ಮನವ ಸಂತೈಸುವ ಸ್ಮಾರ್ಟ್ ಉಡುಗೆಗಳು

ಮನವ ಸಂತೈಸುವ ಸ್ಮಾರ್ಟ್ ಉಡುಗೆಗಳು

ಬರಹ

ಮನವ ಸಂತೈಸುವ ಸ್ಮಾರ್ಟ್ ಉಡುಗೆಗಳು

ಇಲೆಕ್ಟ್ರಾನಿಕ್ ಸಂವೇದಕಗಳನ್ನು ಹೊತ್ತ ಉಡುಗೆ ತೊಡುಗೆಗಳ ವಿವಿಧ ಮಾದರಿಗಳ ಪ್ರಯೋಗಾರ್ಥ ಪರೀಕ್ಷೆಗಳು ನಡೆಯುತ್ತಿವೆ.ಹೃದಯದ ಮಿಡಿತ,ದೇಹದ ಉಷ್ಣತೆ,ಚರ್ಮದ ಬೆವರುವಿಕೆ ಹೀಗೆ ವಿವಿಧ ಅಂಶಗಳನ್ನು ಗ್ರಹಿಸಲು ಸಂವೇದಕಗಳನ್ನು ಹೊತ್ತ,ಉಡುಪುಗಳನ್ನು ತಯಾರಿಸಲಾಗಿದೆ.ಇವು ಸತತವಾಗಿ ನಿಸ್ತಂತು ಸಂಪರ್ಕದ ಮೂಲಕ ಧರಿಸಿದವನ ದೇಹ ಸ್ಥಿತಿಯನ್ನು ಅಂತರ್ಜಾಲದ ತಾಣಕ್ಕೆ ರವಾನಿಸುತ್ತವೆ.ಆ ತಾಣದಲ್ಲಿ ವ್ಯಕ್ತಿಯ ಸಾಮಾನ್ಯ ಸ್ಥಿತಿಯಲ್ಲಿ ಈ ಅಂಶಗಳ ಬಗ್ಗೆ ಮಾಹಿತಿಯಿದ್ದರೆ,ಈಗಿನ ಸ್ಥಿತಿಯಲ್ಲಿ ಆತನ ಮಾನಸಿಕ ಸ್ಥಿತಿ ಹೇಗಿರಬಹುದು ಎನ್ನುವುದನ್ನು ಕಂಡುಕೊಳ್ಳಬಹುದು.ಅಂತರ್ಜಾಲ ತಾಣದಿಂದ ವ್ಯಕ್ತಿಯ ಭಾವನಾತ್ಮಕ ಸ್ಥಿತಿಗನುಗುಣವಾಗಿ,ಹಾಡುಗಳನ್ನು ಕೇಳಿಸುವ ಸೂಚನೆ ಹೋದರೆ,ಅದನ್ನು ನುಡಿಸಲು ಸ್ಪೀಕರುಗಳು ಉಡುಪಿನಲ್ಲಿ ಹುದುಗಿಸಿಟ್ಟ ಕಾರಣ ಸಾಧ್ಯವಾಗುತ್ತದೆ.ಉಡುಪಿನಲ್ಲಿ ಸರಳ ಚಿತ್ರಗಳು ಮತ್ತು ಸಂದೇಶಗಳನ್ನು ಪ್ರದರ್ಶಿಸಬಲ್ಲ ಎಲ್ ಇ ಡಿ ತೆರೆಯೂ ಇದೆ.
