ಮೈಸೂರಿನ ಬಹುರೂಪಿ: Culture - Agriculture

ಮೈಸೂರಿನ ಬಹುರೂಪಿ: Culture - Agriculture

ಬಹುರೂಪಿ: ಸಂಸ್ಕೃತಿ - ಕೃಷಿ ಸಂಸ್ಕೃತಿ ಸಮ್ಮೇಳನದಲ್ಲಿ ಡಾಕ್ಟರ್ ಸುಭಾಷ್ ಪಾಳೇಕರ್ ಅಧ್ಯಕ್ಷತೆಯಲ್ಲಿ ನಡೆದ ವಿಚಾರಸಂಕಿರಣ ನನ್ನ ಕುತೂಹಲವನ್ನು ಕೆರಳಿಸಿತ್ತು. ಡಾಕ್ಟರ್ ಪಾಳೇಕರ್ ಮತ್ತು ರಾಜಾಸ್ಥಾನದ ರಾಜೇಂದರ್ ಸಿಂಗ್ ಕೂಡ ಉಪಸ್ಥಿತರಿದ್ದದ್ದು ವಿಚಾರಸಂಕಿರಣಕ್ಕೆ ವಿಶೇಷ ಮೆರಗು ತಂದಿತ್ತು. ಸಮ್ಮೇಳನದಲ್ಲಿ ಬಹಳಷ್ಟು ರಸವತ್ತಾದ ಸಂಗತಿಗಳು ಕಂಡುಬಂತು.ಆದರೆ ಹಲವು ಕಾರಣಗಳಿಂದಾಗಿ ಕೆಲವು ಸೂಕ್ಷ್ಮವಿಚಾರಗಳು ಚರ್ಚೆಗೆ ಬರಲಿಲ್ಲ. ಅದೀನೇ ಇರಲಿ, ಇದು ಸಮ್ಮೇಳನದ ನಂತರ ಮನಸ್ಸಿಗೆ ಒಂದು ಯೋಚನೆ.

ವಿ.ಸೂ: ಇಲ್ಲಿ ರೈತ ಅಂದರೆ ಅಷ್ಟೋ ಇಷ್ಟೋ ಓದಿರುವ, ತಕ್ಕ ಮಟ್ಟಿಗೆ ಅನುಕೂಲತೆಗಳನ್ನು ಪಡೆದುಕೊಂಡು, ರೈತ ಶಿಬಿರ, ರೈತ ಸಂಘಟನೆ ಮುಂತಾದವುಗಳಲ್ಲಿ ಪಾಲ್ಗೊಳ್ಳುವಂತಹಾ ರೈತ. ಕಡಿಮೆ ಭೂಮಿಯಿದ್ದು (ಕೆಲವೊಮ್ಮೆ ಭೂಮಿಯೂ ಇಲ್ಲದೇ), ಓದು ಬರಹ ತಿಳಿಯದೇ, ಗ್ರಾಮ ಕುಗ್ರಾಮಗಳಲ್ಲಿ ಕಳೆದುಹೋಗಿರುವ, ವಿನಾಕಾರಣ ಸಂಕಷ್ಟವನ್ನನುಭವಿಸುತ್ತಿರುವವರು ಈ ಮೇಲಿನ ಪಂಗಡವರಿಗಿಂತ ಸಂಖ್ಯೆಯಲ್ಲಿ ಹೆಚ್ಚೇ. ಅವರಿಗೆ ಸ್ವಂತದ ಧ್ವನಿ ಹೋಗಲಿ, ಸಹಾಯ ಯಾಚಿಸಲೂ ಧ್ವನಿಯಿಲ್ಲ. ದುರಾದೃಷ್ಟವಶಾತ್ ಈ ಲೇಖನ ಅವರ ಬಗ್ಗೆಯಲ್ಲ. ಆದರೆ ಅವರ ಜೀವನವನ್ನು ನೇರವಾಗಿ ಬದಲಾಯಿಸುವ ಶಕ್ತಿಯುಳ್ಳ ಮೊದಲಿನ ಅಲ್ಪಸಂಖ್ಯಾತ ರೈತರ ಬಗ್ಗೆ.

