ಉಡುಪಿ ಕೃಷ್ಣನ ದರ್ಶನ
ಉಡುಪಿ ಕೃಷ್ಣನಿಗೆ ಮಹಾಪೂಜೆ ಸಲ್ಲಿಸುವ ಮೊದಲ ಹಕ್ಕು ಪರ್ಯಾಯ ಮಠದ ಸ್ವಾಮಿಗಳಿಗೆ ಮಾತ್ರ. ಈ ಮಹಾಪೂಜೆಯನ್ನೂ ಸೇರಿಸಿ ಕೃಷ್ಣನಿಗೆ ದಿನಾಲೂ ೧೬ ಪೂಜೆಗಳಿವೆ. ಉಳಿದ ಮಠದ ಸ್ವಾಮಿಗಳು ಮಹಾಪೂಜೆಯೊಂದನ್ನು ಬಿಟ್ಟು ಇತರ ೧೫ ಪೂಜೆಗಳಲ್ಲಿ ಯಾವುದನ್ನಾದರೂ ಸಲ್ಲಿಸಬಹುದು. ತಮ್ಮ ಪರ್ಯಾಯವಲ್ಲದ ಸಮಯದಲ್ಲಿ ಇತರ ಮಠದ ಸ್ವಾಮಿಗಳು ಪೂಜೆ ಸಲ್ಲಿಸಲೇಬೇಕೆಂಬ ಯಾವ ನಿಯಮವೂ ಇಲ್ಲ. ಪೂಜೆ ಸಲ್ಲಿಸುವುದು ಅವರವರ ಇಷ್ಟ. ಪೂಜೆಯನ್ನು ಸಲ್ಲಿಸುವಲ್ಲಿ ಹಿರಿಯ ಸ್ವಾಮಿಗಳಿಗೆ ಆದ್ಯತೆ ನೀಡಲಾಗುತ್ತದೆ. ಇತರ ಮಠಗಳ ಸ್ವಾಮಿಗಳು ಪೂಜೆ ಸಲ್ಲಿಸಿದ ಬಳಿಕ ನಂತರ ಉಳಿದ ಇತರ ಪೂಜೆಗಳನ್ನು ಪರ್ಯಾಯ ಮಠದ ಸ್ವಾಮಿಯವರು ಸಲ್ಲಿಸುತ್ತಾರೆ. ಒಂದು ವೇಳೆ ಆ ದಿನ ಉಳಿದ ೭ ಮಠಗಳ ಸ್ವಾಮಿಗಳು ಯಾವುದೇ ಪೂಜೆ ಸಲ್ಲಿಸದೇ ಇದ್ದಲ್ಲಿ, ಪರ್ಯಾಯ ಮಠದ ಸ್ವಾಮಿಗಳೇ ದಿನದ ಎಲ್ಲಾ ಪೂಜೆಗಳನ್ನೂ ಸಲ್ಲಿಸಬೇಕು.
ಕೃಷ್ಣನಿಗೆ ಹಲವಾರು ಅಲಂಕಾರಗಳಿವೆ. ೪೦೦ ವರ್ಷಗಳ ಮೊದಲು ವಾದಿರಾಜ ಸ್ವಾಮಿಗಳು ಕೃಷ್ಣನಿಗೆ ೪೦೦ ಅಲಂಕಾರಗಳನ್ನು ಮಾಡಿದ್ದು ಇದುವರೆಗಿನ ದಾಖಲೆ. ಈ ವಾದಿರಾಜ ಸ್ವಾಮಿಗಳೇ ಪರ್ಯಾಯದ ಅವಧಿಯನ್ನು ೨ ತಿಂಗಳಿನಿಂದ ೨ ವರ್ಷಕ್ಕೆ ವಿಸ್ತರಿಸಿದವರು. ಇವರ ಹೆಸರಿನಲ್ಲಿರುವ ೪೦೦ ಅಲಂಕಾರಗಳ ದಾಖಲೆಯನ್ನು ಮುರಿಯಲು ಈಗಿನ ಪರ್ಯಾಯ ಸ್ವಾಮಿಗಳಿಗೆ ಮುಜುಗರ. ತಾನು ವಾದಿರಾಜ ಸ್ವಾಮಿಗಳಷ್ಟು ಪಾಂಡಿತ್ಯ ಗಳಿಸಿಲ್ಲ, ಅವರ ಮಟ್ಟಕ್ಕಿನ್ನೂ ತಾನು ತಲುಪಿಲ್ಲ ಎಂಬ ಭಾವನೆ ಈ ಸ್ವಾಮಿಗಳದ್ದು. ಆದ್ದರಿಂದ ಶಿರೂರು ಸ್ವಾಮಿಗಳು ೩೬೫ ಅಲಂಕಾರಗಳನ್ನು ಮಾಡುವ ನಿರ್ಧಾರ ಮಾಡಿದ್ದಾರೆ. ಅವರ ಅಲಂಕಾರಗಳಿನ್ನೂ ಆರಂಭಗೊಂಡಿಲ್ಲ. ಕೃಷ್ಣನಿಗೆ ಈಗ ಉಳಿದ ಮಠಗಳ ಸ್ವಾಮಿಗಳು ತಾವು ಪೂಜೆ ಸಲ್ಲಿಸುವಾಗ ಅಲಂಕಾರ ಮಾಡುತ್ತಾರೆ.
