ಮುನ್ನುಡಿಯನ್ನಾದರು ಬರೆದು ಮುಗಿಸುತ್ತೇನೆ...!

ಮುನ್ನುಡಿಯನ್ನಾದರು ಬರೆದು ಮುಗಿಸುತ್ತೇನೆ...!

ಎಂದೊ ಗೀಚಿ ಬರೆದಿದ್ದ ನಾಲ್ಕು ಗೆರೆಗಳು

ಇಂದು ಚಿತ್ರವಾಗಲು ಹವಣಿಸುತ್ತವೆ.

ಬದುಕಿನ ಉದ್ದವೆಷ್ಟೊ ಅಗಲವೆಷ್ಟೊ ತಿಳಿಯದಿದ್ದರು

ಅನುಕ್ರಮ! ಲೋಮ ವಿಲೋಮಗಳಿಂದ

ನಾಲ್ಕು ಗೆರೆಗಳಿಗು ಒಂದೆ ಅನುಪಾತ.

ಮೂಡಿದಷ್ಟು ಮೂಡಲಿ ಬಾಳ ರೇಖೆಗಳು

ವಕ್ರವಾಗಿರದಿದ್ದರೆ ಸಾಕೆನುವ ಹಂಬಲ

ಎಡವಿ ಬೀಳುವ ಸರದಿ ನನ್ನದಾಗಬಾರದಲ್ಲ.

ಒಂದೊಂದು ಗೆರೆಗೆ ಹಲವು ರೀತಿಯ ಬಣ್ಣಗಳನ್ನು

ನಾ ಬಳಿದು ತೋರಿಸಲಾರೆ.

ಸೊಕ್ಕು ಗಟ್ಟಿದ ನೆರಿಗೆಗಳಿಗೆ

ಬಾಡಿಹೋದ ಕಣ್ಣುಗಳಿಗೆ

ಬದುಕಿನ ನೊಗವನ್ಹೊತ್ತು ಬೆಂಡಾದ ದೇಹಗಳಿಗೆ

ಯಾವ ಬಣ್ಣದಿಂದ ಶೃಂಗರಿಸಲು ಸಾದ್ಯ?.

ಪಯಣಕ್ಕೆ ಸಿದ್ದವಾದ ಮನಸುಗಳಿಗೆ

ಅಕ್ಕರೆಯ ಕಂಬನಿಯೊಂದನ್ನು ಮೂಡಿಸಬಹುದಷ್ಟೇ.

ನಾಳೆ ನನ್ನ ಸರದಿಯಲ್ಲವೆ ಕಾದು ಕೂರುತ್ತೇನೆ.

ಈಗೀಗ ನನ್ನ ಚಿತ್ರಗಳು ಹಗಲುವೇಶಗಳನ್ನು

ಕಾಣಲು ಅಂಬಲಿಸುತ್ತವೆ.

ಕಪ್ಪು ಬಿಳಿಯ ದಾರಿಯಲ್ಲಿ

ಬಣ್ಣಗಳನ್ನು ಬೆಳೆಯಲು ಕಾಯುತ್ತವೆ.

ಕಣ್ಣೀರಿಗಾಗಿ ಬಿ೦ದಿಗೆಯೊ೦ದ ಹಿಡಿದು

ಬೀದಿ ಬೀದಿ ಸುತ್ತಿ ಬಿದ್ದ ಹನಿಗಳನ್ನು

ಹೆಕ್ಕಿ ಹೆಕ್ಕಿ ತುಂಬಿಸಿಕೊಳ್ಳಲೆತ್ನಿಸುತ್ತವೆ

ಬಿಂದಿಗೆ ತುಂಬಿದರೆಷ್ಟು ಬಿಟ್ಟರೆಷ್ಟು.

ನಿರಾಸೆಯೊ೦ದು ಮೌನವಾಗಿ

ಹಾಡುತ್ತಾ ಸಾಗುತ್ತದೆ.

ಆ ನಾಲ್ಕು ಗೆರೆಗಳು ಅದೆಷ್ಟು ಉದ್ದ

ಉತ್ತರದಿಂದ ದಕ್ಷಿಣದವರೆಗು

ಪೂರ್ವದಿಂದ ಪಕ್ಷಿಮದವರೆಗು ಚಾಚಿಕೊಂಡಂತಿವೆ

ಮುಯುವುದರೊಳಗೊಂದು ಪೂರ್ಣ ವಿರಾಮ

ಮುಗಿಯುವ ಅಧ್ಯಾಯಕ್ಕೆ ಮುನ್ನುಡಿಯನ್ನಾದರು ಬರೆದು ಮುಗಿಸುತ್ತೇನೆ.

 

                                                                                      ವಸಂತ್

 

 

Rating
No votes yet

Comments