ಫುಟ್ಬಾಲ್ ಆಟ ಏಕೆ ನೋಡಬೇಕು?

ಫುಟ್ಬಾಲ್ ಆಟ ಏಕೆ ನೋಡಬೇಕು?

ಬರಹ

  ಇದೀಗ ವಿಶ್ವಕಪ್ ಫುಟ್ಬಾಲ್ ಸಂಭ್ರಮ.
  ಫುಟ್ಬಾಲ್ ಆಟ ಏಕೆ ನೋಡಬೇಕು?
  ಈ ಪ್ರಶ್ನೆಗೆ ನಾನು ಸೂಕ್ತ ಉತ್ತರ ನೀಡಲು ಸಫಲನಾದರೆ ಫುಟ್ಬಾಲ್ ಆಟದ ಸೊಗಸನ್ನು ಸವಿಯುವವರ ಸಂಖ್ಯೆ ಅಷ್ಟರಮಟ್ಟಿಗೆ ಹೆಚ್ಚೀತೆಂಬ ಆಶಯ ನನ್ನದು.
  ನಮ್ಮಲ್ಲಿ ಬಹುತೇಕರು ಕ್ರಿಕೆಟ್ ಆಟ ನೋಡುತ್ತೇವೆ. ಅನೇಕರು ಯಾವ ಆಟವನ್ನೂ ನೋಡುವುದಿಲ್ಲ. ಆಟ ಆಡುವುದೊಂದು ಉಲ್ಲಾಸದಾಯಕ ಕ್ರಿಯೆಯಾದರೆ ಆಟ ನೋಡುವುದೊಂದು ರೋಮಾಂಚಕರ ಅನುಭವ.
  ಕ್ರಿಕೆಟ್ಟನ್ನು ಸಾಕಷ್ಟು ನೋಡಿದ್ದೇವೆ. ಐಪಿಎಲ್ ಎಂಬ ಮಾಂತ್ರಿಕನು, ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರೆ, ಆಟಗಾರರನ್ನು ವಶೀಕರಿಸಿಕೊಂಡು, ಭಾರತವು ಶ್ರೀಲಂಕಾದೆದುರು ಮಾತ್ರವಲ್ಲ, ಜಿಂಬಾಬ್ವೆಯೆದುರೂ ಸೋಲುವಂತೆ (ಅದೂ ಕೂಡ ಸತತವಾಗಿ ಎರಡು ಸಲ ಸೋಲುವಂತೆ) ಮಾಡಿಬಿಡುತ್ತಾನೆ! ಈ ಕ್ರಿಕೆಟ್ಟನ್ನು ಕೊಂಚ ಬದಿಗಿಟ್ಟು ಫುಟ್ಬಾಲ್ ಆಟದತ್ತ ಗಮನಹರಿಸೋಣ.
  ತಲಾ ನಲವತ್ತೈದು ನಿಮಿಷಗಳ ಎರಡು ಪಂದ್ಯಭಾಗಗಳ ಮಧ್ಯೆ ಕೇವಲ ಹದಿನೈದು ನಿಮಿಷ ಮಾತ್ರ ವಿಶ್ರಾಂತಿ. ಉಳಿದಂತೆ ತೊಂಬತ್ತು ನಿಮಿಷಗಳೂ ತಡೆಯಿಲ್ಲದ ಆಟದೋಟ. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಏನಾಗುತ್ತದೋ, ಯಾರು ಎಂಥ ಅದ್ಭುತ ಷಾಟ್ ಹೊಡೆಯುತ್ತಾರೋ, ಪಾಸ್ ಕೊಡುತ್ತಾರೋ, ಹೆಡ್ ಮಾಡುತ್ತಾರೋ, ಎದುರಾಳಿಯನ್ನು ವಂಚಿಸಿ ಗೋಲಿನತ್ತ ನುಗ್ಗಿ ಗೋಲು