ರೈತನ ತೊಂದರೆಗಳಿಗೆ, ಇಂದಿಗೆ ಲಭ್ಯವಿರುವ ಉತ್ಪಾದನಾ ತಂತ್ರಜ್ಞಾನಗಳಲ್ಲಿ ನೈಸರ್ಗಿಕ ಕೃಷಿಯು ಒಂದು ಉತ್ತರವಾಗಿದೆ ಅಂತ ಹೇಳಬಹುದು. ಇದಿನ್ನೂ ಸಮರ್ಪಕವಾಗಬೇಕಾದರೆ ಬಳಕೆದಾರರು ಕೂಡ ತಮ್ಮ ಖರೀದಿಸುವಿಕೆಯ ಕ್ರಮಗಳನ್ನು, ನಿಸರ್ಗ ಹಾಗು ರೈತರ ಒಳಿತಿನ ದೃಷ್ಟಿಯಿಂದ ಬದಲಾಯಿಸಿಕೊಳ್ಳಬೇಕಾಗುತ್ತದೆ. ಪಾಳೇಕರ್ ಅಭಿಪ್ರಾಯದಂತೆ ಅವರ ಆಯ್ಕೆಗಳು
೧. ಜಾಗತೀಕರಣದ ವಿರುದ್ಧವಾಗಿರಬೇಕು,
೨. ಸಾಮಜಿಕ ಕಳಕಳಿಯಿಂದ ಕೂಡಿರಬೇಕು
೩. ಜಾಗತೀಕರಣ, ಉದಾರೀಕರಣ ಹಾಗು ಖಾಸಗೀಕರಣಗಳ ವಿರುದ್ಧವಾಗಿ ಪರ್ಯಾಯ ವ್ಯವಸ್ಥೆಯನ್ನು ಬೆಳಸಬೇಕು.

ಆದರೆ ನಾವು ಈ ಮಾನಸಿಕ ಬದಲಾವಣೆಯನ್ನು ಕೇವಲ ಬಳಕೆದಾರರಿಂದ ಆಶಿಸುವುದು ತಪ್ಪಾಗುತ್ತದೆ ಕೃಷಿಯಲ್ಲಿ ಪಾಳೇಕರ್ ಅವರ ವಿಧಾನ, ಫುಕುವೋಕ ವಿಧಾನ, ಸಾವಯವ, ಸುಸ್ಥಿರ ಇವ್ಯಾವೆ ವಿಧಾನಗಳಾಗಲಿ ಅಥವ ಪರಿಸ್ಥಿತಿಗೆ ತಕ್ಕ ಇವೆಲ್ಲದರ ಮಿಶ್ರಿತ ವಿಧಾನವಾಗಲೀ ಯಶಸ್ಸುಗಳಿಸಲು ಇಂದಿನ ಮಟ್ಟಿಗೆ ರೈತನ ಮನಸ್ಸಿನಲ್ಲೂ ಹಲವು ಬದಲಾವಣೆಗಳಾಗಬೇಕಿದೆ.

“ನನಗೂ ದೊಡ್ಡ ಮನೆಯ ಕಟ್ಟಿಸುವ ಆಸೆಯಿದೆ, ದೊಡ್ಡ ಕಾರಿನಲ್ಲಿ ಓಡಾಡುವ ಬಯಕೆಯಿದೆ. ಹಾಗಾಗಿ ಸರ್ಕಾರದಿಂದ, ಬುದ್ಧಿಜೀವಿಗಳಿಂದ, ಬಳಕೆದಾರರಿಂದ ತೆರೆದ ಮನ, ನೆರವಿನ ಅಗತ್ಯವಿದೆ” ಎಂದು ಬಹಳ logical ಆಗಿ, sensible ಆಗಿ ಹೇಳುವ ರೈತ ಅಷ್ಟೇ ಮುಕ್ತವಾಗಿ ರೈತನಾಗಿ ಪ್ರಕೃತಿ ಹಾಗು ದೇಶದ ಪ್ರತಿ ತನ್ನ ಜವಾಬ್ದಾರಿಯೇನು, ಅವುಗಳನ್ನು ನಿಭಾಯಿಸಲು ಅವನ ವೈಯುಕ್ತಿಕ ಯೋಜನೆಗಳೇನು ಎಂಬುದರ ವಿಚಾರ ಬಂದಾಗ ನಿಸ್ಸಹಾಯಕನಾಗುತ್ತಾನೆ. ನಾನೊಬ್ಬ ರೈತ ನನಗೇನು ಬುದ್ಧಿಯಿದೆ ನಾನೇನು ಮಾಡಬಲ್ಲೆ ಎಂದು ನಿಟ್ಟುಸಿರು ಬಿಡುತ್ತಾನೆ.

