ಕ್ರಿಕೆಟೆಂಬ ಹುಚ್ಚು

ಕ್ರಿಕೆಟೆಂಬ ಹುಚ್ಚು

ಬರಹ

ಮೊನ್ನೆ ಭಾರತ ೨೦-೨೦ ಕ್ರಿಕೆಟ್ ನಲ್ಲಿ ಹೀನಾಯವಾಗಿ ಸೋತದ್ದು ಮತ್ತು ಚೆಸ್ಸಿನಲ್ಲಿ ವಿ.ಆನಂದ್ ವಿಶ್ವ ಚಾಂಪಿಯನ್ ಆಗಿ ನಾಕನೇ ಬಾರಿಗೆ ,ಅದರಲ್ಲೂ ಸತತವಾಗಿ ಮೂರನೇ ಬಾರಿಗೆ ಮೂಡಿಬಂದದ್ದು ಒಟ್ಟೊಟ್ಟಿಗೇ ಆಯಿತು. ಹೀಗಾದದ್ದರಿಂದ ಅನೇಕ ಕ್ರೀಡಾವಿಶ್ಲೇಷಕರು ಹಾಗೂ ಸಾಮಾನ್ಯ ಕ್ರೀಡಾಭಿಮಾನಿಗಳು ಕ್ರಿಕೆಟಿಗೆ ಈ ದೇಶದಲ್ಲಿ ನೀಡಲಾಗುವ ಮಹತ್ವ ಮತ್ತು ಇತರ ಆಟಗಳ ಬಗ್ಗೆ ಅಲಕ್ಷ್ಯದ ಬಗ್ಗೆ ತುಂಬ ಬರೆದಿದ್ದಾರೆ ಮತ್ತು ಹೇಳಿದ್ದಾರೆ.

ನನಗೆ ನಿಜವಾಗಿ ಆಸಕ್ತಿಯ ಆಟವೆಂದರೆ ಕ್ರಿಕೆಟ್ಟೇ. ಯಾಕೆಂದರೆ ಕ್ರಿಕೆಟ್ಟು ಆಡಲು ಹೆಚ್ಚು ಖರ್ಚು ಇಲ್ಲ.ಬ್ಯಾಟು ಮಾಡಲು ತೆಂಗಿನ ಕೊತ್ತಳಿಗೆ ಕೂಡ ಆಗುತ್ತಿತ್ತು ನಾವು ಚಿಕ್ಕವರಿದ್ದಾಗ. ಚೆಂಡು ಬಾಳೆ ಚಾಂಬಾರಿನದೂ ಆಗುತ್ತಿತ್ತು. ಹತ್ತು ಇಂಟು ಇಪ್ಪತ್ತು ಅಡಿ ಅಂಗಳದಲ್ಲೂ ಕ್ರಿಕೆಟ್ ಆಡಬಹುದು ನಮ್ಮದೇ ರೂಲ್ಸುಗಳೊಂದಿಗೆ. ಹಾಗೆಯೇ ಕ್ರಿಕೆಟ್ಟು ಆಡಲು ಅಥವಾ ನೋಡಲು ಚೆಸ್ಸಿನ ಹಾಗೆ ಹೆಚ್ಚು ತಲೆಖರ್ಚು ಮಾಡುವ ಅಗತ್ಯವಿಲ್ಲ. ತಲೆಖರ್ಚು ಮಾಡುವುದೆಂದರೆ ನಾನು ಮೊದಲಿಂದಲೂ ಸ್ವಲ್ಪ ಜಿಪುಣನೇ. ಕ್ರಿಕೆಟ್ಟಿನ ಮೇಲೆ ನನಗೆ ವಿಶೇಷ ಮಮತೆ ಇರಲು ಇನ್ನೊಂದು ಕಾರಣವೆಂದರೆ ನಾನು ನನ್ನ ಹತ್ತು- ಹನ್ನೊಂದನೇ ವಯಸ್ಸಿನಲ್ಲಿಯೇ ಭಾರತ ತಂಡವನ್ನು