಿಕೊಂಡ ಸತ್ಯ ನಟನೆ ನಿರ್ದೇಶನವಲ್ಲದೆ ತಮ್ಮದೇ ಕೆಲವು ನಾಟಕಗಳನ್ನೂ ರಚಿಸಿದರು. "ಬಾವಿ", "ದಾಂಬರು ಬಂದದ್ದು" ಇತ್ಯಾದಿ ನಾಟಕಗಳು ಜನಮನ್ನಣೆ ಪಡೆಯಿತು.
ಆದರೆ ಸಾಮಾನ್ಯವಾಗಿ ಕಲಾವಿದರು ಐಹಿಕವಾಗಿ ತುಂಬಾ ಸರಳ ಜೀವಿಗಳಾಗಿರುತ್ತಾರೆ. ಈ "ಸರಳ" ಜೀವನ ಅದರದೇ ಆದ ಅಪಾಯಗಳನ್ನೂ ಹೊಂದಿರುತ್ತದೆ. ಬಹುಕಾಲ ಪೇರಿಸಿಟ್ಟುಕೊಂಡ ಆರ್ಥಿಕ ಹೊಣೆಗಳು, ಸಾಲಗಳು ಕೆಲವೊಮ್ಮೆ ತೀವ್ರ ಸಂಕಟ ತರಬಲ್ಲುವು. ಸತ್ಯರ ಏಕೈಕ ಆಸ್ತಿಯಾದ ಅವರ ಪುಸ್ತಕ ಭಂಡಾರವನ್ನು ಮಾರಿಬಿಡುವಂತೆ ಒತ್ತಾಯಿಸುತ್ತಿರುವುದು ಇವೇ ಆರ್ಥಿಕ ಸಂಕಷ್ಟಗಳು. ಆದರೆ ಪುಸ್ತಕಗಳನ್ನು ಮತ್ತೊಂದು ವ್ಯಕ್ತಿಯಂತೆಯೇ ನೋಡುವ ಸತ್ಯ, ಅದನ್ನು ಯಾರಾದರೊಬ್ಬ ವ್ಯಾಪಾರಿಗೆ ಮಾರಿಬಿಡುವುದಕ್ಕೋ ಅಥವ ಬಿಡಿಬಿಡಿಯಾಗಿ ಮಾರಿ ಕರಗಿಸಿಬಿಡುವುದಕ್ಕೋ ಇಚ್ಛಿಸುವುದಿಲ್ಲ. ಮೇಲಾಗಿ ಅದು ಅವರ ಆರ್ಥಿಕ ಸಂಕಷ್ಟಕ್ಕೆ ಯಾವ ರೀತಿಯೂ ಸಹಾಯ ಮಾಡದು ಎನ್ನುವುದೂ ಒಂದು ಕಾರಣ. ಆದ್ದರಿಂದ ಅವರ ಪುಸ್ತಕಭಂಡಾರವನ್ನು ಇಡಿಯಾಗಿ ಮಾರಲು ಇಚ್ಛಿಸುತ್ತಾರೆ, ಪ್ರಾಚೀನ ಸಾಹಿತ್ಯದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ, ಪಾಶ್ಚಾತ್ಯದಿಂದ ಪೌರ್ವಾತ್ಯದವರೆಗೆ, ಕಾವ್ಯ, ನಾಟಕ, ಇತಿಹಾಸ, ಆಧ್ಯಾತ್ಮ, ವಿಜ್ಞಾನ, ಕಲೆ, ರಂಗಭೂಮಿ ಹೀಗೆ ಹತ್ತು ಹಲವು ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಈ ಲೈಬ್ರರಿಗೆ ಅವರು ನಿರೀಕ್ಷಿಸುವ ಒಟ್ಟಂದದ ಬೆಲೆ ಎರಡು ಲಕ್ಷ ರುಪಾಯಿಗಳು (ಸರಾಸರಿ ಪುಸ್ತಕವೊಂದರ ೮೦ ರೂಪಾಯಿಗಳಂತೆ). ಆದರೆ ಸಧ್ಯದ ಅತೀ ಒತ್ತಡದ ಸ್ಥಿತಿಯಲ್ಲಿ, ಸಮಯಾಭಾವದ ಕಾರಣ ಅವರಿಗೆ ಈ ಮೇಲಿನ ಶರತ್ತುಗಳಿಗೆ ಒಪ್ಪಿ ಈ ಭಂಡಾರವನ್ನು ಕೊಳ್ಳುವವರು ಸಿಕ್ಕುವುದು ದುಸ್ತರವಾಗಿದೆ.
