ವಕಾಲತ್ತಿಗೆ ಹೊಸ ಗತ್ತು!
ವಕಾಲತ್ತಿಗೆ ಹೊಸ ಗತ್ತು!
ಹಕ್ಕುಸ್ವಾಮ್ಯ,ಕಂಪೆನಿಗಳ ವಿಲಯನ,ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳ ಸಾಕ್ಷ್ಯಸಂಗ್ರಹದ ಮೂಲಕ ಕಂಪ್ಯೂಟರ್ ಅಪರಾಧಗಳ ವಿಚಾರಣೆಗೆ ನೆರವು ಮುಂತಾದ ಹಲವಾರು ಕ್ಷೇತ್ರಗಳಲ್ಲಿ ವಕೀಲರ ಸೇವೆಯ ಹೊರಗುತ್ತಿಗೆಗೆ ಬಹಳ ಬೇಡಿಕೆಯಿದೆ.ಪಂಗಿಯಾ3ದಂತಹ ನ್ಯಾಯಾಂಗ ಸೇವೆಯ ಹೊರಗುತ್ತಿಗೆಯಲ್ಲಿ ತೊಡಗಿರುವ ಕಂಪೆನಿಗಳು ಸದ್ಯ ನೇಮಕಾತಿ ಪ್ರಕ್ರಿಯೆಯತ್ತ ಗಮನ ಹರಿಸುತ್ತಿವೆ.ಇದಲ್ಲದೆ,ನ್ಯಾಯಾಂಗ ಕ್ಷೇತ್ರದಲ್ಲೂ ದತ್ತಾಂಶ ನಮೂದಿಸುವ ಸೇವೆ,ಅರೆನ್ಯಾಯಾಂಗ ಸೇವೆಯಂತಹ ಕೆಳಮಟ್ಟದ ಹೊರಗುತ್ತಿಗೆಯೂ ಲಭ್ಯವಿದೆ.
ಇದೇ ವೇಳೆ ಸಂಶೋಧನೆಯ ಕ್ಷೇತ್ರದಲ್ಲೂ ಹೊರಗುತ್ತಿಗೆಯ ಅವಕಾಶ ಧಾರಾಳವಾಗಿದೆ.ಇಂಜಿನಿಯರಿಂಗ್ ಸಂಶೋಧನೆಯು ಹೆಚ್ಚು ಅವಕಾಶವನ್ನು ಸೃಷ್ಟಿಸುತ್ತಿದೆ.ಸದ್ಯ ಈ ಕ್ಷೇತ್ರವು ಎಂಟು ಬಿಲಿಯನ್ ಡಾಲರು ಗಳಿಕೆಯನ್ನು ಮಾಡುತ್ತಿದ್ದು,ಇನ್ನು ಹತ್ತು ವರ್ಷಗಳಲ್ಲಿ ಇದು ನಲುವತ್ತೈದು ಬಿಲಿಯನ್ ಡಾಲರು ಪ್ರಮಾಣಕ್ಕೆ ಏರಬಹುದು ಎಂದು ನಾಸ್ಕಾಂನ ಅಂದಾಜು.
