ಬರದಿರಿ ನಮ್ಮ ದೇಶಕ್ಕೆ

ಬರದಿರಿ ನಮ್ಮ ದೇಶಕ್ಕೆ

ಒಂದು ಕಡೆ ವಿಶ್ವ ನಮ್ಮ ಪ್ರಗತಿಯ ಬಗ್ಗೆ ಮೆಚ್ಚುಗೆ ತೋರಿದರೆ ಮತ್ತೊಂದೆಡೆ ನಮ್ಮ ಅಧಿಕಾರಿ, ರಾಜ ಕಾರಣಿಗಳಿಗೆ ತಮ್ಮ ದೇಶಗಳಿಗೆ ಬರದಂತೆ ವಿಸಾ ನೀಡದೆ ಅಪಮಾನ ಮಾಡುತ್ತಿದೆ. ವಿಶ್ವ ರಾಜಕಾರಣದಲ್ಲಿ ನಮ್ಮದೇ ಆದ ಛಾಪು ಮೂಡಿಸಲು ಯತ್ನಿಸುತ್ತಿರುವ ನಮಗೆ ವಿವಿಧೆಡೆಗಳಿಂದ ಊಹಿಸಲಾಗದ ತೊಡಕುಗಳು ಎದುರಾಗುತ್ತಿವೆ. ನಮ್ಮ ಮೇಲೆ ಹಗೆ ಸಾಧಿಸುವುದೇ ತಮ್ಮ ಕಸುಬು ಎಂದುಕೊಂಡಿರುವ ನೆರೆಯ ದೇಶಕ್ಕೆ ಅದರ ಎಲ್ಲಾ ರೀತಿಯ ಹುನ್ನಾರಗಳ ಅರಿವಿದ್ದೂ ಪಾಶ್ಚಾತ್ಯ ರಾಷ್ಟ್ರಗಳು ತಮ್ಮದೃಷ್ಟಿಯನ್ನು ಮತ್ತೆಲ್ಲೋ ಬೀರಿ ಪರೋಕ್ಷ ಬೆಂಬಲವನ್ನು ನೀಡುತ್ತಿವೆ. ಅವರ ಪ್ರಕಾರ ಪಾಕ್ ನಿಜವಾಗಿಯೂ "ಪಾಕ್" (ಶುದ್ಧ). ನಮ್ಮ ವಿದೇಶಾಂಗ ಇಲಾಖೆಯನ್ನು ನಿರ್ವಹಿಸುತ್ತಿರುವವರಿಗೆ ತಮ್ಮ ಸೂಟು, ಗರಿಗರಿಯಾದ ರೇಷ್ಮೆ ಸೀರೆ ಪ್ರದರ್ಶಿಸುವುದೇ ತಮ್ಮ ಪ್ರತಿಭೆ ಎಂದು ಬಗೆದು ನಡೆಯುತ್ತಿರುವುದು ಖೇದಕರ.


ಉತ್ತರ ಅಮೇರಿಕಾ ಖಂಡದ ಕೆನಡಾ ದೇಶ ಅಂತರ ರಾಷ್ಟ್ರೀಯ ರಾಜಕಾರಣದಲ್ಲಿ ಅಷ್ಟೇನೂ ದೊಡ್ಡ ಪಾತ್ರ ವಹಿಸದ ದೇಶ. ಈ ದೇಶಕ್ಕೆ ಹೋಗಲು ಗಡಿ ಭದ್ರತಾ ಪಡೆಗೆ ಸೇರಿದ ನಿವೃತ್ತ ಪೇದೆ ವಿಸಾ ಕೇಳಿದಾಗ ಸಿಕ್ಕ ಉತ್ತರ  "ಕುಪ್ರಸಿದ್ಧ ಹಿಂಸಾತ್ಮಕ ಪಡೆ" (notoriously violent force) ಗೆ ಸೇರಿದವರಿಗೆ ಕೆನಡಾ ಒಂದು ಕನಸು ಎಂದು. ನಮ್ಮ ಅರೆ ಸೈನಿಕ ಪದೆಯನ್ನು "ಕುಪ್ರಸಿದ್ಧ" ಎನ್ನುವ ಮಟ್ಟಿಗೆ ಬೆಳೆಯಿತು ದಾರ್ಷ್ಟ್ಯತನ ಈ ಸದಾ ಮಗುಮ್ಮಾಗಿ ಇರುವ ದೇಶಕ್ಕೆ.  ಇನ್ನಿತರ ಸೈನಿಕ ಅಧಿಕಾರಿಗಳಿಗೂ ಇದೇ ರೀತಿ ಒಂದಲ್ಲ ಒಂದು ರೀತಿಯ "ನೀವು ನಮ್ಮ ದೇಶಕ್ಕೆ ಬರಲು ಅರ್ಹರಲ್ಲ" ಎಂದು ಹಣೆ ಪಟ್ಟಿ. ಈಗ ಒಂದು ಪ್ರಶ್ನೆ. ಪಕ್ಕದ ಪಾಕಿಸ್ತಾನದ ಅಧಿಕಾರಿಗಳಿಗೂ ಇದೇ ರೀತಿಯ ಉಪಚಾರ ಸಿಕ್ಕಿದೆಯೇ? ಸಿಕ್ಕಿರಲಿಕ್ಕಿಲ್ಲ. ಏಕೆಂದರೆ ಅಲ್ಲಿನ ಅಧಿಕಾರಿ, ರಾಜಕಾರಣಿಗಳು ಸಮಯ ಸಾಧಕರು, ಅವರಿಗೆ ರೊಟ್ಟಿಯ ಯಾವ ಮಗ್ಗುಲಿಗೆ ಬೆಣ್ಣೆ ತಗುಲಿದೆ ಎಂದು ಚೆನ್ನಾಗಿ ಗೊತ್ತು, ಅದರ ಪ್ರಕಾರವೇ ನಡೆದುಕೊಂಡು ತಮ್ಮ ಕಾರ್ಯ ಸಾಧಿಸಿ ಕೊಳ್ಳುತ್ತಾರೆ. ನಾವಾದರೋ, ಬೆಳ್ಳಗಿರುವುದೆಲ್ಲಾ ಹಾಲು ಎನ್ನುವ ಸಮೂಹ. ಅಷ್ಟು ಮಾತ್ರವಲ್ಲ, ಬಿಳಿಯರ ಯುದ್ಧವನ್ನು ಪಾಕಿ ಸೈನಿಕರು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೂ ಅವರ ತಂಟೆಗೆ ಯಾರೂ ಹೋಗುವುದಿಲ್ಲ.  


