ಥಟ್ ಅಂತ ಹೇಳಿ! - ಒಂದು ಪಕ್ಷಿ ನೋಟ
ಥಟ್ ಅಂತ ಹೇಳಿ!
ಒಂದು ಪಕ್ಷಿ ನೋಟ
ಥಟ್ ಅಂತ ಹೇಳಿ - ಕ್ವಿಜ಼್ ಕಾರ್ಯಕ್ರಮ ಪ್ರಸಾರ ಭಾರತಿ ಬೆಂಗಳೂರು ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ೪ ಜನವರಿ ೨೦೦೨ ರಲ್ಲಿ ಆರಂಭವಾದ ಈ ಕಾರ್ಯಕ್ರಮ ಇದುವರೆಗು ಎಡಬಿಡದೆ ನಿರಂತರವಾಗಿ ಪ್ರಸಾರವಾಗುತ್ತಿದೆ. ಇದೇ ಜೂನ್ ೧೩ ರಂದು ೧೫೦೦ ನೆಯ ಕಾರ್ಯಕ್ರಮದ ಮುದ್ರಣ ಕಾರ್ಯವು ಬೆಂಗಳೂರಿನ ಜಯನಗರದ ಎನ್.ಎಂ.ಕೆ.ಆರ್.ವಿ ಕಾಲೇಜಿನ ಮಂಗಳಮಂಟಪ ಸಭಾಂಗಣದಲ್ಲಿ ೪.೦೦ ಗಂಟೆಯಿಂದ ೭.೦೦ ಗಂಟೆಯವರಿಗೆ ನಡೆಯಿತು.
ಕಾರ್ಯಕ್ರಮದ ಸ್ವರೂಪ
ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮದ ಮೊದಲ ೧೦೦ ಕಂತುಗಳ ಪ್ರಶ್ನೆಗಳು ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಕುರಿತದ್ದಾಗಿದ್ದವು. ಒಂದು ಗಂಟೆಯ ಅವಧಿಯ ಕಾರ್ಯಕ್ರಮದಲ್ಲಿ ಮೂವರು ಸ್ಪರ್ಧಿಗಳಿಗೆ ಭಾಗವಹಿಸಲು ಅವಕಾಶವಿತ್ತು. ಪ್ರತಿ ಸ್ಪರ್ಧಿಗೆ ೧೫ ಪ್ರಶ್ನೆಗಳನ್ನು ಪ್ರಶ್ನೆಗಳನ್ನು ಕೇಳಿ, ಅವರು ನೀಡುವ ಪ್ರತಿ ಸರಿ ಉತ್ತರಕ್ಕೆ ಒಂದು ಕನ್ನಡ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುತ್ತಿತ್ತು.
೧೦೦ ನೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದ ಶ್ರೀಮತಿ ಸುಧಾಮೂರ್ತಿಯವರು, ಕಾರ್ಯಕ್ರಮದ ಸ್ವರೂಪವನ್ನು ಬದಲಾಯಿಸಲು ಸೂಚಿಸಿದರು. ಇಂದಿನ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯ; ಹಾಗಾಗಿ ಜನರಲ್ಲಿ ಸ್ಪರ್ಧಾಮನೋಭಾವ ಬೆಳೆಸಲು ಕನಿಷ್ಠ ಮೂವರನ್ನು ಒಟ್ಟಿಗೆ ಕೂರಿಸಿ ಸ್ಪರ್ಧೆ ನಡೆಸುವಂತೆ ಸೂಚಿಸಿದರು. ಹಾಗೆಯೇ ಕಾರ್ಯಕ್ರಮದಲ್ಲಿ ಪ್ರಶ್ನೆಗಳು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ, ಭಾರತದ ಹಾಗೂ ವಿಶ್ವದ ಬಗ್ಗೆ ಇರುವುದು ಒಳ್ಳೆಯದು ಎಂದು ಹೇಳಿದರು. ಹಾಗೆಯೇ ಕನ್ನಡಿಗರಿಗೆ ಕನ್ನಡ ಭಾಷೆಯ ಜೊತೆಗೆ ಇತರ ಜ್ಞಾನಶಾಖೆಗಳ ಪರಿಚಯವೂ ಆಗಬೇಕೆಂದರು. ಆ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ವರೂಪವನ್ನು ಬದಲಿಸಲಾಯಿತು. ೧೦೧ ನೆಯ ಕಂತಿನಿಂದ-೧೫೦೦ನೆಯ ಕಂತಿನವರೆಗೆ ಶ್ರೀಮತಿ ಸುಧಾಮೂರ್ತಿಯವರ ಸಲಹೆಯಂತೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಕಾರ್ಯಕ್ರಮದ ಸ್ವರೂಪ ಕೆಳಕಂಡಂತಿದೆ.