--------------------------------------------
ಹರಾಜು ಪ್ರಕ್ರಿಯೆಗೆ ಕಂಪ್ಯೂಟರ್
ತ್ರೀಜಿ ಮೊಬೈಲ್ ಸೇವೆಗಳನ್ನೊದಗಿಸಲು,ತರಂಗಾಂತರವನ್ನು ಹರಾಜು ಹಾಕುವ ಪ್ರಕ್ರಿಯೆಗೆ ಕಂಪ್ಯೂಟರ್ ಬಳಸಿ ಆನ್‌ಲೈನ್ ಹರಾಜು ನಡೆಸುವ ಸರಕಾರದ ಪ್ರಕ್ರಿಯೆ ಪೂರ್ಣವಾಗಿದೆ.ಹರಾಜು ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಮುಗಿದು,ಸರಕಾರದ ಖಜಾನೆಗೆ ಅರುವತ್ತೇಳು ಸಾವಿರ ಕೋಟಿ ರೂಪಾಯಿಗಳ ಲಾಭವಾಗಲಿದೆ.ಸಾಮಾನ್ಯ ಹರಾಜು ಪ್ರಕ್ರಿಯೆಯಾದರೆ,ಅದರಲ್ಲಿ ಲಾಭದ ದುರಾಸೆಯಿಂದ ಅಡ್ಡಾದಿಡ್ಡಿ ಹರಾಜು ಮೊತ್ತವನ್ನು ಹೆಚ್ಚಿಸುವಂತಹ ಅಕ್ರಮಗಳು ನಡೆಯುತ್ತವೆ.ಆನ್‌ಲೈನ್ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದ್ದು,ಹರಾಜು ಮೊತ್ತವನ್ನು ಕ್ರಮಕ್ರಮವಾಗಿ ಏರಿಸಲು ಅವಕಾಶವಿತ್ತು.ಹೀಗಾಗಿ ಹರಾಜು ಸತತವಾಗಿ ಮೂವತ್ತನಾಲ್ಕು ದಿನ ನಡೆದು,ನೂರಂಭೆತ್ತಮೂರು ಸುತ್ತುಗಳ ಹರಾಜು ನಡೆಯಿತು.
ಅಖಿಲ ಭಾರತ ಲೈಸೆನ್ಸನ್ನು ಯಾವ ಕಂಪೆನಿಯೂ ಪಡೆಯಲು ಮುಂದಾಗದಿದ್ದುದು ವಿಶೇಷ.ಅದರ ಬದಲು ಕೆಲವು ಲಾಭದಾಯಕವಾಗಬಲ್ಲ ವೃತ್ತಗಳ ಲೈಸೆನ್ಸ್ ಪಡೆಯಲು ಪೈಪೋಟಿ ನಡೆಸಿದವು.ಇದು ಗ್ರಾಹಕರಿಗೆ ವರದಾನವಾಗುವ ಸಂಭವವಿದೆ.ಒಂದು ವೃತ್ತದಲ್ಲಿ ತನ್ನ ಸೇವೆಯನ್ನೊದಗಿಸಲು ಕಂಪೆನಿಯು ಇತರ ಕಂಪೆನಿಗಳ ಜತೆ ಸಹಯೋಗಕ್ಕೆ ಮುಂದಾಗದೆ ಅನ್ಯ ಮಾರ್ಗವಿಲ್ಲದ ಕಾರಣ,ಪ್ರತಿ ಕಂಪೆನಿಯೂ ಇತರ ಕಂಪೆನಿಗೆ ರೋಮಿಂಗ್ ಸೇವೆಗಳ ವಿಷಯದಲ್ಲಿ ಸಹಕಾರ ನೀಡಲು ಮುಂದಾಗಬೇಕಿದೆ.ಬಹುಶ: ರೋಮಿಂಗ್ ಸೇವೆಗಳು ದುಬಾರಿಯಾಗದಿರಲು ಇದು ನೆರವಾದೀತು.ಸೆಪ್ಟೆಂಬರ್ ನಂತರ ಖಾಸಗಿ ಕಂಪೆನಿಗಳ ತ್ರೀಜಿ ಸೇವೆ ನೀಡಲು ಪರವಾನಗಿ ಇದೆಯಾದರೂ,ತಂತ್ರಜ್ಞಾನವನ್ನು ಅಳವಡಿಸಲು ಸಮಯ ತಗಲುವ ಕಾರಣ,ವರ್ಷಾಂತ್ಯದಲ್ಲಿ ತ್ರೀಜಿ ಸೇವೆ ದೊರಕಬಹುದು.