ವ್ಯಾಖ್ಯೆಯ ನೀರೆಂಬ ’ನೀರಾ’ದ ನಿಶೆಯಾದ ಕಲೆಗೆ ’ಅರ್ಥ’ವಿಲ್ಲ!
ಕಲಾಭವನದಲ್ಲಿ, ಎಲ್ಲ ಕಲಾಶಾಲೆಗಳಂತೆ, ಚಿತ್ರಕಲೆ ಕಲಿಸುತ್ತಿದ್ದರು! ಕಲೆ ಎಂದರೆ ಸೃಜನಶೀಲತೆ (ಕ್ರಿಯೆಟಿವಿಟಿ). ಅದನ್ನು ಕಲಿಸುವುದೆಂಬುದೇ ಒಂದು ಅಭಾಸ! ಯಾವ ವಿಷಯವನ್ನು ಬೇಕಾದರೂ ಕ್ರಿಯಾತ್ಮಕವಾಗಿ ಕಲಿಸಬಹುದು. ಆದರೆ ಕ್ರಿಯಾತ್ಮಕತೆಯನ್ನೇ ಕಲಿಸಲಾದೀತೆ? ಹಾಗೆ ಕಲಿಸಿದ್ದು ಕ್ರಿಯಾತ್ಮಕವು ಹೇಗೆ ಆದೀತು. ಹಾಗಿದ್ದರೆ ಒಬ್ಬ ಮಿಕೆಲೆಂಜಲೊ, ಒಬ್ಬ ಪಿಕಾಸೊ, ಒಬ್ಬ ರವಿವರ್ಮ ಹೇಗೆ ಅಸ್ತಿತ್ವಕ್ಕೆ ಬಂದರು? ಅವರಿಗೆ ಕ್ರಿಯಾತ್ಮಕತೆ ಕಲಿಸಿದ ಅವರ ಗುರುಗಳ ಹೆಸರನ್ನೇ ಯಾಕೆ ಯಾರೂ ಕೇಳಿ-ನೋಡಿಲ್ಲ!
ಕ್ರಿಯಾತ್ಮಕತೆಯನ್ನು ಕಲಿಸಲಾಗದು, ಕಲಿಸಿದ್ದನ್ನು ಕ್ರಿಯಾತ್ಮಕ ಎನ್ನಲಾಗದು!
ಕಲಾಶಿಕ್ಷಣದ ಅಭಾಸವಿದು. ಕಥೆ, ಕಾದಂಬರಿ, ಕವನಗಳನ್ನು 'ಯಾರು,' 'ಯಾಕೆ' ಬರೆಯುತ್ತಾರೆಂಬುದನ್ನು ಕಲಿಸುವ ವಿಶ್ವವಿದ್ಯಾಲಯಗಳಿರಬಹುದು, 'ಹೇಗೆ' ಬರೆಯಬೇಕೆಂದು ತಿಳಿಸುವ ಶಿಕ್ಷಣಸಂಸ್ಥೆಗಳಿಲ್ಲ-ಇರುವ ಬರಹಗಾರರ ವರ್ಕ್‌ಶಾಪ್‍ಗಳೆಲ್ಲ ಬಿಸ್ಕತ್ತು!
ಒಳ್ಳೆಯ ಕಲಾಶಾಲೆಯಲ್ಲಿ ಏನನ್ನು ಕಲಿಯಬಾರದೆಂಬುದನ್ನು ಮೊದಲು ಕಲಿಸುತ್ತಾರೆ. ಯಾವುದೇ ಚಿತ್ರ ಬರೆಯಲು, ಅರ್ಥಮಾಡಿಕೊಳ್ಳಲು ಅಥವ 'ಅರ್ಥ'ವನ್ನಾಗಿ ಬದಲಾಯಿಸಲು ಮೊದಲಿಗೆ ನೋಡುಗ ಏನನ್ನು ಈಗಾಗಲೇ ಕಲಿತಿದ್ದಾನೋ, ಅಥವ ಕಲಿತುಬಿಟ್ಟಿದ್ದೇನೆ ಎಂದುಕೊಂಡಿದ್ದಾನೋ ಅದನ್ನು ಮರೆಯಬೇಕು!