ಗಳಿಸುತ್ತಾರೋ, ಎದುರಾಳಿಯನ್ನು ಕೆಡೆದು ರೆಫ್ರಿಯ ಕಾರ್ಡ್‌ಗೆ ಭಾಜನರಾಗುತ್ತಾರೋ, ಗೋಲ್ ಕೀಪರ್ ಅದೆಂಥ ಅದ್ಭುತ ರೀತಿಯಲ್ಲಿ ಚೆಂಡನ್ನು ತಡೆಯುತ್ತಾನೋ ಎಂಬಂಥ ರೋಮಾಂಚನ! ಇಪ್ಪತ್ತೆರಡು ಆಟಗಾರರು ಒಂದೂವರೆ ಗಂಟೆ ಕಾಲ ಅಪ್ರತಿಮ ಲೆಕ್ಕಾಚಾರ, ಜಾಣ್ಮೆ, ಚುರುಕು ಮತ್ತು (ತಂಡದೊಂದಿಗೆ) ಹೊಂದಾಣಿಕೆ ಇವುಗಳನ್ನು ಪ್ರದರ್ಶಿಸುತ್ತ ಮೈದಾನದುದ್ದಕ್ಕೂ ಪಾದರಸದಂತೆ ಹರಿದಾಡುವುದನ್ನು ನೋಡುವುದೇ ಒಂದು ರೋಮಾಂಚಕರ ಅನುಭವ. ಇವರ ಕಾಲಿಗೆ ಸಿಕ್ಕ ಚೆಂಡಿನ ಓಟ-ಹಾರಾಟಗಳನ್ನು ಫಾಲೋ ಮಾಡುತ್ತಿದ್ದಂತೆ ನೋಡುಗರಿಗೂ ಎದ್ದೆದ್ದು ಕುಣಿಯುವ ಮನಸ್ಸು. ಆಟದ ನಿಯಮ ಅಷ್ಟಾಗಿ ಗೊತ್ತಿಲ್ಲದವರನ್ನೂ ಆಕರ್ಷಿಸಬಲ್ಲ ಅದ್ಭುತ ಆಟವಿದು. ಗೋಲ್ ಆದಾಗ ಅಥವಾ ಗೋಲ್ ಕೀಪರನು ಚೆಂಡನ್ನು ತಡೆದಾಗ, ಟಿವಿಯೆದುರು ಕುಳಿತ ಎಳೆ ಮಕ್ಕಳೂ ಒಮ್ಮೆ ಚೆಂಗನೆ ಪುಟಿಯುತ್ತಾರೆ! ಅಂಥ ಭಾವೋತ್ಕರ್ಷ ನೀಡುವ ಕ್ರೀಡೆಯಿದು.
  ’ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು, ಫುಲ್ಲಲೋಚನ ಶ್ರೀ ಕೃಷ್ಣನಾಮವೆಂಬ, ಕಲ್ಲುಸಕ್ಕರೆ ಕೊಳ್ಳಿರೋ’, ಎಂದು ಪುರಂದರ ದಾಸರು ಹೇಳಿರುವಂತೆ, ನಾನೀಗ ಹೇಳುತ್ತಿದ್ದೇನೆ,
  ’ಕಾಲ್ಚೆಂಡಾಟದ ಸೊಗಸು ಕಂಡವರೆ ಬಲ್ಲರು, ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯೆಂಬ ಕಾಲ್ಚೆಂಡಾಟವ ನೋಡಿರೋ’.
  ವೀಕ್ಷಣೆಗಾಗಿ ಆಟಗಳ ಆಯ್ಕೆಯಲ್ಲಿ ನಿಮಗೆ ನೆರವಾಗುವ ಒಂದು ಪಟ್ಟಿಯೊಡನೆ ಮತ್ತು ಕೆಲವು ಕುತೂಹಲಕರ ಮಾಹಿತಿಗಳೊಡನೆ ನಾಳೆ ಮತ್ತೆ ಬರೆಯುತ್ತೇನೆ.