ನೆರವು: ಅವರ ಈ ಸ್ಥಿತಿಯೇ ನಮ್ಮನ್ನು ಈ ಬಗ್ಗೆ ಬ್ಲಾಗಿಸಲು ಪ್ರೇರಿಸಿದ್ದು - ಕೊನೆಯ ಪಕ್ಷ ಇದೇ ರೀತಿ ಗೀಳು, ಜೊತೆಗೆ ಆರ್ಥಿಕ ಅನುಕೂಲವೂ ಇರುವ ಯಾರಿಗಾದರೂ ಈ ಮಾತು ಮುಟ್ಟಲಿ ಎಂದು ನಮ್ಮ ಆಶಯವಾಗಿತ್ತು. ಬ್ಲಾಗಿಗೆ ಸಾಹಿತ್ಯಾಸಕ್ತರ ವಲಯದಿಂದ ಒಳ್ಳೆಯ ಪ್ರತಿಕ್ರಿಯೆ ಬಂತು. ಸಹಬ್ಲಾಗಿಗರು ತಂತಮ್ಮ ಬ್ಲಾಗುಗಳಲ್ಲಿ ಈ ಬ್ಲಾಗನ್ನು ಲಿಂಕಿಸುವ ಮೂಲಕ, ಈ-ಮೈಲುಗಳನ್ನು ಹಂಚಿಕೊಳ್ಳುವ ಮೂಲಕ, g-talk ಮೂಲಕ, ಮುಖತಃ ಚರ್ಚೆಯ ಮೂಲಕ ಮಾತು ಹರಡಿತು.
ಯೋಜನೆ: ಒಂದೆರಡು ಸುತ್ತು ಚರ್ಚೆಗಳನಂತರ ಸಮಾನ ಮನಸ್ಕರ ಗುಂಪೊಂದು ಒಂದು ಟ್ರಸ್ಟ್ ರೂಪಿಸುವ ಯೋಚನೆ ಮಾಡಿತು. ಕೈತಪ್ಪಿಹೋಗುತ್ತಿರುವ ಈ ಲೈಬ್ರರಿಯನ್ನು ಉಳಿಸಿಕೊಳ್ಳುವುದರೊಂದಿಗೆ, ಈ ಮೊದಲಿಂದ ಇದ್ದ ಇನ್ನೂ ಕೆಲವು ಸಾಮಾಜಿಕ-ಸಾಂಸ್ಕೃತಿಕ ಉದ್ದೇಶಗಳೂ ಇದಕ್ಕೆ ಕೂಡಿತು. ಒಬ್ಬ ವ್ಯಕ್ತಿ ಇಷ್ಟು ದೊಡ್ಡ ಮೊತ್ತವನ್ನು ಹಾಕಿ ಲೈಬ್ರರಿ ಕೊಳ್ಳಲು ಆಗದಿದ್ದರೆ ಒಂದು ಗುಂಪಿಗೆ ಖಂಡಿತಾ ಸಾಧ್ಯ. ಹೀಗೆ ಕೊಂಡ ಪುಸ್ತಕ ಸಂಗ್ರಹದಿಂದ ಒಂದು ಪುಟ್ಟ ವಾಚನಾಲಯವನ್ನು ತೆರೆಯಬಹುದಲ್ಲ? ಈ ಯೋಚನೆಯನ್ನು ಹಂಚಿಕೊಳ್ಳುತ್ತಿದ್ದಂತೆಯೇ ಸಾಕಷ್ಟು ಜನ ಆಸಕ್ತರು ಕೈಜೋಡಿಸಲು ಮುಂದೆ ಬಂದರು. ಕೇವಲ ೨-೩ ದಿನಗಳಲ್ಲಿ ಸುಮಾರು ಐವತ್ತು ಸಾವಿರ ರೂಗಳಷ್ಟು ನಿಧಿ ಸಂಗ್ರಹವಾಯಿತು. ಆದರೂ ಅದು ಎರಡುಲಕ್ಷದ ಮಾಂತ್ರಿಕ ಸಂಖ್ಯೆಗೆ ಸುಮಾರು ಒಂದೂವರೆ ಲಕ್ಷದಷ್ಟು ಕಡಿಮೆಯೇ!
ಈ ವಾಚನಾಲಯ/ಗ್ರಂಥಾಲಯ, ಮುಂದಿನ ಹಿರಿಯ ಆಶಯದ ಒಂದು ಭಾಗ ಮಾತ್ರ. ಹಿರಿಯ ಆಶಯವೆಂದರೆ, ಜನ ಬೇಕಾದಾಗ ಬಂದು, ಕೂತು, ಓದಿ, ಒಂದಷ್ಟು ಯೋಚಿಸಿ, ಸಮಾನ ಮನಸ್ಕರೊಡನೆ ಚರ್ಚಿಸಿ ಬೆಳೆಯಲು ಒಂದು ಸ್ಥಳ ಬೇಕು; ಇದು ಒಂದು ಸಾಂಸ್ಕೃತಿಕ ಕೇಂದ್ರವಾಗಿ, ಅನೇಕ ಧನಾತ್ಮಕ ವಿಚಾರಗಳು ಮೊಳೆತು ಬೆಳೆಯುವ ನೆಲವಾಗಿ ಪರಿಣಮಿಸಬೇಕು ಎಂಬುದು. ಮೊದಲಿಗೆ ಒಂದು ಉಚಿತ ವಾಚನಾಲಯವಾಗಿ ಶುರುವಾಗುವ ಈ ಕೇಂದ್ರ, ಮುಂದೆ ನಿಧಾನವಾಗಿ ಚರ್ಚೆ, ಉಪನ್ಯಾಸ, ಕಾರ್ಯಾಗಾರಗಳೇ ಮೊದಲಾದ ಚಟುವಟಿಕೆಗಳಿಗೆ ಒಂದು ವೇದಿಕೆಯಾಗಬೇಕು ಎನ್ನುವುದು ಉದ್ದೇಶ.