ಕರ್ನಾಟಕದಲ್ಲಿ ಭಾರ್ತಿ ಏರ್‌ಟೆಲ್,ಟಾಟಾಟೆಲಿ,ಏರ್‌ಸೆಲ್ ಕಂಪೆನಿಗಳು ಪರವಾನಗಿ ಗಿಟ್ಟಿಸಿವೆ.ಇಪ್ಪತ್ತೆರಡು ವೃತ್ತಗಳನ್ನು ಏಳು ಸೇವಾಪೂರೈಕೆದಾರರು ಹಂಚಿಕೊಂಡಿದ್ದಾರೆ.ತ್ರೀಜಿ ಸೇವೆಯ ಮೂಲಕ ಸುಮಾರು ಅರುವತ್ತು ಕೋಟಿ ಗ್ರಾಹಕರ ಚಂದಾದಾರಿಕೆಯ ಲಾಭದ ಮೇಲೆ ಕಣ್ಣಿಟ್ಟಿರುವ ಕಂಪೆನಿಗಳು,ಹೆಚ್ಚು ಗ್ರಾಹಕರನ್ನು ಪಡೆಯ ಬೇಕಿದ್ದರೆ,ಅಗ್ಗದದರದಲ್ಲಿ ಸೇವೆ ಒದಗಿಸುವುದು ಅನಿವಾರ್ಯವಾಗಿದೆ.ಹಾಗೆಯೇ ಹ್ಯಾಂಡ್‌ಸೆಟ್‌ಗಳ ದರವೂ ಪ್ರಸಕ್ತ ಲಭ್ಯವಿರುವ ಐದುಸಾವಿರಕ್ಕಿಂತ ಅರ್ಧಕ್ಕರ್ಧ ಇಳಿಯದೇ ಇರದು.ಕಾದು ನೋಡುವ ತಂತ್ರ ಬಳಸುವ ಗ್ರಾಹಕರು,ಸ್ಪರ್ಧೆಯ ಗರಿಷ್ಠ ಪ್ರಯೋಜನ ಪಡೆಯುವುದರಲ್ಲಿ ಸಂಶಯವಿಲ್ಲ.
ತ್ರೀಜಿ ತರಂಗಾಂತರ ಗುಚ್ಛ ಅರುವತ್ತೇಳು ಸಾವಿರ ಕೋಟಿ ಗಳಿಸಿದ್ದರೆ,ಹಿಂದೆ 2ಜಿ ಗುಚ್ಛದಿಂದ ಸರಕಾರ ಗಳಿಸಿದ್ದು ಇದರ ಹತ್ತನೇ ಒಂದುಪಾಲು ಹಣ ಮಾತ್ರಾ ಆಗಿತ್ತು.ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.
------------------------------------------------------------------
ಅಂತರ್ಜಾಲದಲ್ಲಿ ಖಾಸಗಿತನ ಅಂತರ್ಧಾನ
ಫೇಸ್‌ಬುಕ್ ಅಂತಹ ತಾಣದಲ್ಲಿ ಜಾಹೀರಾತು ಕ್ಲಿಕ್ಕಿಸಿದ ಗ್ರಾಹಕನ ಬಳಕೆದಾರನ ಹೆಸರು ಜಾಹೀರಾತುದಾರ ಕಂಪೆನಿಗೆ ತಿಳಿಯುವಂತೆ,ಪೇಸ್‌ಬುಕ್ ತಾಣದಲ್ಲಿ ವ್ಯವಸ್ಥೆಯಿರುವುದು ಸಂಶೋಧನೆಯಿಂದ ವ್ಯಕ್ತವಾಗಿದೆ.ಡಿಗ್,ಮೈಸ್ಪೇಸ್ ಅಂತಹ ಸಾಮಾಜಿಕ ಜಾಲತಾಣಗಳೂ ಇಂತಹ ಪ್ರವೃತ್ತಿಯನ್ನು ಹೊಂದಿರುವುದು,ಅವುಗಳ ತಾಣಗಳ ತಂತ್ರಾಂಶ ಸಾಲನ್ನು ಪರೀಕ್ಷಿಸಿದ ಸಂಶೋಧಕರಿಗೆ ಸ್ಪಷ್ಟವಾಗಿದೆ.ಇದು ವ್ಯಕ್ತಿಯ ಖಾಸಗಿತನದ ವಿರುದ್ಧವೆಂದು ಹಲವರ ಅಭಿಪ್ರಾಯವಾಗಿದ್ದು,ತಾಣಗಳ ನೀತಿಗೆ ವಿರೋಧ ವ್ಯಕ್ತವಾಗತೊಡಗಿದೆ.ಪೇಸ್‌ಬುಕ್ ಅಂತಹ ತಾಣಗಳಿಂದ ಸದಸ್ಯತ್ವವನ್ನು ಹಿಂಪಡೆಯುವ ಅಭಿಯಾನವನ್ನು ನಡೆಸುತ್ತಿರುವ ಅಂತರ್ಜಾಲತಾಣಗಳೂ ಇವೆ.