ಹಾಗೆಯೇ ಕಂಡ ಕಂಡ ಬೆಳೆಗಳನ್ನು ಬೆಳೆಯುವಾಗ ಯಾರ ಸಲಹೆಯನ್ನೂ ಪಡೆಯದೇ ಬೆಳೆದು, ತೊಂದರೆಯಾದಾಗ ಸರ್ಕಾರ ರೈತನನ್ನು ಮರೆತಿದೆ, ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ಬೆಳೆ ನಾಶವಾಗುತ್ತಿದೆ, ಕೀಟಭಾದೆ ಮಿತಿಮೀರಿದೆ, ಸರ್ಕಾರ MSP ಹೆಚ್ಚಿಸಿ ಬೆಳೆ ಖರೀದಿಸಲಿ, ಸಾಲ ಮನ್ನ ಮಾಡಲಿ ಎಂದು pressure ತರ್ತಾರೆ. Populist agenda ಹಿಡ್ಕಂಡು ಜಗ್ಗಾಡುವ ರಾಜ್ಯ ಸರ್ಕಾರ ಇದಕ್ಕೆ ಪುಸುಕ್ಕನೆ ಮಣಿಯುತ್ತದೆ.

ಬೆಳೆ ಹಾಕಕ್ಕಿಂತ ಮುಂಚೆ ಈ ಸಲ ನಮ್ಮ ದೇಶದಲ್ಲಿ ಅಕ್ಕಿ ಉತ್ಪಾದನೆ ಸಾಕಾಗತ್ತ? ಈರುಳ್ಳಿ ಜಾಸ್ತಿ ಬೆಳೆದರೆ ಪ್ರತಿಸಲದ ತರಹ ಕೈಸುಟ್ಟ್ಕೊಳೋ ಪರಿಸ್ಥಿತಿ ಬರಬಾರದು, ಯಾವ ಬೆಳೆ ನಮ್ಮ ಸೀಮೆಗೆ ಸೂಕ್ತ, ಯಾವುದರಲ್ಲಿ ಪೋಷಕಾಂಶ ಹೆಚ್ಚು ಹೀಗೆ ಜವಾಬ್ದಾರಿಯಿಂದ ಯೋಚಿಸುವ ಬದಲು ವೆನಿಲ್ಲಾಗೆ ಬೆಲೆಯಿದೆ, ಶುಂಠಿಗೆ ಬೆಲೆಯಿದೆ ಅಂತ ಯಾರ ಬಗ್ಗೆಯೂ ಯೋಚಿಸದೇ ನಿರ್ಧರಿಸುವವ ರೈತ, ಮುಗ್ಧನೇ ಅಶಕ್ತನೇ ಅಥವ ಕೇವಲ ಸ್ವಾರ್ಥಿಯೇ ಅನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ.

ಇಷ್ಟೇ ಅಲ್ಲ, ಗ್ಯಾಟ್ ವಿರುದ್ಧ, ಟ್ರಿಪ್ಸ್ ವಿರುದ್ಧ ಮುಕ್ತ ಮಾರುಕಟ್ಟೆ ವಿರುದ್ಧ ಸಮರ ಸಾರುವುದು (ಅದು ಸರಿಯೇ), ವಿದೇಶಿ ಕಂಪನಿಗಳ ಸಹಯೋಗದಿಂದ ತಯಾರಿಸಿದ ಗೊಬ್ಬರ, ಬೀಜ ಕ್ರಿಮಿನಾಶಕಗಳನ್ನು ಕಮಕ್-ಕಿಮಕ್ ಅನ್ನದೇ ಕೊಂಡು ತರುವುದು ರೈತನ ಹಿಪಾಕ್ರಿಸಿಯಲ್ಲದೇ ಮತ್ತೇನು?

ಹಾಗೆ ನೋಡಿದರೆ, ಈಗಲೂ ಕೂಡ, ಪಾಳೇಕರ್ ವಿಧಾನವನ್ನೋ ಅಥವ ಮತ್ತೊಂದು ವಿಧಾನವನ್ನೇನು ಸರ್ಕಾರದವರಾಗಲೀ ಖಾಸಗೀ ಕಂಪನಿಗಳಾಗಲಿ ಬಂದು ಮಾರಿದ್ದಲ್ಲ, ಹೇಳಿಕೊಟ್ಟಿದ್ದಲ್ಲ, ರೈತನೇ ಇವುಗಳನ್ನು ಹುಡುಕಿಕೊಂಡು ಹೋಗಿ ಅವುಗಳ ಯಶಸ್ಸನ್ನು ನೋಡಿ ಅಳವಡಿಸಿಕೊಂಡದ್ದು. ಮನಸ್ಸು ಮಾಡಿದರೆ ತನ್ನ ಕಷ್ಟಗಳನ್ನು ತಾನಾಗಿಯೇ ನಿವಾರಿಸಿಕೊಳ್ಳಬಹುದೆಂದು ರೈತ ಇಲ್ಲಿ ತೋರಿಸಿಕೊಟ್ಟಿದ್ದಾನೆ.