- ಒಂದು ಕಂತಿನ ಅವಧಿ: ೩೦ ನಿಮಿಷಗಳು
- ಭಾಗವಹಿಸುವ ಸ್ಪರ್ಧಿಗಳು: ಮೂವರು.
- ಪ್ರಸಾರ ಅಂತರ: ವಾರಕ್ಕೆ ೫ ಕಾರ್ಯಕ್ರಮಗಳು; ಸೋಮವಾರದಿಂದ ಶುಕ್ರವಾರದವರೆಗೆ
- ಸ್ಪರ್ಧಿಗಳು: ೧೫ ವರ್ಷಕ್ಕೆ ಮೇಲ್ಪಟ್ಟ ಯಾರು ಬೇಕಾದರೂ ಭಾಗವಹಿಸಬಹುದು; ವಿಶೇಷ ಕಾರ್ಯಕ್ರಮಗಳಲ್ಲಿ ೧೫ ವರ್ಷಕ್ಕಿಂತ ಚಿಕ್ಕವರಿಗೆ ಅವಕಾಶ ಮಾಡಿಕೊಡಲಾಗಿದೆ.
- ಆಯ್ಕೆ: ಪತ್ರದ ಮೂಲಕ
- ವ್ಯಾಪ್ತಿ: ಅಖಿಲ ಕರ್ನಾಟಕ
- ಪ್ರಯಾಣ ವೆಚ್ಚ: ಬೆಂಗಳೂರಿನ ಸ್ಪರ್ಧಿಗಳನ್ನು ಹೊರತು ಪಡಿಸಿ ಉಳಿದ ಎಲ್ಲರಿಗೂ ಬಸ್ ಪ್ರಯಾಣದ ವೆಚ್ಚವನ್ನು ನೀಡಲಾಗುತ್ತದೆ.
- ಒಂದು ಕಂತಿನಲ್ಲಿರುವ ಪ್ರಶ್ನೆಗಳು: ೧೨
- ಪ್ರಶ್ನೆಗಳ ವೈವಿಧ್ಯತೆ: ೧೨ ಪ್ರಶ್ನೆಗಳಲ್ಲಿ ೫ ಪ್ರಶ್ನೆಗಳು ಕಡ್ಡಾಯವಾಗಿ ಕನ್ನಡ ಭಾಷೆ, ಸಂಸ್ಕೃತಿ, ನಾಡಿಗೆ ಸಂಬಂಧಪಟ್ಟಿರುತ್ತವೆ. ಉಳಿದ ಪ್ರಶ್ನೆಗಳು ಕರ್ನಾಟಕವನ್ನು ಒಳಗೊಂಡಂತೆ, ಭಾರತ ಹಾಗೂ ವಿಶ್ವಕ್ಕೆ ಸಂಬಂಧಪಟ್ಟಿರುತ್ತವೆ.
- ಪ್ರಶ್ನೆಗಳ ರಚನೆ: ಮನುಷ್ಯನ ಮಿದುಳಿನ ಎಡ ಅರೆಗೋಳ ಹಾಗೂ ಬಲ ಅರೆಗೋಳಗಳೆರಡರ ಸಾಮರ್ಥ್ಯವನ್ನು ಪರೀಕ್ಷಿಸುವಂತೆ ಪ್ರಶ್ನೆಗಳನ್ನು ರೂಪಿಸಲಾಗಿದೆ.
- ಬಹುಮಾನ: ಬಹುಮಾನವಾಗಿ ಕನ್ನಡ ಪುಸ್ತಕಗಳನ್ನು ಮಾತ್ರ ನೀಡಲಾಗುವುದು. ೧೦ ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಗೆದ್ದವರಿಗೆ, ಪ್ರಸಾರ ಭಾರತಿ ದೂರದರ್ಶನದ ಭಂಡಾರದಿಂದ ಆಯ್ದು ಸಿದ್ಧಪಡಿಸಿದ ಸಂಗೀತ ಅಡಕಮುದ್ರಿಕೆಗಳನ್ನು (ಸಿಡಿ) ವಿಶೇಷ ಬಹುಮಾನವಾಗಿ ನೀಡಲಾಗುವುದು.