ಕಲಾಶಾಲೆಗಳು ಹೀಗೆ ಈಗಾಗಲೇ ಕಲಿತಿರುವುದನ್ನು ಮರೆವುದನ್ನು ಕಲಿಸುತ್ತವೆ! ಮತ್ತು ಕಲಿತಿರುವುದನ್ನು ಮರೆವುದು ಅಷ್ಟು ಸುಲಭದ ಕೆಲಸವಲ್ಲ.
ಶಿಲ್ಪ, ಮುದ್ರಣ, ಕಲಾಇತಿಹಾಸವು ಎಲ್ಲ ಶಾಲೆಗಳಲ್ಲಿದ್ದರೂ ಸಹ ಚಿತ್ರಕಲೆಗೇ ಹೆಚ್ಚಿನ ಒತ್ತು ಕಲಾಭವನದಲ್ಲಿ. ಕಾಲೇಜನ್ನು ಕಲಾಶಾಲೆ ಎನ್ನುವುದು ವಾಡಿಕೆ. ಮೈಮೇಲೆ ದೆವ್ವ ಬಂದವರಂತೆ ಕಲಾಕೃತಿ ರಚಿಸುವ ವಿದ್ಯಾರ್ಥಿಗ್ಗಳಲ್ಲಿದ್ದರಲ್ಲಿ. ದೇಶಾಂತರದಿಂದ ಬಂದ ವಿದ್ಯಾರ್ಥಿಗಳಿದ್ದರು-ಮಾಲ್ಡೀವ್ಸ್, ಸೀಶೆಲ್ಸ್, ನೇಪಾಳ, ಜಪಾನ್, ಚೀನ, ಕೋರಿಯ ಇತ್ಯಾದಿ. ಆದರೂ ಅಲ್ಲಿ ಎರಡೇ ಭಾಷೆಗಳಲ್ಲಿ ಎಲ್ಲ ವಾಗ್ವುದ್ಯಗಳು ನಡೆಯುತ್ತಿದ್ದುದು: ಬೆಂಗಾಲಿ ಅಥವ ನಾನ್-ಬೆಂಗಾಲಿಯಲ್ಲಿ! ನಾವು ಕನ್ನಡದ ಹುಡುಗರು (ಮತ್ತು ಹುಡುಗಿಯರು) ಆದ್ದರಿಂದಲೇ ಅವರಿಗೆ ಹೇಳುತ್ತಿದ್ದೆವು, ಇಲ್ಲಿ ಎರಡೇ ಭಾಷೆ: ನಾನ್ ಬೆಂಗಾಲಿ ಮತ್ತು ನೀನ್ ಬೆಂಗಾಲಿ ಎಂದು.
(೨೬)
೧೯೯೧ರ ಚಳಿಗಾಲ: ಮೊದಲ ಬಾರಿಗೆ ಹಾಸ್ಟೆಲ್ನಲ್ಲಿ ವಾಸ ಮಾಡಲು ಪ್ರಾರಂಭಿಸಿದ್ದೆ ನಾನು. ಬೆಳಿಗ್ಗೆ, ಕ್ಲಾಸ್ ಶುರುವಾಗುವ ಮುನ್ನವೇ ಒಂದು ಸಂಪ್ರದಾಯ ರೂಢಿಸಿಕೊಂಡುಬಿಟ್ಟಿದ್ದೆ. ಕ್ಲಾಸ್ ತಪ್ಪಿಸಿದಋ, ಆ ಒಂದು ನಿರ್ದಿಷ್ಟ ಸಂಪ್ರದಾಯವನ್ನು ಮಾತ್ರ ಅಪ್ಪಿತಪ್ಪಿಯೂ ಅಪ್ಪಿತಪ್ಪಿಸುತ್ತಿರಲಿಲ್ಲ. ಅಂತಹ 'ರುಚಿ'ಕರವಾದ ಅಭ್ಯಾಸವಾಗಿತ್ತದು. ನೀವದನ್ನು ಅಕ್ಷೇಪಿಸಬಹುದು, ಕೆಟ್ಟ ಅಭ್ಯಾಸವೆನ್ನಬಹುದು. ಚಟಮಯವೆನ್ನಬಹುದು. ಅನ್ನಿ. ಆದರೆ ನಾನದನ್ನು ತೆವಲು ಎಂದಷ್ಟೇ ಕರೆಯುತ್ತೇನೆ!