ಆದರೆ ತನ್ನ ಕೆಲಸವನ್ನು ಬೇರೆಯವರ್ಯಾರಾದರೂ ಮಾಡಲಿ, ಕಾರ್ಖಾನೆಗಳಲ್ಲಿ ಅಲ್ಲಿ ಗುಂಡಿ ಒತ್ತಿ ಇಲ್ಲಿ ಉತ್ಪನ್ನಗಳನ್ನು ತೆಗೆದಂತೆ ಕೃಷಿಯಿರಬೇಕು, ಮುಂದೆ ತೊಂದರೆಯಾದರೆ, ಇವ ರೈತನೆಂದು ಮರ್ಯಾದೆ ಕೊಟ್ಟು ಸರ್ಕಾರದವರೂ ಮತ್ತಿನ್ಯಾರೋ ನೋಡಿಕೊಳ್ಳಬೇಕೆಂದು ಆಶಿಸುವವರು ಹೆಚ್ಚು ಮಂದಿಯೆನಿಸುತ್ತದೆ.

ಸರ್ಕಾರ, ನಗರಗಳ ಶ್ರೀಮಂತ ಜನರು ರೈತರನ್ನು ಕಡೆಗಾಣಿಸಿದ್ದಾರೆ ನಿಜ. ಸರ್ಕಾರದ ಕೃಷಿ ನೀತಿಗಳಿಂದ ಹಾಗು ಇತರೆ ಉದ್ಯಮಗಳ ಪ್ರೋತ್ಸಾಹದಿಂದ ರೈತರಿಗೆ ನೇರವಾಗಿಯೂ ಹಾಗು ಪರೋಕ್ಷವಾಗಿಯೂ ಅನ್ಯಾಯವಾಗಿದೆ ನಿಜ, ಸರ್ಕಾರದ ಧೋರಣೆಗಳಿಂದಾಗುವ ಹಾನಿಗಳನ್ನು ಮಾಧ್ಯಮಗಳು ಸಮರ್ಪಕವಾಗಿ ಇತ್ತಿಹಿಡಿದಿವೆ, ಇನ್ನೂ ಚೆನ್ನಾಗಿ ಆ ನೀತಿಗಳ ಪ್ರತಿಕೂಲತೆಗಳನ್ನು ಪರಿಶೀಲಿಸಬಹುದು, ಆದರೆ ರೈತರೇನು ದೋಷಮುಕ್ತರಲ್ಲ ಅಂತ ನನ್ನ ಬಲವಾದ ಅನಿಸಿಕೆ. ಜನಸಾಮಾನ್ಯರಿಗೆ ಮತ್ತು ರೈತರಿಗೆ, ರೈತನ ಜವಾಬ್ದಾರಿಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಆಗಿಯೇ ಇಲ್ಲ. ಸುಮ್ಮನೆ ರೈತನನ್ನು ಕನಿಕರದಿಂದ ನೋಡಿದರೆ ಚಪ್ಪಾಳೆ ಗಿಟ್ಟಿಸಬಹುದೇ ವಿನಃ ರೈತನಿಗಾಗಲೀ ಪರಿಸರ ಸಂರಕ್ಷಣೆಗಾಗಲಿ ಅಥವ ಶ್ರೀಸಾಮಾನ್ಯನಿಗಾಗಲೀ ಒಂದು ಸುಸ್ಥಿರ ದಾರಿ ತೋರಿದಂತಾಗುವುದಿಲ್ಲ. ತಲೆಮಾರು ಹಿಂದಿನ ಹಸಿರುಕ್ರಾಂತಿಯ ತೊಂದರೆಗಳನ್ನು ಈಗ ನಾವು ಅನುಭವಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಹೀಗಿರುವ ಸಂದರ್ಭದಲ್ಲಿ ಮಾತೆತ್ತಿದರೆ ಮುಷ್ಕರ, ಜಾಥ ಎಂದು ಜನಜೀವನ ಅಸ್ತವ್ಯಸ್ಥ ಮಾಡುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತವೆನಿಸುತ್ತದೆ.

Rating
No votes yet

Comments