---------------------------------------------------
ನೌಕರಿ ಹುಡುಕಲು ನವೀನ ಸಹಾಯ
ನೌಕರಿ ಹುಡುಕುವವ ಫೇಸ್‌ಬುಕ್ ಬಳಕೆದಾರರಿಗೆ, ಹೊಸ ನಮೂನೆಯ ಸಹಾಯ ಸಿಗುತ್ತಲಿದೆ.ಸಾಮಾನ್ಯವಾಗಿ,ನಿಮ್ಮ ಆಯ್ಕೆಯ ಕಂಪೆನಿ,ಸ್ಥಳ ಮತ್ತು ಸಂಬಳ ಇಂತಹ ಆಯ್ಕೆಯ ಮೇಲೆ ಲಭ್ಯವಿರುವ ನೌಕರಿಗಳನ್ನು ಪಟ್ಟಿ ಮಾಡುವ ಸವಲತ್ತು ಹಲವು ಅಂತರ್ಜಾಲ ತಾಣಗಳಲ್ಲಿ ಲಭ್ಯವಿವೆ.ಫೇಸ್‌ಬುಕ್ ಬಳಕೆದಾರರಿಗೆ ಸಿಂಪ್ಲಿಹೈರಡ್ ತಾಣವು ನವೀನ ಸೌಲಭ್ಯವನ್ನು ನೀಡುತ್ತಿದೆ.ಅದರ ಪ್ರಕಾರ,ವ್ಯಕ್ತಿಯ ಗೆಳೆಯರು ಕೆಲಸ ಮಾಡುವ ಕಂಪೆನಿಗಳಲ್ಲಿ ಲಭ್ಯವಿರುವ ನೌಕರಿಗಳ ವಿವರಗಳನ್ನು ನೀಡಲಾಗುತ್ತಿದೆ.ನಿಮ್ಮಿಷ್ಟದ ಜಾಗದಲ್ಲಿ,ನಿಮಗರ್ಹವಾದ ಕೆಲಸಗಳು,ಬೇಕಾದ ಕಂಪೆನಿಯಲ್ಲಿ ಲಭ್ಯವಿದ್ದರೆ,ಅಲ್ಲಿ ಕೆಲಸ ಮಾಡುವ ನಿಮ್ಮ ಸ್ನೇಹಿತರ ವಿವರಗಳನ್ನೂ ಪೇಸ್‌ಬುಕ್‌ನ ಸೇವೆಯಲ್ಲಿ ಪಡೆಯಬಹುದು.ಒಂದು ವೇಳೆ ಕೆಲಸಕ್ಕೆ ಅರ್ಜಿ ಹಾಕಲು ತೀರ್ಮಾನಿಸಿದರೆ,ವ್ಯಕ್ತಿ ತನ್ನ ಗೆಳೆಯರಿಗೆ ಖಾಸಗಿ ಸಂದೇಶ ಕಳುಹಿಸಿ, ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಕಂಪೆನಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲೂ ಈ ಸವಲತ್ತನ್ನು ಪಡೆಯಬಹುದು.ಗೆಳೆಯರ ಶಿಫಾರಸನ್ನು ಪಡೆಯಲೂ ಸಿಂಪ್ಲಿಹೈರಡ್ ಸೇವೆ ಸಹಕಾರಿ.ಅಂದ ಹಾಗೆ ಆ ಅಂತರ್ಜಾಲ ತಾಣವು SimplyHired.com ವಿಳಾಸದಲ್ಲಿದೆ.
-----------------------------------------------------
ಆನ್‌ಲೈನಿನಲ್ಲಿ ದಿನಬಳಕೆ ವಸ್ತು ಖರೀದಿ ಮಾಡಿ




ದಿನಬಳಕೆಯ ಸಾಬೂನಿನಂತಹ ಖರೀದಿಯನ್ನು ಅಂತರ್ಜಾಲದ ಇ-ವ್ಯವಹಾರದ ಮೂಲಕ ಮಾಡುವವರು ಹೆಚ್ಚಿಲ್ಲ.ಆದರೆ ಜನರಲ್ಲಿ ಅಂತಹ ಪ್ರವೃತ್ತಿಯನ್ನು ಹುಟ್ಟುಹಾಕಲು ಬಯಸಿರುವ ತಾಣ www.soap.com ಈಗ ಆರಂಭವಾಗಿದೆ.ಸಾಬೂನಿನಂತಹ ವಸ್ತುಗಳು ವಿಶೇಷ ಮುತುವರ್ಜಿ ವಹಿಸಿ ಖರೀದಿಸ ಬೇಕಾದ ವಸ್ತುವಲ್ಲ.ಟೂತ್‌ಪೇಸ್ಟ್,ಬ್ರಶ್,ಶಾಂಪೂ,ಡಿಟರ್ಜಂಟ್ ಮುಂತಾದ ಹಲವು ಸಾಮಗ್ರಿಗಳನ್ನು ನಾವು ನಿಗದಿತ ಬ್ರಾಂಡ್ ಹೆಸರಿನ ಮೂಲಕ ಖರೀದಿಸುವುದೇ ಹೆಚ್ಚು.ಹಾಗಾಗಿ ಇವುಗಳನ್ನು ಆನ್‌ಲೈನಿನಲ್ಲಿ ಖರೀದಿಸಿ,ಕೊರಿಯರ್ ಮೂಲಕ ತಕ್ಷಣ ಪಡೆಯಲು ಅವಕಾಶ ನೀಡುವ ಸೇವೆಯನ್ನು ಅಂತರ್ಜಾಲ ತಾಣವು ಒದಗಿಸುತ್ತದೆ.http://www.diapers.com/ ಅಂತರ್ಜಾಲ ತಾಣದ ಯಶಸ್ಸಿನಿಂದ ಉತ್ತೇಜಿತರಾದವರು ಸೋಪ್.ಕಾಂ ತಾಣವನ್ನು ಆರಂಬಿಸಿದ್ದಾರೆ.ಡಯಾಪರ್.ಕಾಂ ತಾಣವು ಮಕ್ಕಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ತಾಣ.
