ವಿಶ್ವಕಪ್ ಮೊದಲ ದಿನ : ರೋಚಕತೆ, ತಮಾಷೆ ಮತ್ತು ಅನಿರೀಕ್ಷಿತ ಫಲಿತಾಂಶ!

ವಿಶ್ವಕಪ್ ಮೊದಲ ದಿನ : ರೋಚಕತೆ, ತಮಾಷೆ ಮತ್ತು ಅನಿರೀಕ್ಷಿತ ಫಲಿತಾಂಶ!

ಬರಹ

  ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಮೊದಲ ದಿನವಾದ ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ೧೭ನೇ (ವಿಶ್ವ)ಶ್ರೇಯಾಂಕಿತ ಮೆಕ್ಸಿಕೊ ತಂಡವು ೮೩ನೇ (ವಿಶ್ವ)ಶ್ರೇಯಾಂಕಿತ ಆತಿಥೇಯ ದಕ್ಷಿಣ ಆಫ್ರಿಕಾದೆದುರು ಸುಲಭವಾಗಿ ಗೆಲ್ಲುವುದೆಂಬ ನಿರೀಕ್ಷೆಯಿತ್ತು. ಆದರೆ ಪಂದ್ಯ ೧-೧ ಗೋಲುಗಳಿಂದ ಡ್ರಾ ಆಯಿತು.
  ಭಾರತೀಯ ಕಾಲಮಾನದನುಸಾರ ಇಂದು ೦೦-೦೦ ಗಂಟೆಗೆ ನಡೆದ (ಇದೀಗ ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೇ ಮುಕ್ತಾಯಗೊಂಡ) ಎರಡನೇ ಪಂದ್ಯದಲ್ಲಿ ೯ನೇ (ವಿಶ್ವ)ಶ್ರೇಯಾಂಕಿತ ಫ್ರಾನ್ಸ್ ತಂಡವು ೧೬ನೇ (ವಿಶ್ವ)ಶ್ರೇಯಾಂಕಿತ ಉರುಗ್ವೆ ತಂಡವನ್ನು ಸೋಲಿಸುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈ ಪಂದ್ಯವು ಗೋಲುರಹಿತ ಡ್ರಾ ಆಗಿ ಪರಿಸಮಾಪ್ತಿ ಹೊಂದಿತು.
  ಮೊದಲ ಪಂದ್ಯದ ವರದಿಯನ್ನು ಇಂದಿನ ಪತ್ರಿಕೆಗಳಲ್ಲಿ ನೀವು ಓದುತ್ತೀರಿ. ಆದ್ದರಿಂದ ಎರಡನೆಯ ಪಂದ್ಯದ ಬಗ್ಗೆ ಮಾತ್ರ ಇಲ್ಲಿ ಬರೆಯುತ್ತೇನೆ. ಫ್ರಾನ್ಸ್-ಉರುಗ್ವೆ ನಡುವಣ ಈ ಪಂದ್ಯವು ಸಮಬಲದಿಂದ ಕೂಡಿದ್ದು ಹಲವು ರೋಚಕ ಸನ್ನಿವೇಶಗಳನ್ನು ಹಾಗೂ ತಮಾಷೆ ಸನ್ನಿವೇಶಗಳನ್ನು ಪ್ರೇಕ್ಷಕರಿಗೆ ದಯಪಾಲಿಸಿತು.
  ರೋಚಕತೆ-ತಮಾಷೆ
  ಪಂದ್ಯದ ಉಭಯ ತಂಡಗಳೂ ಜಿದ್ದಿನಿಂದ ಹೋರಾಟ ನಡೆಸಿದ್ದರಿಂದಾಗಿ ಇಡೀ ಪಂದ್ಯವೇ ರೋಚಕವಾಗಿತ್ತು. ಜೊತೆಗೆ, ಆಟದುದ್ದಕ್ಕೂ ಎದುರಾಳಿಗಳನ್ನು ಕೆಡೆಯುವುದು, ರೆಫ್ರಿಯೊಡನೆ ಕ್ಯಾತೆ ತೆಗೆಯುವುದು ನಡೆದೇ ಇತ್ತು. ಪರಿಣಾಮ, ರೆಫ್ರಿಯಿಂದ ಹಳದಿ ಕಾರ್ಡ್ ಶಿಕ್ಷೆ. ಉರುಗ್ವೆ ತಂಡದ ಆಟಗಾರನೊಬ್ಬ ಎರಡು ಸಲ ಹಳದಿ ಕಾರ್ಡ್ ಶಿಕ್ಷೆಗೆ ಗುರಿಯಾದುದರಿಂದಾಗಿ ಕೆಂಪು ಕಾರ್ಡ್ ತೋರಿಸಲ್ಪಟ್ಟು ಮೈದಾನದಿಂದ ಹೊರನಡೆಯಬೇಕಾಯಿತು. ಫ್ರಾನ್ಸ್‌ನ ಪ್ರಮುಖ ಆಟಗಾರ ಥಿಯರಿ ಹೆನ್ರಿಯನ್ನು ಕಣಕ್ಕಿಳಿಸಿದ್ದು ಪಂದ್ಯ ಮುಗಿಯಲು ಕೇವಲ ೨೦ ನಿಮಿಷಗಳಿದ್ದಾಗ! ಆತನನ್ನು ಮೊದಲೇ ಕಣಕ್ಕಿಳಿಸಿದ್ದಲ್ಲಿ ಫ್ರಾನ್ಸ್ ಗೆಲ್ಲುತ್ತಿತ್ತೇನೋ.
  ಕೊನೆಯ ಹತ್ತು ನಿಮಿಷ ಕಾಲ ಉರುಗ್ವೆ ತಂಡದಲ್ಲಿ ಕೆಂಪು ಕಾರ್ಡಿನಿಂದಾಗಿ ಒಬ್ಬ ಆಟಗಾರ ಕಡಿಮೆಯಿದ್ದರೂ ಅದರ ಲಾಭವನ್ನು ಫ್ರಾನ್ಸ್ ತಂಡ ಪಡೆಯಲು ವಿಫಲವಾಯಿತು.
  ಪಂದ್ಯ ನಡೆಯುತ್ತಿದ್ದಾಗ ಮೈದಾನದೊಳಕ್ಕೆ ಎರಡು ಗಾಳಿತುಂಬಿದ ಬಲೂನುಗಳು ಬಂದುಬಿದ್ದವು! ರೆಫ್ರಿಯ ಆದೇಶದಮೇರೆಗೆ ಅವನ್ನು ಆಟಗಾರನೊಬ್ಬ ಕಾಲಿನಿಂದ ಚುಚ್ಚಿ ಒಡೆದ. ಮೈದಾನದ ಸೀಮಾರೇಖೆಯ ಜಸ್ಟ್ ಹೊರಗೆ ಕೆಲವು ಉಬ್ಬಿದ ಬಲೂನುಗಳು ನೆಲದಮೇಲೆ ಹರಿದಾಡುತ್ತಿದ್ದವು!
  ಜಾರಿಬಿದ್ದ ಜಾಣ
  ಆಟ ನಡೆಯುವಾಗ ಆಟಗಾರರು ಕಾಲುಜಾರಿ ಬೀಳುವುದು ಸಾಮಾನ್ಯ. ಆದರೆ ಈ ಪಂದ್ಯದಲ್ಲಿ ರೆಫ್ರಿಯೇ ಜಾರಿಬಿದ್ದ ಘಟನೆ ನಡೆಯಿತು! ಓಟದ ದಿಕ್ಕು ಬದಲಾಯಿಸುವಾಗ ಜಾರಿಬಿದ್ದ ರೆಫ್ರಿ ಮರುಗಳಿಗೆಯೇ ಚೇತರಿಸಿಕೊಂಡು ಮೇಲೆದ್ದ.
  ಮುಂದೇನು?
  ’ಎ’ ಗುಂಪಿನ ಬಲಿಷ್ಠ ತಂಡಗಳಾದ ಫ್ರಾನ್ಸ್ ಮತ್ತು ಮೆಕ್ಸಿಕೊ ಇವೆರಡೂ ತಂಡಗಳೂ ಮೊದಲ ಪಂದ್ಯಗಳ ಅಂಕಗಳನ್ನು ದುರ್ಬಲ ತಂಡಗಳೊಡನೆ ಸಮನಾಗಿ ಹಂಚಿಕೊಂಡಿರುವುದರಿಂದ ಇವು ನಾಕೌಟ್ ಹಂತ ಪ್ರವೇಶಿಸುವುದೀಗ ಅಷ್ಟೊಂದು ಸುಲಭವೇನಲ್ಲ. ಈ ಕಾರಣದಿಂದಾಗಿ ಇವುಗಳ ಮುಂದಿನ ಪಂದ್ಯಗಳು ಕುತೂಹಲಕರ.
  ಇಂದು ನಡೆಯುವ ಎರಡು ಪಂದ್ಯಗಳ ಪೈಕಿ ಅರ್ಜೆಂಟೀನಾ-ನೈಜೀರಿಯಾ ನಡುವಿನ ಪಂದ್ಯ ಮತ್ತು ನಾಳೆ (ಇಂದು ರಾತ್ರಿ) ೦೦-೦೦ ಗಂಟೆಗೆ ನಡೆಯುವ ಇಂಗ್ಲೆಂಡ್-ಯುಎಸ್‌ಎ ನಡುವಿನ ಪಂದ್ಯ ಇವೆರಡೂ ತೀವ್ರ ಹಣಾಹಣಿಯ ಪಂದ್ಯಗಳಾಗುವ ನಿರೀಕ್ಷೆಯಿದೆ. ಎರಡರ ವೀಕ್ಷಣೆಯನ್ನೂ ತಪ್ಪಿಸಿಕೊಳ್ಳಬೇಡಿ.