ಅದರ ಪ್ಲಸ್ ಪಾಯಿಂಟನ್ನು ಗಮನಿಸಿ: (್೧) ಬೆಳಿಗ್ಗೆ ಸೂರ್ಯೋದಯದಕ್ಕೆ ಸಾಕಷ್ಟು ಮುನ್ನ, ಈ ಅನಿಲ್ ಎಂಬ ಮುನ್ನಾನ ಬಾಯಿಚಪಲ ಎಚ್ಚರಗೊಂಡು ಹಾಸಿಗೆಯಿಂದ ಎದ್ದು ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡ. (೨) ಜೊತೆಗೆ ಐದೈದು ಅಂದರೆ ಹತ್ತು ಕಿಲೋಮೀಟರ್ ಸೈಕಲ್ ತುಳಿತ, ಶಾಂತಿನಿಕೇತನದ ಹೊರಗಿನ ಸಂತಾಲಿ ಬುಡಕಟ್ಟಿನ ಹಳ್ಳಿಗೆ. ಸುತ್ತಲೂ ಈಚಲ ಮರಗಳು 'ತವರಿಗೆ ಬಾ ತಮ್ಮ' ಎಂದು ಕರೆಯುತ್ತಿದ್ದವು. (೩) ನಾನು ಅಲ್ಲಿನ ನಿಗೂಢ ಕೆಲಸ ಮುಗಿಸಿಕೊಂಡು ವಾಪಸ್ ಬಂದಾಗಲೂ ನನ್ನ ರೂಮ್ ಮೆಟ್ಗಳು ಮೆಟ್ಟು ತೊಟ್ಟು ಪ್ರಾರ್ಥವಿಧಿಗಳನ್ನು ಪೂರೈಸುವೆಡೆ ನೈಜ ಹಾಗೂ ರೂಪಕದ ಹೆಜ್ಜೆಗಳನ್ನಿಟ್ಟಿರುತ್ತಿರಲಿಲ್ಲ!
ನನ್ನ ಮುಂಜಾನೆ ಪ್ರಸಂಗವು 'ಮುಸ್ಸಂಜೆ ಕಥಾಪ್ರಸಂಗ'ದಂತಲ್ಲ. ಅದರ ಮತ್ತೊಂದು ಲಾಭ ಗಮನಿಸಿ: (೪) ನಂದಲಾಲ್ ಬೊಸ್, ಟಾಗೋರ್, ಬಿನೋದ್ ಬಿಹಾರಿ ಮುಖರ್ಜಿ, ರಾಮ್ ಕಿಂಕರ್ ಬೈಜ್ ಮುಂತಾದ ಶಾಂತಿನಿಕೇತನದ ಘಟಾನುಘಟಿ ಕಲಾವಿದರು ಬಿಡಿಸಿದ ನಿಸರ್ಗಚಿತ್ರಗಳ ಅಸಲಿ ಪ್ರದೇಶಗಳನ್ನು ಪ್ರತಿದಿನ ಪ್ರದಕ್ಷಿಣೆ ಹಾಕಿ ಬರುವುದೆಂದರೆ, ಧಾರ್ಮಿಕ ಜನರು ಕಾಶಿ-ರಾಮೇಶ್ವರ-ಮೆಕ್ಕಾ-ಮದಿನಾ-ಜೆರುಸೆಲಂ-ಬೆಥ್ಲಹಾಂ ಧರ್ಮಕ್ಷೆತ್ರಗಳನ್ನು ಒಟ್ಟಾಗಿ ಸುತ್ತಿಬಂದಷ್ಟೇ ಪುಣ್ಯ. ನನಗೆ ಪ್ರತಿದಿನವೂ ಅಂತಹ ಪುಣ್ಯ ಸಂಪಾದನೆಯಾಗುತ್ತಿತ್ತು! ದಿನಕ್ಕೆ ಐದು ರೂಪಾಯಿ ಖರ್ಚಾಗುತ್ತಿತ್ತು.
