ಜ್ಯೋತಿಷ ಮತ್ತು ಜನ್ಮಸಮಯ

ಜ್ಯೋತಿಷ ಮತ್ತು ಜನ್ಮಸಮಯ

ಜ್ಯೋತಿಷ ಮತ್ತು ಸತ್ಯ ಎನ್ನುವ ಆನಂದರಾಮ ಶಾಸ್ತ್ರಿಗಳ ಲೇಖನವನ್ನು ಓದಿದ ಮೇಲೆ ಜ್ಯೋತಿಷದ ಬಗ್ಗೆ ನನ್ನ ಅಭಿಪ್ರಾಯವನ್ನು ಬರೆಯಬೇಕೆನಿಸಿತು.

ಒಂದು ಕಾಲದಲ್ಲಿ ನಾನೂ ಜ್ಯೋತಿಷವನ್ನು ಕಲಿಯಬೇಕು ಎಂದು ಹೊರಟವನು. ಆದರೆ ನನ್ನ ಮೂಲಭೂತ ’ತರ್ಲೆ’ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲಾಗದವರು ನಾನು ಜ್ಯೋತಿಷ ಕಲಿಯಲು ನಾಲಾಯಕ್ ಎಂದರು. ಹೌದು. ಜ್ಯೋತಿಷ ಕಲಿಯಲು ನಾನು ನಾಲಾಯಕ್ಕೆ!

೧. ಜ್ಯೋತಿಷದ ಮೊದಲ ಅರ್ಧ ಭಾಗವಾದ ಕುಂಡಲಿ ರಚನೆಯಲ್ಲಿ ಒಂದು ತರ್ಕಬದ್ಧವಾದ ಆಧಾರವಿದೆ. ಈ ಭಾಗವನ್ನು ಜ್ಯೋತಿಷ ಬಲ್ಲ ಯಾರೇ ಬೇಕಾದರೂ ರಚಿಸಲಿ, ಅದು ಏಕರೂಪವಾಗಿ ಬರುತ್ತದೆ.

೨. ಎರಡನೆಯ ಭಾಗ ಫಲಜ್ಯೋತಿಷ. ಜಾತಕದಲ್ಲಿ ಇಂತಿಂತಿಹ ಮನೆಯಲ್ಲಿ ಇಂತಿಂತಹ ಗ್ರಹಗಳಿದ್ದರೆ, ಇಂತಿಂತಹ ಫಲಗಳು ಬರುತ್ತವೆ ಎಂದು ವ್ಯಾಖ್ಯಾನಿಸುತ್ತಾರಲ್ಲ, ಅದರ ಬಗ್ಗೆ ನನ್ನ ತಕರಾರಿದೆ. ಒಂದೇ ಜಾತಕವನ್ನು ನೀವು ನಾಲ್ಕು ಜನರ ಬಳಿ ನೀಡಿದರೆ, ಅವರು ನಾಲ್ಕು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ನೀವು ಜಾತಕನ ಬದುಕನ್ನು ನೋಡಿದರೆ, ಅದು ಐದನೆಯ ರೀತಿಯಲ್ಲಿ ನಡೆದಿರುತ್ತದೆ. ಈ ವ್ಯಾಖ್ಯಾನಕ್ಕೆ ಯಾವುದೇ ರೀತಿಯ ತಾರ್ಕಿಕ ವಿವರಣೆಯೂ ನಿಮಗೆ ದೊರೆಯುವುದಿಲ್ಲ.

 

ಜ್ಯೋತಿಷಕ್ಕೆ ಸಂಬಂಧಪಟ್ಟ ಹಾಗೆ ನನ್ನ ಮೂಲಭೂತ ಪ್ರಶ್ನೆ ಮಗುವಿನ ಜನನ ಸಮಯ ನಿರ್ಧಾರದ ಬಗ್ಗೆ.