- ಪುಸ್ತಕಗಳ ಸಂಖ್ಯೆ: ಒಂದು ಸ್ಪರ್ಧೆಯಲ್ಲಿ ಗರಿಷ್ಠ ೨೫ ಪುಸ್ತಕಗಳನ್ನು ಗೆಲ್ಲಲು ಅವಕಾಶವಿರುತ್ತದೆ.
ದಾಖಲೆ:
ಬೆಂಗಳೂರು ದೂರದರ್ಶನ ನಿರ್ಮಿಸಿ ಪ್ರಸಾರ ಮಾಡುತ್ತಿರುವ ‘ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮವು ಅಖಿಲ ಭಾರತ ದಾಖಲೆಯನ್ನು ಮಾಡಿದೆ. ಲಿಮ್ಕ ದಾಖಲೆಯ ಪುಸ್ತಕವು, ಭಾರತದ ಟೆಲಿವಿಶನ್ ವಾಹಿನಿಗಳಲ್ಲಿ ನಿರಂತರವಾಗಿ ಪ್ರಸಾರವಾಗುತ್ತಾ ಬಂದಿರುವ ಕ್ವಿಜ಼್ ಕಾರ್ಯಕ್ರಮದ ದಾಖಲೆಯ ಬಗ್ಗೆ ಈ ಕೆಳಕಂಡಂತೆ ಹೇಳುತ್ತದೆ.
Longest-Running televised quiz
Prashnottari, a fortnightly quiz program involving participants from schools, colleges and general live TV audience was first telecast on Prasar Bhartis Jaipur Doordarshan Kendra on July 23, 1993. Hosted by an IAS officer Mehendra Surana since its inception. The quiz touching a variety of topics, has contributed on the same channel in the same format without a break completing 270 episodes on Dec 31, 2005
ಪ್ರಸಾರಭಾರತಿ ಬೆಂಗಳೂರು ದೂರದರ್ಶನದ ಚಂದನ ವಾಹಿನಿಯು ನಿರಂತರವಾಗಿ ೧೫೦೦ ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರ ಮೂಲಕ ಅಖಿಲ ಭಾರತ ದಾಖಲೆಯನ್ನು ನಿರ್ಮಿಸಿದೆ. ಈ ಸಾಧನೆಯನ್ನು ಲಿಮ್ಕ ಪುಸ್ತಕದಲ್ಲಿ ಈ ದಾಖಲಿಸಲು ಪ್ರಯತ್ನವನ್ನು ನಡೆಸಲಾಗಿದೆ.
ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮವು ಹಲವು ವಿಧಗಳಲ್ಲಿ ದಾಖಲೆಗಳನ್ನು ಮಾಡಿದೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ವಿವರಿಸಲಾಗಿದೆ.
ಕಾರ್ಯಕ್ರಮದ ಅಂಕಿ-ಅಂಶಗಳ ವಿವರ
- ನಿರಂತರತೆ: ೧೫೦೦ ಕಂತುಗಳು ಈ ದಾಖಲೆ ಕನ್ನಡದ ವಾಹಿನಿಗಳನ್ನು ಒಳಗೊಂಡಂತೆ ಎಲ್ಲ ಭಾರತೀಯ ವಾಹಿನಿಗಳಿಗೆ ಅನ್ವಯವಾಗುತ್ತದೆ.
- ಕಾಲಾವಧಿ: ಜನವರಿ ೪, ೨೦೦? ರಿಂದ ಇಂದಿನವರೆಗೆ, ಸುಮಾರು ೬.೫ ವರ್ಷಗಳ ಕಾಲ.
- ಗಂಟೆಗಳು: ತಲಾ ಒಂದು ಗಂಟೆಯ ಹಾಗೆ ಮೊದಲ ೧೦೦ ಕಾರ್ಯಕ್ರಮ = ೧೦೦ ಗಂಟೆಗಳು ತಲಾ ಅರ್ಧ ಗಂಟೆಯ ಹಾಗೆ ೧೪೦೦ / ೨ = ೭೦೦ ಗಂಟೆಗಳು ಒಟ್ಟು ಇದುವರೆಗು ೮೦೦ ಗಂಟೆಗಳ ಕಾರ್ಯಕ್ರಮ ಪ್ರಸಾರವಾಗಿದೆ.