(೨೭)
ಒಂದು ಲೋಟಕ್ಕೆ ಐವತ್ತು ಪೈಸೆ. ಹತ್ತು ಲೋಟ ಕುಡಿಯುತ್ತಿದ್ದೆ. ಇನ್ನು ಹತ್ತು ಲೋಟದ ತುಂಬ ಆ 'ಜಲ'ವನ್ನು ಬಿಸ್ಲೇರಿ ಬಾಟೆಲ್ಲಿನಲ್ಲಿ ತುಂಬಿ ತರುತ್ತಿದ್ದೆ, ಗೆಳೆಯ, ರೂಮ್-ಮೇಟ್ ಪ್ರಕ್ಷುಬ್ಧನಿಗೆ (ಪ್ರಕ್ಷುಬ್ ದಾ). ಆತ ಏಳದೆ ಸ್ನಾನ ಶೌಚಕರ್ಮ ಮಾಡುತ್ತಿರಲಿಲ್ಲ, ಅವೆಲ್ಲ ಮಾಡದೆ ಬಾಯಿಗೆ ತೊಟ್ಟು ನೀರನ್ನೂ ಪಂಪ್ ಮಾಡುತ್ತಿರಲಿಲ್ಲ. ಆತ ಬೆಳಿಗ್ಗೆ ಒಂದು ಪೂರ್ತಿ ಬಾಟೆಲ್ ನೀರು ಕುಡಿಯದೆ ಮತ್ತೇನನ್ನೂ ಸೇವಿಸುತ್ತಿರಲಿಲ್ಲ, ಬಾಯಿಂದಲೂ.
ನಾನು ದಿನವೂ ಬಾಟೆಲ್ ಪೂರ್ತಿ ತರುತ್ತಿದ್ದ 'ನೀರ'ದ ರುಚಿ ಅಂತಹದ್ದು. ಈಚಲು ಮರದಿಂದ ಸೂರ್ಯೋದಯದ ಮುಂಚೆ ಇಳಿಸಿದ್ದು ಬೆಲ್ಲ, ಜೇನು ಹಾಗೂ ತುಪ್ಪವನ್ನು ಹದವಾಗಿ ಬೆರೆಸಿ ಕುಡಿದರೆ ಹೇಗಿರುತ್ತಿತ್ತೋ ಹಾಗಿರುತ್ತಿತ್ತು. ಜೊತೆಗೆ ತೀರ ತೆಳುವಾಗಿದ್ದುದ್ದರಿಂದ, ತುಪ್ಪ ಬಾಯಿಗೊಳವೆಯ ಒಳಗೆ ಜೆಡ್ಡುಗಟ್ಟಿದ ಭಾವನೆಯೂ ಇರುತ್ತಿರಲಿಲ್ಲ. ಸೂರ್ಯೋದಯದವಾದ ಕೂಡಲೆ ಆ ಜೇನು-ಬೆಲ್ಲ-ತುಪ್ಪದ ನೀರವೆಂಬ ಅಮೃತವು ಫರ್ಮೆಂಟ್ ಆಗಿ (ಇದಕ್ಕೆ ಸರಿಯಾದ ಪರ್ಯಾಯ ಕನ್ನಡ ಪದವನ್ನು ಪಂಡಿತರ ಹತ್ತಿರ ಕೇಳದೆ ಕುಡುಕರನ್ನು ವಿಚಾರಿಸಿ), ಕಳ್ಳಭಟ್ಟಿಸಾರಾಯಿಯಾಗಿ ಹೋಗುತ್ತಿತ್ತು, ಕುಡಿದವರನ್ನು ಕುಡಿದಲ್ಲೇ ಮಲಗಿಸಿಬಿಡುತ್ತಿತ್ತು!
ನಾನು ನೀರವನ್ನು ಸೂರ್ಯೋದಯದ ಮುನ್ನವೇ ದೇಹದ ಬಾಟಲಿಯಲ್ಲಿ ತುಂಬಿ, ನಿಜವಾದ ಬಾಟೆಲಿಗೂ ತುಂಬಿಸಿಕೊಂಡು, ಕಲಾಭವನದ ಹುಡುಗರ ಹಾಸ್ಟೆಲ್ಲಿಗೆ ಬಂದು ಪ್ರಕ್ಷುಬ್ದನನ್ನು ಎಬ್ಬರಿಸಬೇಕಿತ್ತು. ಆತ ನಿತ್ಯಕರ್ಮವನ್ನು ಮುಗಿಸಿಕೊಂಡು ಅದನ್ನು ಕುಡಿಯಬೇಕಾಗುತ್ತಿತ್ತು, ಸೂರ್ಯೋದಯದ ಮುನ್ನವೇ! ನೀರದ ರುಚಿಯ ತೆವಲಿನಿಂದಾಗಿ ನನ್ನ ಬೆಳಗು ಅಷ್ಟು ಪುಣ್ಯಮಯವಾಗಿದ್ದು, ಕಣ್ಣಿಗೆ ಒಳ್ಳೆಯ ಬೌದ್ಧಿಕ ವ್ಯಾಯಾಮವಾಗುತ್ತಿತ್ತು. ದೃಶ್ಯಪುಣ್ಯ ಲಭಿಸುತ್ತಿತ್ತು!