ಇಂಥ ಕಸಿವಿಸಿಯುಂಟು ಮಾಡುವ ಘಟನೆಗಳಿಂದ ನಮಗೆ ಮುಕ್ತಿ ಕೊಡಿಸಲು ಚಾಣಕ್ಯ ಪುರಿಯ ಸಾಹೇಬರುಗಳಿಂದ (ಅಲ್ಲಿ ಈಗ ಮಹಿಳಾ ಸಾಹೇಬರೂ ಇದ್ದಾರೆ) ಸಾಧ್ಯವೇ? ಕೇವಲ ಕೋಪದಿಂದ ಒಂದು ಪತ್ರ ಬರೆದು ಸ್ಪಷ್ಟೀಕರಣ ಕೇಳಿ, ಸಂಜೆಯಾದ ಕೂಡಲೇ ಇದೇ ಬಿಳಿಯರ ಜೊತೆ ಸೇರಿಕೊಂಡು ಪಂಚತಾರಾ ಹೋಟೆಲುಗಳಲ್ಲಿ ಮಜಾ ಉಡಾಯಿಸುವವರಿಂದ ದೇಶ ತನಗೆ ಸಲ್ಲಬೇಕಾದ ಮಾನವನ್ನು ನಿರೀಕ್ಷಿಸ ಬಹುದೇ?


ಈ ತೆರನಾದ ಘಟನೆಗಳಿಗೆ ಬಿಳಿಯರ ದೃಷ್ಟಿದೋಷ ಕಾರಣವೋ ಅಥವಾ ನಮ್ಮಲ್ಲೇ ಏನಾದರೂ ನಮಗೇ ಕಾಣದ ಐಬಿದೆಯೋ ತಿಳಿಯದು. ಹೌದು ಕೆಲವೊಮ್ಮೆ ಪ್ರಮಾದಗಳು ಸಂಭವಿಸಿರಬಹುದು, ಅಂಥ ಘಟನೆಗಳನ್ನ ಆಧಾರವಾಗಿಟ್ಟು ಕೊಂಡು ನಮ್ಮನ್ನು ಈ ರೀತಿ ಹೀನಾಯವಾಗಿ ನಡೆಸಿಕೊಂಡರೆ ಅದಕ್ಕೆ ನಮ್ಮ ಉತ್ತರ ಹೇಗಿರಬೇಕು? ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಅಲಿಪ್ತ ನೀತಿಯ ಮೇಲೆ ವಿಪರೀತ ಅವಲಂಬನೆ ಮಾಡಿದ್ದರಿಂದ ನಮ್ಮಲ್ಲಿನ ರೋಷ ಮಾಯವಾಗಿ ಎಲ್ಲವನ್ನೂ ಸೈರಿಸಿಕೊಂಡು ಸೋತ ನಗೆಯೊಂದಿಗೆ ನಮ್ಮ ದಾರಿ ನೋಡಿ ಕೊಳ್ಳುವ ನಮ್ಮ ಜಾಯಮಾನ ನಮಗೇ ಮುಳು ವಾಗುತ್ತಿದೆ. ವಿದೇಶಾಂಗ ಇಲಾಖೆಗೆ ಹೊಸರಕ್ತ ತುಂಬಿ, ಈ ಇಲಾಖೆ ನಡೆಸಲು ವಯಸ್ಸಾದವರ ಅಗತ್ಯವಿಲ್ಲ, ಯುವ ಅಧಿಕಾರಿಗಳಿಗೆ ಸಿಗಲಿ ಚುಕ್ಕಾಣಿ.        


     

Rating
No votes yet

Comments