  • ತಾಯಿಯ ಯೋನಿಯಲ್ಲಿ ಮಗುವಿನ ತಲೆ ಕಾಣಿಸಿಕೊಂಡ ಸಮಯವನ್ನು ಜನನ ಸಮಯ ತೆಗೆದುಕೊಳ್ಳಬೇಕೆ?
  • ಮಗು ಪೂರ್ಣವಾಗಿ ಹೊರಬಂದ ಸಮಯವನ್ನು ತೆಗೆದುಕೊಳ್ಳಬೇಕೆ?
  • ಮಗುವು ನೆಲವನ್ನು ಸ್ಪರ್ಶಿಸಿದ ಸಮಯವನ್ನು ತೆಗೆದುಕೊಳ್ಳಬೇಕೆ? – ಇದುವೇ ಸರಿಯಾದ ಸಮಯ ಎಂದಾದಲ್ಲಿ, ಇಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ ನಡೆದಾಗ, ಮಗುವು ನೆಲವನ್ನು ಸ್ಪರ್ಶಿಸುವುದೇ ಇಲ್ಲ. ಎಲ್ಲವೂ ಹೆರಿಗೆಯ ಟೇಬಲ್ಲಿನ ಮೇಲೆಯೇ ನಡೆದುಹೋಗುತ್ತದೆ. ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ, ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ ಎನ್ನುವಂತಹ ಸಮಯದಲ್ಲಿ ಮಾತ್ರ ತಾಯಿಯು ಮಗುವನ್ನು ಅನಿವಾರ್ಯವಾಗಿ ನೆಲದ ಮೇಲೆ ಮಲಗಿಸುತ್ತಾಳೆ.
  • ಹೆರಿಗೆಯ ಟೇಬಲ್ ಭೂಮಿಯ ಮೇಲೆ ಇರುವುದರಿಂದ, ಮಗು ಟೇಬಲ್ಲನ್ನು ಸ್ಪರ್ಷಿಸಿದ ಕ್ಷಣವೇ ನೆಲವನ್ನೂ ಸ್ಪರ್ಶಿಸಿತು ಎಂದೇ ಭಾವಿಸೋಣ. ಕೆಲವು ಸಂದರ್ಭಗಳಲ್ಲಿ ಮಗುವು ಹುಟ್ಟಿದ ಕೂಡಲೇ ಅದನ್ನು ಟೇಬಲ್ಲಿನ ಮೇಲೆ ಬಿಡದೆ, ಮಗುವನ್ನು ಹಾಗೆಯೇ ತಾಯಿಯ ಹೊಟ್ಟೆಯ ಮೇಲೆ ಮಲಗಲು ಬಿಡುವುದುಂಟು. ತಾಯಿಯ ದೇಹದ ಕಾವು ಮಗುವಿಗೆ ಅಗತ್ಯವಾಗಿರುತ್ತದೆ. ಮಗುವ್ಬು ಸಾಕಷ್ಟು ಸಮಯ ತಾಯಿಯ ಹೊಟ್ಟೆಯ ಮೇಲೆಯೇ ಇರುವುದುಂಟು. ಅಂತಹ ಸಮಯದಲ್ಲಿ ಮಗುವಿನ ಜನನ ಸಮಯವನ್ನು ತಿಳಿಯುವುದು ಹೇಗೆ?
  • ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಮಗುವನ್ನು ಹೊರತೆಗೆಯುವಾಗ ಸಮಯವನ್ನು ಹೇಗೆ ನಿರ್ಧರಿಸುವುದು? ಗರ್ಭಾಶದಿಂದ ಮಗುವನ್ನು ಹೊರತೆಗೆದಾಗಲೋ ಇಲ್ಲವೇ ಹೊಕ್ಕಳುಬಳ್ಳಿಯನ್ನು ಕತ್ತರಿಸಿದಾಗಲೋ? ಇತ್ತೀಚಿನ ದಿನಗಳಲ್ಲಿ ‘ಒಳ್ಳೆಯ’ ದಿನವನ್ನು ನೋಡಿ ಸಿಸೇರಿಯನ್ ಮಾಡಿಸುವುದಿದೆ.