(೨೮)
ಪ್ರಕ್ಷುಬ್ದ ಕಾಮನ್ ಟಾಯ್ಲೆಟ್ಟಿಗೆ ಹೋಗಿದ್ದಾಗ, ನೀರದ ಬಿಸ್ಲೇರಿ ಬಾಟಲಿಯನ್ನು ಮಂಚದ ಕೆಳಗಿರಿಸಿ ಹೋಗುತ್ತಿದ್ದ. ನಾನು ಪತ್ರಿಕೆ ಓದಲು ಶುರುಮಾಡುತ್ತಿದ್ದೆ. ಕಣ್ಣು ಕಾಗದದ ಮೇಲೆ, ಮನಸ್ಸು ಬಾಟಲಿ ಮೇಲೆ! ಬಾಟೆಲ್ಲಿನಿಂದ ಅರ್ಧ ಲೋಟ (ಮಾತ್ರ) ಬಗ್ಗಿಸಿಕೊಂಡು ಕುಡಿಯುತ್ತಿದ್ದೆ. ಅಷ್ಟರಲ್ಲಿ ಆತನ ಶೌಚಕರ್ಮದ ಕಾಲು ಭಾಗ ಮುಗಿದಿರುತ್ತಿತ್ತು. ಕರಾರುವಾಕ್ಕಾಗಿ ಎಷ್ಟು ನೀರ ಬಾಟಲಿಯಿಂದ ಖಾಲಿ ಮಾಡಿದ್ದೆನೋ ಅಷ್ಟೇ ನೀರನ್ನು ನೀರಕ್ಕೆ ಬೆರೆಸಿಡುತ್ತಿದ್ದೆ.
ಪೂರ್ಣ ಪ್ರಕ್ಷುಬ್ದ ಶೌಚವಾಗುವಷ್ಟರಲ್ಲಿ ಎರಡರಿಂದ ಮೂರು ಗ್ಲಾಸ್ ನೀರು ನೀರವನ್ನು ಬಾಟಲಿಯಲ್ಲಿ ಸ್ಥಳಾಂತರಿಸುದ್ದುದು ಹೀಗೆ! ಪ್ರಕ್ಷುಬ್ಧ ಯಾಗ ಮಾಡುವಂತೆ ಆ ಬಾಟಲಿಯನ್ನು ತೊಟ್ಟು ತೊಟ್ಟಾಗಿ ಕುಡಿಯುತ್ತಿದ್ದ. ಆದರದು ಏನೋ ಹೇಗೋ ನಾನು ಕ್ಲಾಸಿಗೆ ಹೊರಡಲು ಬಾಗಿಲಿನಿಂದ ಹೊರಕ್ಕೆ ಕಾಲಿಡುವ ಮುನ್ನ ಅತ ಬಾಟಲಿಯನ್ನು ಸಂಪೂರ್ಣವಾಗಿ ಖಾಲಿ ಮಾಡಿರುತ್ತಿದ್ದ. ಆಗ ಭಾರತೀಯರೂ ಕ್ರಿಕೆಟನ್ನು ಹಾಗೆಯೇ ಆಡುತ್ತಿದ್ದುದು: ಮೊದಲ ನಲವತ್ತು ಓವರಿಗೆ ೧೪೦ ರನ್ನು, ಉಳಿದ ೧೦ ಓವರಿಗೆ ೧೦೦ರನ್ ಭಾರಿಸುತ್ತಿದ್ದರು. ಕ್ರಿಕೆಟ್ ಎಂದರೆ ಪ್ರಾಣವಾಗಿದ್ದ ಪ್ರಕ್ಷುಬ್ಧ ಬಹುಶಃ ಕುಡಿತದ ಆಟವನ್ನು ಭಾರತೀಯ ಕ್ರಿಕೆಟ್ ಆಟದಿಂದ ಕಲಿತನೆಂದು ಕಾಣುತ್ತದೆ!