ಫೋಲ್ಲೋ ಮಾಡಲು ಆರಂಭ ಮಾಡಿದ್ದು. ನಾನು ಬಹುಶ ನಾಕನೇ ಅಥವಾ ಐದನೇ ಕ್ಲಾಸಿನಲ್ಲಿ ಇದ್ದಾಗ ಇರಬೇಕು ನಾನು ಮೊದಲು ಕಮೆಂಟ್ರಿ ಕೇಳಿದ್ದು. ನನಗೆ ಕ್ರಿಕೆಟಿನ ಹುಚ್ಚು ಹಿಡಿದದ್ದು ಭಾರತ ಮತ್ತು ಇಂಗ್ಲೆಂಡುಗಳ ನಡುವಿನ ಒಂದು ಸರಣಿಯ ಮಧ್ಯದಲ್ಲಿ. ಹಾಗೆ ನನಗೆ ಸಡನ್ನಾಗಿ ಹುಚ್ಚು ಹಿಡಿದದ್ದು ಹೇಗೆ ಎಂದು ಈಗಲೂ ನನಗೆ ಅರ್ಥವಾಗುತ್ತಿಲ್ಲ. ಸಾಮಾನ್ಯವಾಗಿ ಇಂಥ ಹುಚ್ಚುಗಳು ಗ್ರಾಜುಯಲ್ಲಾಗಿ ಹಿಡಿಯುವುದು. ಸಡನ್ನಾಗಿ ಹಿಡಿದದ್ದು ಹುಚ್ಚೇ ಅನ್ನಲು ಕಾರಣವೇನೆಂದರೆ ಆನಂತರದ ಹೆಚ್ಚು ಕಡಿಮೆ ಪ್ರತಿಯೊಂದು ಪಂದ್ಯವನ್ನೂ ನಾನು ಪತ್ರಿಕೆ ಅಥವಾ ರೇಡಿಯೋ ಕಮೆಂಟ್ರಿ ಮೂಲಕ ಫೋಲ್ಲೋ ಮಾಡುತ್ತಿದ್ದೆ. ನನಗೆ ಕ್ರಿಕೆಟ್ ಅಂತ ಒಂದಿದೆ ಎಂದು ಗೊತ್ತಾಗುವಾಗ ಆ ಸರಣಿಯಲ್ಲಿ ಒಂದು ಪಂದ್ಯವನ್ನು ಭಾರತ ಗೆದ್ದಾಗಿತ್ತು ಅನಿಸುತ್ತದೆ. ಅದು ಮೊದಲ ಪಂದ್ಯ ಇರಬೇಕು. ಆ ಗೆದ್ದ ವಿಷಯ ನನಗೆ ಆನಂತರ ಗೊತ್ತಾದದ್ದು. ನನ್ನ ನೆನಪಿನ ಪ್ರಕಾರ ಆ ಸರಣಿಯ ನಂತರದ ಐದು ಟೆಸ್ಟ್ ಗಳೂ ಡ್ರಾ ಆಗಿರಬೇಕು. ಒಟ್ಟಿನಲ್ಲಿ ಆ ಸರಣಿಯನ್ನು ಭಾರತ ಒಂದು-ಸೊನ್ನೆ ಅಂತರದಲ್ಲಿ ಗೆದ್ದಿತ್ತು. ಒಂದು ಇನ್ನಿಂಗ್ಸ್ ನಲ್ಲಿ ಕಪಿಲ್ ದೇವ್ ಮತ್ತು ಮದನ್ ಲಾಲ್ ತಲಾ ಐದು ವಿಕೆಟ್ ಗಳನ್ನು ಪಡೆದು ಮಿಂಚಿದ್ದರು. ಆಗ ಇಂಗ್ಲೆಂಡಿನ ನಾಯಕನಾಗಿದ್ದವನು ಕೀತ್ ಫ್ಲೆಚರ್ ಎಂಬ ಅನಾಮಧೇಯ.