------------------------------------------------------------
ಬಿಗಿ ಸೆನ್ಸಾರ್:ಚೀನಾ ತ್ಯಜಿಸುತ್ತಿರುವ ಎಳೆಯರು
ಅನಿರ್ಬಂಧಿತ ಅಂತರ್ಜಾಲ ಜಾಲಾಟಕ್ಕೆ ಚೀನಾದಲ್ಲಿ ಅವಕಾಶವಿಲ್ಲ.ಗೂಗಲ್ ತನ್ನ ನಿಯಮಗಳಡಿ,ಶೋಧದ ಫಲಿತಾಂಶಗಳನ್ನು ನೀಡಲು ನಿರಾಕರಿಸಿದ ಬಳಿಕ,ಗೂಗಲ್ ಸೇವೆಯು ಚೀನಾದಲ್ಲೀಗ ಲಭ್ಯವಿಲ್ಲ.ಇಂತಹ ನಿರ್ಬಂಧಗಳು ಅಲ್ಲಿನ ಯುವಜನರಿಗೆ ಇಷ್ಟವಾಗುತ್ತಿಲ್ಲ.ಸದ್ಯ ಸ್ವತಂತ್ರ ಆಡಳಿತವನ್ನು ಹೊಂದಿರುವ ಹಾಂಕಾಂಗ್,ಚೀನಾಕ್ಕೆ ವ್ಯತಿರಿಕ್ತವಾಗಿ,ಮಾಹಿತಿಯ ಮೇಲೆ ಯಾವುದೇ ನಿರ್ಬಂಧ ಹೇರುತ್ತಿಲ್ಲ.ಉನ್ನತ ಶಿಕ್ಷಣ ಪಡೆಯಲು ಚೀನಾದ ಯುವಜನತೆ,ಹಾಂಕಾಂಗಿನ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಮುಗಿಬೀಳುತ್ತಿದೆ.ಹಾಂಕಾಂಗಿನ ವಿವಿಯ ಮುನ್ನೂರು ಸೀಟಿಗೆ ಹನ್ನೆರಡು ಸಾವಿರ ಅರ್ಜಿಗಳು ಬರುತ್ತಿವೆ ಎಂದರೆ,ಬೇಡಿಕೆಯ ಪ್ರಮಾಣ ಅರ್ಥವಾದೀತು. ಒಮ್ಮೆ ಅಲ್ಲಿ ವಿದ್ಯಾಭ್ಯಾಸ ಮುಗಿಸಿದವರು,ಮರಳಿ ದೇಶಕ್ಕೆ ಬರುವ ಪ್ರವೃತ್ತಿಯೂ ಇಲ್ಲ.ಹಾಗಾಗಿ ಪ್ರತಿಭಾ ಪಲಾಯನದ ಸಮಸ್ಯೆ ಚೀನಾವನ್ನು ಕಾಡಹತ್ತಿದೆ.ಚೀನಾದ ಸರಕಾರ ಅಂತವರನ್ನು ಮರಳಿ ಬರುವಂತೆ ಮಾಡಲು,ಅವರಿಗೆ ವಿಶೇಷ ಸವಲತ್ತುಗಳ ಆಕರ್ಷಣೆ ಒಡ್ಡುವ ಯತ್ನದಲ್ಲಿದೆ.