--------------------------------------------
ಟಿವಿ-ಅಂತರ್ಜಾಲ ಬೆಸೆಯಲಿರುವ ಗೂಗಲ್
ಜಗತ್ತಿನಲ್ಲಿ ನಾಲ್ಕುನೂರು ಕೋಟಿ ಜನರು ಟಿವಿ ವೀಕ್ಷಣೆಯಲ್ಲಿ ತೊಡಗುತ್ತಾರೆ.ಅಮೆರಿಕಾದ ಜನರು ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಟಿವಿ ವೀಕ್ಷಣೆಯಲ್ಲಿ ತೊಡಗಿರುವುದು ಸಾಮಾನ್ಯ.ಆದರೆ ನೂರಾರು ಚಾನೆಲ್‌ಗಳ ಕಾರ್ಯಕ್ರಮ ಪಟ್ಟಿಯನ್ನು ಜಾಲಾಡಿ,ನಮಗಿಷ್ಟವಾದ ಕಾರ್ಯಕ್ರಮದ ವೇಳೆಯನ್ನು ಪತ್ತೆ ಹಚ್ಚಿ,ಆ ವೇಳೆಗೆ ಸರಿಯಾಗಿ ಟಿವಿಯ ಮುಂದೆ ಕುಳಿತು ಟಿವಿ ವೀಕ್ಷಿಸುವುದು,ಈಗಿನ ಜನರಿಗೆ ಕಷ್ಟವೆನಿಸತೊಡಗಿದೆ.ಅಂತರ್ಜಾಲವು ಸುಲಭ ಶೋಧ ಸೌಕರ್ಯವನ್ನು ಕೊಡುವುದು,ನೇರ ಟಿವಿ ಪ್ರಸಾರವನ್ನೂ ಒದಗಿಸುತ್ತಿರುವ ಕಾರಣ,ಟಿವಿ ಕಾರ್ಯಕ್ರಮಗಳನ್ನು ಕಂಪ್ಯೂಟರಿನಲ್ಲಿ ನೋಡುವವರೂ ಹೆಚ್ಚುತ್ತಿದ್ದಾರೆ.ಇದನ್ನು ಮನಗಂಡು ಗೂಗಲ್ ಇನ್ನು "ಗೂಗಲ್ ಟಿವಿ"ಯನ್ನು ಒದಗಿಸಲು ಯೋಜಿಸಿದೆ.ಇದರ ಮೂಲಕ ಟಿವಿಯ ಮೂಲಕವೇ ಅಂತರ್ಜಾಲವನ್ನೂ ನೋಡಬಹುದು.ಗೂಗಲ್ ಕ್ರೋಮಿನ ಮೂಲಕ ಶೋಧ ನಡೆಸಿ,ಟಿವಿ ಕಾರ್ಯಕ್ರಮಗಳನ್ನು ನೋಡಬಹುದು.ಆಟಗಳನ್ನೂ ಆಡಬಹುದು.ಇಲ್ಲವೇ ಅಂತರ್ಜಾಲದಲ್ಲಿರುವ ಬಂಧು ಮಿತ್ರರ ಚಿತ್ರಗಳನ್ನೂ ಟಿವಿಯಲ್ಲಿಯೇ ನೋಡಬಹುದು.ಶೋಧ ಕಾರ್ಯವನ್ನೂ ನಡೆಸಬಹುದು.