ಹೀಗೆ ಹಿಡಿದ ಹುಚ್ಚಿನಿಂದಾಗಿ ಪತ್ರಿಕೆಗಳ ಕ್ರೀಡಾಪುಟವನ್ನು ಓದುವ ಅಭ್ಯಾಸ ಬೆಳೆಯಿತು. ಎಲ್ಲಾ ಪಂದ್ಯಗಳ ಕಮೆಂಟ್ರಿ ಹೇಗೂ ಸಿಗುತ್ತಿರಲಿಲ್ಲ. ಆಗ ಉದಯವಾಣಿಯಲ್ಲಿ ಮೂರನೇ ಪುಟದಲ್ಲಿ ಆಟವಿದ್ದರೆ ಕನ್ನಡಪ್ರಭದಲ್ಲಿ ಬಹುಶ ಕೊನೆಯ ಪುಟದಲ್ಲಿ ಇತ್ತು. ಕ್ರಿಕೆಟ್ ಸರಣಿ ಇಲ್ಲದಿದ್ದಾಗ ಏನು ಮಾಡುವುದು? ಬೇರೆ ಆಟಗಳ ಬಗೆಗಿನ ವರದಿ ಓದುವುದು. ಅಂಥ ದಿನಗಳಲ್ಲಿ ಅನತೊಲಿ ಕಾರ್ಪೊವ್ ಮತ್ತು ಗ್ಯಾರಿ ಕಾಸ್ಪರೊವ್ ನಡುವಿನ ಚೆಸ್ ಹೋರಾಟದ ಸರಣಿಯನ್ನು ಪತ್ರಿಕೆಗಳಲ್ಲಿ ಫೊಲ್ಲೋ ಮಾಡುವುದಿತ್ತು. (ಕೊನೆಗೆ ಕಾಸ್ಪರೊವ್ ಗೆದ್ದದ್ದು ಇತ್ಯಾದಿ. ನಮ್ಮ ಆನಂದ್ ಕೂಡ ಕಾಸ್ಪರೊವ್ ಜತೆ ನಂತರ ಆಡಿದರು.) ಕೊನೆಗೆ ಏನೂ ಇಲ್ಲದಿದ್ದರೆ ಅತ್ಲೆಟಿಕ್ಸ್ ನಂಥ ಅನಾಕರ್ಷಕ ಕ್ರೀಡಾವಿಷಯಗಳ ಅಂಕಿ ಅಂಶಗಳು ಕೂಡ ಆಗುತ್ತಿತ್ತು. ( ಸಿಗರೇಟು ಸೇದಿ ಅಭ್ಯಾಸವಾಗಿದ್ದ ನನ್ನ ಪಿ.ಯು.ಸಿ. ಕ್ಲಾಸ್ ಮೇಟ್ ಒಬ್ಬ ಹಾಸ್ಟೆಲ್ಲಿನಲ್ಲಿ ಅದು ಸಿಗದಿದ್ದಾಗ ಊದುಬತ್ತಿ ಹೊತ್ತಿಸಿ ಬಾಯೊಳಗಿಡುತ್ತಿದ್ದನಂತೆ, ಹಾಗೆ ). ಆಗ ಉದಯವಾಣಿಯಲ್ಲಿ ಮಂಗಳೂರು ವಿ.ವಿ. ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಗಳ ವರದಿ ಕೂಡ ಬರುತ್ತಿತ್ತು. ಕಾರ್ಕಳ ಭುವನೇಂದ್ರ ಕಾಲೇಜಿನ ಸಂದೀಪ್ ಆರ್ಯ ಎಂಬ ಆಟಗಾರನೊಬ್ಬ ಆ ದಿನಗಳಲ್ಲಿ ಆ ಕಾಲೇಜಿನ ಪರವಾಗಿ ಸತತವಾಗಿ ಶತಕ ಬಾರಿಸಿದ ವರದಿ ಬರುತ್ತಿತ್ತು. ಆತ ಏನಾದನೋ ಗೊತ್ತಿಲ್ಲ, ಅವನು ರಣಜಿಯಾದರೂ ಆಡುವ ನಿರೀಕ್ಷೆ ಆಗ ನನಗೆ ಇತ್ತು. ಆಡಿದಂತಿಲ್ಲ.

ರಣಜಿ ಪಂದ್ಯಗಳು ಹೇಗೂ ಆಕರ್ಷಣೆಯೇ ಆಗಿತ್ತು. ಕನ್ನಡದ ಕಮೆಂಟ್ರಿ ಕೇಳಲು ಖುಷಿಯಾಗುತ್ತಿತ್ತು. ಮುಂಬೈ ಮತ್ತು ಕರ್ನಾಟಕ ನಡುವಿನ ಒಂದು ರಣಜಿ ಪಂದ್ಯದಲ್ಲಿ ಒಂದು ತೀರ್ಪಿನ ಬಗ್ಗೆ ವಿರೋಧ ಸೂಚಿಸಲು ಗಾವಸ್ಕರ್ ಎಡಗೈಯಲ್ಲಿ ಬ್ಯಾಟಿಂಗ್ ಮಾಡಿದ್ದ. ಗಾವಸ್ಕರ್ ಭಾವ ಜಿ.