  • ವಾಸ್ತವದಲ್ಲಿ ಒಬ್ಬ ವ್ಯಕ್ತಿಯ ಭವಿಷ್ಯವನ್ನು ಹೇಳಬೇಕಾದರೆ, ಅವನ ಜೀವ ರೂಪುಗೊಂಡ ಸಮಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಅದುವೇ ವೈಜ್ಞಾನಿಕ ಎಂದು ಅಂಬೋಣ. ಅಂದರೆ, ಅಂಡಾಣು ಮತ್ತು ವೀರ್ಯಾಣು ಮಿಲನವಾಗುವ ಸಂದರ್ಭ. ಜಾತಕನ ಹೆತ್ತವರು ಕೂಡಿದ ಸಮಯ.
  • ಅಂಡಾಣು ಮತ್ತು ವೀರ್ಯಾಣುಗಳ ಮಿಲನದ ಸಮಯವನ್ನು ಹೇಗೆ ನಿರ್ಧರಿಸುವುದು ಎಂದು ಕೇಳಿದ್ದಕ್ಕೆ ನನಗೆ ದೊರೆತ ವಿವರಣೆ. ಹಿಂದಿನ ದಿನಗಳಲ್ಲಿ (?) ವಿವಾಹ ಎನ್ನುವುದು ಸಂತಾನಕ್ಕಾಗಿ ಮಾತ್ರ ಎಂದಾಗಿತ್ತು. ಆಗ ಸಂತಾನವನ್ನು ಪಡೆಯಬೇಕು ಎನ್ನುವುವರು, ತಮ್ಮ ತಮ್ಮ ಜಾತಕಗಳಿಗೆ (ನಕ್ಷತ್ರ) ಅನುಗುಣವಾಗಿ ನಿರ್ದಿಷ್ಟ ತಿಥಿ, ಸಮಯಗಳಲ್ಲಿಯೇ ಸಂಭೋಗವನ್ನು ನಡೆಸಬೇಕಿತ್ತಂತೆ! ಹಾಗೆ ನಡೆಸಿ, ನಿರೀಕ್ಷಿತ ಕಾಲಮಾನಕ್ಕೆ ಸರಿಯಾಗಿ ಮಗುವನ್ನು ಪಡೆದರೆ, ಆ ಮಗುವಿನ ಜಾತಕ ನಿಖರವಾಗಿರುತ್ತದೆಯಂತೆ. ಆಗ ಫಲಜ್ಯೋತಿಷ ಭಾಗ ನಿಜವಾಗುವುದಂತೆ!
  • ಇಂದಿನ ದಿನಗಳಲ್ಲಿ ಮದುವೆಯಾದ ರಾತ್ರಿಯೇ ಪ್ರಸ್ತವನ್ನು ಏರ್ಪಡಿಸುವುದು ಸಹಜ. ಆದರೆ ಇಂದಿಗೆ ೩೦-೪೦ ವರ್ಷಗಳ ಹಿಂದೆ ಹೀಗಿರಲಿಲ್ಲ. ಮದುವೆಯಾದ ದಂಪತಿಗಳ ಪ್ರಸ್ತಕ್ಕೆ ಕೆಲವು ಸಲ ೩ ತಿಂಗಳಿನವರೆಗೆ ಕಾಯಬೇಕಾಗಿತ್ತು. ಸಂತಾನ ದಾನಕ್ಕೆ ಸರಿಯಾದ ಸಮಯವನ್ನು ಕಾಯುತ್ತಾ!!!
  • ಜ್ಯೋತಿಷ ಎನ್ನುವುದು ವೈಜ್ಞಾನಿಕವೇ, ಅವೈಜ್ಞಾನಿಕವೇ ಎಂದು ನಿರ್ಧರಿಸುವುದರ ಮೊದಲು ಜ್ಯೋತಿಷದ ಕೆಲವು ಮೂಲಭೂತ ಪ್ರಶ್ನೆಗಳ ಬಗ್ಗೆ ವಿಚಾರ ಮಾಡಬೇಕಾಗುತ್ತದೆ ಹಾಗೂ ಆ ನಿಯಮಗಳಿಗೆ ಅನುಗುಣವಾಗಿ ಕುಂಡಲಿಯನ್ನು ಹಾಕಲಾಗಿದೆಯೇ ಎಂಬುದನ್ನು ವಿಚಾರ ಮಾಡಬೇಕಾಗುತ್ತದೆ.

 

-      ನಾಸೋ

Rating
No votes yet

Comments