ಶೇಷಾದ್ರಿವಾಸು ಚಂದ್ರಶೇಖರ್, ಶೇಖರಪೂರ್ಣರಂಥವರ ಸಾಧನೆಗಳು ಯುವಜನತೆಗೆ ಮಾದರಿ : ನಿರ್ದೇಶಕ ಪಿ ಶೇಷಾದ್ರಿ
ಕಂಪ್ಯೂಟರ್ ಪರದೆಯ ಹೊರಗಿನ ಬದುಕನ್ನು ನಿರ್ಲಕ್ಷಿಸಿ ಆರಾಮ ಕುರ್ಚಿಯ ವಾದಸರಣಿಯನ್ನು ಮಂಡಿಸುವವರ ನಡುವೆ, ಕಂಪ್ಯೂಟರ್ ಮೂಲಕ ಕನ್ನಡದ ಕಂಪನ್ನು ಇಡೀ ಜಗತ್ತಿಗೆ ಪಸರಿಸುವಂತೆ ಮಾಡಿರುವ ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ಪರಿಶ್ರಮವು ಬಹುದೊಡ್ಡ ಕನ್ನಡ ಸೇವೆಯಾಗಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ ಅವರು ಮುಕ್ತಕಂಠದಿಂದ ವರ್ಣಿಸಿದರು.
ಅವರು ದಿನಾಂಕ ೯.೧೨.೨೦೦೬ ರಂದು ಭಾನುವಾರ ಬೆಳಿಗ್ಗೆ ತುಮಕೂರು ನಗರದಲ್ಲಿ ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ತುಮಕೂರು ಬೆಂಬಲಿಗರ ಬಳಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೂರದ ಅಮೇರಿಕದಲ್ಲಿ ಕುಳಿತು `ಬರಹ` ಕನ್ನಡ ತಂತ್ರಾಂಶ ರೂಪಿಸಿ ಉಚಿತವಾಗಿ ಬಳಕೆಗೆ ನೀಡಿರುವ ಶೇಷಾದ್ರಿವಾಸು ಚಂದ್ರಶೇಖರನ್ ಮತ್ತು ಕನ್ನಡ ಸಾಹಿತ್ಯ ಡಾಟ್ ಕಾಮ್ ರೂಪಿಸಿ ಕನ್ನಡ ಸಾಹಿತ್ಯದ ಕಂಪನ್ನು ಜಗತ್ತಿಗೆ ಪರಿಚಯಿಸುತ್ತಿರುವ ಬೆಂಗಳೂರಿನ ಶೇಖರ್ ಪೂರ್ಣ ಅವರು ಬಹುದೊಡ್ಡ ಕನ್ನಡ ಸೇವೆ ಮಾಡುತ್ತಿದ್ದಾರೆ. ಅಲ್ಲದೆ ಸರ್ಕಾರದ ಮುಂದೆ ಕೈಚಾಚದಿರುವುದು ಇವರಿಬ್ಬರ ದೊಡ್ಡಗುಣ ಎಂದು ಮೆಚ್ಚುಗೆಯಿಂದ ನುಡಿದರು.
ಇಂದು ೯೦ ಕ್ಕೂ ಹೆಚ್ಚು ಕನ್ನಡದ ಬರಹಗಾರರ ೩೦೦ ಕ್ಕೂ ಅಧಿಕ ಕೃತಿಗಳು ವೆಬ್ ಸೈಟ್ ಮೂಲಕ ಇಡೀ ಜಗತ್ತಿಗೇ ಲಭ್ಯವಾಗುವಂತೆ ಮಾಡಿರುವುದು http://kannadasaahithya.com ನ ಅದ್ಭುತ ಸಾಧನೆಯಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಕುಳಿತು ಇಂಟರ್ ನೆಟ್ ಮೂಲಕ ಈ ಕೃತಿಗಳನ್ನು ಓದಬಹುದಾಗಿದೆ ಎಂದು ಹೇಳಿದ ಅವರು, ಬದಲಾಗುತ್ತಿರುವ ಸಂದರ್ಭದಲ್ಲಿ ಇಂತಹ ಪ್ರಯತ್ನಗಳು ಕನ್ನಡಕ್ಕೆ ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದರು.
ಜಗತ್ತಿನಲ್ಲಿ ವೇಗವಾಗಿ ನಶಿಸುತ್ತಿರುವ ಭಾಷೆಗಳಲ್ಲಿ ಕನ್ನಡವೂ ಒಂದೆಂಬ ವರದಿಯೊಂದನ್ನು ಉಲ್ಲೇಖಿಸಿದ ಶೇಷಾದ್ರಿ, ಇಂದು ಕರ್ನಾಟಕ ಸರ್ಕಾರವು ಎಲ್ಲ ಪ್ರಾಥಮಿಕ ಶಾಲೆಗಳ ಕಂಪ್ಯೂಟರ್‌ಗಳಲ್ಲೂ ಉಚಿತವಾಗಿ ಲಭ್ಯವಿರುವ ಬರಹ ಮತ್ತು ನುಡಿ ತಂತ್ರಾಂಶಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ಸಂಸ್ಥಾಪಕರೂ, ಸಂಪಾದಕರೂ ಆದ ಶೇಖರ್ ಪೂರ್ಣ ಅವರು ಮಾತನಾಡಿ, ಕಂಪ್ಯೂಟರ್ ಮಾಧ್ಯಮದಲ್ಲಿ ಇಂದು ಕನ್ನಡ ಮೃತ ಭಾಷೆಯಾಗಿದೆ ಎಂದು ಆತಂಕದಿಂದ ನುಡಿದರು.