ಆರ್.ವಿಶ್ವನಾಥ್ ಆಗ ಕರ್ನಾಟಕ ತಂಡದಲ್ಲಿದ್ದ.( ಗಾವಸ್ಕರನನ್ನು ಆಗೆಲ್ಲ ಗವಾಸ್ಕರ್ ಅಂತಿದ್ದುದು.) ಈ ಗಾವಸ್ಕರ್ ಮಹಾ ಪಿಸುಂಟನಾಗಿದ್ದ ಆಗ. ಸ್ವಾರ್ಥಿ ಕೂಡ. ಕಪಿಲ್ ದೇವ್ ಬಗ್ಗೆ ಗಾವಸ್ಕರ್ ಗೆ ಮತ್ಸರವಿತ್ತು ಎಂಬ ಭಾವನೆ ಆಗ ಕ್ರಿಕೆಟ್ ಪ್ರಿಯರಲ್ಲಿ ಸಾಮಾನ್ಯವಾಗಿತ್ತು. ಗಾವಸ್ಕರ್ ನಾಯಕನಾಗಿದ್ದಾಗ ಒಮ್ಮೆ ಅಕಾರಣವಾಗಿ ಕಪಿಲ್ ದೇವ್ ನನ್ನು ಒಂದು ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿತ್ತು. ಕಪಿಲ್ ದೇವ್ ಗೆ ಇದ್ದ ಒಂದೇ ಒಂದು ಡ್ರಾಬೇಕ್ ಅಂದ್ರೆ ಅವನಿಗೆ ಇಂಗ್ಲಿಷ್ ಫ್ಲುಯೆಂಟ್ ಇರಲಿಲ್ಲ. ಇಂದಿಗೂ ಅಷ್ಟೆ, ಕಪಿಲ್ ಮಾಧ್ಯಮಗಳಲ್ಲಿ ಕಾಣಿಸುವುದು ಕಡಿಮೆಯೇ. ೧೯೮೩ರಲ್ಲಿ ಲಾರ್ಡ್ಸ್ ನಲ್ಲಿ ವಿಶ್ವಕಪ್ ಕಪಿಲ್ ನಾಯಕತ್ವದಲ್ಲಿ ಗೆದ್ದರೂ ಆ ನಾಯಕತ್ವ ತುಂಬ ದೀರ್ಘ ಕಾಲ ಉಳಿಯಲಿಲ್ಲ. ಆಸ್ಟ್ರೆಲಿಯದಲ್ಲಿ ನಡೆದ ರಾಥ್ಮನ್ಸ್ ಕಪ್ ಗೆ ಗಾವಸ್ಕರ್ ನಾಯಕನಾದ. ಅದರಲ್ಲಿ ರವಿಶಾಸ್ತ್ರಿ ಸರಣಿಶ್ರೇಷ್ಟನಾದ, ಭಾರತ ಕಪ್ ಗೆದ್ದಿತ್ತು. ಗಾವಸ್ಕರ್ ಇದ್ದಾಗ ಮುಂಬೈಗೆ ಮಹತ್ವ ಇತ್ತು ತಂಡದ ಆಯ್ಕೆಯಲ್ಲಿ. ಇದೇ ಕಾರಣಕ್ಕೆ ಬಾಳ ಠಾಕ್ರೆಗೆ ಗಾವಸ್ಕರನ ಮೇಲೆ ಪ್ರೀತಿ. ಮುಂಬೈಗೆ ಪ್ರಾಧಾನ್ಯ ಕೊಡಲಿಲ್ಲ ಎಂದು ತೆಂಡುಲ್ಕರ್ ಮೇಲೆ ಕೋಪ. ಗಾವಸ್ಕರ್ ಈಗ ಒಬ್ಬ ಒಳ್ಳೆಯ ವೀಕ್ಷಕವಿವರಣೆಗಾರ ಹೌದು. ಈಗ ೨೦-೨೦ ಪಂದ್ಯಗಳಲ್ಲಿ ಹೇಗೆ ಬ್ಯಾಟನ್ನು ಬೀಸಬೇಕೆಂದು ವಿವರಿಸುವ ಗಾವಸ್ಕರ್ ಅಂದಿನ ೬೦ ಓವರುಗಳ ವಿಶ್ವಕಪ್ ಪಂದ್ಯವೊಂದರಲ್ಲಿ ಆರಂಭಿಕನಾಗಿ ಬಂದು ಇಡೀ ೬೦ ಓವರ್ ಆಡಿ ಕೇವಲ ಅಜೇಯ ೩೭ ರನ್ ಗಳಿಸಿದ್ದ ಪ್ರತಿಭಾವಂತ. ರವಿಶಾಸ್ತ್ರಿ ಕೂಡ ಹಾಗೆಯೇ. ಇಂದು ಒಳ್ಳೆಯ ವೀಕ್ಷಕವಿವರಣೆಗಾರ. ಉದಾಹರಣೆಗೆ , ಒಮ್ಮೆ ಭಾರತದ ವಿರುದ್ಧವೇ ಅಂಪೈರ್ ತೀರ್ಪು ಕೊಡುತ್ತಿದ್ದ ಒಂದು ಪಂದ್ಯದಲ್ಲಿ ಭಾರತದ ಒಬ್ಬ ಬೌಲರನ ಬಾಲು ಎದುರಾಳಿ ದಾಂಡಿಗನ ಕಾಲಿಗೆ ತಾಗಿದಾಗ ಅಂಪೈರ್ ಔಟ್ ಕೊಡಲಿಲ್ಲ .