---------------------------------------
ಮುಕ್ತ ತಂತ್ರಾಂಶ ಅಭಿವೃದ್ಧಿ ಮಾಡುವವರಿಗೆ ಕಾದಿರುವ ಸ್ಕಾಲರ್‌ಶಿಪ್‌ಗಳು
ಮುಕ್ತ ಮತ್ತು ಉಚಿತ ತಂತ್ರಾಂಶದಲ್ಲಿ ತೊಡಗಿರುವ ವಿದ್ಯಾರ್ಥಿ ಸಮುದಾಯವನ್ನು ಪ್ರೋತ್ಸಾಹಿಸಲು ಶಿಷ್ಯವೇತನಗಳನ್ನು ನೀಡುವ ಕ್ರಮ ಜಾರಿಗೆ ಬರುತ್ತಿವೆ.ರೆಡ್‌ಹ್ಯಾಟ್ ಕಂಪೆನಿಯು ಫೆಡೋರಾ ಸ್ಕಾಲರ್‌ಶಿಪ್‌ಗಳನ್ನು ಹೈಸ್ಕೂಲ್ ಮಟ್ಟದ ವಿದ್ಯಾರ್ಥಿಗಳಿಗೂ ನೀಡಲು ಮುಂದೆ ಬಂದಿದೆ.ಕಲಿಕೆಗೆ ಸಹಾಯಧನ ಮತ್ತು ಉಚಿತ ಪ್ರವಾಸ ಯೋಜನೆಯಂತವು ಈ ಯೋಜನೆಯಲ್ಲಿ ಸೇರಿವೆ.
-----------------------------------------------------------------------
ಸೈಕಲ್ ಸವಾರಿ ಮಾಡಿ,ಮೊಬೈಲ್ ಚಾರ್ಜ್ ಮಾಡಿ!
ಸೈಕಲಿನ ಡೈನಮೋದ ಮೂಲಕ ಮೊಬೈಲ್ ಚಾರ್ಜ್ ಮಾಡಲು ಸಾಧ್ಯ.ನೋಕಿಯಾವು ಇಂತಹ ಕಿಟ್‌ಗಳನ್ನು ಒದಗಿಸಲಾರಂಭಿಸಿದೆ.ಮೊಬೈಲನ್ನು ಹಿಡಿದುಕೊಳ್ಳಲು, ಈ ಕಿಟ್‌ನಲ್ಲಿ ವ್ಯವಸ್ಥೆಯಿದೆ.ಮೊಬೈಲ್ ಹ್ಯಾಂಡ್‌ಸೆಟ್ ರಿಚಾರ್ಜ್ ಮಾಡಲು ಕನಿಷ್ಠ ಪ್ರತಿ ಗಂಟೆಗೆ ಹತ್ತು ಕಿಲೋಮೀಟರ್ ವೇಗದಲ್ಲಿ ಸೈಕಲ್ ಸವಾರಿ ಮಾಡುವುದಗತ್ಯವಂತೆ.ಹತ್ತು ನಿಮಿಷ ಸೈಕಲ್ ಸವಾರಿ ಮಾಡಿದರೆ,ರಿಚಾರ್ಜ್ ಆಗಿಬಿಡುತ್ತದೆ.ಬೆಲೆ ಆರುನೂರು ರೂಪಾಯಿಗಳು.ವಿದ್ಯುತ್ ಪೂರೈಕೆ ಸರಿಯಾಗಿಲ್ಲದೆಡೆ ಬಳಸಲಿವು ಸೂಕ್ತ.
-------------------------------------------------------------
ಓದುಗರ ಆಯ್ಕೆ:ಕಲಿಕಾ ಸಂಪನ್ಮೂಲಗಳ ಪುನರ್ಬಳಕೆ
ಪಠ್ಯಪುಸ್ತಕಗಳಲ್ಲಿ ಮಾಹಿತಿಯು ಕ್ರಮಾನುಗತವಾಗಿ ಇರುತ್ತದೆ.ನಾವು ಹೊಸ ವಿಷಯಗಳನ್ನು ಕಲಿಯುವಾಗ ನಮಗೆ ಈಗಾಗಲೇ ತಿಳಿದಿರುವ ವಿಷಯಕ್ಕೆ ಸಂಬಂಧ ಕಲ್ಪಿಸುವ ಮೂಲಕ ಹೊಸ ವಿಷಯವನ್ನು ಅರ್ಥ ಮಾಡಿಕೊಳ್ಳುವ ಪ್ರವೃತ್ತಿಯನ್ನು ತೋರುತ್ತೇವೆ.ಅಂತರ್ಜಾಲದಲ್ಲಿ ಹೊಸ ಮಾಹಿತಿಗಳನ್ನು ಇದೇ ರೀತಿ ಪ್ರಸ್ತುತ ಪಡಿಸಲು ಅವಕಾಶ ನೀಡುವ ತಾಣವು http://cnx.org ವಿಳಾಸದಲ್ಲಿ ಲಭ್ಯವಿದೆ.ಇತರರ ಜತೆ ಸೇರಿಕೊಂಡು ಕಲಿಕಾ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಲು ಇಲ್ಲಿ ಅನುಕೂಲ ಕಲ್ಪಿಸಲಾಗಿದೆ.ಮಾಹಿತಿಯನ್ನು ಮೂಲದಿಂದ ಅಭಿವೃದ್ಧಿ ಪಡಿಸುವ ಬದಲು,ಲಭ್ಯ ಮಾಹಿತಿಯನ್ನು ಮತ್ತೆ ಬಳಸಿಕೊಂಡು,ತುಸು ಹೊಸ ಮಾಹಿತಿಯನ್ನದಕ್ಕೆ ಸೇರಿಸಲು ಸಾಧ್ಯ.ಸಹಭಾಗಿತ್ವದಲ್ಲಿ ಕಲಿಕಾ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಲು ಇಲ್ಲಿ ಸಾಧ್ಯವಾಗುತ್ತದೆ.ಕಾರ್ಕಳದ ರಾಕೇಶ್ ಈ ತಾಣದ ಬಗ್ಗೆ ನಮ್ಮ ಗಮನ ಸೆಳೆದವರು.
