ಭ್ರಮೆ
ಮನದ ಕೋಟೆಯನೊಡೆದು ಹಾರಿ
ಮನುಜ ರೂಪ ತಾಳಿ
ನನ್ನೆದುರು ನಿಂತಿರುವ
ಕನಸಿನ ಕಿನ್ನರಿಯೇ
ನಿವಾರಿಸೆನ್ನ ಶಂಕೆಯನ
ಹೇಳು... ನೀ ನಿಜಾನಾ...?
ಉಷೆಯ ಕಿರಣಗಳ ಮೋಡಿಗೆ
ಆನಂದದಿ ಮೈಮರೆತಿದ್ದಾಗ
ನನ್ನ ಖುಷಿಯಲಿ ಪಾಲ್ಗೊಳ್ಳಲು
ಎಲೆಯಿಂದ ಕರಗಿ, ಹನಿಯಾಗಿ ಬಿದ್ದು
ನನ್ನ ಗಲ್ಲವನು ಚುಂಬಿಸಿದ್ದ
ಮುಂಜಾನೆ ಮಂಜು ನೀನೇನಾ...?
ಮನೆಯಂಗಳದಲಿ ನಭವ ನೋಡಿ
ಮೊದಲ ಮಳೆಗೆ ಹಾತೊರೆದು
ಕಣ್ಮುಚ್ಚಿ ಕೈಚಾಚಿ ನಿಂತಿದ್ದಾಗ
ನನ್ನ ಧ್ಯಾನಕೆ ಒಲಿದು
ಮೋಡವನ್ನಗಲಿ, ನನ್ನ ಸೋಕಿದ್ದ
ಮೊದಲ ಮಳೆಹನಿ ನೀನೇನಾ...?
ಇರುಳಲಿ ನಾ ನಡೆಯಲು
ಚಂದಿರ ತಾರೆಯರು ಕೈಕೊಟ್ಟು
ಕತ್ತಲಲಿ ದಾರಿಕಾಣದೆ ಅತ್ತಿದ್ದಾಗ
ನನ್ನ ದುಃಖವ ಕಂಡು, ಕೊರಗಿ
ತನ್ನನ್ನುರಿಸಿ ಬೆಳಕಾಗಿಸಿದ್ದ
ಇರುಳ ಮಿನುಗುಹುಳು ನೀನೇನಾ...?
ನಿನ್ನೊಲವಿಗೆ ಮನಸೋತು
ಬಿಗಿದಪ್ಪಿ ಮುದ್ದಿಸಲೆನಿಸಿದಾಗ
ನಾಚಿ ಹಿಂದೆ ಸರಿದು
ನಸುನಕ್ಕು ತಂಗಾಳಿಯಾಗಿ
ಮತ್ತೆ ಮೈಮರೆಸಿ ಹಾರಿಹೋದೆ
ನೀ ನನ್ನ ಭ್ರಮೇನಾ...?
(ಈ ಕವಿತೆಯನ್ನು ಸಂಪದದಲ್ಲಿ ಸದಸ್ಯನಾಗುವ ಮುಂಚೆ ಬರೆದು ನನ್ನ ವೈಯಕ್ತಿಕ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ಸಂಪದಿಗರಲ್ಲಿ ಹಂಚಿಕೊಳ್ಳುವ ಆಸೆಯಿಂದ ಇಲ್ಲಿ ಪುನರ್ ಪ್ರಕಟಿಸಿದೆ)
Comments
ಉ: ಭ್ರಮೆ
In reply to ಉ: ಭ್ರಮೆ by malathi shimoga
ಉ: ಭ್ರಮೆ