ಆಗ ಶಾಸ್ತ್ರಿ ಹೇಳಿದ್ದು ಹೀಗೆ-" ದ ಬಾಲ್ ವುಡ್ ಹೇವ್ ಡೆಫಿನಿಟ್ಲಿ ಮಿಸ್ಸ್ದ್ ದ ಲೆಗ್ ಸ್ಟಂಪ್ ಅಂಡ್ ದ ಆಫ್ ಸ್ಟಂಪ್;.......ಇಟ್ ವುಡ್ ಹೇವ್ ಹಿಟ್ ದ ಮಿಡ್ಲ್ ಸ್ಟಂಪ್ !!" - ಈ ಶಾಸ್ತ್ರಿ ಕೂಡ ಈಗ ಒಳ್ಲೆಯ ಕ್ರಿಕೆಟ್ ಅನಲಿಸ್ಟ್ ಮತ್ತು ಸ್ಟ್ರೆಟೆಜಿಸ್ಟ್ ಹೌದು. ಆದರೆ ಅವನ ಕಾಲದಲ್ಲಿ ಯಾರಾದರೂ ತುಂಬ ನಿಧಾನವಾಗಿ ಏನನ್ನಾದರೂ ಮಾಡಿದರೆ " ಶಾಸ್ತ್ರಿ ಬ್ಯಾಟಿಂಗ್ ಹಾಗೆ " ಎನ್ನಲಾಗುತ್ತಿತ್ತು. ಆದರೆ ಶಾಸ್ತ್ರಿ ಮೇಲೆ ಪಕ್ಷಪಾತದ ಆರೋಪ ಇಲ್ಲ.

೧೯೮೩ರ ಪ್ರುಡೆಂಶಿಯಲ್ ವಿಶ್ವಕಪ್ ಗೆದ್ದದ್ದು ಭಾರತದ ಕ್ರಿಕೆಟಿನಲ್ಲಿ ದೊಡ್ದ ಸಾಧನೆ ಮಾತ್ರವಲ್ಲ, ಭಾರತದಲ್ಲಿ ಕ್ರಿಕೆಟ್ ಇಷ್ಟು ಜನಪ್ರಿಯ ಆಗಲು ಮುಖ್ಯ ಕಾರಣವಾಯಿತು. ಆ ಗೆಲುವಿನ ಶ್ರೇಯಸ್ಸು ಕಪಿಲ್ ದೇವನಿಗೆ ಸಲ್ಲಬೇಕು. ಆ ಟೂರ್ನಿಯಲ್ಲಿ ಭಾರತ ಮೊದಲ ಬಾರಿಗೆ ಉತ್ತಮ ಫೀಲ್ಡಿಂಗ್ ಪ್ರದರ್ಶನ ಮಾಡಿತು. ಅದಕ್ಕಿಂತ ಕೆಲ ವರ್ಷಗಳ ಹಿಂದೆ ಸೋಲ್ಕರ್ ನ ಬ್ಯಾಟ್ ಬಳಿಯ ಫೀಲ್ಡಿಂಗ್ ಮಾತ್ರ ವಿಶ್ವದ ಗಮನ ಸೆಳೆದಿತ್ತು. ಯಶ್ಪಾಲ್ ಶರ್ಮ, ರೋಜರ್ ಬಿನ್ನಿಯಂಥವರ ಫೀಲ್ಡಿಂಗ್ ಹೆಸರು ಮಾಡಿತ್ತು. ರಿಚರ್ಡ್ಸ್ ನ ಕ್ಯಾಚೊಂದನ್ನು ಹಿಡಿದ ಕಪಿಲನಿಗೆ ಬೆಂದ ಬಿಸಿ ಬಟಾಟೆಯನ್ನು ಹಿಡಿದಂತಾಗಿತ್ತಂತೆ. ಅಂತಿಮ ಪಂದ್ಯದಲ್ಲಿ ೬೦ ಓವರುಗಳಲ್ಲಿ ಕೇವಲ ೧೪೩ ರನ್ನುಗಳ ಬೆಂಬತ್ತಿದ ವಿಂಡೀಸ್ ತಂಡ, ಮೊಹಿಂದರ್ ಅಮರನಾಥನ ಬಾಲಿಗೆ ಹೋಲ್ಡಿಂಗ್ ಎಲ್.ಬಿ.ಡಬ್ಲು. ಆಗುವುದರೊಂದಿಗೆ ಆಲೌಟಾದುದು ಮಾತ್ರವಲ್ಲ, ಅದರಿಂದಾಗಿ, ಹೊಸ , ಅದ್ಭುತ ವಾಣಿಜ್ಯ ಅವಕಾಶಗಳಿರುವ ದೇಶವೊಂದು ಕ್ರಿಕೆಟಿನಲ್ಲಿ ಎದ್ದು ಬರುವಂತಾಯಿತು. ಬಹುಶ ನಮ್ಮ ದೇಶದಲ್ಲಿ ಕ್ರಿಕೆಟ್ ಹೆಚ್ಚು ವಾಣಿಜ್ಯೀಕರಣಗೊಂಡುದು, ವಾಣಿಜ್ಯ ಸಂಸ್ಥೆಗಳ ನಡುವಿನ ಪೈಪೋಟಿಯ ಸಂಗತಿಯಾದುದು