ಎಲ್ಲೆಲ್ಲಿ ಹುಡುಕುವೆಯೇಕೆ?

ಎಲ್ಲೆಲ್ಲಿ ಹುಡುಕುವೆಯೇಕೆ?

ನಿನ್ನೊಳಗೇ ನಾನಿಹೆನು

ಸತ್ಕಾರ್ಯಗಳ ಮಾಡಿ

ಪ್ರೀತಿಯ ನುಡಿಗಳನಾಡಿ

ನಿನ್ನಾತ್ಮವ ಮೆಚ್ಚಿಸಿಕೋ

 

ನನಗೆ ಮಡಿಯ ಮಾಡಿಸಲು

ನೀನು ನೀರನ್ನೆಲ್ಲಿಂದ ತರುವೆ

ನೀನೇ ಹಸಿದಿದ್ದು ಒಳಗಿರುವ

ನನ್ನನ್ನೇಕೆ ಬರಿದೆ ಕೊಲುವೆ

 

ದೇಗುಲದಾ ಶಿಲೆಗಳಲಿ

ನಾನಿಲ್ಲ ಎಂದೆನ್ನುವೆಯಾ

ನೀ ಕಾಂಬ ದೃಷ್ಟಿಯಲೇ

 ನಾನಿಹೆನು ಅರಿತಿಹೆಯಾ

 

ಸೂರ್ಯಂಗೇ ಹಣತೆಯ

ಸಾಲು ದೀಪಗಳನು ಹಚ್ಚಿ

ದಾರಿ ತೋರುವ ನಿನ್ನ

ಹುಚ್ಚುತನಕೇನೆಂಬೆ

 

ಬಲ್ಲವರೆಂದನುತಿರುವೆ

ಅವರ ಮಾತನೇ ಏಕೆ

ಅನುಮಾನಿಸುತಿರುವೆ

ನಿನ್ನೊಳಗೆ ನಾನಿಹೆನು

 

ಮಾಯದಾ ಪೊರೆಯ

ಮರೆಮಾಡಿ ನೋಡು

ಅಂತರ್ಮುಖಿಯಾಗು

ಕರುಣಿಸುವೆ ನಿನಗೆ ನಾ

ನಾ ವಿಶ್ವದರ್ಶನವನ್ನು!

------------

 

ಆತ್ರಾಡಿ ಸುರೇಶ ಹೆಗ್ಡೆ

ಶ್ರೀ ಹರಿಹರಪುರ ಶ್ರೀಧರ್ ಅವರ "ಎಲ್ಲಿ ಹುಡುಕಲಿ ನಿನ್ನ?" ಎನ್ನುವ ಕವನಕ್ಕೆ 

ಪ್ರತಿಕ್ರಿಯೆಯ ರೂಪದಲ್ಲಿ ಹೊರಬಂದ ಮಾತುಗಳಿವು.

 

 "ಎಲ್ಲಿ ಹುಡುಕಲಿ ನಿನ್ನ?" http://sampada.net/article/24886

Rating
No votes yet

Comments