ಉಡುಪಿ ಕೃಷ್ಣನ ಪ್ರತಿದಿನದ ಅಲಂಕಾರದ ಚಿತ್ರವನ್ನು ಮಧ್ಯಾಹ್ನ ೨ ಗಂಟೆಯ ಒಳಗೆ ಶಿರೂರು ಮಠದ ಅಂತರ್ಜಾಲ ತಾಣದ ಮುಖಪುಟದಲ್ಲಿ ಪ್ರಕಟಿಸಿಯಾಗಿರುತ್ತದೆ. ದೂರದೂರಿನ ಕೃಷ್ಣನ ಪರಮಭಕ್ತರು ಈಗ ಅಂತರ್ಜಾಲದಲ್ಲೇ ಕೃಷ್ಣನ ಪ್ರತಿದಿನದ ಅಲಂಕಾರ ಮತ್ತು ಪೂಜೆ ಇತ್ಯಾದಿಗಳ ಚಿತ್ರಗಳನ್ನು ನೋಡಿ ಸಂತುಷ್ಟರಾಗುತ್ತಿದ್ದಾರೆ. ಈಗ ಕೃಷ್ಣ ದೇವಾಲಯದಲ್ಲಿ ಪ್ರತಿದಿನ ಆಗುವ ಕಾರ್ಯಗಳ (ಪೂಜೆ, ಹರಕೆ, ರಥೋತ್ಸವ, ಏಕಾದಶಿ ವಿಶೇಷ, ಇತ್ಯಾದಿ) ಚಿತ್ರಗಳನ್ನು ಕೂಡಾ ಅದೇ ದಿನ ಶಿರೂರು ಮಠದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗುತ್ತಿದೆ. ಆಯಾ ದಿನಗಳ ಕಾರ್ಯಕ್ರಮಗಳ ಚಿತ್ರಗಳನ್ನು ತಾಣದೊಳಗೆ ಪ್ರವೇಶಿಸಿದರೆ ಬಲಭಾಗದಲ್ಲಿರುವ ಕೊಂಡಿಗಳ ಮೂಲಕ ಕಾಣಬಹುದು. ಕೃಷ್ಣನ ಭಕ್ತರು ಇನ್ನು ಶಿರೂರು ಮಠದ ಅಂತರ್ಜಾಲ ತಾಣವನ್ನು ’ನೋಟ್’ ಮಾಡಿಟ್ಟುಕೊಳ್ಳಿರಿ. ಕಂಪ್ಯೂಟರ್ ಪರದೆಯಲ್ಲೇ ಶ್ರೀ ಕೃಷ್ಣ ದರ್ಶನ!