- ಪ್ರಶ್ನೆಗಳು: ಮೊದಲ ೧೦೦ ಗಂಟೆಗಳ ಕಾರ್ಯಕ್ರಮದಲ್ಲಿ, ಒಟ್ಟು ೩೦೦ ಸ್ಪರ್ಧೆಗಳಿಗೆ ೪೫೦೦ ಪ್ರಶ್ನೆಗಳನ್ನು ಕೇಳಲಾಗಿದೆ ೧೦೧-೧೫೦೦ ರವರೆಗೆ ಒಟ್ಟು ೪೨೦೦ ಸ್ಪರ್ಧಿಗಳಿಗೆ ೧೬,೮೦೦ ಪ್ರಶ್ನೆಗಳನ್ನು ಕೇಳಲಾಗಿದೆ. ಒಟ್ಟು ಇದುವರೆಗು ೨೧೩೦೦ ಪ್ರಶ್ನೆಗಳನ್ನು ಕೇಳಲಾಗಿದೆ.
- ಸ್ಪರ್ಧಿಗಳು: ಒಂದು ಗಂಟೆಯ ಕಾರ್ಯಕ್ರಮದಲ್ಲಿ ೩ ಜನರಂತೆ, ಮೊದಲ ೧೦೦ ಕಾರ್ಯಕ್ರಮಗಳಲ್ಲಿ ೩೦೦ ಜನರು ಭಾಗವಹಿಸಿದರು. ಅರ್ಧ ಗಂಟೆಯ ಕಾರ್ಯಕ್ರಮದಲ್ಲಿ ೩ ಸ್ಪರ್ಧಿಗಳಂತೆ ೧೪೦೦ ? ೩ = ೪೨೦೦ ಸ್ಪರ್ಧಿಗಳು ಭಾಗವಹಿಸಿಸಿರುವರು ಒಟ್ಟು ೪೫೦೦ ಸ್ಪರ್ಧಿಗಳು ಭಾಗವಹಿಸಿರುವರು.
- ಸ್ಪರ್ಧೆಯಲ್ಲಿ ಗೆಲ್ಲಲು ಇಟ್ಟಿದ್ದ ಒಟ್ಟು ಪುಸ್ತಕಗಳು: ೩೦ ? ೩ ? ೧೦೦ = ೯೦೦ ೨೫ ? ೧೪೦೦ = ೩೫,೦೦೦ ಒಟ್ಟು ಪುಸ್ತಕಗಳು = ೩೫,೯೦೦
- ಸ್ಪರ್ಧಿಗಳು ಗೆದ್ದಿರಬಹುದಾದ ಪುಸ್ತಕಗಳು: ಮೊದಲ ೧೦೦ ಕಂತುಗಳ ಪ್ರತಿ ಕಾರ್ಯಕ್ರಮದಲ್ಲಿ ಸರಾಸರಿ ೧೦ ಪುಸ್ತಕಗಳನ್ನು ಗೆದ್ದರು ಎಂದು ಭಾವಿಸಿದರೆ ೧೦ ಪುಸ್ತಕಗಳು ? ೩೦೦ ಸ್ಪರ್ಧಿಗಳು = ೩೦೦೦ ೧೦೧-೧೫೦೦ ಕಂತುಗಳ ಪ್ರತಿ ಕಾರ್ಯಕ್ರಮದಲ್ಲಿ ಸರಾಸರಿ ೧೫ ಪುಸ್ತಕಗಳನ್ನು ಗೆದ್ದರು ಎಂದು ಭಾವಿಸಿದರೆ ೧೫ ಪುಸ್ತಕಗಳು ? ೧೪೦೦ = ೨೧,೦೦೦ ಪುಸ್ತಕಗಳು ಒಟ್ಟು ಸುಮಾರು ೨೪,೦೦೦ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ವಿತರಿಸಲಾಗಿದೆ.