ಅಲ್ಲಿಂದ. ಅಲ್ಲಿವರೆಗೆ ಪ್ರುಡೆಂಶಿಯಲ್ ವಿಶ್ವಕಪ್ ಆಗಿದ್ದುದು ಆನಂತರ ಬೇರೆ ಬೇರೆ ವಾಣಿಜ್ಯ ಸಂಸ್ಥೆಗಳ ಹೆಸರಲ್ಲಿ ಬರಲಾರಂಭಿಸಿತು. ಭಾರತದ ಮಟ್ಟಿಗೆ ಮುಂಚೂಣಿಯಲ್ಲಿದ್ದ ರಿಲಯನ್ಸ್ ಕಂಪೆನಿ ಒಂದು ವಿಶ್ವಕಪ್ಪನ್ನು ಪ್ರಾಯೋಜಿಸಿತು.

ಸಣ್ಣ ವಯಸ್ಸಿನಿಂದಲೇ ಕ್ರಿಕೆಟ್ ಕಮೆಂಟ್ರಿ ಕೇಳಲು ಶುರು ಮಾಡಿದ್ದರಿಂದ ನನಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಅರ್ಥ ಮಾಡಿಕೊಳ್ಳಲು ತುಂಬ ಪ್ರಯೋಜನವಾಗಿದೆ. ಉದಾಹರಣೆಗೆ ಬೈಸೆಕ್ಟ್ ಎಂಬ ಇಂಗ್ಲಿಷ್ ಪದವನ್ನು ಮೊದಲು ಕೇಳಿ ನಾನು ಅರ್ಥ ಮಾಡಿಕೊಂಡದ್ದು ಕಮೇಂಟ್ರಿಯಿಂದಲೇ ಎನ್ನುವುದು ನನಗೆ ಈಗಲೂ ಸರಿಯಾಗಿ ನೆನಪಿದೆ. ಅದು ಜಿ.ಆರ್. ವಿಶ್ವನಾಥ್ ಮದ್ರಾಸಿನ ಒಂದು ಟೆಸ್ಟಿನಲ್ಲಿ ೨೨೧ ರನ್ನು ಮಾಡಿದ ಇನ್ನಿಂಗ್ಸ್ ನಲ್ಲಿ ಒಮ್ಮೆ ವೀಕ್ಷಕವಿವರಣೆಗಾರ ಹೇಳಿದ್ದು- "ಹಿ ಬೈಸೆಕ್ಟೆಡ್ ಟೂ ಫೀಲ್ಡರ್ಸ್" ಅಂತ.ಇಂಥ ಎಷ್ಟೋ ಪದಗಳನ್ನು ನಾನು ಕಲಿತದ್ದು ರೇಡಿಯೋ ವೀಕ್ಷಕವಿವರಣೆಯಿಂದ. ಆದರೆ ಕ್ರಿಕೆಟ್ ಕಮೆಂಟ್ರಿಯಿಂದ ನಾನೆಷ್ಟು ಕಳೆದುಕೊಂಡಿರಬಹುದು ಎನ್ನುವುದನ್ನು " ನಾಳೆ ಪಬ್ಲಿಕ್ ಪರೀಕ್ಷೆ , ಇಂದಾದರೂ ಆ ರೇಡಿಯೋ ಕರೇಲಿ ಮಡುಗಿ ರಜ್ಜ ಓದು " ಅಂತ ಪದೇ ಪದೇ ಪದವಿ ಮುಗಿವವರೆಗೂ ನೆನಪಿಸುತ್ತಿದ್ದ ನನ್ನ ಅಮ್ಮ ಅಜ್ಜಿಯರನ್ನು ಕೇಳಿದರೆ ಗೊತ್ತಾದೀತು. ಆಗಿನ ದಿನಗಳಲ್ಲಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೂ ಭಾರತ ಅಥವಾ ಕರ್ನಾಟಕ ತಂಡ ಕ್ರಿಕೆಟಿನಲ್ಲಿ ಗೆದ್ದಾಗ ಬಚಾವ್ ಅಂತ ಸಮಾಧಾನವಾಗುತ್ತಿತ್ತು.ಸೋತರೆ ಹೆಚ್ಚು ದುಃಖವಾಗುತ್ತಿರಲಿಲ್ಲ.ಹಾಗೆ ಸೋತಾಗಲೆಲ್ಲ ನಾವು ಸಮಾಧಾನ ಮಾಡಿಕೊಳ್ಳುತ್ತಿದ್ದುದು ಹೀಗೆ- " ಭಾರತ ಗೆದ್ದರೆ ಅಕ್ಕಿಗೇನು ರೇಟು ಕಡಿಮೆ ಆಗ್ತದೋ ಅಥವಾ ಅಡಿಕೆಗೆ ರೇಟು ಜಾಸ್ತಿ ಆಗ್ತದೋ"- ಅಂತ! ಭಾರತ ಸೋತರೆ ವೈರಾಗ್ಯ ನನಗೆ.