ಒಮ್ಮೆ ಬೆಳಿಗ್ಗೆಯೇ ಸಂತಾಲಿ ಮುದುಕನೊಬ್ಬ ಬಂದು ಬಾಗಿಲು ತಟ್ಟಿದ. ಚಳಿಗಾಲದ ಕೊನೆಕೊನೆಗೆ ನೀರ ಕುಡಿವ ಆಸೆಗಿಂತ ತುಳಿವ ನೋವು ನನ್ನನ್ನು ಹಾಸಿಗೆಯಲ್ಲಿಯೇ ಹೆಚ್ಚು ಇರಿಸಿಬಿಡುತ್ತಿತ್ತು. ಬೀಚಿ ಹೇಳಿಲ್ಲವೆ, 'ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಗುರುತ್ವಾಕರ್ಷಣೆ ಇರುವುದು ಹಾಸಿಗೆಯಲ್ಲಿ' ಎಂದು!
ಸಂತಾಲಿ ಮುದುಕ ಅಸಲಿ ನೀರ ಮಾರಾಟ ಮಾಡಲು ಬಂದಿದ್ದ. ಪ್ರಕ್ಷುಬ್ಧ ದೇಹಕರ್ಮಗಳನ್ನೆಲ್ಲ ಮುಗಿಸಿ ಕುಳಿತು ಓದುತ್ತಿದ್ದ. ಸಂತಾಲಿಯು ಕೊಟ್ಟ ನೀರವನ್ನು ನಾಲ್ಕು ಗ್ಲಾಸು ಕುಡಿದು ಮುಖ ಸಿಂಡರಿಸಿದ. ಬೆಂಗಾಲಿಯಲ್ಲಿ ಆತನೊಂದಿಗೆ ಜಗಳಕ್ಕಿಳಿದ,
ಏನು. ಬೆಲ್ಲ ಬೆರೆಸಿದ್ದೀಯ? (ನಮ್ಮಲ್ಲಿ ಬೆಲ್ಲದ ಪಾಕವೆಂಬ ಜೇನನ್ನು ಒಬ್ಬಂಟಿ ರಸ್ತೆಬದಿಯಲ್ಲಿ ಒಬ್ಬಂಟಿ ಹಳ್ಳಿ ಸಿದ್ಧರು ಮಾರುವುದಿಲ್ಲವೆ, ಹಾಗೆ).
"ಇಲ್ಲ ದಾದಾ. ಇದು ಶುದ್ಧವಾದುದು. ನಾನೇ ಈಗಷ್ಟೇ ಇಳಿಸಿದ್ದು ಮರದಿಂದ".
"ಹೌದಾ. ಹಾಗಾದರೆ ನಿನ್ನ ಬೆವರು ಇದರೊಂದಿಗೆ ಬೆರೆತಿರಬೇಕು. ಅಸಲಿ ನೀರದ ರುಚಿ ಇಲ್ಲ," ಎಂದು ಕೂಗಾಡತೊಡಗಿದ ಪ್ರಕ್ಷುಬ್ಧ.
ಅವರ ಬೆವರು ತುಂಬಿದ ಮಾತುಕತೆ ಕೇಳಿ ನಾನು ಬೆವರತೊಡಗಿದೆ, ನೀರಕ್ಕೆ ನೀರು ಬೆರೆಸುವ ನನ್ನ ಗುಟ್ಟು ಬಯಲಾದೀತೆಂದು.
"ಸಂತಾಲಿಗಳು ನಿಯತ್ತಿಗೆ ಶಿಸ್ತಿಗೆ ಹೆಸರಾದ ಜನ. ನೀನು ಹೀಗೆ ಕಲುಷಿತವಾದ ನೀರ ಕೊಡಬಹುದೆ ನನಗೆ?" ಎಂದು ಹೊರಟಿತ್ತು ಪ್ರಕ್ಷುಬ್ದ-ನಾದ.
ಹುಡುಗರು ಸಂತೆ ಸೇರಿದರು. ಸಂತಾಲಿ ಸ್ವತ: ಕುಡಿದು ನೋಡಿದೆ. ಬಾಟೆಲಿ ಬದಲಾಯಿಸಿ ರುಚಿಸಿದ. ಬಂದವರೆಲ್ಲರೂ ನ್ಯಾಯ ಬಗೆಹರಿಸುವ ಸಲುವಾಗಿ, ಪರೀಕ್ಷಕರಂತೆ ತಲಾ ಅರ್ಧರ್ಧ ಲೋಟ ಕುಡಿದು ರುಚಿ ನೋಡಿದರು.