- ಪುಸ್ತಕ ಪರಿಚಯ: ಪ್ರತಿ ಕಾರ್ಯಕ್ರಮದ ಆರಂಭದಲ್ಲಿ ಉತ್ತಮ ಕನ್ನಡ ಪುಸ್ತಕಗಳನ್ನು ಪರಿಚಯ ಮಾಡಿಕೊಡಲಾಗುತ್ತದೆ ಅಥವ ಗಣ್ಯರ ಬದುಕಿನ ರಸಘಳಿಗೆಗಳನ್ನು ಇಲ್ಲವೇ ಜೀವನಾನುಭವವನ್ನು ಹಂಚಿಕೊಳ್ಳಲಾಗುತ್ತದೆ. ೧೪೦೦ ಕಾರ್ಯಕ್ರಮಗಳಲ್ಲಿ ಸುಮಾರು ೭೦೦ ಉತ್ತಮ ಕನ್ನಡ ಪುಸ್ತಕಗಳನ್ನು ಪರಿಚಯ ಮಾಡಿಕೊಡಲಾಗಿದೆ.
- ಪ್ರಾಯೋಜಕತ್ವ: ಕೆಲವು ದಿನಗಳ ಕಾಲ ಸಿಂಡಿಕೇಟ್ ಬ್ಯಾಂಕ್ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿತು. ಅದನ್ನು ಬಿಟ್ಟರೆ ಉಳಿದ ಎಲ್ಲ ಕಾರ್ಯಕ್ರಮಗಳನ್ನು ಪ್ರಾಯೋಜಕರ ನೆರವಿಲ್ಲದೆ ಪ್ರಸಾರ ಮಾಡಲಾಗಿದೆ.
ಕಾರ್ಯಕ್ರಮದ ವಿಶೇಷತೆಗಳು
- ಕಾರಾಗೃಹ ವಾಸಿಗಳಿಗಾಗಿ ವಿಶೇಷ ಸ್ಪರ್ಧೆ: ಬೆಂಗಳೂರು ದೂರದರ್ಶನದ ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಶಿಯವರ ನೇತೃತ್ವದಲ್ಲಿ ಈ ಅಪರೂಪದ ಮಾನವೀಯ ಕಾರ್ಯಕ್ರಮ ನಡೆಯಿತು. ಪರಪ್ಪನ ಅಗ್ರಹಾರದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಖೈದಿಗಳನ್ನು ಸ್ಟುಡಿಯೋಕ್ಕೆ ಕರೆಸಿ, ಅವರಿಗೆ ಊಟ ಹಾಕಿಸಿ, ವಿಶೇಷ ಕ್ವಿಜ಼್ ಕಾರ್ಯಕ್ರಮವನ್ನು ನಡೆಸಲಾಯಿತು. ಇದೊಂದು ರಾಷ್ಟ್ರೀಯ ದಾಖಲೆ
- ಅಂಧರಿಗೆ ವಿಶೇಷ ಸ್ಪರ್ಧೆ: ಈ ಕಾರ್ಯಕ್ರಮದಲ್ಲಿ ಅಂಧರಿಗೂ ಸಹಾ ಭಾಗವಹಿಸಿರುವರು. ಎಲ್ಲೆಲ್ಲಿ ದೃಶ್ಯ ರೂಪದ ಪ್ರಶ್ನೆಗಳಿರುತ್ತವೆಯೋ ಅಲ್ಲಿ ಧ್ವನಿ ರೂಪದ ಪ್ರಶ್ನೆಗಳನ್ನು ಹಾಡು, ಸಂಭಾಷಣೆಗಳ ರೂಪದಲ್ಲಿ ಕೇಳಲಾಯಿತು.
- ಏಡ್ಸ್ ಪೀಡಿತರಿಗೆ ಸ್ಪರ್ಧೆ: ಎಚ್.ಐ.ವಿ ಹಾಗೂ ಏಡ್ಸ್ ಬಗ್ಗೆ ಮಾಹಿತಿಯನ್ನು ನೀಡಲು ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಒಂದು ಕಾರ್ಯಕ್ರಮದಲ್ಲಿ ಏಡ್ಸ್ ರೋಗಿಗಳು ಸ್ವಯಂ ಭಾಗವಹಿಸಿ, ಏಡ್ಸ್-ನೊಂದಿಗೆ ಸಹಬಾಳ್ವೆ ಸಾಧ್ಯ ಎಂದು ಹೇಳಿದ್ದು ಸ್ಮರಣೀಯ.