ಕಮೆಂಟ್ರಿಯಿಂದ ಭಾಷೆ ಕಲಿಯಲು ಸಹಾಯವಾದರೂ ಆಗುತ್ತದೆ, ಆದರೆ ಟಿ.ವಿ.ಯಿಂದ ಅಂಥ ಪ್ರಯೋಜನವಾಗಲಿಕ್ಕಿಲ್ಲ. ಇಂದು ಕ್ರಿಕೆಟ್ ಇಷ್ಟು ಜನಪ್ರಿಯ ಆದದ್ದು ಮತ್ತು ವಾಣಿಜ್ಯೀಕರಣಗೊಂಡುದು ಟಿ.ವಿ.ಯಿಂದಲೇ ಅನ್ನುವುದು ನಿಜ. ಅದನ್ನು ಹೇಸಿಗೆಯಾಗುವಷ್ಟು ವಾಣಿಜ್ಯೀಕರಣಗಿಳಿಸಿದವನು ನಮ್ಮ ಐ.ಪಿ.ಎಲ್. ಲಲಿತ್ ಮೋದಿ.

ದೊಡ್ಡ ಉದ್ಯಮಿಗಳು ಹಣ ಹೂಡುವ ವೇದಿಕೆಯಾಗಿ ಕ್ರಿಕೆಟ್ ಪಂದ್ಯಾವಳಿ ರೂಪುಗೊಂಡಾಗ ಹುರಿದುಂಬಿಗಳು( ಚೀರ್ ಗರ್ಲ್ಸ್) ಕುಣಿಯಲಾರಂಬಿಸಿದರು.ಅದಕ್ಕಿಂತ ಹೆಚ್ಚಾಗಿ ಬೇಂದ್ರೆಯವರು ಹೇಳುವಂತೆ ಕುರುಡುಕಾಂಚಾಣ ಕುಣಿಯಲಾರಂಭಿಸಿತು.ವಿಜಯ ಮಲ್ಯ,ನೀತಾ ಅಂಬಾನಿಯಂಥವರು ಮೈದಾನದಲ್ಲಿ ಬೊಬ್ಬೆ ಹೊಡೆದು, ಆಟಗಾರರನ್ನು ಅಪ್ಪಿ ಕುಣಿದಾಡುತ್ತಾರೆ ಎಂದರೆ ಅದಕ್ಕೆ ನಮ್ಮಂಥ ಅಮಾಯಕರಿಗೆ ಕ್ರಿಕೆಟ್ ಬಗ್ಗೆ ಇರುವಂಥ ಹುಚ್ಚು ಪ್ರೀತಿ ಮಾತ್ರ ಕಾರಣವಲ್ಲ. ಅದು ಜಾಹಿರಾತಿನ ಖರ್ಚಿಲ್ಲದೆ ಕೋಟ್ಯಂತರ ಜನರನ್ನು ತಲುಪುವ ದಾರಿಯು ಹೌದು. ಹಣ ಮತ್ತು ಪ್ರಭಾವಗಳ ಅಸಹ್ಯ ಪ್ರದರ್ಶನವೂ ಹೌದು. .ಪಿ.ಎಲ್ಲಿನ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಕೊನೆಯ ಹದಿನೈದು ಚೆಂಡುಗಳಲ್ಲಿ ಅದ್ಭುತವಾಗಿ ಆಡಿ ನಲವತ್ತಕ್ಕಿಂತಲೂ ಹೆಚ್ಚು ರನ್ನು ಗಳಿಸಿ ಸೆಮಿಫೈನಲಿಗೆ ಅರ್ಹತೆ ಗಳಿಸಿದಾಗ ಚೆನ್ನೈ ತಂಡದ ನಾಯಕ ಧೋನಿ ಹೇಳಿದ ಮಾತು ಮಾರ್ಮಿಕವಾಗಿತ್ತು.-"ನಮ್ಮ ಮಾಲಿಕರು ನಮ್ಮ ಮೇಲೆ ಇಷ್ಟು ಹಣ ಹೂಡಿರುವಾಗ ಗೆಲ್ಲಲೇಬೇಕಾದುದು ನಮ್ಮ ಕರ್ತವ್ಯ". ಹೀಗೆ ದೇಶಕ್ಕಾಗಿ, ತಂಡಕ್ಕಾಗಿ,ಆಟದ ಮೇಲಿನ ಪ್ರೀತಿಗಾಗಿ ಎಂಬ ಮಾತುಗಳ ಬದಲಾಗಿ "ಹಣಕ್ಕಾಗಿ" ಎಂಬ ಹೊಸ ನುಡಿಗಟ್ಟು ಬಂದುದು ಐ.ಪಿ.ಎಲ್. ವೈಶಿಷ್ಟ್ಯ.