-----------------------------------------------------------
ಕೇಕು ಮಹಾಶಯರ ನೀಲುಗಳು


ವೃತ್ತಿಯಲ್ಲಿ ರೇಡಿಯಾಲಜಿಸ್ಟ್‌ರಾದ ಡಾ.ಕೇಶವ ಕುಲಕರ್ಣಿಯವರಿಗೆ ,ಬರವಣಿಗೆ ಹವ್ಯಾಸ.ಯುಕೆಯಲ್ಲಿ ವೃತ್ತಿಯಲ್ಲಿ ತೊಡಗಿದ್ದರೂ ತೊದಲಮಾತು ಮೂಲಕ ಕನ್ನಡಿಗರ ಜತೆ ಸಂಪರ್ಕದಲ್ಲಿರುವ ಕೇಕು ಮಹಾಶಯರು "ನೀಲು" ಹನಿಗವನಗಳನ್ನು ಬರೆಯುತ್ತಾರೆ."ಕೆಂಡಸಂಪಿಗೆ"ಗೂ ಬರೆಯುವ, ಇವರ ವೃತ್ತಿ ಸಂಬಂಧಿ ಬ್ಲಾಗ್ http://radiologyimages.blogspot.comನಲ್ಲಿದೆ. ತೊದಲಮಾತು ನೋಡಲು ನೋಡಲು http://kannada-nudi.blogspot.com ಮತ್ತು ಇಂಗ್ಲಿಷ್ ಬರವಣಿಗೆಗಳಿಗೆ http://keshavkulkarni.blogspot.com/ ತಾಣಗಳಿಗೆ ಭೇಟಿ ಕೊಡಿ.
----------------------------------------------------------------------
ಮಾಹಿತಿ ತಂತ್ರಜ್ಞಾನದಲ್ಲಿ ನೂರಹದಿನೇಳನೇ ಸ್ಥಾನದಲ್ಲಿ ಭಾರತ
ಭಾರತವು ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ವಿಶ್ವದ ನೂರ ಅರುವತ್ತು ದೇಶಗಳ ಪೈಕಿ ನೂರ ಹದಿನೇಳನೆಯ ಸ್ಥಾನದಲ್ಲಿದೆ.ಅಂತರ್ಜಾಲ ಬಳಕೆ,ಮೊಬೈಲ್ ಬಳಕೆಯು ದಿನೇ ದಿನೇ ಹೆಚ್ಚುತ್ತಿದೆ.ವಿಶ್ವದ ಶೇಕಡಾ ಇಪ್ಪತ್ತೈದು ಜನರೀಗ ಅಂತರ್ಜಾಲ ಬಳಸುವುದು,ಈ ಬಗ್ಗೆ ನಡೆಸಿದ ಅಧ್ಯಯನಗಳಿಂದ ವ್ಯಕ್ತವಾಗಿದೆ.ಹಾಗೆಯೇ ಮೊಬೈಲ್ ಸಂಪರ್ಕಗಳ ಸಂಖ್ಯೆಯು ನಾಲ್ಕೂವರೆ ಬಿಲಿಯನ್‌ಗಳಿಗಿಂತಲೂ ಹೆಚ್ಚು.ಸ್ವೀಡನ್,ಕೊರಿಯಾ,ನೆದರ್ಲ್ಯಾಂಡ್ ಅಂತಹ ದೇಶಗಳು ಪಟ್ಟಿಯಲ್ಲಿ ಅಗ್ರಗಣ್ಯಸ್ಥಾನ ಗಳಿಸಿವೆ.
*ಅಶೋಕ್‌ಕುಮಾರ್ ಎ
Udayavani