- ಐ.ಟಿ. ತಜ್ಞರಿಗೆ ಸ್ಪರ್ಧೆ: ಐ.ಟಿ. ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಉತ್ಸಾಹಿ ತರುಣ-ತರುಣಿಯರಿಗೆ ವಿಶೇಷ ಕ್ವಿಜ಼್ ಸ್ಪರ್ಧೆಯನ್ನು ನಡೆಸಲಾಗಿದೆ. ಈ ಸ್ಪರ್ಧೆಗಳನ್ನು ‘ಅವಿರತ ಸಂಸ್ಥೆ ಪ್ರಾಯೋಜಿಸಿತು.
- ಅನಿವಾಸಿ ಭಾರತೀಯರಿಗೆ ಸ್ಪರ್ಧೆ: ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಭಾರತಕ್ಕೆ ಬಂದಾಗ ಅವರಿಗಾಗಿ ವಿಶೇಷ ಕ್ವಿಜ಼್ ಸ್ಪರ್ಧೆಯನ್ನು ನಡೆಸಲಾಯಿತು.
- ಸ್ವಾತಂತ್ರ್ಯ ದಿನೋತ್ಸವ-ಗಣರಾಜ್ಯೋತ್ಸವ ವಿಶೇಷ ಸ್ಪರ್ಧೆಗಳು: ಪ್ರತಿ ವರ್ಷ ಈ ಎರಡು ರಾಷ್ಟ್ರೀಯ ಹಬ್ಬಗಳಲ್ಲಿ ಒಂದು ವಾರದವರೆಗೆ ವಿಶೇಷ ಕ್ವಿಜ಼್ ಕಾರ್ಯಕ್ರಮಗಳನ್ನು ೧೫ ವರ್ಷಗಳಿಗಿಂತ ಚಿಕ್ಕವರಾಗಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಪ್ರಶ್ನೆಗಳೆಲ್ಲ ನಮ್ಮ ದೇಶಕ್ಕೆ ಸಂಬಂಧಪಟ್ಟಿರುತ್ತವೆ.
- ಗಣ್ಯರು: ಹಲವು ಸಂದರ್ಭಗಳಲ್ಲಿ ನಾಡಿನ ಹಿರಿಯ ಲೇಖಕರು ಹಾಗೂ ಗಣ್ಯರನ್ನು ಕರೆಯಿಸಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಾಗೆ ಭಾಗವಹಿಸಿದ ಕೆಲವು ಗಣ್ಯರ ಹೆಸರು ಈ ರೀತಿ ಇವೆ. ಜಿ.ವೆಂಕಟಸುಬ್ಬಯ್ಯ, ಮಾಸ್ಟರ್ ಹಿರಣ್ಣಯ್ಯ, ಸುಧಾಮೂರ್ತಿ, ಚಂದ್ರಶೇಖರ ಕಂಬಾರ, ನಿಸಾರ್ ಅಹಮದ್, ಹಂಪನಾ, ಕಮಲಾ ಹಂಪನಾ, ಜಯಂತ ಕಾಯ್ಕಿಣಿ, ಎಚ್.ಎಸ್. ವೆಂಕಟೇಶ ಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ನಾಗತಿಹಳ್ಳಿ ಚಂದ್ರಶೇಖರ್, ಡಾ.ಸಿ.ಆರ್.ಚಂದ್ರಶೇಖರ್ ಇತ್ಯಾದಿ.
- ನಾಡಹಬ್ಬ, ಇತರ ಹಬ್ಬಗಳು: ಕರ್ನಾಟಕ ರಾಜ್ಯೋತ್ಸವ, ವಿಜಯದಶಮಿ, ದೀಪಾವಳಿ ಮುಂತಾದ ಹಬ್ಬಗಳಲ್ಲಿ ಅತಿಥಿಗಳನ್ನು ಕರೆಯಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸುದೀಪ್, ಜಗ್ಗೇಶ್, ಸಿಹಿಕಹಿ ಚಂದ್ರು, ವಿಜಯ್, ಯೋಗರಾಜ್ ಭಟ್, ಕವಿತಾ ಲಂಕೇಶ್, ಮನೋಮೂರ್ತಿ, ಜಯಶ್ರೀ, ಮಂಜುಳಾ ಗುರುರಾಜ್, ಎಂ.ಡಿ.ಪಲ್ಲವಿ, ಸುಪ್ರಿಯಾ ಆಚಾರ್ಯ, ರಾಜೇಶ್ ಕೃಷ್ಣನ್, ಎಲ್.ಎನ್.ಶಾಸ್ತ್ರಿ ಇತ್ಯಾದಿ.