ಸೆಟ್‌ಟಾಪ್ ಪೆಟ್ಟಿಗೆ,ಸೋನಿ ಕಂಪೆನಿ ನಿರ್ಮಿತ ಗೂಗಲ್ ಟಿವಿಗಳೂ ಲಭ್ಯವಾಗಲಿವೆ.ಜತೆಗೆ ಅಂತರ್ಜಾಲ ತಾಣಗಳು ಗೂಗಲ್ ಟಿವಿಗೆ ತಮ್ಮನ್ನು ಅಣಿಗೊಳಿಸಲು ಸಹಾಯವನ್ನೂ ಗೂಗಲ್ ಒದಗಿಸಲಿದೆ.ತಂತ್ರಾಂಶ ಅಭಿವೃದ್ಧಿ ಪಡಿಸುವವರು,ಗೂಗಲ್ ತಂತ್ರಾಂಶ ಅಭಿವೃದ್ಧಿ ಕಿಟ್‌ಗಳನ್ನು ಬಳಸಿ,ಹೊಸ ಸೇವೆಗಳಿಗೆ ಗೂಗಲ್ ಟಿವಿಯನ್ನು ಸಜ್ಜುಗೊಳಿಸಬಹುದು.ವಿವರಗಳಿಗೆ http://www.google.com/tv/ ನೋಡಬಹುದು.ಯುಟ್ಯೂಬ್ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ನೋಡುವುದು,ಅಂತರ್ಜಾಲದಲ್ಲಿ ಲಭ್ಯವಿರುವ ಹಳೆಯ ಟಿವಿ ಶೋಗಳನ್ನು ನೋಡುವುದಾಗಲಿ,ಹಾಡುಗಳನ್ನು ಕೇಳುವುದಾಗಲಿ ಇವನ್ನು ಟಿವಿಯ ಮೂಲಕವೇ ಮಾಡಬಹುದು.ಒಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹುಡುಕುವ ಸಮಯ ಕಡಿಮೆ ಮಾಡಿ,ಸುಲಭವಾಗಿ ಮನಸ್ಸಿಗೆ ಇಷ್ಟವಾದ ಕಾರ್ಯಕ್ರಮಗಳನ್ನು ನೋಡಲು ಗೂಗಲ್ ಟಿವಿ ಅವಕಾಶ ಕಲ್ಪಿಸಲಿದೆ.
----------------------------
ನೀವು ಶೋಧಿಸಿದ್ದೇನು ಎನ್ನುವುದನ್ನು ಗುಟ್ಟಾಗಿಡಿ
ಮಾಹಿತಿಯು ರವಾನೆಯಲ್ಲಿ ಸೋರಿಹೋಗುವ ಅಪಾಯ ಕಂಪ್ಯೂಟರ್ ಜಾಲಗಳಲ್ಲಿ ಸದಾ ಇರುತ್ತದೆ.ಅಂತಹ ಅಪಾಯವನ್ನು ಕಡಿಮೆ ಮಾಡಲು,ಮಾಹಿತಿಯನ್ನು ಗೂಢ ಲಿಪಿಯಲ್ಲಿ ಬರೆಯುವುದು ಸಾಮಾನ್ಯ.