ನೀವೂ ಇದರಲ್ಲಿ ಭಾಗವಹಿಸಬಹುದು, ಅನೇಕ ರೀತಿಯಲ್ಲಿ:
ಹಣದ ಕೊಡುಗೆ - ಯಾವುದೇ ಮೊತ್ತವೂ ಒಳ್ಳೆಯದೇ
ಪುಸ್ತಕಗಳ ಕೊಡುಗೆ - ತಮ್ಮಲ್ಲಿ ಪುಸ್ತಕ ಸಂಗ್ರಹವಿದ್ದು ಅದನ್ನು ತಾವು ಸಾರ್ವಜನಿಕರ ಉಪಯೋಗಕ್ಕೆ ನೀಡಲು ಇಚ್ಛಿಸುತ್ತೀರಾದರೆ ದಯವಿಟ್ಟು ನೀಡಿ
ಶ್ರಮದಾನ - ಕೇಂದ್ರವನ್ನು ನಡೆಸುವಲ್ಲಿ ತಮ್ಮ ವೈಯಕ್ತಿಕ ಸಮಯ, ಶ್ರಮಗಳನ್ನು ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು
ಸ್ಥಳದಾನ - ಈ ವಾಚನಾಲಯಕ್ಕೊಂದು ಉಚಿತ ಸ್ಥಳದ ವ್ಯವಸ್ಥೆ ಮಾಡುವುದು
ಸಲಹೆ ಸೂಚನೆ ಸಂಘಟನೆ - ಸಧ್ಯಕ್ಕೆ ಇದು ನಮ್ಮ ಆಶಯ. ಅದನ್ನು ಆಗಮಾಡುವಲ್ಲಿ ಕಾನೂನು, ಸಂಘಟನೆ, ಇತ್ಯಾದಿ ವಲಯಗಳಲ್ಲಿ ಸಾಕಷ್ಟು ಸಲಹೆ, ಸೂಚನೆ ಮಾರ್ಗದರ್ಶನದ ಅಗತ್ಯವೂ ಇದೆ. ಒಂದು ಟ್ರಸ್ಟ್ ರೂಪಿಸುವುದು ಸಧ್ಯಕ್ಕೆ ನಮ್ಮ ಮೊದಲ ಹೆಜ್ಜೆ. ಈ ಬಗ್ಗೆ ಅನುಭವ, ತಿಳುವಳಿಕೆಯಿರುವವರು ದಯವಿಟ್ಟು ಮುಂದೆ ಬನ್ನಿ
ಮುಗಿಸುವ ಮುನ್ನ:
ಸತ್ಯರ ಪುಸ್ತಕ ಸಂಗ್ರಹದತ್ತ ಇಣುಕು ನೋಟ: http://picasaweb.google.co.in/ksmanjunatha/SatyaLibrary#
ಈ ಸಂದೇಶಕ್ಕೆ ಸಂಬಂಧಿಸಿದ ಬ್ಲಾಗ್ ಬರಹಗಳು:
http://nannabaraha.blogspot.com/2010/05/blog-post.html (ಕನ್ನಡ)
http://ksmanjunatha.blogspot.com/2010/05/sale-note.html (english)
ಸತ್ಯರನ್ನು ಈ ನಂಬರಿನಲ್ಲಿ ಸಂಪರ್ಕಿಸಬಹುದು: + 91 94487 03864
ಮೂಲ ಸಮಿತಿ ಸದಸ್ಯರನ್ನು ಈ ನಂಬರುಗಳಲ್ಲಿ ಸಂಪರ್ಕಿಸಬಹುದು:
ಮಂಜುನಾಥ ಕೆ ಎಸ್: +91 9500031508 (ksmanjunatha@gmail.com)
ಶ್ರೀಕಾಂತ್ ವೆಂಕಟೇಶ್: +91 9900231097 (srikanth.venkatesh@gmail.com)
Comments
ಉ: ಮೊರೆ - ನೆರವು !!!
In reply to ಉ: ಮೊರೆ - ನೆರವು !!! by PrasannAyurveda
ಉ: ಮೊರೆ - ನೆರವು !!!
ಉ: ಮೊರೆ - ನೆರವು !!!
In reply to ಉ: ಮೊರೆ - ನೆರವು !!! by vijay pai
ಉ: ಮೊರೆ - ನೆರವು !!!