ಕನ್ನಡದಲ್ಲಿ ಇನ್ನೂ ಹೊಸ ತಂತ್ರಾಂಶಗಳು ರೂಪುಗೊಳ್ಳಬೇಕಿದ್ದು, ತಂತ್ರಜ್ಞರು ಹಾಗೂ ತಾಂತ್ರಿಕ ಕಾಲೇಜುಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲಗೊಳ್ಳಬೇಕಿದೆ. ಪ್ರಾಥಮಿಕ ಶಾಲೆಯಲ್ಲೇ ಕನ್ನಡ ಪರಿಸರ ರೂಪಿಸಿ, ಕಂಪ್ಯೂಟರ್‌ನಲ್ಲಿ ಕನ್ನಡ ಸಾಧ್ಯತೆಗಳನ್ನು ಮಕ್ಕಳ ಮುಂದೆ ತೆರೆದಿಡಬೇಕು. ಬರಹ ಮತ್ತು ನುಡಿ ತಂತ್ರಾಂಶವನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕು. ರಾಜ್ಯದಲ್ಲಿ ಮಾರಾಟವಾಗುವ ಕಂಪ್ಯೂಟರ್‌ಗಳಲ್ಲಿ ಕನ್ನಡದ ಇವೆರಡು ಉಚಿತ ತಂತ್ರಾಂಶಗಳನ್ನು ಅಳವಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.
ತಂತ್ರಜ್ಞಾನವನ್ನು ಜನರ ಬಳಿಗೆ ತರುವಷ್ಟೇ ಪ್ರಮುಖವಾಗಿ ಜನರ ಭಾಷೆಯನ್ನೂ ಅದರಲ್ಲಿ ಅಳವಡಿಸಬೇಕು . ಆಗ ಮಾತ್ರ ಅದರ ಉದ್ದೇಶ ಸಾರ್ಥಕವಾಗುತ್ತದೆ ಎಂದು ಒತ್ತಿ ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀ ಸಿದ್ಧಾರ್ಥ ತಾಂತ್ರಿಕ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ|| ಕರುಣಾಕರ್ ಅವರು ಮಾತನಾಡಿ, ತಮ್ಮ ಕಾಲೇಜಿನಲ್ಲಿ ಈಗಾಗಲೇ ಕನ್ನಡ ಬ್ರೌಸರ್ ಬಗ್ಗೆ ಸಂಶೋಧನೆ ಮಾಡಿದ್ದು, ಅದು ಪ್ರಗತಿಯ ಹಂತದಲ್ಲಿದೆ ಎಂದರು.
ಪ್ರಜಾಪ್ರಗತಿ ಸಂಪಾದಕರಾದ ಎಸ್. ನಾಗಣ್ಣ, ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಆರ್.ಎಸ್.ಸದಾನಂದ, ನೀರಾವರಿ ತಜ್ಞ ಸಂಪಿಗೆ ಜಗದೀಶ್, ಎಚ್.ಎಂ.ಎಸ್. ತಾಂತ್ರಿಕ ಕಾಲೇಜಿನ ಪ್ರಾಚಾರ್ಯರಾದ ಡಾ|| ಎಸ್. ಕೆ. ನಾರಾಯಣ, ಎಸ್.ಬಿ.ಎಂ. ಅಧಿಕಾರಿಗಳ ಒಕ್ಕೂಟದ ಕೊಪ್ಪಲ್ ನಾಗರಾಜ್, ನಿವೃತ್ತ ಜಂಟಿ ನಿರ್ದೇಶಕ ಕೆ.ದೊರೈರಾಜ್ ಮುಖ್ಯ ಅತಿಥಿಗಳಾಗಿ ಮಾತನಾಡಿ , ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ಸಾಧನೆ - ಪರಿಶ್ರಮಗಳನ್ನು ಶ್ಲಾಘಿಸಿ, ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಸಿದ್ಧಗಂಗಾ ತಾಂತ್ರಿಕ ಕಾಲೇಜಿನ ನಿರ್ದೇಶಕರಾದ ಡಾ|| ಎಂ.ಎನ್. ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ತಂತ್ರಜ್ಞ ಅರೆಹಳ್ಳಿ ರವಿ ಅವರು ಬರಹ ಬಗ್ಗೆ ಪ್ರಾತ್ಯಕ್ಷತೆ ಯೊಂದಿಗೆ ವಿವರಿಸಿದರು. ಸಂಚಾಲಕರಾದ ಎಂ.ಎನ್. ಕೋಟೆ ನಾಗಭೂಷಣ್ ಸ್ವಾಗತಿಸಿದರು. ಸಂಚಾಲಕ ಆರ್.ಎಸ್. ಅಯ್ಯರ್ ಕಾರ್ಯಕ್ರಮ ನಿರೂಪಿಸಿದರು. ಹಾಲಿ ಇಂಗ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಿವಾಸಿ ಸಿ.ವಿ. ಸತೀಶ್ ಅವರು ಸ್ವಯಂ ಆಸಕ್ತಿಯಿಂದ ಆಗಮಿಸಿ, ಮಾತನಾಡಿದ್ದು ವಿಶೇಷವಾಗಿತ್ತು. ಸಮಾರಂಭದಲ್ಲಿ ನೂರಕ್ಕೂ ಅಧಿಕ ಗಣ್ಯರು ಭಾಗವಹಿಸಿದ್ದರು.