ಅದೇ ರೀತಿ,ಕಂಪ್ಯೂಟರ್ ಮೂಲಕ ಶೋಧ ನಡೆಸುವಾಗ,ನಾವು ಯಾವ ವಿಷಯದ ಬಗ್ಗೆ ಶೋಧ ನಡೆಸುತ್ತಿದ್ದೇವೆ ಎನ್ನುವುದನ್ನು ತಿಳಿಯಲು,ನಮ್ಮ ಕಂಪ್ಯೂಟರಿನಿಂದ ಗೂಗಲ್ ಶೋಧ ಸೇವೆಗೆ ಹೋಗುವ ಮಾಹಿತಿಯ ಮೇಲೆ ಕಣ್ಣಿಟ್ಟ ಖದೀಮರಿಗೆ ನಿರಾಸೆ ಮಾಡಲು ಗೂಗಲ್ ಹೊಸ ಗೂಢ ಶೋಧ ಸೇವೆ ಆರಂಭಿಸಿದೆ.ಇದನ್ನು ಕ್ರಿಯಾಶೀಲಗೊಳಿಸಲು,ಬರಿದೇ https:// ಎಂದು ಬ್ರೌಸರ್ ವಿಳಾಸದಲ್ಲಿ ಬದಲಿಸಿದರೆ ಸರಿ.ಮಾಮೂಲಾಗಿ ಇದು http:// ಎಂದಿರುತ್ತದೆ.ಇದಕ್ಕೆ ಸುಭದ್ರ ಸಂಪರ್ಕ ಬೇಕಾದುದರಿಂದ,ಅಂತಹ ಸಂಪರ್ಕ ಏರ್ಪಡಲು ತುಸು ಕಾಯಬೇಕಾಗುತ್ತದೆ.ಕಾರಣ,ಸೇವೆ ತುಸು ನಿಧಾನವಾಗುತ್ತದೆ.
ಗೂಗಲ್‌ನ ಜಿಮೇಲ್ ಮಿಂಚಂಚೆ ಸೇವೆಯೂ ಹೊಸ ಸೌಲಭ್ಯವನ್ನು ನೀಡಲಾರಂಭಿಸಿದೆ.ಚಿತ್ರವನ್ನು ಮಿಂಚಂಚೆಯಲ್ಲಿ ಸೇರಿಸಲು,ಒಂದು ಕಡತದಿಂದ ಚಿತ್ರವನ್ನು ಎಳೆದು,ಮಿಂಚಂಚೆಯ ಪುಟಕ್ಕೆ ತಂದರೆ ಸಾಕು,ಚಿತ್ರವು ಮಿಂಚಂಚೆಗೆ ಸೇರಿಬಿಡುತ್ತದೆ.ಸದ್ಯ ಕ್ರೋಮ್ ಬ್ರೌಸರ್ ಬಳಸಿದಾಗ ಮಾತ್ರಾ ಇದು ಸಾಧ್ಯವಾಗುತ್ತದೆ.
------------------------------------------------------
ಹಂಸನಾದ ಆಲಿಸಿ
ಅನಿವಾಸಿ ಭಾರತೀಯ ರಾಮ್‌ಪ್ರಸಾದ್ ಅವರು ಕ್ಯಾಲಿಫೋರ್ನಿಯಾ ನಿವಾಸಿ.ಹಂಸಾನಂದಿ ಎಂಬ ಕಾವ್ಯನಾಮದಲ್ಲಿ ಬ್ಲಾಗ್ ಬರೆಯುವ ಈ ಕನ್ನಡಿಗ ಸಂಗೀತಪ್ರೇಮಿ,ಖಗೋಳಶಾಸ್ತ್ರದ ಬಗ್ಗೆಯೂ ಆಸಕ್ತ.ನಿಯತವಾಗಿ ಸಂಸ್ಕೃತ ಸುಭಾಷಿತಗಳ ಕನ್ನಡೀಕರಣ ಮಾಡಿ,ತನ್ನ ಬ್ಲಾಗ್ "ಹಂಸನಾದ"ದಲ್ಲಿ ಬರೆಯುವುದಿವರ ಹವ್ಯಾಸ.http://hamsanada.blogspot.comನಲ್ಲಿ ಬ್ಲಾಗನ್ನು ನೋಡಿರಿ.
udayavani
*ಅಶೋಕ್‌ಕುಮಾರ್ ಎ