"ಏನು ಪ್ರಾಬ್ಲಂ?" ಎಂದು ಪ್ರಕ್ಷುಬ್ಧನ ಸೀನಿಯರ್ಸ್‍ಗಳು ಕೇಳಿದರೆ, ಅವನಿಗಿಂತಲೂ ಕಿರಿಯರು "ಹೌದು. ಏನೋ ಪ್ರಾಬ್ಲಂ" ಎಂದರು, ಆತನನ್ನು ಎದಿರು ಹಾಕಿಕೊಳ್ಳುವ ಧೈರ್ಯವಿಲ್ಲದೆ. ಸ್ವತಃ ಸಂತಾಲಿ ಕುಡಿದು ನೋಡಿ, "ಎಲ್ಲವೂ ಸರಿ ಇದೆ" ಎಂದ.
ನನಗೆ ಆಗ ಅಗ್ನಿಪರೀಕ್ಷೆ ಪ್ರಾರಂಭವಾಯಿತು. "ಓನಿಲ್, ನೀನೇ ಕುಡಿದು ನೋಡು. ನೀನು ತರುವದು ನೀರ. ಇಲ್ಲಿರುವುದು ಕೆರ. ಎಂಥ ಚೀಟಿ-ಫೆಲೋಸ್ ಈಗಿನ ಸಂತಾಲಿಗಳು," ಎಂದು ಬಲವಂತ ಮಾಡಿದ ಪ್ರಕ್ಷು. ನಾನು ಕುಡಿದೆ. ಅದ್ಭುತವಾಗಿತ್ತು!! ಏನೂ ಹೇಳದಾದೆ.
ಕೊನೆಗೂ ಪ್ರಕ್ಷುವೇ ಬಗೆಹರಿಸಿದ. "ಓನಿಲ್ ಒರಿಜಿನಲ್. ಆತ ತರುವ ನೀರ ಒರಿಜಿನಲ್. ಸಂತಾಲಿಗಳು ಬೆಲ್ಲ ಬೆರೆಸಿದ ನೀರ ಹೆಸರಿನ ನೀರನ್ನು ಕಲಾಭವನಕ್ಕೆ ತರುವುದು ಬೇಡ. ಚಳಿಗಾಲ ಇಲ್ಲಿಗೆ ಬಂದ್!" ಎಂದು ಫರ್ಮಾನು ಹೊರಡಿಸಿದ. ಪೆಚ್ಚು ಮೋರೆ ಹಾಕಿಕೊಂಡು ಸಂತಾಲಿ ಜಾಗ ಖಾಲಿ ಮಾಡಿದ, ಕಾಸನ್ನೂ ತೆಗೆದುಕೊಳ್ಳದೆ.
ಎಂದೂ ಅಸಲಿ ನೀರ ಕುಡಿಯದಿದ್ದ ಕೊಲ್ಕೊತ್ತ ಶಹರದ ಪ್ರಕ್ಷುಬ್ಧನಿಗೆ ನಾನು ತಂದುಕೊಟ್ಟು, ಅರ್ಧದಷ್ಟು ನೀರು ಬೆರೆಸಿದ್ದ ನೀರವೇ ಅಸಲಿಯಾಗಿತ್ತು.
ಆತನಿಗೆ ಅಸಲಿ ನೀರವು ನೀರಾಗಿ ಕಾಡಿತ್ತು ಮಾಯೆ! ಕಲಾಕೃತಿಗಳನ್ನು ಕುರಿತ ಚರ್ಚೆಯೂ ಅಂತಹದ್ದೇ. ಅತ್ಯುತ್ತಮ ಗುಣಮಟ್ಟದ ಕಲಾಕೃತಿಯನ್ನು ಜೊತೆಗಿರಿಸಿಕೊಂಡು ಮತ್ತೊಂದು ಕೃತಿಯ ವಿಶ್ಲೇಷಣೆ, ಗುಣಾವಗಾನ ಮಾಡಲು ಅಸಲ ಗುಣಲಕ್ಷಣವಿರುವ ಕಲಾಕೃತಿ ಎಂಬುದೇ ಇಲ್ಲ-ಎನ್ನುವುದು ನಿಜವಾದ ಕಲಾ ಇತಿಹಾಸದ ತಿರುಳು!!//