ಗೆಳೆಯ ಗುರುದತ್ತ ಒಬ್ಬ ಅದ್ಭುತ ಫೋಟೋಗ್ರಾಫರ್. ಪ್ರತಿ ದಿನದ ಅಲಂಕಾರವನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯುವುದು ಈಗ ಗುರುದತ್ತನ ಕೆಲಸ. ಈಗ ಗುರು ತನ್ನನ್ನು ಸಂಪೂರ್ಣವಾಗಿ ಕೃಷ್ಣನ ಸೇವೆಗೆ ಮುಡಿಪಾಗಿಟ್ಟಿದ್ದಾನೆ. ಚಾರಣವಿಲ್ಲ, ಬೇರೆ ಫೋಟೋಗ್ರಾಫಿ ಅಸೈನ್-ಮೆಂಟುಗಳಿಲ್ಲ, ಪ್ರೊಫೆಷನಲ್ ಶೂಟ್-ಗಳಿಲ್ಲ, ಪ್ರಕೃತಿಯ ಜೊತೆ ಒಡನಾಟವಿಲ್ಲ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈಗ ಕೃಷ್ಣನ ಸೇವೆ ಬಿಟ್ಟು ಬೇರೇನೂ ಇಲ್ಲ! ಕೃಷ್ಣನ ಸೇವೆ ದಿನಾಲೂ ಮಾಡುವುದರಿಂದ ಕೆಲವು ಆಚರಣೆಗಳನ್ನು ಗುರು ತನ್ನ ದಿನನಿತ್ಯದ ಜೀವನದಲ್ಲಿ ಈಗ ಅಳವಡಿಸಿಕೊಳ್ಳಬೇಕಾಗಿದೆ. ಮುಂಜಾನೆ ಬಲೂ ಬೇಗ ಸ್ನಾನ, ಮಡಿ ಆಚರಣೆ, ಕೇವಲ ಸಸ್ಯಹಾರಿ ಆಹಾರ ಸೇವನೆ, ಬ್ರಹ್ಮಚಾರಿ ಜೀವನ, ಇತ್ಯಾದಿ. ದಿನಾಲೂ ಚಿತ್ರ ತೆಗೆಯಲು ಇರುವುದರಿಂದ ಮುಂದಿನ ಪರ್ಯಾಯದವರೆಗೆ ಉಡುಪಿ ಬಿಟ್ಟು ಹೋಗುವಂತಿಲ್ಲ! ಗುರುವಿನ ಡೆಡಿಕೇಶನ್ ಮೆಚ್ಚಲೇಬೇಕು. ಆದರೂ ನಮಗೆಲ್ಲ ಸಣ್ಣ ಗಾಬರಿಯೊಂದು ಆರಂಭವಾಗಿದೆ. ಎರಡು ವರ್ಷಗಳ ಕೃಷ್ಣನ ಮತ್ತು ಸ್ವಾಮಿಗಳ ಸಾಮೀಪ್ಯದ ಬಳಿಕ ತಾನು ಇನ್ನು ಸನ್ಯಾಸಿಯಾಗುತ್ತೇನೆ ಎಂದು ಈತ ಹೊರಟರೆ...!
ಗುರುದತ್ ತೆಗೆದಿರುವ ಕೆಲವು ಚಿತ್ರಗಳನ್ನು ಸಂಪದ ಚಿತ್ರಪುಟಗಳಲ್ಲಿ ಹಾಕಿರುವೆ. ಈ ಸಂಪದದಲ್ಲಿ ಲೇಖನದಲ್ಲೇ ಚಿತ್ರಗಳನ್ನು ಹಾಕಲು ಹಲವಾರು ಬಾರಿ ಪ್ರಯತ್ನಿಸಿ ವಿಫಲನಾಗಿದ್ದೇನೆ. ಈ ಬಾರಿಯೂ ಮತ್ತೆ ವಿಫಲನಾದೆ. ಆದ್ದರಿಂದ ಚಿತ್ರಗಳನ್ನು ನೋಡಲು ಚಿತ್ರಪುಟಗಳೆಡೆ ತೆರಳುವುದು ಅನಿವಾರ್ಯ.
(ಸೂಚನೆ: ಚಿತ್ರ ಸೇರಿಸಲಾಗಿದೆ. ಸಂಪದದಲ್ಲಿ ಚಿತ್ರ ಸೇರಿಸುವುದು ತೀರ ಅಷ್ಟೊಂದು ಕಷ್ಟ ಇಲ್ಲ. ಮೊದಲು ರಾಜೇಶ್ ಸೇರಿಸಿರುವಂತೆ ಚಿತ್ರಪುಟದಲ್ಲಿ ಚಿತ್ರ ಸೇರಿಸುವುದು. ನಂತರ ಚಿತ್ರದ ಮೇಲೆ ರೈಟ್ ಕ್ಲಿಕ್ ಮಾಡಿ ಅದರ ಲಿಂಕ್ ಸೇವ್ ಮಾಡಿಟ್ಟುಕೊಳ್ಳಿ. ಲೇಖನ ಅಪ್ಲೋಡ್ ಮಾಡುವ ಸಮಯ ಚಿತ್ರ ಸೇರಿಸುವ ಬಟನ್ (ಕೊನೆಯಿಂದ ಮೂರನೆಯದು) ಬಳಸಿ ಚಿತ್ರ ಲಿಂಕ್ ಮಾಡಬಹುದು. - ನಿರ್ವಹಣೆ ತಂಡ)