ಕ್ರೀಡೆಗಳ ಅಂಕಿಅಂಶ ಪ್ರಿಯರಿಗೆ ಕ್ರಿಕೆಟ್ ಆಟದಷ್ಟು ಆಹಾರ ಒದಗಿಸುವ ಬೇರೆ ಆಟವಿಲ್ಲ. ನೀವೂ ಅಂಕಿಅಂಶ ಪ್ರಿಯರಾದರೆ ಈ ಮುಂದಿನ ಅಂಕಿಅಂಶಗಳನ್ನು ನೋಡಿ; ೫೭ ಪಂದ್ಯಗಳು, ೧೭೧ ಗಂಟೆಗಳ ಕ್ರಿಕೆಟ್,೫೪ ಪಾರ್ಟಿಗಳು, ೨೭೦ ಗಂಟೆಗಳ ಮೇಜವಾನಿ, ,೨೯,೦೦೦ ಬಾಟಲಿ ಬೀರು, ೨೭,೦೦೦ ಬಾಟಲಿ ವಿಸ್ಕಿ,,ಪ್ರತಿ ಪಾರ್ಟಿಯಲ್ಲಿ ಸರಾಸರಿ ೫೦೦ ಮಂದಿ, ಪ್ರತಿರಾತ್ರಿ ಸರಾಸರಿ ೩೨ ವಸ್ತ್ರವಿನ್ಯಾಸಗಳ( ಮತ್ತು ದೇಹದ ) ಪ್ರದರ್ಶನ. ಹೌದು.ಇದು ಐ.ಪಿ.ಎಲ್.ಕೊನೆ ಹಂತಕ್ಕಾಗುವಾಗ ಮಾಧ್ಯಮಗಳಲ್ಲಿ ಗಮನಸೆಳೆದ ಒಂದು ಅಂಕಿಅಂಶ. ಇದೇ ಐ.ಪಿ.ಎಲ್. ವಿಶೇಷತೆ. .ಪಿ.ಎಲ್ ನಲ್ಲಿ ಹೆಚ್ಚು ಆಟ ನಡೆದದ್ದು ಮೈದಾನದ ಹೊರಗೆಯೇ. ಈ ಬಾರಿಯ ಐ.ಪಿ.ಎಲ್. ಪಂದ್ಯಾವಳಿಯಲ್ಲಿ ಧೋನಿಯ ಚೆನ್ನೈ ತಂಡ ಗೆದ್ದಿತು. ಆದರೆ ಒಟ್ಟಾರೆಯಾಗಿ ಸೋತದ್ದು ಯಾರು? ನಿಜವಾಗಿ ಸೋತದ್ದು ಯಾರೆಂದರೆ, ಹಣ ಹೆಣ್ಣು ಹೆಂಡ ಜೂಜುಗಳ ನಡುವೆ ಕಳೆದು ಹೋದ ಕ್ರಿಕೆಟ್ ಮತ್ತು ಆ ಕ್ರಿಕೆಟಿಗಾಗಿ ತಮ್ಮೆಲ್ಲ ಶ್ರಮ ಮತ್ತು ಸಮಯ ವ್ಯಯಿಸುವ ಕೋಟ್ಯಂತರ ಕ್ರಿಕೆಟ್ ಹುಚ್ಚರು !!