- ಸ್ಟುಡಿಯೋ ಹೊರಗೆ: ೧೫೦೦ ಕಾರ್ಯಕ್ರಮಗಳಲ್ಲಿ ೨ ಕಾರ್ಯಕ್ರಮಗಳಲ್ಲಿ ಸ್ಟುಡಿಯೋದಿಂದ ಹೊರಗೆ ನಡೆಸಲಾಗಿದೆ. ಹೊಸ ವರ್ಷದ ಹಿಂದಿನ ರಾತ್ರಿ ಬೆಂಗಳೂರಿನ ರಸ್ತೆ ರಸ್ತೆ, ಬಡಾವಣ ಬಡಾವಣೆಗಳನ್ನು ಸುತ್ತಿ, ದಾರಿಯಲ್ಲಿ ಬರುವವರಿಗೆ ಪ್ರಶ್ನೆ ಕೇಳಿ, ಸರಿ ಉತ್ತರವನ್ನು ನೀಡಿದವರಿಗೆ ಪುಸ್ತಕಗಳನ್ನು ನೀಡಲಾಯಿತು. ಹೀಗೆಯೇ ದಸರೆಯ ಸಂದರ್ಭದಲ್ಲಿ ಮೈಸೂರಿನಲ್ಲಿಯೂ ಕಾರ್ಯಕ್ರಮವನ್ನು ನಡೆಸಲಾಯಿತು.
- ನಿರ್ಮಾಪಕರು: ಶ್ರೀಮತಿ ಉಷಾ ಕಿಣಿ, ಶ್ರೀಮತಿ ಆರತಿ ಹಾಗೂ ಶ್ರೀರಘು ಐಡಿ ಹಳ್ಳಿ.
- ಕ್ವಿಜ಼್ ಮಾಸ್ಟರ್: ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮದ ೧೫೦೦ ಕಂತುಗಳಲ್ಲಿ ೧೪೫೦ ಕಂತುಗಳ ಕ್ವಿಜ಼್ ಮಾಸ್ಟರ್ ಆಗಿ ಡಾ.ನಾ.ಸೋಮೇಶ್ವರ ಅವರು ನಡೆಸಿರುವರು. ಕ್ವಿಜ಼್ ಕಾರ್ಯಕ್ರಮದ ಪರಿಕಲ್ಪನೆ, ಪ್ರಶ್ನೆಗಳ ಸಂಶೋಧನೆ, ಪ್ರಶ್ನೆಗಳ ರಚನೆ ಹಾಗೂ ಪ್ರಸ್ತುತಿಯನ್ನು ಅವರೇ ಮಾಡಿರುತ್ತಾರೆ.
ಮುಂದಿನ ಯೋಜನೆಗಳು:
- ಜನಪ್ರಿಯ ಕ್ವಿಜ಼್ ಕಾರ್ಯಕ್ರಮವಾದ ‘ಥಟ್ ಅಂತ ಹೇಳಿಯನ್ನು ಜನ ಇಷ್ಟಪಡುವವರಿಗೂ ಮುಂದುವರೆಸಿಕೊಂಡು ಹೋಗುತ್ತೇವೆ.
- ಕರ್ನಾಟಕದ ಪ್ರತಿಯೊಂದು ಜಿಲ್ಲೆಗೆ ಹೋಗಿ, ಆ ಜಿಲ್ಲೆಗೆ ಸಂಬಂಧಪಟ್ಟಂತಹ ಪ್ರಶ್ನೆಗಳನ್ನು ಒಳಗೊಂಡ ವಿಶೇಷ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯಿದೆ.
- ಅಖಿಲ ಕರ್ನಾಟಕ ಮಟ್ಟದ ಕ್ವಿಜ಼್ ಸ್ಪರ್ಧೆಗಳನ್ನು ನಡೆಸುವ ಯೋಜನೆಯಿದೆ.
-----
- ಡಾ.ನಾ.ಸೋಮೇಶ್ವರ